varthabharthi


ವಿಶೇಷ-ವರದಿಗಳು

2014ಕ್ಕೂ ಮುನ್ನ ದೇಶ ಹೆಮ್ಮೆಪಡಲು ಇದ್ದ ಹಲವು ಕಾರಣಗಳು

ವಾರ್ತಾ ಭಾರತಿ : 15 Mar, 2023
ಬದ್ರಿ ರೈನಾ

ಪರಮಾಣು ಶಕ್ತಿ, ಬಾಹ್ಯಾಕಾಶ ಸಂಶೋಧನೆ, ನಾಗರಿಕ ಮತ್ತು ಕೈಗಾರಿಕಾ ಸಾಮರ್ಥ್ಯಗಳಲ್ಲಿನ ಪ್ರಗತಿ, ತಾಂತ್ರಿಕ ಜ್ಞಾನ, ಗುಣಮಟ್ಟದ ಸಂಸ್ಥೆಗಳ ಸ್ಥಾಪನೆ, ಅತ್ಯುತ್ತಮ ವಿಜ್ಞಾನಿಗಳನ್ನು ರೂಪಿಸುವಲ್ಲಿ ಆದ ಸಾಧನೆಗಳು ಎಲ್ಲರ ಹೆಮ್ಮೆಗೆ ಕಾರಣವಾಗುವಂಥವು. ಐಐಟಿಗಳು, ಐಐಎಂಗಳು, ಗುಣಮಟ್ಟದ ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಸ್ಥೆಗಳು, ಉತ್ತಮ ಬದ್ಧತೆ ಹೊಂದಿರುವ ಆಡಳಿತ ಸಿಬ್ಬಂದಿ, ದಕ್ಷತೆ ಮತ್ತು ಗಣರಾಜ್ಯದ ಆದರ್ಶಗಳು ಇವಾವುವೂ ಪ್ರಸಕ್ತ ಸರಕಾರ ಬರುವುದರೊಂದಿಗೆ ಬಂದವೇನಲ್ಲ ಎಂಬುದು ಎಲ್ಲರಿಗೂ ಗೊತ್ತು.

2015ರಲ್ಲಿ ವಿದೇಶದಲ್ಲಿ ನಿಂತು ನರೇಂದ್ರ ಮೋದಿ, 2014ರಲ್ಲಿ ತಾನು ಅಧಿಕಾರ ವಹಿಸಿಕೊಳ್ಳುವ ಮೊದಲು ಭಾರತೀಯರು ಭಾರತೀಯರಾಗಿರುವುದಕ್ಕೆ ನಾಚಿಕೆಪಡುವಂಥ ಸ್ಥಿತಿಯಿತ್ತು ಎಂದು ಹೇಳಿದ್ದರು. ಅದು, ಆಡಳಿತದ ಸಿದ್ಧಾಂತ ಅಥವಾ ದೇಶದಲ್ಲಿನ ಸರಕಾರದ ನೀತಿಯ ಟೀಕೆಯಾಗಿರಲಿಲ್ಲ. ವಾಸ್ತವವಾಗಿ ಮೂರು ತಲೆಮಾರುಗಳ ಭಾರತೀಯರಿಗೆ ಅವಮಾನವೆನ್ನಿಸುವ ಹಾಗಿತ್ತು.

ಆದರೆ, ಸ್ವಾತಂತ್ರ್ಯ ಹೋರಾಟದ ಕೊನೆಯ ವರ್ಷಗಳಲ್ಲಿ ಅಥವಾ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಭಾರತದ ಪ್ರಜ್ಞಾವಂತ ನಾಗರಿಕ ರಾಗಿ ಬೆಳೆದವರೆಲ್ಲ ಭಾರತೀಯರು ಎಂದು ಸಾಕಷ್ಟು ಹೆಮ್ಮೆಪಡುತ್ತಾರೆಂಬುದು ಸತ್ಯ.

