ರಾತ್ರಿ ಪಾಳಿಯಲ್ಲಿ ಮಹಿಳೆ: ನಿಸರ್ಗ ನಿಯಮಕ್ಕೆ ವಿರುದ್ಧ-ನಾಗರಿಕ ಬದುಕಿಗೆ ಕಂಟಕ
ಎರಡು ಶತಮಾನಗಳ ಹಿಂದೆ ಬಂಡವಾಳಶಾಹಿಗಳ ಕ್ರೌರ್ಯದ ವಿರುದ್ಧ ಸಿಡಿದೆದ್ದ ಕಾರ್ಮಿಕ ವರ್ಗ ಔದ್ಯಮಿಕ ರಂಗದಲ್ಲಿ ನಾಗರಿಕ ಬದುಕನ್ನು ಕಲ್ಪಿಸಿ ಕೊಡುವ ಮೂಲ ಪ್ರಶ್ನೆಯನ್ನು ಮುಂದಿರಿಸಿ ದುಡಿಮೆಯ ಅವಧಿಯು ದಿನದಲ್ಲಿ 8 ಗಂಟೆಗೆ ನಿಗದಿಗೊಳಿಸುವಂತೆ ಒತ್ತಾಯಿಸಿ ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ನಡೆಸಿದ ಕ್ರಾಂತಿಕಾರಿ ಹೋರಾಟಗಳು ಒಂದು ದೊಡ್ಡ ಇತಿಹಾಸವನ್ನೆ ಸೃಷ್ಟಿಸಿತು. ದಿನದ 24 ಗಂಟೆಗಳಲ್ಲಿ ದುಡಿಮೆಯ ಅವಧಿ 8 ಗಂಟೆ ನಿಗದಿಯಾಯಿತು.
18-19ನೇ ಶತಮಾನದಲ್ಲಿ ಜರುಗಿದ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕಾರ್ಮಿಕರನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿ ಕಾಣುವಂತಹ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಿದ್ರೆ-ವಿಶ್ರಾಂತಿಗೂ ಅವಕಾಶ ನೀಡದೆ ಇರುವ ಅಮಾನವೀಯತೆ ತಾಂಡವವಾಡುತ್ತಿತ್ತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಸಮಯದ ಪರಿಮಿತಿಯೇ ಇಲ್ಲದೆ ಕಾರ್ಖಾನೆಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿತ್ತು. ಮಾಲಕರ-ಬಂಡವಾಳಶಾಹಿಗಳ ಶೋಷಣೆಗಳಿಂದ ನೊಂದು-ಬೆಂದು ರೋಸಿಹೋಗಿದ್ದ ಕಾರ್ಮಿಕ ವರ್ಗ ಜಾಗೃತ ಸ್ಥಿತಿಯೆಡೆಗೆ ಹೊರಳಿತು. ಮಾಲಕರ ಶೋಷಣೆಯ ವಿರುದ್ಧ ಧ್ವನಿ ಮೊಳಗಿಸಲು ಪ್ರಾರಂಭಿಸಿತು. ಕಾರ್ಮಿಕ ವರ್ಗದ ಪಿತಾಮಹ ಕಾರ್ಲ್ ಮಾರ್ಕ್ಸ್ರವರ ಕರೆಯಾದ ''ವಿಶ್ವದ ಕಾರ್ಮಿಕರೇ ಒಂದಾಗಿ, ನೀವು ಸಂಕೋಲೆಗಳನ್ನಲ್ಲದೆ ಕಳೆದುಕೊಳ್ಳಲು ಬೇರೇನು ಇಲ್ಲ. ನೀವು ಗೆಲ್ಲಲು ನಿಮ್ಮ ಮುಂದೆ ಇಡೀ ಜಗತ್ತೇ ಇದೆ.'' ಎಂಬ ಘೋಷಣೆಯ ಸ್ಫೂರ್ತಿಯಿಂದ ಆರಂಭವಾದ ಹೋರಾಟದ ಫಲವೇ ಜಗತ್ತಿನೆಲ್ಲೆಡೆ ಕಾರ್ಮಿಕರ ದುಡಿಮೆಯ ಅವಧಿ 8 ಗಂಟೆಗಳಿಗೆ ನಿಗದಿಗೊಳಿಸುವ ಪ್ರಕ್ರಿಯೆಗಳ ಐತಿಹ್ಯ.
