ಪ್ರಣಾಳಿಕೆಗಳಲ್ಲಿ ಗಲಭೆಗಳನ್ನೇ ಕೊಡುಗೆಯಾಗಿ ಸೇರಿಸಿ ಬಿಡಬಾರದೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆಯ ದಿನಾಂಕ ಘೋಷಣೆಗೆ ಕ್ಷಣ ಗಣನೆ ನಡೆಯುತ್ತಿರುವಂತೆಯೇ ಇತ್ತ ಸರಕಾರದ ಪ್ರಾಯೋಜಕತ್ವದಲ್ಲೇ ಗಲಭೆಗಳನ್ನು ಎಬ್ಬಿಸುವ ಪ್ರಯತ್ನ ಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸಂಘಪರಿವಾರ ಕಾರ್ಯಕರ್ತರು ಸ್ಥಳೀಯ ಮುಸ್ಲಿಮರ ಮನೆಗಳಿಗೆ ಕಲ್ಲು ತೂರಾಟ ನಡೆಸುವುದಕ್ಕೆಂದೇ ಒಂದು ಮೆರವಣಿಗೆಯನ್ನು ಪ್ರಾಯೋಜಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆಯ ಸಂದರ್ಭವನ್ನು ಅವರು ಈ ಕಲ್ಲುತೂರಾಟಕ್ಕೆ ಬಳಸಿಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ, ದೇಶಕ್ಕಾಗಿ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಅನಾವರಣ ದಿನವನ್ನು ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ಮೂಲಕ ಸಂಘಪರಿವಾರ ಸಂಗೊಳ್ಳಿ ರಾಯಣ್ಣನ ಬಲಿದಾನಕ್ಕೂ ಅಪಚಾರವೆಸಗಿದೆ. ಈ ಮೆರವಣಿಗೆಯನ್ನು ಸಂಘಪರಿವಾರ ಯಾಕೆ ಹಮ್ಮಿಕೊಂಡಿತು ಎನ್ನುವುದರ ಬಗ್ಗೆ ಜಿಲ್ಲಾಡಳಿತಕ್ಕೂ ಸ್ಪಷ್ಟ ಅರಿವಿರಲಿಲ್ಲ. ಅಷ್ಟೇ ಅಲ್ಲ, ಮೆರವಣಿಗೆಯ ದಾರಿಯನ್ನು ಬದಲಿಸಿ, ಮಸೀದಿ, ಮನೆಗಳಿಗೆ ಕಲ್ಲುತೂರಾಟ ನಡೆಸುವ ಇವರ ಸಂಚುಗಳು ಗೊತ್ತಿದ್ದೂ ಪೊಲೀಸರು ವೌನವಾಗಿ ದುಷ್ಕೃತ್ಯಗಳಿಗೆ ಸಹಕರಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರಾದರೂ, ಜನರಲ್ಲಿ ಭಯ, ಆತಂಕಗಳನ್ನು ಬಿತ್ತುವಲ್ಲಿ ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರೆ. ರಾಜ್ಯದ ಹಲವೆಡೆ ಇಂತಹ ಸಣ್ಣ ಪುಟ್ಟ ಗಲಭೆಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದರ ಹಿಂದೆ ಸರಕಾರದ ಕುಮ್ಮಕ್ಕಿದೆ ಎಂದು ಜನರು ಅನುಮಾನ ಪಡಲು ಕಾರಣಗಳಿವೆ.
ಬಿಜೆಪಿಯ ನಾಯಕರೂ, ಮಾಜಿ ಸಚಿವರೂ ಆಗಿರುವ ಈಶ್ವರಪ್ಪ ಅವರು ಸಾರ್ವಜನಿಕ ಸಮಾರಂಭವೊಂದರ ವೇದಿಕೆಯಲ್ಲೇ ಉದ್ವಿಗ್ನಕಾರಿ ಮಾತುಗಳನ್ನು ಆಡಿದ್ದರು. ತಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಝಾನ್ನ್ನು ಪೂರ್ಣವಾಗಿ ನಿಲ್ಲಿಸುವುದಾಗಿ ಹೇಳಿಕೆಯನ್ನು ನೀಡಿದ್ದರು. ಈಗಾಗಲೇ ಭ್ರಷ್ಟಾಚಾರ ಕಾರಣದಿಂದ ಅಧಿಕಾರ ಕಳೆದುಕೊಂಡು ಮತ್ತೆ ಸಚಿವರಾಗಲು ಪ್ರಯತ್ನಿಸುತ್ತಿರುವ ಈಶ್ವರಪ್ಪ, ಬಿಜೆಪಿಯ ವರಿಷ್ಠರ ಗಮನವನ್ನು ಸೆಳೆಯುವ ಉದ್ದೇಶದಿಂದಲೇ ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಅಭಿವೃದ್ಧಿಯ ಕುರಿತಂತೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಅವರು, ರಾಜಕೀಯವಾಗಿ ಸಕ್ರಿಯವಾಗಿರಲು ದ್ವೇಷ ರಾಜಕಾರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪರ ಈ ಕೃತ್ಯವನ್ನು ಬಿಜೆಪಿಯ ವರಿಷ್ಠರು ಪ್ರಶ್ನಿಸದೆ ವೌನವಹಿಸಿದ್ದಾರೆ. ಆ ಮೂಲಕ ಈಶ್ವರಪ್ಪರ ದ್ವೇಷ ರಾಜಕಾರಣಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದಂತಿದೆ. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಮಂಡ್ಯಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸುವ ದ್ವಾರಕ್ಕೆ ಜಿಲ್ಲಾಡಳಿತ ಕಪೋಲ ಕಲ್ಪಿತ 'ನಂಜೇಗೌಡ, ಉರಿಗೌಡ' ಹೆಸರನ್ನು ಇಟ್ಟಿತು. ಈ ಮೂಲಕ ತಾವು ಪ್ರಧಾನಿಯನ್ನೇ ತಮಾಷೆಗೀಡು ಮಾಡುತ್ತಿದ್ದೇವೆ ಎನ್ನುವ ಅರಿವೂ ಅವರಿಗೆ ಇದ್ದಂತಿರಲಿಲ್ಲ.