ನಾವು ಮಹಾತ್ಮಾ ಗಾಂಧಿಯವರನ್ನು-ಬೇರೆ ಯಾವ ದೇಶವೂ ಹೊಂದಿರದಿದ್ದ, ಮುಂದಿನ ತಲೆಮಾರುಗಳು ಅವರಂತಹವರು ಈ ಭೂಮಿಯ ಮೇಲಿದ್ದರು ಎಂದು ನಂಬುವುದು ಸಾಧ್ಯವಿಲ್ಲ ಎಂದು ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದಂಥವರನ್ನು ಹೊಂದಿದ್ದೆವು.

ಒಂದು ಬಹುದೊಡ್ಡ ಚಳವಳಿಗೆ ಅವರು ಮಾರ್ಗದರ್ಶನ ನೀಡಿದ್ದರು, ಅವಮಾನಿತ ಜನರನ್ನು ಸ್ವಯಂಜ್ಞಾನ ಮತ್ತು ಸ್ವಾಭಿಮಾನದೆಡೆಗೆ ಕೊಂಡೊಯ್ದಿದ್ದರು.
ಸಂವಿಧಾನವು ಎಲ್ಲಾ ಭಾರತೀಯರನ್ನು ಜಾತಿ, ಧರ್ಮ, ಲಿಂಗ, ವರ್ಗ ಅಥವಾ ಯಾವುದೇ ಇತರ ಸಾಮಾಜಿಕ ಗುರುತಿನ ಹೊರತಾಗಿ, ಅವರ ಮೂಲಭೂತ ಹಕ್ಕುಗಳಲ್ಲಿ ಮತ್ತು ಕಾನೂನಿನ ಮುಂದೆ ಸಮಾನವಾಗಿ ಪರಿಗಣಿಸಿದೆ.

ಅಂತಹ ಪರಂಪರೆಯನ್ನು 2014ರಿಂದ ಕಿತ್ತುಹಾಕಲು ಪ್ರಯತ್ನಿಸಲಾಗಿದೆ ಎಂಬುದು ಗೊತ್ತಿರುವ ವಿಚಾರವೇ. ಅನೇಕ ಭಾರತೀಯರು ನಿಜವಾಗಿಯೂ ನಾಚಿಕೆಪಡುವ ಘಟನೆಗಳ ತಿರುವು ಅದು.
ಇತ್ತೀಚಿನ ದಿನಗಳಲ್ಲಿ, ದುಃಖಕರವೆಂದರೆ, ಜನರು ಸಂಸತ್ತಿನ ಬಗ್ಗೆ ನಾಚಿಕೆಪಡುವಂತಾಗಿದೆ. ಆದರೆ 2014ರ ಮೊದಲು ಇತಿಹಾಸವು ಈ ವಿಷಯದಲ್ಲಿ ಅಸಾಧಾರಣವಾಗಿದೆ. 1937ರಲ್ಲಿ ಕೋಲ್ಕತಾದಿಂದ ಪ್ರಕಟವಾಗುತ್ತಿದ್ದ ಆಗಿನ ಹೆಸರಾಂತ ಜರ್ನಲ್ ಮಾಡರ್ನ್ ರಿವ್ಯೆನಲ್ಲಿ ಅನಾಮಧೇಯ ಲೇಖನ ಪ್ರಕಟವಾಗಿತ್ತು. ಲೇಖಕರು ನೆಹರೂ ಅವರನ್ನು ಟೀಕಿಸಿದ್ದರು. ಆ ಲೇಖಕ ಬೇರಾರೂ ಅಲ್ಲ, ಸ್ವತಃ ನೆಹರೂ ಎಂಬುದು ಆನಂತರ ತಿಳಿದಿತ್ತು. ಪ್ರಜಾಪ್ರಭುತ್ವದ ಬಗೆಗಿನ ಅಂಥ ಬದ್ಧತೆಯೇ ಅಂದಿನ ಸಂಸತ್ತಿನ ಕಾರ್ಯವೈಖರಿಯನ್ನು ರೂಪಿಸಿತ್ತು.