ನಿಸರ್ಗದ ನಿಯಮದಂತೆ ದಿನದ 24 ಗಂಟೆಗಳಲ್ಲಿ 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ, 8 ಗಂಟೆ ನಿದ್ರೆಗಾಗಿ ಮೀಸಲಿಡುವ ಸಮಯ ಒಂದು ನಾಗರಿಕ-ಮಾನವೀಯ ಹಾಗೂ ಆರೋಗ್ಯದಾಯಕ ಸಮಾಜದ ಲಕ್ಷಣ. ಗೊತ್ತು-ಗುರಿ ಇಲ್ಲದೆ ಕಾರ್ಮಿಕರ ಹಿತ ಕಾಪಾಡದೆ ಕೇವಲ ಬಂಡವಾಳಗಾರರ ಲಾಭಕ್ಕಾಗಿಯೇ ಕಾರ್ಮಿಕರ ಶ್ರಮವನ್ನು ದುರ್ಬಳಕೆ ಮಾಡಿ ಶೋಷಣೆ ಮಾಡುವುದು ಅಪ್ಪಟ ಬಂಡವಾಳಶಾಹಿ ವ್ಯವಸ್ಥೆಯ ದ್ಯೋತಕ. ನೂರಾ ಐವತ್ತು ವರ್ಷಗಳ ತರುವಾಯ ಇದೀಗ ಕರ್ನಾಟಕ ರಾಜ್ಯದ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಕಾರ್ಮಿಕ ವರ್ಗವನ್ನು ಶೋಷಿಸುವ ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುವಂತಹ ಪ್ರಮಾದಕ್ಕೆಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ರವರ ಕಾರ್ಮಿಕ ವಿರೋಧಿ ಮನಸ್ಥಿತಿ ಜಗಜ್ಜಾಹೀರಾಗಿದೆ.
ಕಾರ್ಖಾನೆಗಳ ಕಾಯ್ದೆ 1948ಕ್ಕೆ ತಿದ್ದುಪಡಿಯ ಮೂಲಕ ಕರ್ನಾಟಕ ರಾಜ್ಯ ಸರಕಾರ ಜಾರಿಗೊಳಿಸಿರುವ ಕಾರ್ಖಾನೆಗಳಲ್ಲಿ ದಿನದಲ್ಲಿ 12 ಗಂಟೆ ದುಡಿಸಿಕೊಳ್ಳುವ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ಕೆಲಸಕ್ಕೆ ನಿಯೋಜಿಸಲು ಅವಕಾಶ ಕಲ್ಪಿಸಿಕೊಡುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023, ನೂರಾರು ವರ್ಷಗಳ ಹಿಂದೆ ಹೋರಾಟದಿಂದ ಪಡೆದುಕೊಂಡಿದ್ದ ಕಾರ್ಮಿಕರ ಹಕ್ಕುಗಳನ್ನು ದಮನಗೊಳಿಸುವ ಹುನ್ನಾರವಾಗಿದೆ. ಶ್ರಮಿಕ ವರ್ಗದ ನಾಗರಿಕ ಬದುಕನ್ನು ಕಸಿದುಕೊಳ್ಳುವ ಸನ್ನಾಹವಾಗಿದೆ. ಮಹಿಳಾ ಸಂವೇದನೆಯನ್ನು ನಿರಾಕರಿಸುವ ಕ್ರೌರ್ಯವಾಗಿದೆ. ಕಾರ್ಮಿಕರ ನೆಮ್ಮದಿಯ ಜೀವನ, ಆರೋಗ್ಯ, ವಿಶ್ರಾಂತಿ, ಸುರಕ್ಷತೆಗೆ ಕಂಟಕ ಪ್ರಾಯವಾಗಿದೆ. ಇಂತಹ ಜನ ವಿರೋಧಿ-ಜೀವ ವಿರೋಧಿ ನೀತಿಯನ್ನು ಜಾರಿಗೊಳಿಸಿರುವ ರಾಜ್ಯ ಸರಕಾರ ತನ್ನ ಆಡಳಿತಾವಧಿಯ ಕೊನೆಯ ಬಜೆಟ್ ಅಧಿವೇಶನದಲ್ಲಿ ಕಾರ್ಖಾನೆಗಳ ಮಾಲಕರಿಗೆ ಲಾಭ ಮಾಡಿಕೊಡಲು ಮೂರು ಪಾಳಿಯಲ್ಲಿ ದಿನದ 24 ಗಂಟೆಗಳಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಕೇವಲ ಎರಡು ಪಾಳಿಯಾಗಿ ಪರಿವರ್ತಿಸಿ 12 ಗಂಟೆಯವರೆಗೆ ದುಡಿಮೆಯ ಅವಧಿಯನ್ನು ಹೆಚ್ಚಿಸಿ ತಿದ್ದುಪಡಿ ವಿಧೇಯಕ ಜಾರಿಗೊಳಿಸಿರುವುದು ರಾಜ್ಯ ಸರಕಾರ ಕಾರ್ಮಿಕ ವಿರೋಧಿ ನೀತಿ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ.
