varthabharthi


ಕಾಲಂ 9

ನಿರ್ಭಯಾಗಳಿಗೆ ಮರುಗಿ ಹಾಥರಸ್‌ಗಳಿಗೆ ಕಲ್ಲಾಗುವ ಭಾರತೀಯ 'ಅಂತಸ್ಸಾಕ್ಷಿ'ಯ ಜಾತಿ ಯಾವುದು?..ಯುವರ್ ಆನರ್!?

ವಾರ್ತಾ ಭಾರತಿ : 15 Mar, 2023
ಶಿವಸುಂದರ್

ಕೋರ್ಟಿನ ಮತ್ತು ಸಮಾಜದ ಅಂತಸ್ಸಾಕ್ಷಿಯು ನಿರ್ಭಯಾ ಮತ್ತು ದಿಶಾ ಪ್ರಕರಣಗಳಲ್ಲಿ ಆಕ್ರೋಶಿತಗೊಳ್ಳುತ್ತದೆ. ಅಂತಹ ಆಕ್ರೋಶಗಳನ್ನು ಮಾತ್ರ ಕೋರ್ಟುಗಳು ಪರಿಗಣಿಸುತ್ತವೆ. ಆದರೆ ಹಾಥರಸ್, ಖೈರ್ಲಾಂಜಿ, ಬಿಲ್ಕಿಸ್ ಬಾನುರಂತಹ ಪ್ರಕರಣಗಳಲ್ಲಿ ಮೇಲ್ಜಾತಿ ಸಮಾಜದ ಅಂತಸ್ಸಾಕ್ಷಿಗೆ ಆಕ್ರೋಶವೇ ಹುಟ್ಟುವುದಿಲ್ಲ. ತಳಸಮುದಾಯಗಳು ಆಕ್ರೋಶಿತಗೊಂಡು ಬೀದಿಗೆ ಬಂದರೆ ಸರಕಾರ ಮತ್ತು ಕೋರ್ಟು ಅದನ್ನು ರಾಜಕೀಯ ಚಿತಾವಣೆ ಎಂದೋ, ಕಾನೂನು ಸಮಸ್ಯೆಯೆಂದೋ ಪರಿಗಣಿಸುತ್ತದೆಯೇ ವಿನಾ ಸಮಾಜದ ಅಂತಸ್ಸಾಕ್ಷಿಯ ಆಕ್ರೋಶ ಎಂದು ಪರಿಗಣಿಸುವುದೇ ಇಲ್ಲ. ಹಾಗಿದ್ದರೆ ನಮ್ಮ ಕೋರ್ಟುಗಳ, ಸಮಾಜದ ಅಂತಸ್ಸಾಕ್ಷಿಯ ಜಾತಿ ಯಾವುದು ..ಯುವರ್ ಆನರ್?!


2020ರ ಸೆಪ್ಟಂಬರ್‌ನಲ್ಲಿ ಹಾಥರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಭೀಕರವಾಗಿ ಕೊಂದು ಹಾಕಿದ ಮೇಲ್ಜಾತಿ ಠಾಕೂರ್ ಸಮುದಾಯಕ್ಕೆ ಸೇರಿದ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಹಾಥರಸ್‌ನ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ನ್ಯಾಯಾಲಯ ಖುಲಾಸೆ ಮಾಡಿದೆ. ನಾಲ್ಕನೇ ಆರೋಪಿ ಸಂದೀಪ್ ಅನ್ನು ಮಾತ್ರ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಿದೆ. ಶಿಕ್ಷೆಗೊಳಗಾದ ಸಂದೀಪನ ಮೇಲೂ ಉದ್ದೇಶ ಪೂರ್ವಕವಲ್ಲದ ಹತ್ಯೆ ಎಂಬ ಸೆಕ್ಷನ್ 304ರಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ಅತ್ಯಾಚಾರ ನಿಗ್ರಹ ಕಾಯ್ದೆಯಡಿ ಮಾತ್ರ ಘನವೆತ್ತ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಘನವೆತ್ತ ನ್ಯಾಯಾಲಯ ಆರೋಪಿಗಳೆಲ್ಲರ ಮೇಲೂ ಅತ್ಯಾಚಾರದ ಆರೋಪವನ್ನು ಕೈಬಿಟ್ಟಿದೆ! ಕಾರಣ: ವೈದ್ಯಕೀಯ ವರದಿಗಳು ಅತ್ಯಾಚಾರ ನಡೆದಿದೆಯೆಂದು ಸಾಬೀತು ಪಡಿಸುತ್ತಿಲ್ಲ. ಏಕೆ ಸಾಬೀತು ಪಡಿಸುತ್ತಿಲ್ಲ? ಏಕೆಂದರೆ ಅತ್ಯಾಚಾರ ಸಾಬೀತು ಮಾಡಲು ಬೇಕಾದ ಪುರಾವೆಗಳನ್ನು ಪೊಲೀಸರು ಹೆಚ್ಚೆಂದರೆ ಅತ್ಯಾಚಾರ ನಡೆದ 72-90 ಗಂಟೆಗಳೊಳಗೆ ಸಂಗ್ರಹಿಸಬೇಕು. ಇಲ್ಲದಿದ್ದರೆ ಅತ್ಯಾಚಾರವನ್ನು ಸಾಬೀತು ಪಡಿಸುವ ಅತ್ಯಾಚಾರಿಯ ವೀರ್ಯದ ಕುರುಹುಗಳು ಸಂತ್ರಸ್ತೆಯ ದೇಹದಿಂದ ಪಡೆದುಕೊಳ್ಳಲಾಗುವುದಿಲ್ಲ. ಆದರೆ, ಹಾಥರಸ್ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಸಂಭವಿಸಿದ್ದು ಸೆಪ್ಟಂಬರ್ 14ಕ್ಕೆ. ಆಕೆಯ ಮೇಲೆ ಅತ್ಯಾಚಾರ ಸಂಭವಿಸಿದೆ ಎಂದು ಪೊಲೀಸರು ದೂರು ದಾಖಲಿಸಿದ್ದೇ ಸೆಪ್ಟಂಬರ್ 25ಕ್ಕೆ! ಅಂದರೆ ಭರ್ತಿ 11 ದಿನಗಳಾದ ನಂತರ.

