varthabharthi


ವಿಶೇಷ-ವರದಿಗಳು

ಭಾಷಣದಲ್ಲಷ್ಟೇ ‘ಆತ್ಮನಿರ್ಭರ್’ : ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶ

ವಾರ್ತಾ ಭಾರತಿ : 15 Mar, 2023
ಎ.ಕೆ.ಎಸ್.

ಮಿಲಿಟರಿ ಪರಿಣತರು ಮತ್ತು ವಿಶ್ಲೇಷಕರ ಪ್ರಕಾರ, ಭಾರತ ಮಧ್ಯಮಾವಧಿಯಿಂದ ದೀರ್ಘಾವಧಿಗೆ ಹೀಗೆ ಆಮದುದಾರ ದೇಶವಾಗಿಯೇ ಉಳಿಯಲಿದೆ. ಆತ್ಮನಿರ್ಭರ್ ಮಾತು ಬಾಯಲ್ಲಷ್ಟೇ ಉಳಿದಿದೆಯೇ ಹೊರತು ಅದನ್ನು ಸಾಧಿಸುವ ನಿಟ್ಟಿನ ಪ್ರಯತ್ನಗಳು ಇನ್ನೂ ಸಾಕಷ್ಟು ಆಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರತೀ ಅವಕಾಶದಲ್ಲೂ ಭಾರತ ರಕ್ಷಣಾ ಸಾಮಗ್ರಿಗಳ ವಿಷಯದಲ್ಲಿ ಆತ್ಮನಿರ್ಭರ್ ಆಗುತ್ತಿದೆ. ಈಗ ಸ್ವದೇಶಿ ಶಸ್ತ್ರಾಸ್ತ್ರಗಳು ಹಾಗೂ ರಕ್ಷಣಾ ಸಾಮಗ್ರಿಗಳೇ ಬಳಕೆಯಾಗುತ್ತಿವೆ ಎಂಬಂತೆ ಬಣ್ಣಿಸುತ್ತಾರೆ. ಆದರೆ ಭಾರತ, ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ಮಾತ್ರ ಜಾಗತಿಕ ಪಟ್ಟಿಯಲ್ಲೇ ಅಗ್ರ ಸ್ಥಾನದಲ್ಲಿದೆ.

ಸ್ವೀಡನ್‌ನ ಸ್ಟಾಕ್ ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI)ನ  Trends in International Arms Transfers, 2022 ವರದಿ ಪ್ರಕಾರ, 2018ರಿಂದ 22ರ ಅವಧಿಯಲ್ಲಿ ಜಗತ್ತಿನ ಒಟ್ಟು ಶಸ್ತ್ರಾಸ್ತ್ರ ಆಮದಿನ ಶೇ. 11ರಷ್ಟನ್ನು ಭಾರತವೇ ಮಾಡಿಕೊಂಡಿದೆ. ಇದು 2013-17ರಲ್ಲಿನ ಶೇ. 12ಕ್ಕಿಂತ ಕಡಿಮೆಯಾಗಿರುವುದು ಹೌದಾದರೂ, ಜಗತ್ತಿನಲ್ಲೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿದೆ ಭಾರತ. ಇದೇ ಅವಧಿಯಲ್ಲಿ ಸೌದಿ ಅರೇಬಿಯ ಶೇ.9.6, ಖತರ್ ಶೇ. 6.4, ಆಸ್ಟ್ರೇಲಿಯ ಶೇ. 4.7 ಮತ್ತು ಚೀನಾ ಶೇ. 4.6 ಪಾಲು ಹೊಂದಿವೆ.

ಇದೇ ವೇಳೆ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಭಾರತದ ಪಾಲು ಕುಸಿದಿದೆ. ಪ್ರಧಾನಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ-2023 ವೇಳೆ ಕೂಡ 2024-25ರ ವೇಳೆಗೆ ಭಾರತದ ವಾರ್ಷಿಕ ರಕ್ಷಣಾ ಸಾಮಗ್ರಿ ರಫ್ತನ್ನು ಐದು ಪಟ್ಟು ಹೆಚ್ಚಿಸುವ ಅಬ್ಬರದ ಮಾತನ್ನೇ ಆಡಿದರು. 1.5 ಶತಕೋಟಿ ಡಾಲರ್‌ನಿಂದ 5 ಶತಕೋಟಿ ಡಾಲರ್‌ಗೆ ರಕ್ಷಣಾ ಸಾಮಗ್ರಿ ರಪ್ತು ಮೊತ್ತ ಏರಲಿದೆ ಎಂದರು. ಆದರೆ ವಾಸ್ತವ ಮಾತ್ರ ಬೇರೆಯೇ ಇದೆ.

ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರ ಮತ್ತು ಮಿಲಿಟರಿ ಸಂಶೋಧನೆಗೆ ಹೆಸರಾಗಿರುವ SIPRIನ ವರದಿ ತಿಳಿಸುವಂತೆ, ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಉದ್ವಿಗ್ನ ಸ್ಥಿತಿ ಹೆಚ್ಚುತ್ತಿರುವುದೇ ಭಾರತದ ಶಸ್ತ್ರಾಸ್ತ್ರ ಆಮದು ಹೆಚ್ಚಳಕ್ಕೆ ಕಾರಣ. ಒಟ್ಟಾರೆ ಖರೀದಿ ಶೇ. 64ರಿಂದ ಶೇ. 45ಕ್ಕೆ ಇಳಿದಿದ್ದರೂ, ರಶ್ಯವು 2013 ರಿಂದ 2022ರವರೆಗೆ ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿದೆ.

ಇದೇ ವೇಳೆ ಗಮನಿಸಲೇಬೇಕಿರುವ ಮತ್ತೊಂದು ಸಂಗತಿಯೆಂದರೆ, ಪಾಕಿಸ್ತಾನದಿಂದ ಮಿಲಿಟರಿ ರಫ್ತು ಪ್ರಮಾಣ 2013 ರಿಂದ 17 ಮತ್ತು 2018ರಿಂದ 22ರ ಅವಧಿಯಲ್ಲಿ ಶೇ. 14ರಷ್ಟು ಹೆಚ್ಚಾಗಿದೆ ಮತ್ತು ಇದು ಜಾಗತಿಕ ಮೊತ್ತದ ಶೇ. 3.7ರಷ್ಟಿದೆ. SIPRI ಪ್ರಕಾರ, 2018ರಿಂದ 22ರಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದುಗಳ ಮುಕ್ಕಾಲು ಭಾಗವನ್ನು ಚೀನಾ ಪೂರೈಸಿದೆ.

ಮಾರ್ಚ್ 13ರಂದು ಸಂಸತ್ತಿಗೆ ಸರಕಾರ ತಿಳಿಸಿರುವ ಪ್ರಕಾರ, ವಿದೇಶಗಳಿಂದ ರಕ್ಷಣಾ ಸಾಮಗ್ರಿ ಖರೀದಿ ವೆಚ್ಚ 2018-19ರಲ್ಲಿ ಶೇ. 46 ಇದ್ದದ್ದು ಡಿಸೆಂಬರ್ 2022ರಲ್ಲಿ ಶೇ. 36.7ಕ್ಕೆ ಇಳಿದಿದೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಚಾರ ತಿಳಿಸಿದ್ದಾರೆ.

ಆದರೆ ಮಿಲಿಟರಿ ಪರಿಣತರು ಮತ್ತು ವಿಶ್ಲೇಷಕರ ಪ್ರಕಾರ, ಭಾರತ ಮಧ್ಯಮಾವಧಿಯಿಂದ ದೀರ್ಘಾವಧಿಗೆ ಹೀಗೆ ಆಮದುದಾರ ದೇಶವಾಗಿಯೇ ಉಳಿಯಲಿದೆ. ಆತ್ಮನಿರ್ಭರ್ ಮಾತು ಬಾಯಲ್ಲಷ್ಟೇ ಉಳಿದಿದೆಯೇ ಹೊರತು ಅದನ್ನು ಸಾಧಿಸುವ ನಿಟ್ಟಿನ ಪ್ರಯತ್ನಗಳು ಇನ್ನೂ ಸಾಕಷ್ಟು ಆಗಿಲ್ಲ.

ರಕ್ಷಣಾ ಅಗತ್ಯಗಳನ್ನು ಸ್ವದೇಶೀಯವಾಗಿಯೇ ಉತ್ಪಾದಿಸುವ ಪ್ರಯತ್ನಗಳ ಹೊರತಾಗಿಯೂ ರಕ್ಷಣಾ ಸಾಧನಗಳ ಆಮದು ಮುಂಬರುವ ಹಲವು ವರ್ಷಗಳವರೆಗೆ ಅನಿವಾರ್ಯ ಎಂಬುದು ದಿಲ್ಲಿಯ ಭದ್ರತಾ ಅಪಾಯಗಳ ಸಮಾಲೋಚನೆಯ ನಿವೃತ್ತ ಬ್ರಿಗೇಡಿಯರ್ ರಾಹುಲ್ ಭೋಸ್ಲೆ ಅಭಿಪ್ರಾಯ.