ಅಲ್ಲದೆ ಈ ಕಾರ್ಮಿಕ ವಿರೋಧಿ ತಿದ್ದುಪಡಿ ವಿದೇಯಕದ ಪರಿಣಾಮ ರಾಜ್ಯದಲ್ಲಿ ಉದ್ಯೋಗ ಕಡಿತ ಹೆಚ್ಚಾಗಲಿದ್ದು, ಹೊಸ ಉದ್ಯೋಗಗಳ ಸೃಷ್ಟಿಯು ಕ್ಷೀಣಿಸಲಿದೆ. ಕಡಿಮೆ ವೇತನದಲ್ಲಿ ದುಡಿಸಿಕೊಂಡು ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವ ಶ್ರಮ ಶೋಷಕ ನೀತಿಯನ್ನು ಈ ತಿದ್ದುಪಡಿಯು ಹೊಂದಿದೆ ಹಾಗೂ ಕಾರ್ಮಿಕರು ವಿರಾಮವಿಲ್ಲದೆ ಯಂತ್ರಗಳಂತೆ ದುಡಿಯುವಂತಹ ಒತ್ತಡಕ್ಕೆ ಒಳಗಾಗಲಿದ್ದು, ಇದು ಕಾರ್ಮಿಕರ ಅವ್ಯಾಹತ ಶೋಷಣೆಗೆ ರಹದಾರಿ ಮಾಡಿಕೊಡಲಿದೆ.
ಪ್ರಸಕ್ತ ಜಾಗತೀಕರಣದ ಸಂದರ್ಭದಲ್ಲಿ ಈಗಾಗಲೇ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನವೆಂಬ ಔದ್ಯಮಿಕ ರಂಗದಲ್ಲಿ 12ರಿಂದ 14ಗಂಟೆಗಳವರೆಗೆ ನಿರಂತರವಾಗಿ ದುಡಿಸಿಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ನಿರಂತರವಾಗಿ ಹೆಚ್ಚು ಸಮಯ ಹಾಗೂ ಒತ್ತಡದ ದುಡಿಮೆಯಲ್ಲಿ ತೊಡಗಿರುವ ದುಡಿಮೆಗಾರರು ಮಾನಸಿಕ ಖಿನ್ನತೆ ಸೇರಿದಂತೆ ಹಲವಾರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.
ಕಾರ್ಮಿಕ ವಿರೋಧಿಯಾಗಿರುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023ನ್ನು ಕೂಡಲೇ ವಾಪಸ್ ಪಡೆಯುವಂತೆ ರಾಜ್ಯದ ಬಹುತೇಕ ಎಲ್ಲಾ ಕಾರ್ಮಿಕ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರಿವೆ ಹಾಗೂ ಪ್ರಬಲವಾದ ಹೋರಾಟಕ್ಕೂ ಸಜ್ಜುಗೊಂಡಿವೆ. ''ಅಂದು ಬ್ರಿಟಿಷರು ಜಾರಿಗೊಳಿಸಿದ್ದ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಪಡೆಯುವಂತೆ ಆಗ್ರಹಿಸಲು ಸಂಸತ್ತಿನೊಳಗೆ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಮೊಳಗಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ರ ಹುತಾತ್ಮ ದಿನವಾದ 2023ರ ಮಾರ್ಚ್ 23 ರಂದು ಕರ್ನಾಟಕ ರಾಜ್ಯ ಮತ್ತೊಂದು ಕೈಗಾರಿಕಾ ಮುಷ್ಕರಕ್ಕೆ ಸಾಕ್ಷಿಯಾಗಲಿದೆ