ಭಾರತದ ಇತಿಹಾಸದ ಪುಟಗಳನ್ನು ಬಿಡಿಸುವಾಗ ಟಿಪ್ಪುಸುಲ್ತಾನನ ವ್ಯಕ್ತಿತ್ವಕ್ಕೆ ಜಗತ್ತು ವಿಶೇಷ ಗೌರವವನ್ನು ನೀಡುತ್ತದೆ. ಕರ್ನಾಟಕದ ಇತಿಹಾಸದ ಕಡೆಗೆ ವಿಶ್ವದ ಗಮನ ಹರಿಯುವಂತೆ ಮಾಡಿದವನು ಟಿಪ್ಪುಸುಲ್ತಾನ್. ಅಮೆರಿಕದ ನಾಸಾ ಕೂಡ ಟಿಪ್ಪುಸುಲ್ತಾನನನ್ನು ಸ್ಮರಿಸುತ್ತದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಬೇಕಾಗಿತ್ತು. ಟಿಪ್ಪು ಸುಲ್ತಾನ್ ಕರ್ನಾಟಕದ ಅಸ್ಮಿತೆ. ಟಿಪ್ಪುವನ್ನು ಅವಮಾನಿಸಿದರೆ ಕಿರಿದಾಗುವುದು ಕರ್ನಾಟಕದ ಹಿರಿಮೆ. ಆದರೆ ಉತ್ತರ ಭಾರತದ ಹೇಡಿ ಪಾತ್ರಗಳನ್ನು ಕರ್ನಾಟಕದ ಮೇಲೆ ಹೇರಲು ಹೊರಟಿರುವ ಕನ್ನಡ ವಿರೋಧಿಗಳಿಗೆ ಟಿಪ್ಪು ಬೇಡವಾಗಿದ್ದಾರೆ. ಬಸವಣ್ಣ, ಟಿಪ್ಪು ಸುಲ್ತಾನನ ಮೂಲಕ ಜಗತ್ತು ಕರ್ನಾಟಕವನ್ನು ಮಾದರಿಯಾಗಿ ಸ್ವೀಕರಿಸಿದ್ದರೆ, ಕರ್ನಾಟಕದ ಕೆಲವು ರಾಜಕಾರಣಿಗಳು ಗುಜರಾತ್, ಉತ್ತರ ಭಾರತವನ್ನು ಕರ್ನಾಟಕಕ್ಕೆ ಮಾದರಿಯಾಗಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲ, ಅಸ್ತಿತ್ವದಲ್ಲೇ ಇಲ್ಲದ ಉರಿಗೌಡ, ನಂಜೇಗೌಡ ಎನ್ನುವ ಕಪೋಲಕಲ್ಪಿತ ಪಾತ್ರವನ್ನು ಸೃಷ್ಟಿಸಿ ಅವರನ್ನು ಕನ್ನಡ ವೀರರು ಎಂದು ಬಿಂಬಿಸಲು ಹೊರಟು ಕರ್ನಾಟಕವನ್ನು ವಿಶ್ವದ ಮುಂದೆ ನಗೆಪಾಟಲಿಗೀಡು ಮಾಡಿದ್ದಾರೆ. ಕಪೋಲ ಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ ಕರ್ನಾಟಕದ 'ಶೌರ್ಯ'ವನ್ನು ಪ್ರತಿಪಾದಿಸುವ ಗತಿಗೇಡು ನಾಡಿಗೆ ಒದಗಿದೆಯೇ ಎಂದು ಜನರು ಕೇಳುವಂತಾಗಿದೆ.