ನೆಹರೂ ಸಂಸತ್ತಿಗೆ ಹಾಜರಾಗುವುದನ್ನು ಎಂದಿಗೂ ತಪ್ಪಿಸಿರಲಿಲ್ಲವಾದರೂ, ಸಂಸದರ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಗಳೊಂದಿಗೆ ಸಿದ್ಧರಾಗಿರು ತ್ತಿದ್ದರೂ, ಸಂಸತ್ತಿನ ಕೆಲವು ಶಿಷ್ಟಾಚಾರ ಅಥವಾ ಕಾರ್ಯವಿಧಾನದಲ್ಲಿನ ಲೋಪಕ್ಕಾಗಿ, ಕೆಲವೊಮ್ಮೆ ಪಶ್ನೆಗಳನ್ನು ಕೇಳಲಾದ ಹೊತ್ತಲ್ಲಿ ಸದನದಲ್ಲಿ ನೆಹರೂ ಹಾಜರಿಲ್ಲದೆ ಇದ್ದುದಕ್ಕಾಗಿ ಅವರನ್ನು ಸ್ಪೀಕರ್ (ಗಣೇಶ್ ವಾಸುದೇವ್ ಮಾವ್ಲಂಕರ್) ಶಿಕ್ಷಿಸಿದ ಸಂದರ್ಭಗಳಿದ್ದವು. ಆ ಶಿಕ್ಷೆಗಳನ್ನು ನೆಹರೂ ಸ್ವೀಕರಿಸಿದ್ದರು ಮತ್ತು ಕ್ಷಮೆಯಾಚಿಸಿದ್ದರು.

ಕಾಂಗ್ರೆಸ್ ಪಕ್ಷದ ಅಗಾಧ ಬಹುಮತದ ಹೊರತಾಗಿಯೂ, ಪ್ರತಿಪಕ್ಷದ ಕೆಲವೇ ಸದಸ್ಯರು ಸರಕಾರವನ್ನು ಮತ್ತು ಅದರ ನಾಯಕತ್ವವನ್ನು ದೂಷಿಸಲು ಅಧಿಕಾರ ಹೊಂದಿದ್ದರು. ಒಂದು ವಿಷಯದ ಕುರಿತ ಚರ್ಚೆಗಾಗಿ ವಿರೋಧ ಪಕ್ಷದ ಬೇಡಿಕೆ ನಿರಾಕರಿಸಿದ್ದು ಅಪರೂಪಕ್ಕೆ ಮಾತ್ರ. ಯುವ ಮತ್ತು ಮೇಧಾವಿ ವಾಜಪೇಯಿ ಅವರು ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾಗ ಅವರನ್ನು ಅದೇ ನೆಹರೂ ಅಭಿನಂದಿಸಲು ಎದ್ದುನಿಂತು, ‘‘ನೀವು ಮುಂದೊಂದು ದಿನ ಪ್ರಧಾನಿಯಾಗುತ್ತೀರಿ’’ ಎಂದು ಹೇಳಿದ್ದರು. ಅದು ನಿಜವಾಯಿತು.