ಅತ್ಯಾಚಾರಕ್ಕೆ ಗುರಿಯಾದ ದಿನವೇ ಆಕೆ ತಾಯಿಯೊಡನೆ ಪೊಲೀಸ್ ಠಾಣೆಗೆ ದೂರುಕೊಡಲು ಹೋದರೂ ಪ್ರಾರಂಭದಲ್ಲಿ ಪೊಲೀಸರು ಮೇಲ್ಜಾತಿ ಠಾಕೂರ್‌ಗಳ ವಿರುದ್ಧ ದೂರು ದಾಖಲಿಸಿಕೊಳ್ಳಲೇ ತಯಾರಿರಲಿಲ್ಲ. ಆ ನಂತರ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ಕೂಡ ಹೇಳುವಂತೆ ಠಾಣೆಗೆ ಬಂದಾಗಲೇ ಪೊಲೀಸರು ಆಪ್ತವಾಗಿ ಸಮಾಲೋಚನೆ ಮಾಡಿದ್ದರೆ, ಸಂತ್ರಸ್ತೆಗೆ ಭಯವಿಲ್ಲದೆ ದೂರು ನೀಡುವ ವಾತಾವರಣ ಕಲ್ಪಿಸಿದ್ದರೆ, ಪೊಲೀಸರು ಅತ್ಯಾಚಾರವನ್ನು ಸಾಬೀತು ಪಡಿಸಲು ಬೇಕಿದ್ದ ಪುರಾವೆಗಳು ಸಿಗುತ್ತಿದ್ದವು. ಆದರೂ ಆಕೆ ಸೆಪ್ಟಂಬರ್ 25 ರಂದು ಸಾವಿನ ಬಾಗಿಲನ್ನು ತಟ್ಟುತ್ತಾ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳಿ ಆರೋಪಿಗಳ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದಳು. ಆದರೆ ಸೆಪ್ಟಂಬರ್ 29ರಂದು ಆಕೆ ಅಸುನೀಗಿದಳು. ಆಕೆಯ ಕುಟುಂಬದವರ ಪದ್ಧತಿಯ ಪ್ರಕಾರ ಹೆಣವನ್ನು ಹೂಳಬೇಕಿದ್ದರೂ, ಪೊಲೀಸರು ಹೆಣವನ್ನು ಆಕೆಯ ಅಪ್ಪ-ಅಮ್ಮನಿಗೆ ಒಪ್ಪಿಸದೆ ರಾತ್ರೋರಾತ್ರಿ ಅತ್ಯಾಚಾರಕ್ಕೆ ಗುರಿಯಾದ ದೇಹವನ್ನು ಯಾವ ಕುರುಹೂ ಸಿಗದಂತೆ ಸುಟ್ಟುಹಾಕಿದರು.

ಇಂತಹ ಸಂದರ್ಭದಲ್ಲಿ ಬಲವಾದ ಸಾಕ್ಷಿಯಾಗಿ ಕೋರ್ಟು ಮಾನ್ಯ ಮಾಡಬೇಕಿರುವುದು : ಸಂತ್ರಸ್ತೆಯ Dying Declaration- ಸಾವಿಗೆ ಮುಂಚೆ ನೀಡಿದ ಹೇಳಿಕೆ. ಆತ್ಯಾಚಾರದಂಥ ಪ್ರಕರಣದಲ್ಲಿ ಸಾಮಾನ್ಯವಾಗಿ ಕೋರ್ಟುಗಳು ಸಂತ್ರಸ್ತೆಯ ಸಾವಿನ ಮುಂಚಿನ ಹೇಳಿಕೆಯನ್ನು ಮಿಕ್ಕೆಲ್ಲಾ ಸಾಕ್ಷಿ ಪುರಾವೆಗಳಿಗಿಂತ ಅತ್ಯಂತ ಮೌಲಿಕ ಪುರಾವೆಯೆಂದೂ, ಅದನ್ನು ನಿರಾಕರಿಸುವಂತಹ ಬಲವಾದ ಸಾಕ್ಷಿ ಇಲ್ಲದಿದ್ದರೆ ಸಂತ್ರಸ್ತೆಯ ಹೇಳಿಕೆಯೊಂದೇ ಶಿಕ್ಷೆ ವಿಧಿಸಲು ಸಾಕೆನಿಸುವ ಪುರಾವೆಯೆಂದು ಪರಿಗಣಿಸುತ್ತದೆ. 2012ರ ನಿರ್ಭಯಾ ಪ್ರಕರಣದಲ್ಲಿ ಕೂಡ ಕೋರ್ಟುಗಳು ಇತರ ಸಾಕ್ಷಿಗಳ ಜೊತೆಗೆ ಅತ್ಯಂತ ಪ್ರಧಾನ ಸಾಕ್ಷಿಯೆಂದು ಪರಿಗಣಿಸಿದ್ದು ನಿರ್ಭಯಾಳ Dying Declaration- ಸಾವಿಗೆ ಮುಂಚೆ ನೀಡಿದ ಹೇಳಿಕೆಯನ್ನೇ..
ಆದರೆ ಹಾಥರಸ್ ಪ್ರಕರಣದಲ್ಲಿ ಆಗಿದ್ದೇ ಬೇರೆ.

ಕೋರ್ಟಿನ ಪ್ರಕಾರ:

''ಸಂತ್ರಸ್ತೆಯ ಅತ್ಯಾಚಾರ ನಡೆದ ನಂತರ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಂತ್ರಸ್ತೆಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಮೊದಲು ನೀಡಿದ ದೂರಿನಲ್ಲಿ ಹೇಳಿರಲಿಲ್ಲ. ಪ್ರಕರಣ ರಾಜಕೀಯಕರಣವಾದ ನಂತರ ಇತರರ ಚಿತಾವಣೆಗೆ ಕಿವಿಗೊಟ್ಟು ಅತ್ಯಾಚಾರದ ದೂರು ಸೇರಿಸಿರುವ ಸಾಧ್ಯತೆ ಇದೆ'' ಎಂದು ಯಾವುದೇ ಪುರಾವೆಯಿಲ್ಲದೆ ಅಭಿಪ್ರಾಯಕ್ಕೆ ಬಂದ ಕೋರ್ಟು ಆಕೆಯ Dying Declaration ಅನ್ನು ಪುರಾವೆಯೆಂದೇ ಪರಿಗಣಿಸಲಿಲ್ಲ. ಅತ್ಯಾಚಾರ ನಡೆದ 11 ದಿನಗಳ ನಂತರ ಅತ್ಯಾಚಾರದ ಆರೋಪ ದಾಖಲಿಸಿಕೊಂಡಿದ್ದರಿಂದ ಅಕೆಯ ಹೇಳಿಕೆ ಬಿಟ್ಟರೆ ಬೇರೆ ಯಾವುದೇ ಸಾಕ್ಷಿ ಸಿಗುವಂತಿರಲಿಲ್ಲ!

