ನ್ಯಾಕ್ ಮಾನ್ಯತೆ: ಚರ್ಚೆ ಅಗತ್ಯ
ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್(ನ್ಯಾಕ್) ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಒಂದು ಪ್ರತಿಷ್ಠಿತ ಸಂಸ್ಥೆ. ಈ ಸಂಸ್ಥೆಯನ್ನು 1994ರಲ್ಲಿ ಯುಜಿಸಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸಲು ಪ್ರಾರಂಭಿಸಿತು.
ಇದರ ಮುಖ್ಯಸ್ಥರಾಗಿದ್ದ ಡಾ. ಭೂಷಣ್ ಪಟವರ್ಧನ್‌ರವರು ರಾಜೀನಾಮೆ ನೀಡುವುದರ ಮೂಲಕ ಈ ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿರುವ ಮಾನ್ಯತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಕ್ ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಾದ ಪದವಿ ಕಾಲೇಜುಗಳ ಗುಣಮಟ್ಟವನ್ನು ಅಂದರೆ ಶೈಕ್ಷಣಿಕ ವಾತಾವರಣ, ಸಂಶೋಧನಾ ಪ್ರಕಟನೆಗಳು, ಪಠ್ಯಕ್ರಮಗಳ ಅಳವಡಿಕೆ, ಮೂಲಸೌಕರ್ಯಗಳ ಲಭ್ಯತೆ ಮತ್ತು ಕಾಲೇಜಿನ ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುವ ಮೂಲಕ ವಿವಿಧ ಹಂತದ ಗ್ರೇಡ್ ಮೂಲಕ ಮಾನ್ಯತೆ ನೀಡುತ್ತದೆ.
ಡಾ. ಭೂಷಣ್ ಪಟವರ್ಧನ್‌ರವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೆಲ ಉನ್ನತ ಶಿಕ್ಷಣ ಸಂಸ್ಥೆಗಳು ಅಡ್ಡ ದಾರಿಯ ಮೂಲಕ ನ್ಯಾಕ್‌ನಿಂದ ಹೆಚ್ಚಿನ ಗ್ರೇಡ್ ಪಡೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಒಂದು ಗಂಭೀರ ಆರೋಪವಾಗಿದ್ದು ಯುಜಿಸಿ ಈ ಬಗ್ಗೆ ಗಮನಹರಿಸಬೇಕಿದೆ.
ಬಹುಮುಖ್ಯವಾಗಿ ಕರ್ನಾಟಕದ ಪದವಿ ಕಾಲೇಜುಗಳು ದೊಡ್ಡ ಮಟ್ಟದಲ್ಲಿ ಈ ನ್ಯಾಕ್ ಮಾನ್ಯತೆಗೆ ಒಳಪಡುತ್ತಿರುವ ಈ ಸಂದರ್ಭದಲ್ಲಿ ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಬಗ್ಗೆ ಕೂಡ ಗಂಭೀರ ಚರ್ಚೆಯ ಅವಶ್ಯಕತೆ ಇದೆ. ದೇಶದ ಸರಿಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಪದವಿ ಕಾಲೇಜುಗಳಲ್ಲಿ ಕೇವಲ 9,000ದಷ್ಟು ಪದವಿ ಕಾಲೇಜುಗಳು ನ್ಯಾಕ್‌ನ ಮಾನ್ಯತೆಗೆ ಒಳಗಾಗಿವೆ. ಮಹಾರಾಷ್ಟ್ರ ಹೊರತು ಪಡಿಸಿ ಕರ್ನಾಟಕದ ಕಾಲೇಜುಗಳು ದೊಡ್ಡ ಸಂಖ್ಯೆಯಲ್ಲಿ ನ್ಯಾಕ್ ಮಾನ್ಯತೆಗೆ ಒಳಪಟ್ಟಿವೆ. ಪ್ರಶ್ನೆಯೆಂದರೆ, ಇತರ ಅಂದರೆ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಭಾರತದಂತಹ ರಾಜ್ಯಗಳು ನ್ಯಾಕ್ ಮಾನ್ಯತೆ ಪಡೆಯುತ್ತಿಲ್ಲ ಏಕೆ? ಆದರೂ ಈ ರಾಜ್ಯಗಳ ಕಾಲೇಜುಗಳಿಗೆ ನೀಡುವ ಅನುದಾನದಲ್ಲಿ ಯಾವುದೇ ಕಡಿತ ಮಾಡಿಲ್ಲ.
ಹಿಂದೆ ಅಂದರೆ 2016ರವರೆಗೆ ನ್ಯಾಕ್ ಮಾನ್ಯತೆ ಪಡೆದ ಕಾಲೇಜುಗಳಿಗೆ ರೂಸಾ ಮೂಲಕ ‘ಬಿ’ ಗ್ರೇಡ್‌ಗಿಂತ ಹೆಚ್ಚು ಗ್ರೇಡ್ ಪಡೆದ ಕಾಲೇಜುಗಳಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಅನುದಾನ ಕೂಡ ಇಲ್ಲವಾಗಿದೆ. ಜೊತೆಗೆ ಕಳೆದ ಮೂರು ವರ್ಷಗಳಿಂದ ಕೇಂದ್ರ ರೂಸಾ ಅಡಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡುತ್ತಾ ಬರುತ್ತಿದೆ. ಕರ್ನಾಟಕ ಸರಕಾರ ಒಂದೇ ಕಳೆದ 2021-22ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು 9 ಕೋಟಿ ರೂ.ಗೂ ಅಧಿಕ ಅನುದಾನವನ್ನು ಕಾಲೇಜುಗಳ ನ್ಯಾಕ್ ಪ್ರಕ್ರಿಯೆಗೆ ಬಿಡುಗಡೆ ಮಾಡಿದೆ. ಅದರೆ ಯುಜಿಸಿಯಿಂದ ರೂಸಾ ಅಡಿಯಲ್ಲಿ ಕಾಲೇಜುಗಳಿಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ?