ಆಗ ಭಾರತೀಯರು ಮಾಧ್ಯಮ ಸಂಸ್ಥೆಗಳು, ಮಾಲಕರು ಮತ್ತು ಸಂಪಾದಕರ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದರು, ಅಪ್ರಾಮಾಣಿಕತೆ, ತಪ್ಪುನೀತಿ ಕಂಡರೆ, ಸಾಂವಿಧಾನಿಕ ಉಲ್ಲಂಘನೆ ಅಥವಾ ಇತರ ರೀತಿಯ ದಬ್ಬಾಳಿಕೆ ಕಂಡರೆ ಪತ್ರಕರ್ತರು ಯಾರನ್ನೂ ಎಷ್ಟೇ ದೊಡ್ಡವರನ್ನೂ ಬಿಡದೆ ಖಂಡಿಸಬಲ್ಲವರಾಗಿದ್ದರು. ಪತ್ರಿಕೆಗಳ ಪ್ರಧಾನ ಸಂಪಾದಕರು ಪ್ರಜಾಪ್ರಭುತ್ವದ ತತ್ವಗಳು ಎಲ್ಲ ಸಮಯದಲ್ಲೂ ಗೌರವಿಸಲ್ಪಡು ವಂತೆ ನೋಡಿಕೊಂಡರು,

ವ್ಯಂಗ್ಯಚಿತ್ರಕಾರ ಶಂಕರ್ ಅವರನ್ನು ನೆಹರೂ ಆಗಾಗ ತಮ್ಮ ಕಚೇರಿಗೆ ಕರೆದು, ‘‘ಶಂಕರ್, ನನ್ನನ್ನು ಕೂಡ ಬಿಡಬೇಡಿ’’ ಎಂದು ಹೇಳುತ್ತಿದ್ದುದಿತ್ತು. ಆರ್.ಕೆ.ಲಕ್ಷ್ಮಣ್, ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಕಟುವಾಗಿ ಟೀಕಿಸಲು ಸಾಧ್ಯವಿತ್ತು. ಎಂದಿಗೂ ವರದಿಗಾರ ಅಥವಾ ಸಂಪಾದಕರನ್ನು ದೇಶದ್ರೋಹದ ಆರೋಪದ ಮೇಲೆ ಎಳೆದುಕೊಂಡು ಹೋಗಿರಲಿಲ್ಲ ಮತ್ತು ಕಠಿಣ ಜಾಮೀನು ರಹಿತ ಕಾನೂನುಗಳ ಅಡಿಯಲ್ಲಿ ತಕ್ಷಣವೇ ಜೈಲಿಗೆ ಕಳುಹಿಸಿರಲಿಲ್ಲ.

ಪರಮಾಣು ಶಕ್ತಿ, ಬಾಹ್ಯಾಕಾಶ ಸಂಶೋಧನೆ, ನಾಗರಿಕ ಮತ್ತು ಕೈಗಾರಿಕಾ ಸಾಮರ್ಥ್ಯಗಳಲ್ಲಿನ ಪ್ರಗತಿ, ತಾಂತ್ರಿಕ ಜ್ಞಾನ, ಗುಣಮಟ್ಟದ ಸಂಸ್ಥೆಗಳ ಸ್ಥಾಪನೆ, ಅತ್ಯುತ್ತಮ ವಿಜ್ಞಾನಿಗಳನ್ನು ರೂಪಿಸುವಲ್ಲಿ ಆದ ಸಾಧನೆಗಳು ಎಲ್ಲರ ಹೆಮ್ಮೆಗೆ ಕಾರಣವಾಗುವಂಥವು. ಐಐಟಿಗಳು, ಐಐಎಂಗಳು, ಗುಣಮಟ್ಟದ ವಿಶ್ವವಿದ್ಯಾನಿಲಯಗಳು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸಂಸ್ಥೆಗಳು, ಉತ್ತಮ ಬದ್ಧತೆ ಹೊಂದಿರುವ ಆಡಳಿತ ಸಿಬ್ಬಂದಿ, ದಕ್ಷತೆ ಮತ್ತು ಗಣರಾಜ್ಯದ ಆದರ್ಶಗಳು ಇವಾವುವೂ ಪ್ರಸಕ್ತ ಸರಕಾರ ಬರುವುದರೊಂದಿಗೆ ಬಂದವೇನಲ್ಲ ಎಂಬುದು ಎಲ್ಲರಿಗೂ ಗೊತ್ತು.

ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯ ಗಳಲ್ಲಿ ಉದಾರ ಶಿಕ್ಷಣದ ಹರಡುವಿಕೆಯ ಬಗ್ಗೆ, ನವ ಭಾರತವನ್ನು ಕಟ್ಟುವಲ್ಲಿ ಸಮೃದ್ಧವಾಗಿ ಕೊಡುಗೆ ನೀಡಿದ ಉತ್ಸಾಹಿ ಕೈಗಾರಿಕೋ ದ್ಯಮಿಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ, ಆ ಕಾಲದಲ್ಲಿ ಅದಾನಿಯನ್ನು ಇವತ್ತಿನಂತೆ ತೋರಿಸುವುದೇ ಅಸಭ್ಯವಾಗಿರುತ್ತಿತ್ತು.

ನೆಹರೂ ಅವರನ್ನು ಟೀಕಿಸುವ ಇವತ್ತಿನ ಸರಕಾರ ವಿದೇಶಾಂಗ ನೀತಿಯ ವಿಚಾರದಲ್ಲಿ ಅವರನ್ನು ನಿರಾಕರಿಸಿ ಹೋಗಲು ಸಾಧ್ಯವೇ ಇಲ್ಲ. ಅವರು ಅಲಿಪ್ತತೆಯಂಥ ಅದ್ಭುತ ನೀತಿಯನ್ನು ರೂಪಿಸಿದರು ಮತ್ತು ಜಾರಿಗೆ ತಂದರು. ಕಾದಾಡುವ ಸೂಪರ್-ಪವರ್ ರಾಷ್ಟ್ರಗಳ ನಡುವೆ ಭಾರತವನ್ನು ದುರ್ಬಲಗೊಳಿಸುವ ವಿವಾದಗಳಿಂದ ದೂರವಿರಲು ಮತ್ತು ದೇಶಕ್ಕೆ ಅಗತ್ಯವಾದ ಹೆಚ್ಚು ಸೂಕ್ತವಾದ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಆ ಮೂಲಕ ಅವಕಾಶ ಮಾಡಿಕೊಟ್ಟರು.

ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರ 17 ವರ್ಷಗಳ ಕಾಲ ನೆಹರೂ ಅವರನ್ನು ಹೊಂದಿರಲು ನಾವೆಷ್ಟು ಅದೃಷ್ಟವಂತರು ಎಂದು ಪಾಕಿಸ್ತಾನದ ಉದಾರವಾದಿಗಳು ಹೇಳಿದ್ದುಂಟು. 
ಕೆಲವು ಅಂತರ್‌ರಾಷ್ಟ್ರೀಯ ಆಯೋಗ ಅಥವಾ ಅಂಥ ಇತರ ವಿಚಾರಗಳಲ್ಲಿ ಆ ದಿನಗಳಲ್ಲಿ ಭಾರತಕ್ಕೆ ದೊಡ್ಡ ಗೌರವ ಸಿಕ್ಕಿತ್ತು. ವಿಶ್ವಶಾಂತಿ ಮತ್ತು ಸಮಾನತೆಯ ಅಭಿವೃದ್ಧಿಗೆ ಒಂದು ಶಕ್ತಿ ಎಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರಶಂಸಿಸಲಾಯಿತು. ವಿಶ್ವಸಂಸ್ಥೆಯ ಪ್ರಾಯೋಜಕತ್ವದಲ್ಲಿ ನೆಹರೂ ಭಾರತ ಪ್ರಪಂಚದ ವಿವಿಧ ಭಾಗಗಳಲ್ಲಿನ ಶಾಂತಿ ಕಾರ್ಯಾಚರಣೆಗಳ ಮುಂಚೂಣಿಯಲ್ಲಿತ್ತು.