19 ವರ್ಷದ ಯುವತಿಯೊಬ್ಬಳು ಸಾಯುವ ಮುನ್ನ ತನ್ನ ಮೇಲೆ ಅತ್ಯಾಚಾರವಾಗಿತ್ತೆಂದು ಸುಳ್ಳು ಹೇಳಿದಳೆಂದು ಕೋರ್ಟು ಸಲೀಸಾಗಿ ತೀರ್ಮಾನಿಸಿಬಿಟ್ಟಿತು. ಆದರೆ ನಿರ್ಭಯಾ ಪ್ರಕರಣವನ್ನು ಕೋರ್ಟುಗಳು ಇಷ್ಟು ಸಲೀಸಾಗಿ ತೆಗೆದುಕೊಳ್ಳಲಿಲ್ಲ ಅಲ್ಲವೇ? ಅದಕ್ಕೆ ಕಾರಣ ಕೋರ್ಟೇ ಹೇಳಿದಂತೆ ನಿರ್ಭಯಾಳ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಅದು ಈ ದೇಶದ Collective Conscious - ಸಾಮೂಹಿಕ ಅಂತಸ್ಸಾಕ್ಷಿಯ ಮೇಲೆ ಮಾಡಿದ ಘಾಸಿ ಹಾಗೂ ಅದು ಹುಟ್ಟುಹಾಕಿದ ಜನಾಕ್ರೋಶ.

ಹಾಥರಸ್‌ನ ಮಗಳೂ ನಿರ್ಭಯಾಳ ರೀತಿ ಭಾರತಾಂಬೆಯ ಮಗಳೇ ಅಲ್ಲವೇ? ಹಾಗಿದ್ದಲ್ಲಿ ನಿರ್ಭಯಾಳ ವಿಚಾರದಲ್ಲಿ ಘಾಸಿಗೊಳಗಾದ ಭಾರತೀಯರ Collective Conscious - ಸಾಮೂಹಿಕ ಅಂತಸ್ಸಾಕ್ಷಿ ಹಾಥರಸ್ ವಿಷಯದಲ್ಲಿ ಘಾಸಿಗೊಳ್ಳಲಿಲ್ಲವೇಕೆ? ಸತ್ತ ನಂತರವೂ ನ್ಯಾಯಾಂಗದಿಂದಲೇ ಅನ್ಯಾಯಕ್ಕೆ ಗುರಿಯಾದ ಹಾಥರಸ್‌ನ ಮಗಳ ಬಗ್ಗೆ ಭಾರತವೇಕೆ ಆಕ್ರೋಶಗೊಳ್ಳದೆ ತಣ್ಣಗೆ ಮಲಗಿದೆ? ಏನಿರಬಹುದು ಕಾರಣ?

Collective Consciousನ ಡಬಲ್ ಸ್ಟಾಂಡರ್ಡ್‌ಗಳು 
ಭಾರತದ ನ್ಯಾಯಾಂಗ ಕೊಲೆ-ಆತ್ಯಾಚಾರಗಳಂಥ ಭೀಕರ ಅಪರಾಧಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಾಗ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮರಣದಂಡನೆಯನ್ನೂ ವಿಧಿಸುತ್ತದೆ. ಯಾವುದು ಮರಣದಂಡನೆಗೆ ಅರ್ಹವಾಗುವ ಅಪರೂಪದ ಪ್ರಕರಣ ಎಂಬ ತೀರ್ಮಾನಕ್ಕೆ ಬರಲು ಯಾವ ಅಪರಾಧಿ ಕೃತ್ಯವು ಸಮಾಜದ Collective Conscious- ಸಾಮೂಹಿಕ ಅಂತಸ್ಸಾಕ್ಷಿಯ ಮೇಲೆ ಮಾಡಿದ ಘಾಸಿ ಮಾಡಿರುತ್ತದೋ ಮತ್ತು ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸದೆ ಬೇರೆ ಯಾವ ಶಿಕ್ಷೆಯನ್ನು ಕೊಟ್ಟರೂ ಸಮಾಜದ ಈ ಸಾಮೂಹಿಕ ಅಂತಸ್ಸಾಕ್ಷಿಗೆ ಸಮಾಧಾನವಾಗುವುದಿಲ್ಲ ಎಂಬ ಪರಿಸ್ಥಿತಿ ಇರುತ್ತದೋ, ಅಂಥ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಮರಣದಂಡನೆಯನ್ನು ಕೋರ್ಟುಗಳು ವಿಧಿಸುತ್ತವೆ. ನಿರ್ಭಯಾ ಪ್ರಕರಣದಲ್ಲಿ ಕೂಡ ಅಪರಾಧ ಸಾಬೀತಾದ ನಂತರ ಅಪರಾಧಿಗಳಿಗೆ ಶಿಕ್ಷೆ ಏನಿರಬೇಕೆಂದು ವಿವೇಚಿಸುತ್ತಾ ಮರಣದಂಡನೆಯೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲು ಕಾರಣ: ಆಕ್ರೋಶಗೊಂಡ ಸಮಾಜದ Collective Conscious- ಸಾಮೂಹಿಕ ಅಂತಸ್ಸಾಕ್ಷಿಯನ್ನು ಸಮಾಧಾನಿಸಬೇಕಾದ ಅಗತ್ಯ.