ಇನ್ನೂ ಸ್ಪಷ್ಟವಾಗಿ ಸತ್ಯವೇನೆಂಬುದನ್ನು ಮಾಜಿ ಯುದ್ಧವಿಮಾನ ಪೈಲಟ್ ಒಬ್ಬರು ‘ದಿ ವೈರ್’ಗೆ ಹೇಳಿದ್ದಾರೆ. ಅವರ ಪ್ರಕಾರ, ‘ಮೇಕ್ ಇನ್ ಇಂಡಿಯಾ’ ಅನ್ನುವುದು ತಕ್ಷಣ ಆಗಿಬಿಡುವಂಥದ್ದಲ್ಲ. ಅದು ಸಮಯ ತೆಗೆದುಕೊಳ್ಳುತ್ತದೆ ಮತ್ತು ಬಹಳ ದೊಡ್ಡ ಹೂಡಿಕೆ ಬಯಸುತ್ತದೆ. ಸ್ವದೇಶದಲ್ಲೇ ಶಸ್ತ್ರಾಸ್ತ್ರ ತಯಾರಿಸುವ ಯೋಜನೆ ಭಾಗಶಃ ಫಲಕಾರಿಯಾಗಲೂ ಇನ್ನೂ ಹೆಚ್ಚು ಮೆದು ನೀತಿಗಳು ಬೇಕು. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಂಬಂಧಪಟ್ಟವರೆಲ್ಲ ಹಿಂಜರಿಯುತ್ತಾರೆ. ಈ ನಿಟ್ಟಿನಲ್ಲಿ ಸರಕಾರದ ಮರೆಮಾಚುವ ಮತ್ತು ಅಪ್ರಾಯೋಗಿಕ ಕಾರ್ಯವಿಧಾನ ನಿಷ್ಪ್ರಯೋಜಕ ಎಂಬುದು ಅವರು ಕೊಡುತ್ತಿರುವ ಎಚ್ಚರಿಕೆ.

ಮತ್ತೊಂದು ಸಮಸ್ಯೆಯಿರುವುದು ಭಾರತೀಯ ರಕ್ಷಣಾ ಸಾಮಗ್ರಿ ರಫ್ತುಗಳ ಗುಣಮಟ್ಟ ನಿಯಂತ್ರಣದಲ್ಲಿ. ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳ (ಎಎಲ್‌ಎಚ್) ಹೊಸ ಆವೃತ್ತಿಗಳು ರಫ್ತು ವಿಚಾರದಲ್ಲಿ ದೊಡ್ಡ ಹಿಟ್ ಆಗಲಿವೆ ಎಂದೇ ಬಣ್ಣಿಸಲಾಗಿತ್ತು. ಆದರೆ ಕಳೆದ ವಾರ ಒಂದು ಹೆಲಿಕಾಪ್ಟರ್ ಅರೇಬಿಯನ್ ಸಮುದ್ರಕ್ಕೆ ತುರ್ತು ಲ್ಯಾಂಡಿಂಗ್ ಆದ ನಂತರ ಆ ಶ್ರೇಣಿಯ ಎಲ್ಲ 300 ಹೆಲಿಕಾಪ್ಟರ್‌ಗಳನ್ನು ತಡೆ ಹಿಡಿಯಲಾಗಿದೆ. ಈ ಬೆಳವಣಿಗೆಯಿಂದ ಅದನ್ನು ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಎಚ್‌ಎಎಲ್‌ಗೆ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

2002ರಲ್ಲಿ ಎಚ್‌ಎಎಲ್ ಸರಣಿಗಳನ್ನು ಉತ್ಪಾದಿಸಲು ಪ್ರಾರಂಭಿಸಿದಾಗಿನಿಂದ ಅಪಘಾತಗಳು ಸಂಭವಿಸಿವೆ. ಆ ಅಪಘಾತಗಳಲ್ಲಿ ಹಲವಾರು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ. 2008-09ರಲ್ಲಿ ಈಕ್ವೆಡಾರ್ ವಾಯುಸೇನೆಗೆ ಎಚ್‌ಎಎಲ್ ರಫ್ತುಮಾಡಿದ್ದ ಬೆನ್ನಿಗೇ ಏಳರಲ್ಲಿ ನಾಲ್ಕು ಧ್ರುವ್ ಲಘು ಹೆಲಿಕಾಪ್ಟರ್‌ಗಳು ಪತನಗೊಂಡಿದ್ದವು. ಅದರಿಂದಾಗಿ ಈಕ್ವೆಡಾರ್ ಕೂಡ ಎಚ್‌ಎಎಲ್ ಜೊತೆಗಿನ ತನ್ನ ಖರೀದಿ ಒಪ್ಪಂದವನ್ನು 2015ರಲ್ಲಿ ಕೊನೆಗೊಳಿಸಿರುವುದು ದೊಡ್ಡ ಹಿನ್ನಡೆ. ಆಗ ಅದು ಆವರೆಗಿನ ಅತಿದೊಡ್ಡ ಸ್ವದೇಶಿ ನಿರ್ಮಿತ ಮಿಲಿಟರಿ ಉತ್ಪನ್ನದ ರಫ್ತಾಗಿತ್ತು.