ಪ್ರಧಾನಿ ಮೋದಿಯವರನ್ನು ಸ್ವಾಗತಿಸುವ ದ್ವಾರಕ್ಕೆ ಹೆಸರಿಡಲೇಬೇಕು ಎಂದಾದರೆ ಮಂಡ್ಯದಲ್ಲೇ ಆಗಿ ಹೋಗಿದ್ದ ಹಲವು ಮಹನೀಯರಿದ್ದರು. ಸಾಧಕರಿದ್ದರು. ಉರಿ ಮತ್ತು ನಂಜೇಗೌಡರೆನ್ನುವವರು ಅಸ್ತಿತ್ವದಲ್ಲಿ ಇದ್ದರು ಎನ್ನುವುದರ ಬಗ್ಗೆ ಬಿಜೆಪಿಯೊಳಗೇ ಆಕ್ಷೇಪಗಳಿವೆ ಎಂದು ಮಾಜಿ ಸಚಿವ ಈಶ್ವರಪ್ಪ ಅವರೇ ಮಾಧ್ಯಮಗಳ ಮುಂದೆ ಒಪ್ಪಿಕೊಂಡರು. ಹಾಗಿದ್ದರೂ ಇಂತಹದೊಂದು ಕಪೋಲ ಕಲ್ಪಿತ ಪಾತ್ರವನ್ನು ಸೃಷ್ಟಿಸುವ ಅನಿವಾರ್ಯ ಯಾಕೆ ಒದಗಿತು. ಪ್ರಧಾನಿ ಮೋದಿಯವರು ರಾಜ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ , ಉದ್ವಿಗ್ನ ವಾತಾವರಣವನ್ನು ನಿರ್ಮಿಸಿ ಗಲಭೆ ಸೃಷ್ಟಿಸುವ ಉದ್ದೇಶ ಇದರ ಹಿಂದೆ ಇತ್ತೆ? ಸರಕಾರ ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡು ದ್ವಾರದ ಹೆಸರನ್ನು ಬದಲಿಸಿ, ತನ್ನ ಮುಖ ಉಳಿಸಿಕೊಂಡಿತು. ಪ್ರಧಾನಿ ರಾಜ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ ಇಂತಹದೊಂದು ಪ್ರಮಾದವನ್ನು ಎಸಗಲು ಅನುಮತಿ ನೀಡಿರುವ ಅಧಿಕಾರಿಗಳನ್ನು ಕನಿಷ್ಠ ಅಮಾನತುಗೊಳಿಸಿ ಇಡೀ ಪ್ರಕರಣದ ಬಗ್ಗೆ ಸರಕಾರ ತನಿಖೆಗೆ ಆದೇಶ ನೀಡಬೇಕಾಗಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೋಮುಗಲಭೆಗಳನ್ನು ಸೃಷ್ಟಿಸಿ ಜನರಲ್ಲಿ ಆತಂಕ, ಭೀತಿಗಳನ್ನು ಬಿತ್ತುವ ರಾಜಕಾರಣಿಗಳು ತಮ್ಮ ಚುನಾವಣೆಯ ಪ್ರಣಾಳಿಕೆಗಳಲ್ಲಿ ಯಾಕೆ ಕೋಮುಗಲಭೆಗಳನ್ನೇ ಕೊಡುಗೆಗಳಾಗಿ ನೀಡಬಾರದು? ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲಿ ''ಪ್ರತಿವರ್ಷ ಇಷ್ಟು ಗಲಭೆಗಳನ್ನು ಪ್ರಾಯೋಜಿಸುತ್ತೇವೆ. ಇಷ್ಟು ಜಿಲ್ಲೆಗಳಿಗೆ ಚೂರಿ ಇರಿತಗಳನ್ನು ಕೊಡುಗೆಗಳಾಗಿ ನೀಡುತ್ತೇವೆ, ವರ್ಷಕ್ಕೆರಡು ಸಮಾವೇಶಗಳನ್ನು ಹಮ್ಮಿಕೊಂಡು ಇಂತಹ ಸಮುದಾಯಗಳ ಪ್ರಾರ್ಥನಾ ಮಂದಿರಗಳ ಮೇಲೆ ಕಲ್ಲುತೂರಾಟ ನಡೆಸುತ್ತೇವೆ'' ಎಂದು ಬಹಿರಂಗವಾಗಿಯೇ ಯಾಕೆ ಘೋಷಿಸಬಾರದು? ಕೋಮುಗಲಭೆಗಳಿಂದ ಮತಗಳು ಹುಟ್ಟುತ್ತವೆಯಾದರೆ, ಅವುಗಳೇ ಜನರ ತುರ್ತು ಅಗತ್ಯ ಎಂದು ಭಾವಿಸಿ ಜನರಿಗೆ ಗಲಭೆಗಳನ್ನೇ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕಾರಣಿಗಳು ಭರವಸೆಯಾಗಿ ನೀಡಲಿ. 'ಅಭಿವೃದ್ಧಿ ಬೇಕೋ-ಗಲಭೆಗಳು ಬೇಕೋ' ಜನರೇ ಆಯ್ಕೆ ಮಾಡಿಕೊಳ್ಳುವಂತಾಗಲಿ.