ಆದರೆ ಮರಣದಂಡನೆಯು ಒಂದು ನಾಗರಿಕ ಸಮಾಜಕ್ಕೆ ಕಳಂಕ. ಯಾವ ಅಪರಾಧಗಳನ್ನು ಮರಣದಂಡನೆಯ ಭೀತಿಯೊಡ್ಡಿ ಕಡಿಮೆ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನಂತರವೂ ಅತ್ಯಾಚಾರಗಳ ಪ್ರಮಾಣವೇನೂ ಇಳಿದಿಲ್ಲ. ಅತ್ಯಾಚಾರವನ್ನು ಕೇವಲ ಕಾನೂನು ಕ್ರಮದಿಂದ ಕಡಿಮೆಯಾಗಿಸಲು ಸಾಧ್ಯವಿಲ್ಲ. ಅದಕ್ಕೆ ಗಂಡಾಳ್ವಿಕೆಯನ್ನು, ಗಂಡುಧೋರಣೆಯನ್ನು ತಿರಸ್ಕರಿಸುವಂತೆ ಸಮಾಜವನ್ನು ಸಜ್ಜುಗೊಳಿಸುವ ಹಲವಾರು ಪ್ರಗತಿಪರ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾದ ದೀರ್ಘಕಾಲೀನ ಕ್ರಮಗಳ ಅಗತ್ಯವಿದೆ. ಆದರೆ ನಮ್ಮ ಸರಕಾರಗಳು ಮತ್ತು ಸಮಾಜ ಈ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣನ್ನು ಭೋಗಿಸುವ ಅಥವಾ ಕೀಳಾಗಿ ಕಾಣುವ ಧೋರಣೆಯನ್ನು ಇನ್ನು ವ್ಯವಸ್ಥಿತವಾಗಿ ಪೋಷಿಸುತ್ತಾ ಅತ್ಯಾಚಾರಗಳು ನಡೆದಾಗ ಮಾತ್ರ ಮರಣದಂಡನೆ ವಿಧಿಸುವುದನ್ನು ಏಕೈಕ ಪರಿಹಾರವೆಂದು ಅಬ್ಬರಿಸುವುದು ಕ್ರೂರ ಸೋಗಲಾಡಿತನವೇ.

ಹೀಗಾಗಿಯೇ ಹಾಥರಸ್, ಖೈರ್ಲಾಂಜಿ, ನಿರ್ಭಯಾ ಇನ್ನಿತರ ಯಾವುದೇ ಪ್ರಕರಣಗಳಲ್ಲೂ ಅಪರಾಧಿಗಳಿಗೆ ಇತರ ಕಠಿಣ ಶಿಕ್ಷೆಯಾಗಬೇಕಿತ್ತೇ ವಿನಾ ಮರಣದಂಡನೆ ಪರಿಹಾರವಲ್ಲ. ಹಾಗೆಂದು ಸಮಾಜ ಮತ್ತು ಕೋರ್ಟುಗಳು ಎಲ್ಲಾ ಹೀನಾಯ ಅತ್ಯಾಚಾರಗಳ ಬಗ್ಗೆಯೂ ಒಂದೇ ರೀತಿಯಾಗಿ ಪ್ರಕ್ರಿಯಿಸುವುದಿಲ್ಲ ಎನ್ನುವುದು ನಿಜ ಎಂಬುದಕ್ಕೆ ಹಾಥರಸ್ ಒಂದು ಉದಾಹರಣೆ. ಅಂತಹ ಮರಣದಂಡನೆಗಳು ಕೂಡ ಅಪರಾಧಿಗಳು ತಳಸಮುದಾಯಗಳಿಗೆ ಅಥವಾ ಬಡವರ್ಗಗಳಿಗೆ ಸೇರಿದವರಾಗಿದ್ದರೆ ಮಾತ್ರ ಸಲೀಸಾಗಿ ನೀಡಲಾಗುತ್ತದೆಯೇ ವಿನಾ, ಅಪರಾಧಿಗಳು 'ಕುಲೀನ'ರಾಗಿದ್ದರೆ ಮರಣದಂಡನೆ ಯಾಗುವುದಿಲ್ಲ. ಹೀಗಾಗಿಯೇ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಮೇಲ್ಜಾತಿ. ಅಪರಾಧಿಗಳು ತಳಸಮುದಾಯದ ಬಡವರ್ಗಕ್ಕೆ ಸೇರಿದವರು. ಹೀಗಾಗಿ ಮರಣದಂಡನೆ ಸಲೀಸು. ಹೈದರಾಬಾದಿನ ದಿಶಾ ಪ್ರಕರಣದಲ್ಲಿ ಸಂತ್ರಸ್ತೆ ಮೇಲ್ಜಾತಿ. ಆರೋಪಿಗಳು-ಅಪರಾಧಿಗಳಲ್ಲ- ತಳಸಮುದಾಯಕ್ಕೆ ಸೇರಿದವರು. ಹೀಗಾಗಿ ಅಪರಾಧ ನಡೆದ ಒಂದೇ ವಾರದಲ್ಲಿ ವಿಚಾರಣೆಯೂ ಇಲ್ಲದೆ, ಆರೋಪ ಸಾಬೀತೂ ಆಗುವ ಮುನ್ನವೇ ಎನ್‌ಕೌಂಟರ್‌ಗೆ ಬಲಿಯಾಗುತ್ತಾರೆ.

ಅದಕ್ಕೆ ತದ್ವಿರುದ್ಧವಾಗಿ, ಹಾಥರಸ್‌ನಲ್ಲಿ ಸಂತ್ರಸ್ತೆ ದಲಿತೆ-ಆರೋಪಿಗಳು ಮೇಲ್ಜಾತಿ ಠಾಕೂರರು - ಹೀಗಾಗಿ ಮರಣದಂಡನೆ ಇರಲಿ ಇಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೇ ನಡೆದಿಲ್ಲವೆಂಬುದು ತೀರ್ಮಾನ. ಖೈರ್ಲಾಂಜಿಯಲ್ಲಿ ಸಂತ್ರಸ್ತರು ದಲಿತರು- ಆರೋಪಿಗಳು ಸವರ್ಣೀಯರು - ಹೀಗಾಗಿ ಮರಣದಂಡನೆ ಇಲ್ಲ. ಮಾತ್ರವಲ್ಲ, ಸಂತ್ರಸ್ತರು ದಲಿತರಾಗಿದ್ದರೂ ಸವರ್ಣೀಯರು ನಡೆಸಿದ ಸಾಮೂಹಿಕ ಕೊಲೆಗಳು ದಲಿತರ ಮೇಲಿನ ದೌರ್ಜನ್ಯ ಎಂದು ಪರಿಗಣಿತವಾಗುವುದಿಲ್ಲ. ಹಾಥರಸ್ ಮತ್ತು ಖೈರ್ಲಾಂಜಿ ಪ್ರಕರಣಗಳಲ್ಲಿ ಭಾರತೀಯ ಸಮಾಜದ ಅಂತಸ್ಸಾಕ್ಷಿ ದಿಶಾ ಹಾಗೂ ನಿರ್ಭಯಾ ಪ್ರಕರಣದಲ್ಲಿ ಮಿಡಿದಂತೆ ಮಿಡಿಯುವುದೇ ಇಲ್ಲ. ಹಾಗಿದ್ದಲ್ಲಿ ಭಾರತೀಯ ಸಮಾಜದ ಸಮೂಹ ಪ್ರಜ್ನೆಯ ಜಾತಿ ಯಾವುದು?