ಆರ್ಥಿಕ ವಿಚಾರಕ್ಕೆ ಬರುವುದಾದರೆ, ವಿದೇಶಿ ಆಹಾರ ನೆರವಿನ ಅವಮಾನಕರ ಸ್ಥಿತಿಯಿಂದ ಭಾರತವನ್ನು ಮುಕ್ತಗೊಳಿಸಿ, ದೇಶವನ್ನು ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿಸಿದ್ದು ಮತ್ತು ಇತರರಿಗೂ ನೆರವಾಗುವಷ್ಟು ಸದೃಢವಾಗಿಸಿದ್ದು ಯಾವ ಕಾಲ ಎಂಬುದನ್ನು ಕೇಳಿಕೊಳ್ಳಬೇಕು.

ಸಾಂಸ್ಕೃತಿಕ ಸನ್ನಿವೇಶವನ್ನು ನೋಡುವುದಾದರೆ, 1936ರಲ್ಲಿ ಮುನ್ಷಿ ಪ್ರೇಮಚಂದ್ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಪ್ರಗತಿಶೀಲ ಬರಹಗಾರರ ಚಳವಳಿಯ ಪರಂಪರೆ ಹಳೆಯ ಭಾರತದ ಬಗ್ಗೆ ಹೆಮ್ಮೆಪಡುವ ಮತ್ತೊಂದು ಸಂಗತಿಯಾಗಿ ನಿಲ್ಲುತ್ತದೆ.

ಈ ಎಲ್ಲದಕ್ಕೆ ವ್ಯತಿರಿಕ್ತವಾಗಿ, 2024ಕ್ಕೆ ಕೊನೆಗೊಳ್ಳಲಿರುವ ಕಳೆದೊಂದು ದಶಕದಲ್ಲಿ ಇವರು ಮಾಡಿದ್ದೇನು? ಸಂವಿಧಾನದ ಮೇಲಿನ ಆಕ್ರಮಣಗಳು, ಮೂಲಭೂತ ಹಕ್ಕುಗಳ ಮುಗಿಸಿಬಿಡುವಿಕೆ, ಸಂಸತ್ತನ್ನು ಕಾರ್ಯಕಾರಿ ಶಾಖೆಯಾಗಿಸಿದ್ದು, ಮಾಧ್ಯಮವನ್ನು ಅಧೀನಕ್ಕೊಳಪಡಿಸಿದ್ದು, ಉದಾರ ಶಿಕ್ಷಣ, ಕಲೆ ಮತ್ತು ಸಂಸ್ಕೃತಿಯನ್ನು ಹಿಡಿತದಲ್ಲಿಟ್ಟುಕೊಂಡದ್ದು, ತನಿಖಾ ಸಂಸ್ಥೆಗಳ ಸ್ವಾಧೀನಪಡಿಸಿ, ಅವು ಆಡಳಿತ ವ್ಯವಸ್ಥೆಯನ್ನು ಟೀಕಿಸುವವರನ್ನು ನಿರ್ಲಜ್ಜವಾಗಿ ಬೇಟೆಯಾಡುವಂತೆ ಮಾಡಿದ್ದು, ಸರಕಾರಕ್ಕೆ ನಿಷ್ಠೆ ತೋರಿಸುವವರಿಗೆ ಮುಕ್ತವಾಗಿರಲು ಅವಕಾಶ ಕೊಟ್ಟಿರುವುದು, ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಅನುಕೂಲವಾಗುವಂಥ ನಡೆಗಳಿಗೆ ಮುಂದಾಗಿದ್ದು, ಬೆರಳೆಣಿಕೆಯಷ್ಟು ಖಾಸಗಿಯವರ ಕೈಯಲ್ಲಿಯೇ ಸಂಪತ್ತಿನ ವಿವೇಚನಾರಹಿತ ಕೇಂದ್ರೀಕರಣ.
ಇವೆಲ್ಲವೂ ಭಾರತೀಯರು ನಾಚಿಕೆಪಡದಂಥ ವಿಚಾರಗಳೇ?

(ಕೃಪೆ: thewire.in)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)