ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಪಟ್ಟು: ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಮೂಡಿಗೆರೆ ಬಿಜೆಪಿಯಲ್ಲಿ ಅಸಮಾಧಾನ
ಹಾಲಿ ಶಾಸಕರ ವಿರುದ್ಧ 'ನೊಂದ ಕಾರ್ಯಕರ್ತರ ಸಭೆ'
ಮೂಡಿಗೆರೆ, ಮಾ. 16: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಇಂದು (ಗುರುವಾರ) ಪಟ್ಟಣದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ನಾಯಕರ ಎದುರು ಬ್ಯಾನರ್, ಬಂಟಿಂಗ್ಸ್ ಹಿಡಿದು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು. ಹೊಸ ಮುಖಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಲು ಸಜ್ಜಾಗಿದ್ದಾರೆ.
ಈ ಸಂಬಂಧ ಪಕ್ಷದ ಒಂದು ಗುಂಪು ಮೂಡಿಗೆರೆ ಪಟ್ಟಣದ ಪ್ರೀತಮ್ ಸಮುದಾಯ ಭವನದಲ್ಲಿ 'ಶಾಸಕರಿಂದ ನೊಂದ ಕಾರ್ಯಕರ್ತರ ಸಭೆ' ನಡೆಸಿ, ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದೆ.
ಹಾಲಿ ಶಾಸಕರು ಕಾರ್ಯಕರ್ತರ ಪರವಾಗಿ ಕೆಲಸ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿ ಯಲ್ಲಿ ಕುಂಠಿತವಾಗಿದೆ. ಇವರು ಮತ್ತೆ ಗೆದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.