ನ್ಯಾಯಾಂಗದ Collective Conscious

ಭಾರತೀಯ ಸಮಾಜದ ಸಾಮೂಹಿಕ ಅಂತಸ್ಸಾಕ್ಷಿಯ ಜಾತಿಗ್ರಸ್ಥ ಸೋಗಲಾಡಿತನಕ್ಕೆ ದೊಡ್ಡ ಕೈಗನ್ನಡಿ ನಮ್ಮ ದೇಶದ ಸುಪ್ರೀಂ ಕೋರ್ಟೇ ಆಗಿದೆ. ಒಂದೆಡೆ ಯಾವುದೇ ಸಂದರ್ಭಗಳಲ್ಲೂ, ಎಂತಹ ಅಪರಾಧಗಳ ಹಿನ್ನೆಲೆಯಲ್ಲೂ, ಸಹಮನುಷ್ಯರ ಪ್ರಾಣವನ್ನು ಬಲಿ ತೆಗೆದುಕೊಳ್ಳುವ ಹಕ್ಕು ಸಮಾಜದ ಪ್ರತಿನಿಧಿಯಾದ ಪ್ರಭುತ್ವಕ್ಕೆ ಇಲ್ಲವೆಂದು ಬಹುಪಾಲು ಪ್ರಜಾತಾಂತ್ರಿಕ ನಾಗರಿಕ ಸಮಾಜಗಳು ಮರಣದಂಡನೆಯನ್ನು ರದ್ದುಗೊಳಿಸಿವೆ. ಅದರ ಬದಲಿಗೆ ಜೀವಾವಧಿ, ಜೀವಪೂರ್ತಿ ಕಾರಾಗೃಹ ಶಿಕ್ಷೆಯನ್ನೇ ಅತ್ಯಂತ ಹೆಚ್ಚಿನ ಶಿಕ್ಷೆಯಾಗಿ ಮಾನ್ಯ ಮಾಡುತ್ತ ಬಂದಿವೆ. ಆದರೆ ಭಾರತದಲ್ಲಿ ಮಾತ್ರ ಮರಣದಂಡನೆಯನ್ನು ಉಳಿಸಿಕೊಳ್ಳಲಾಗಿದೆ ಮತ್ತು ಅದನ್ನು ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಬಳಸಲಾಗುತ್ತಾ ಬರಲಾಗಿದೆ.

ಯಾವ ಸಂದರ್ಭಗಳಲ್ಲಿ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಬಹುದು ಎನ್ನುವ ನ್ಯಾಯಿಕ ಮಾನದಂಡಗಳನ್ನು ಸುಪ್ರೀಂ ಕೋರ್ಟು 1983ರಲ್ಲಿ ಮಚ್ಚಿ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಮೊತ್ತಮೊದಲಿಗೆ ಒದಗಿಸಿತು. ಅದನ್ನು ಆಧರಿಸಿ ನಂತರದಲ್ಲಿ ಹಲವಾರು ತೀರ್ಪುಗಳು ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆಯನ್ನು ವಿಧಿಸಬೇಕೆಂಬ ಸರ್ವಸಮ್ಮತ ಅಭಿಪ್ರಾಯಕ್ಕೆ ಬಂದಿವೆ. ಆದರೆ ಈ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬುದಕ್ಕೆ ಒಂದು ನಿರ್ದಿಷ್ಟ ಸಾಂವಿಧಾನಿಕ ವ್ಯಾಖ್ಯಾನವೇನೂ ಇಲ್ಲ. ಹೀಗಾಗಿ ವಿವಿಧ ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಆ ವ್ಯಾಖ್ಯಾನವನ್ನು ನಿರ್ದಿಷ್ಟೀಕರಿಸುತ್ತ ಬಂದಿದೆ. ಅವುಗಳೆಲ್ಲದರ ತಾತ್ಪರ್ಯವಿಷ್ಟು:

ಮರಣದಂಡನೆಯನ್ನು ಬೇರಾವ ಶಿಕ್ಷೆಯು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬರಬೇಕೆಂದರೆ: -ಆ ಅಪರಾಧವು ಅತ್ಯಂತ ಹೀನಾಯ, ಬರ್ಬರ ಹಾಗೂ ಅನಾಗರಿಕವಾಗಿರಬೇಕು. -ಅಪರಾಧಿಯು ಅಪರಾಧವನ್ನು ತಕ್ಷಣದ ಆವೇಶದಿಂದಲ್ಲದೆ ಪೂರ್ವಯೋಜಿತವಾಗಿ ಮಾಡಿರಬೇಕು. -ಅಪರಾಧಕ್ಕೆ ಗುರಿಯಾಗಿದ್ದ ಸಂತ್ರಸ್ತರು ಅಸಹಾಯಕ ಹಾಗೂ ಅಶಕ್ತರಾಗಿರಬೇಕು. -ಅಪರಾಧಿಯು ಸಂತ್ರಸ್ತರಿಗೆ ಹೋಲಿಸಿದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚಿನ ಅಧಿಕಾರ ಸ್ಥಾನದಲ್ಲಿದ್ದಿರಬೇಕು.
-ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸಂಭವಿಸಿದ ಅಪರಾಧದಿಂದ ಸಮಾಜವು ಆಕ್ರೋಶಿತಗೊಂಡಿದ್ದರೆ ಮತ್ತು ಮರಣದಂಡನೆಯನ್ನು ಬಿಟ್ಟು ಬೇರಾವ ಶಿಕ್ಷೆಯನ್ನು ವಿಧಿಸಿದರೂ ಸಮಾಜದ ಸಾಮೂಹಿಕ ಅಂತಸ್ಸಾಕ್ಷಿ - Collective Conscious - ಸಮಾಧಾನಗೊಳ್ಳುವುದಿಲ್ಲ ಎಂದಾಗಿದ್ದರೆ ಮರಣದಂಡನೆ ವಿಧಿಸಬೇಕು. ಎಂದು ಭಾರತದ ಅತ್ಯುನ್ನತ ನ್ಯಾಯಾಂಗ ಮರಣದಂಡನೆಯ ಮಾನದಂಡಗಳನು ಸೂತ್ರೀಕರಿಸಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ ಈ ವೆಬ್ ವಿಳಾಸದಲ್ಲಿ ಸಿಗುವ ಈ ಆದೇಶವನ್ನು ಓದಬಹುದು:
https://indiankanoon.org/docfragment/54977676/formInput=brutality%20%20%20doctypes%3A%20madhyapradesh