ನಾಲ್ಕರಲ್ಲಿ ಎರಡು ಹೆಲಿಕಾಪ್ಟರ್ ಪತನಗಳು ಮೆಕ್ಯಾನಿಕಲ್ ಲೋಪದೋಷದಿಂದ ನಡೆದಿವೆ ಎಂದು ಈಕ್ವೆಡಾರ್ ರಕ್ಷಣಾ ಸಚಿವರು ಹೇಳಿದ್ದರೆ ಅದು ಮಾನವ ಲೋಪದೋಷದಿಂದ ನಡೆದಿದ್ದು ಎಂದು ಎಚ್‌ಎಎಲ್ ಸಮರ್ಥಿಸಿಕೊಂಡಿತ್ತು.

ಧ್ರುವ್ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಇನ್ನೂ ಪ್ರಗತಿ ಹೊಂದಬೇಕಿದೆ. ಕಾರ್ಯಾಚರಣೆಯ ದಕ್ಷತೆಯಲ್ಲಿ ಎಲ್ಲಾ ನಿರೀಕ್ಷಿತ ಆಮದುದಾರರ ನಂಬಿಕೆಯನ್ನು ಅದು ಗಳಿಸಬೇಕಾಗುತ್ತದೆ ಎಂಬುದು ಉದ್ಯಮ ಪರಿಣಿತರು ಹೇಳುವ ಮಾತು.

ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಸ್ವಾವಲಂಬನೆ ಎಂಬುದು ಬಹಳ ಸಂಕೀರ್ಣ ಸೂಕ್ಷ್ಮ ವಿಷಯ. ಸಾಲದ್ದಕ್ಕೆ ಅಮೆರಿಕ, ಯುರೋಪ್‌ನ ದಿಗ್ಗಜ ತಯಾರಕರ ಭಾರೀ ಸ್ಪರ್ಧೆಯೂ ಇದೆ. ಸಾಕಷ್ಟು ತಾಳ್ಮೆ, ದೊಡ್ಡ ಹೂಡಿಕೆ, ಅಪಾರ ತಾಂತ್ರಿಕ ಪರಿಣತಿ, ಅಷ್ಟೇ ಸ್ಪಷ್ಟ ನೀತಿ ನಿರೂಪಣೆ ಹಾಗೂ ಅದನ್ನು ಜಾರಿ ಮಾಡುವ ಚಾಕಚಕ್ಯತೆ ಅದಕ್ಕೆ ಅತ್ಯಗತ್ಯ. ಅದು ರಾಜಕೀಯ ಸಮಾವೇಶಗಳಲ್ಲಿ ಮಾಡಿದ ಘೋಷಣೆಯಂತೆ ಅಲ್ಲ.

ತಾಂತ್ರಿಕವಾಗಿ ಸಾಧಿಸಬೇಕಾದದ್ದು ಬಹಳ ಇರುವಾಗ ಒಂದು ವರ್ಷ, ಎರಡು ವರ್ಷಗಳಲ್ಲಿಯೇ ರಕ್ಷಣಾ ಸಾಮಗ್ರಿ ರಫ್ತನ್ನು 5 ಪಟ್ಟು ಹೆಚ್ಚಿಸುವುದಾಗಿ ಹೇಳುವುದು ಮಾತ್ರ ನಿಂತಿಲ್ಲ. ವಾಸ್ತವವನ್ನು ಮರೆಮಾಚುವ ಇಂಥ ಬಡಾಯಿಗಳಿಂದ ಮತ ಸೆಳೆಯುವುದಕ್ಕೆ ಸಾಧ್ಯ. ಆದರೆ ಆತ್ಮನಿರ್ಭರ್ ಭಾರತ ಆಗಬೇಕಾದರೆ ಇನ್ನಷ್ಟು, ಬಹಳಷ್ಟು ಕೆಲಸ ಆಗಬೇಕಿದೆ. ಅದನ್ನು ಒಪ್ಪಿಕೊಂಡು ಪ್ರಯತ್ನಪಡಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)