ಭಾರತೀಯ ನ್ಯಾಯಾಲಯಗಳು ಇತ್ತೀಚಿನ ದಿನಗಳಲ್ಲಿ ಮರಣದಂಡನೆಗಳನ್ನು ವಿಧಿಸಲು ಪ್ರಧಾನವಾಗಿ ಬಳಸುತ್ತಿರುವುದೇ ಸಾಮೂಹಿಕ ಅಂತಸ್ಸಾಕ್ಷಿಯನ್ನು ಸಮಾಧಾನಗೊಳಿಸುವ ಮಾನದಂಡಗಳನ್ನು. ದಿಲ್ಲಿಯ ನ್ಯಾಷನಲ್ ಲಾ ಸ್ಕೂಲ್ ಪ್ರಕಟಿಸಿರುವ ಒಂದು ಅಧ್ಯಯನದ ಪ್ರಕಾರ 2000-2015ರ ನಡುವೆ ದಿಲ್ಲಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಕೋರ್ಟುಗಳು ನೀಡಿರುವ 215 ಮರಣದಂಡನಾ ಆದೇಶಗಳಲ್ಲಿ ಶೇ. 75 ರಷ್ಟು ಆದೇಶಗಳು ಈ Collective Conscious ಅನ್ನು ಸಮಾಧಾನ ಪಡಿಸುವ ಮಾನದಂಡವನ್ನು ಪ್ರಧಾನವಾಗಿ ಬಳಸಿವೆ.

(https://indianexpress.com/article/india/in-most-death-penalty-cases-court-invoked-collective-conscience-of-society-study-6408705/)

2015ರಲ್ಲಿ ದಿಲ್ಲಿಯ ನ್ಯಾಷನಲ್ ಲಾ ಯುನಿವರ್ಸಿಟಿ ನಡೆಸಿದ ಮತ್ತೊಂದು ಅಧ್ಯಯನದ ಪ್ರಕಾರ 2016 ರ ವೇಳೆಗೆ ಮರಣದಂಡನೆಯ ಶಿಕ್ಷೆಗೆ ಗುರಿಯಾಗಿದ್ದ 385 ಅಪರಾಧಿಗಳಲ್ಲಿ ಶೇ. 75 ಜನರು ಬಡ ಆರ್ಥಿಕ ಹಿನ್ನೆಲೆಯವರು ಮತ್ತು ಅವರಲ್ಲಿ ಶೇ. 80 ರಷ್ಟು ಜನ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಾಮಾಜಿಕ ಹಿನ್ನೆಲೆಯವರು.

(https://thewire.in/law/three-quarters-of-death-row-prisoners-are-from-lower-castes-or-religious-minorities) 

ಇದರ ಅರ್ಥ ತಳಸಮುದಾಯದ ಹಿನ್ನೆಲೆಯುಳ್ಳವರು ಮರಣದಂಡನೆಗೆ ಯೋಗ್ಯವಾದ ಅಪರಾಧವನ್ನು ಮಾಡುತ್ತಿದ್ದಾರೆ ಮತ್ತು ಮೇಲ್ಜಾತಿ ಅಥವಾ ಸವರ್ಣ ಸಮುದಾಯದವರು ಅಂತಹ ಹೀನಾಯ ಅಪರಾಧ ಮಾಡುತ್ತಿಲ್ಲ ಎಂದಲ್ಲ. ಬದಲಿಗೆ ನಮ್ಮ ನ್ಯಾಯಾಂಗವು ಈ ವಿಷಯದಲ್ಲಿ ಅನುಸರಿಸುತ್ತಿರುವ ಮಾನದಂಡಗಳು ಪಕ್ಷಪಾತಿಯಾಗಿವೆ, ಸವರ್ಣೀಯವಾಗಿವೆ ಎಂದಷ್ಟೆ ಅರ್ಥ. ಹಾಥರಸ್ ಈ ವಿಷಯದಲ್ಲಿ ಒಂದು ದೊಡ್ಡ ಉದಾಹರಣೆ. ಸಾಮೂಹಿಕ ಅಂತಸ್ಸಾಕ್ಷಿಗೆ ಧಕ್ಕೆಯಾಗಿರುವುದು ಸಮಾಜದಲ್ಲಿ ವ್ಯಕ್ತವಾಗುವ ಪ್ರತಿರೋಧಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಕನಿಷ್ಠ ಹಾಥರಸ್ ಪ್ರಕರಣದಲ್ಲಿ ದೊಡ್ದ ಮಟ್ಟದಲ್ಲಿ ಜನಪ್ರತಿರೋಧ ವ್ಯಕ್ತವಾಯಿತು. ಆದರೆ ನಿರ್ಭಯಾ ಪ್ರಕರಣದಲ್ಲಿ ನಡೆದ ಜನಪ್ರತಿರೋಧವನ್ನು ಅಂತಸ್ಸಾಕ್ಷಿ ಕಲಕಿರುವುದಕ್ಕೆ ಸಂಕೇತ ಎಂದು ಪರಿಗಣಿಸಿದ ಕೋರ್ಟುಗಳು ಹಾಥರಸ್ ಪ್ರಕರಣದಲ್ಲಿ ಅವುಗಳನ್ನು ರಾಜಕೀಯ ಚಿತಾವಣೆ ಎಂದು ಪರಿಗಣಿಸಿತು. ಜಾತಿ ಪಕ್ಷಪಾತಿತನದಿಂದ ಅತ್ಯಾಚಾರದ ಸಾಕ್ಷಿ ಸಂಗ್ರಹಿಸದ ಪೊಲೀಸರನ್ನು ಶಿಕ್ಷಿಸುವ ಬದಲು ಅತ್ಯಾಚಾರವನ್ನೇ ನಿರಾಕರಿಸಿತು. ಹಾಗೆ ನೋಡಿದರೆ ಕೋರ್ಟು ವಿಚಾರಣೆ ನಡೆಸಿದ್ದು ಆರೋಪಿಗಳನ್ನಲ್ಲ.

ಬದಲಿಗೆ ಸತ್ತುಹೋದ ಸಂತ್ರಸ್ತೆಯನ್ನು! ಹೀಗಾಗಿ ಹಾಥರಸ್ ಪ್ರಕರಣದಲ್ಲಿ ಮರಣದಂಡನೆ ವಿಧಿಸಬಹುದಾದ ಎಲ್ಲಾ ಮಾನದಂಡಗಳು ಅನ್ವಯವಾಗುವಂತಿದ್ದರೂ ಮೇಲ್ಜಾತಿ ಅಪರಾಧಿಗಳು ಶಿಕ್ಷೆಯೇ ಆಗದಂತೆ ಬಚಾವಾದರು. ಖೈರ್ಲಾಂಜಿ ಪ್ರಕರಣದಲ್ಲಿ 50ಕ್ಕೂ ಹೆಚ್ಚು ಸವರ್ಣೀಯ ಗುಂಪು ಪೂರ್ವಯೋಜಿತವಾಗಿ ಸಂಚು ಮಾಡಿ ಕತ್ತಿ, ಸಲಾಕೆಗಳೊಂದಿಗೆ ದಲಿತ ಭೋತ್‌ಮಾಂಗೆ ಕುಟುಂಬದ ಮೇಲೆ ದಾಳಿ ಮಾಡಿದ್ದರು. ಸುರೇಖಾ ಹಾಗೂ ಪ್ರಿಯಾಂಕಾ ಭೋತ್‌ಮಾಂಗೆಯವರ ಮರ್ಮಾಂಗದಲ್ಲಿ ಸಲಾಕೆೆಗಳನ್ನು ತುರುಕಿ, ಬೇಕಾಬಿಟ್ಟಿ ಹಲ್ಲೆ ಮಾಡಿ ಕೊಂದು ಹಾಕಿದ್ದರು. ಆವರ ಇಬ್ಬರು ಗಂಡು ಮಕ್ಕಳನ್ನು ಅದೇ ರೀತಿ ಹಳ್ಳಿಯ ನಡುಮಧ್ಯಕ್ಕೆ ಎಳೆತಂದು ಬಡಿದು ಬಡಿದು ಕೊಂದು ಹಾಕಿದ್ದರು. ಅತ್ಯಂತ ಯೋಜಿತವಾಗಿ ಹೆಣಗಳನ್ನು ಕಾಲುವೆಯಲ್ಲಿ ಎಸೆದು ಸುಮ್ಮನಾಗಿದ್ದರು. ಕೊಲೆಯಾದ ಎರಡು ದಿನಗಳ ನಂತರ ಹೆಣಗಳು ಸಿಗುತ್ತವೆ. ಹೆದರಿ, ಕಂಗಾಲಾಗಿದ್ದ ಭೋತ್‌ಮಾಂಗೆ ಕುಟುಂಬದಲ್ಲಿ ಉಳಿದುಕೊಂಡ ಏಕಮಾತ್ರ ಸದಸ್ಯ ಭಯ್ಯೆಲಾಲ್ ಭೋತ್‌ಮಾಂಗೆ ದೂರು ಕೊಡುತ್ತಾನೆ. ಆದರೂ ಪೊಲೀಸರು ಅದು ಒಂದು ಅನೈತಿಕ ಸಂಬಂಧದ ವೈಷಮ್ಯದ ಪ್ರಕರಣ ಎಂದು ಅಟ್ರಾಸಿಟಿ ಕಾಯ್ದೆಯಡಿಯಲ್ಲೂ ನೋಂದಾಯಿಸಿಕೊಳ್ಳುವುದಿಲ್ಲ. ನಂತರ ನಿಧಾನಕ್ಕೆ ಸತ್ಯ ಆಚೆ ಬಂದು ದೊಡ್ಡ ಹೋರಾಟ ನಡೆಯುತ್ತದೆ. ಬಲಿಯಾದವರ ಅಸಹಾಯಕತೆ, ಅಪರಾಧದ ಕ್ರೌರ್ಯ, ಭೀಕರತೆ ಮತ್ತು ಬರ್ಬರತೆ, ಅಪರಾಧಿಗಳ ಸಾಮಾಜಿಕ ಸ್ಥಾನಮಾನ, ಸಂತ್ರಸ್ತ ಸಮುದಾಯಕ್ಕೆ ಸೇರಿದವರ ಆಕ್ರೋಶ... ಎಲ್ಲವೂ ಮರಣದಂಡನೆಯ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುವಂತಿದ್ದವು. ಈ ಬಗ್ಗೆ ಅಂತಿಮವಾಗಿ ಶಿಕ್ಷೆಗೆ ಗುರಿಯಾದ 8 ಜನರಿಗೆ ಮರಣದಂಡನೆ ವಿಧಿಸಬೇಕೆಂದು ಸುಪ್ರೀಂ ಕೋರ್ಟಿಗೆ ಮೇಲ್ಮನವಿಯನ್ನು ಮಾಡಿದ್ದ ಭಯ್ಯೆಲಾಲ್ ಭೋತ್‌ಮಾಂಗೆ 2017ರಲ್ಲಿ ಹೃದಯಾಘಾತದಿಂದ ಅಸುನೀಗಿದರು. 2019ರಲ್ಲಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಅಪರಾಧಿಗಳಿಗೆ ಮರಣದಂಡನೆ ಯನ್ನು ವಿಧಿಸಬೇಕೆಂಬ ಮೇಲ್ಮನವಿಯನ್ನು ತಿರಸ್ಕರಿಸಿತು. ಹಾಗೂ 25 ವರ್ಷಗಳ ಸೆರೆವಾಸವನ್ನು ಖಾಯಂ ಮಾಡಿತು ಹಾಗೂ ಪರೋಕ್ಷವಾಗಿ ಖೈರ್ಲಾಂಜಿ ಪ್ರಕರಣ ನಿರ್ಭಯಾ ಪ್ರಕರಣದಷ್ಟು ಅಥವಾ ಮರಣದಂಡನೆಯನ್ನು ಖಾಯಂಗೊಳಿಸಿದ ಇತರ ಪ್ರಕರಣಗಳಷ್ಟು ಬರ್ಬರವಲ್ಲ, ಇದರಿಂದ ಸಮಾಜದ ಅಂತಸ್ಸಾಕ್ಷಿಗೆ ಮರಣದಂಡನೆ ವಿಧಿಸುವಷ್ಟು ಧಕ್ಕೆಯಾಗಿಲ್ಲ ಎಂದು ತೀರ್ಪು ನೀಡಿತು. ಆ ಪೀಠದಲ್ಲಿ ಸುಪ್ರೀಂ ಕೋರ್ಟಿನ ಏಕೈಕ ದಲಿತ ನ್ಯಾಯಾಧೀಶರಾದ ನ್ಯಾ.ಗವಾಯಿ ಕೂಡ ಇದ್ದರು.

(https://indiankanoon.org/doc/77000502/?type=print)

ಬಿಲ್ಕಿಸ್ ಬಾನು ಪ್ರಕರಣದಲ್ಲಂತೂ, ಪ್ರಧಾನವಾಗಿ ಮೇಲ್ಜಾತಿ ಸಮುದಾಯಗಳಿಗೆ ಸೇರಿದ 11 ಅಪರಾಧಿಗಳು ಮೂರು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನುವಿನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರೂ, ಆಕೆಯ ಕಂಕುಳಲ್ಲಿದ್ದ ಮಗುವನ್ನು ಕಲ್ಲಿಗೆ ಬಡಿದು ಕೊಂದುಹಾಕಿದರೂ, ಜೊತೆಗಿದ್ದ ಆರು ಜನರನ್ನು ಕೊಂದು ರುಂಡಮುಂಡಗಳನ್ನು ಬೇರ್ಪಡಿಸಿ ಯೋಜಿತ, ಭೀಕರ, ಅಮಾನವೀಯ ಕ್ರೌರ್ಯಗಳನ್ನು ಮಾಡಿದರೂ ಕೋರ್ಟು, ಸುಪ್ರೀಂ ಕೋರ್ಟು ಸಹ ಅದು ಸಮಾಜದ ಅಂತಸ್ಸಾಕ್ಷಿಯನ್ನು ಕದಡುವಂಥ, ಮರಣದಂಡನೆಗೆ ಅರ್ಹವಾದಂತಹ ಅಪರಾಧವಲ್ಲ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ಖಾಯಂ ಮಾಡಿತು. ಅವರೆಲ್ಲರೂ ಈಗ ಸನ್ನಡತೆ ಆಧಾರದಲ್ಲಿ ಬಿಡುಗಡೆಯೂ ಆಗಿದ್ದಾರೆ. ಈ ಯಾವುದೇ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಲೇಖನದ ತಾತ್ಪರ್ಯವಲ್ಲ. ಆದರೆ ಮರಣದಂಡನೆ ವಿಧಿಸಬೇಕೆಂದರೆ ಸಮಾಜದ ಅಂತಸ್ಸಾಕ್ಷಿಯು ಅಪರಾಧಿಗಳಿಗೆ ಮರಣದಂಡನೆ ವಿಧಿಸದೆ ಸಮಾಧಾನಗೊಳ್ಳುವುದಿಲ್ಲ ಎಂಬ ಪರಿಸ್ಥಿತಿ ಇರಬೇಕು ಎಂಬ ಮಾನದಂಡವನ್ನು ಪ್ರಧಾನವಾಗಿ ಅನುಸರಿಸುತ್ತದೆ.

ಆದರೆ ಕೋರ್ಟಿನ ಮತ್ತು ಸಮಾಜದ ಅಂತಸ್ಸಾಕ್ಷಿಯು ನಿರ್ಭಯಾ ಮತ್ತು ದಿಶಾ ಪ್ರಕರಣಗಳಲ್ಲಿ ಆಕ್ರೋಶಿತಗೊಳ್ಳುತ್ತದೆ. ಅಂತಹ ಆಕ್ರೋಶಗಳನ್ನು ಮಾತ್ರ ಕೋರ್ಟುಗಳು ಪರಿಗಣಿಸುತ್ತವೆ. ಆದರೆ ಹಾಥರಸ್, ಖೈರ್ಲಾಂಜಿ, ಬಿಲ್ಕಿಸ್ ಬಾನುರಂತಹ ಪ್ರಕರಣಗಳಲ್ಲಿ ಮೇಲ್ಜಾತಿ ಸಮಾಜದ ಅಂತಸ್ಸಾಕ್ಷಿಗೆ ಆಕ್ರೋಶವೇ ಹುಟ್ಟುವುದಿಲ್ಲ. ತಳಸಮುದಾಯಗಳು ಆಕ್ರೋಶಿತಗೊಂಡು ಬೀದಿಗೆ ಬಂದರೆ ಸರಕಾರ ಮತ್ತು ಕೋರ್ಟು ಅದನ್ನು ರಾಜಕೀಯ ಚಿತಾವಣೆ ಎಂದೋ, ಕಾನೂನು ಸಮಸ್ಯೆಯೆಂದೋ ಪರಿಗಣಿಸುತ್ತದೆಯೇ ವಿನಾ ಸಮಾಜದ ಅಂತಸ್ಸಾಕ್ಷಿಯ ಆಕ್ರೋಶ ಎಂದು ಪರಿಗಣಿಸುವುದೇ ಇಲ್ಲ. ಹಾಗಿದ್ದರೆ ನಮ್ಮ ಕೋರ್ಟುಗಳ, ಸಮಾಜದ ಅಂತಸ್ಸಾಕ್ಷಿಯ ಜಾತಿ ಯಾವುದು ..ಯುವರ್ ಆನರ್?!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)