ರಾಜ್ಯ ಉನ್ನತ ಶಿಕ್ಷಣ ಇಲಾಖೆ ರಾಜ್ಯ ಗುಣಮಟ್ಟ ಭರವಸಾ ಕೋಶ (ಎಸ್‌ಕ್ಯೂಎಸಿ) ಮೂಲಕ ಪದವಿ ಕಾಲೇಜುಗಳು ನ್ಯಾಕ್ ಮಾನ್ಯತೆಗೆ ಒಳಪಡಲು ಸಾಕಷ್ಟು ಸಹಾಯಹಸ್ತ ಚಾಚುತ್ತಿದೆ. ಆದರೆ ನ್ಯಾಕ್ ಪ್ರಕ್ರಿಯೆಗೆ ಸಾಕಷ್ಟು ಸಮಯವನ್ನು ಬೇಡುತ್ತದೆ. ಜೊತೆಗೆ ನ್ಯಾಕ್ ಸಮಿತಿಯನ್ನು ಕಾಲೇಜಿಗೆ ಆಹ್ವಾನಿಸಲು ಕೂಡ ಸಾಕಷ್ಟು ವೆಚ್ಚವಾಗುತ್ತದೆ. ಒಟ್ಟು ನ್ಯಾಕ್ ಪ್ರಕ್ರಿಯೆಗೆ ಒಳಪಡಲು ಸರಿ ಸುಮಾರು ನಾಲ್ಕು ಲಕ್ಷದಷ್ಟು ಹಣ ಖರ್ಚಾಗುತ್ತದೆ. ಈ ನಾಲ್ಕು ಲಕ್ಷದಲ್ಲಿ ಇದರ ಅರ್ಧದಷ್ಟು ಅಂದರೆ ಸುಮಾರು ಎರಡು ಲಕ್ಷದ ಮೂವತ್ತು ಸಾವಿರಕ್ಕೂ ಅಧಿಕ ಹಣ ನ್ಯಾಕ್ ತಂಡದ ಸದಸ್ಯರ ಪ್ರಯಾಣ ಮತ್ತು ಇತರ ಲಾಡ್ಜಿಂಗ್ ಸಂಬಂಧಿಸಿದ ವೆಚ್ಚವಾಗಿರುತ್ತದೆ. ಬಹುತೇಕ ಶೇ. 70ರಷ್ಟು ಮೌಲ್ಯಮಾಪನ ಆನ್‌ಲೈನ್ ಮೂಲಕ ನಡೆಯುವುದರಿಂದ ಉಳಿದ ಶೇ. 30ರಷ್ಟು ಅಂಕಗಳ ಮೌಲ್ಯಮಾಪನಕ್ಕೆ ಇಷ್ಟೊಂದು ಹಣದ ವೆಚ್ಚದ ಅವಶ್ಯಕತೆ ಇದೆಯೇ?
ಕಾಲೇಜುಗಳಿಗೆ ಭೇಟಿ ನೀಡುವ ನ್ಯಾಕ್ ಸದಸ್ಯ ತಂಡಗಳ ಬಗ್ಗೆ ಕೂಡ ಗಮನಾರ್ಹ ಚರ್ಚೆಯ ಅವಶ್ಯಕತೆ ಇದೆ. ನ್ಯಾಕ್ ತಂಡದ ಸದಸ್ಯರು ಬೇರೆ ಬೇರೆ ರಾಜ್ಯದ ಕಾಲೇಜುಗಳಿಗೆ ಭೇಟಿ ನೀಡುವಾಗ ತಮ್ಮ ಕುಟುಂಬದ ಸದಸ್ಯರನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಾರೆ ಎನ್ನುವ ಗಂಭೀರ ಆರೋಪವಿದೆ. ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲು ಭೇಟಿ ನೀಡುವ ನುರಿತ ಹಿರಿಯ ಶಿಕ್ಷಣ ತಜ್ಞರು ತಮ್ಮ ಕುಟುಂಬದ ಸದಸ್ಯರನ್ನು ಜೊತೆಯಲ್ಲಿ ಕರೆದುಕೊಂಡು ಬಂದರೆ ತಮ್ಮ ಕೆಲಸವನ್ನು ಎಷ್ಟರಮಟ್ಟಿಗೆ ದಕ್ಷತೆಯಿಂದ ಮಾಡಲು ಸಾಧ್ಯ? ಬಹುತೇಕ ನ್ಯಾಕ್ ತಂಡದ ಸದಸ್ಯರಿಗೆ ಕಾಲೇಜುಗಳಿಗೆ ಭೇಟಿ ನೀಡುವುದು ಒಂದು ಪ್ರವಾಸದ ರೀತಿಯ ವ್ಯವಸ್ಥೆಯಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಕ್‌ನ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿದ್ದ ಈಗ ರಾಜೀನಾಮೆ ನೀಡಿರುವ ಪ್ರೊ. ಭೂಷಣ್ ಪಟವರ್ಧನ್‌ರವರು ಕೆಲವು ಕಾಲೇಜುಗಳಿಗೆ ಅಡ್ಡ ದಾರಿ ಮೂಲಕ ಹೆಚ್ಚಿನ ಗ್ರೇಡ್ ಪಡೆದಿರುವ ಬಗ್ಗೆ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಬಹುಮುಖ್ಯವಾಗಿ ನ್ಯಾಕ್‌ನ ಮೌಲ್ಯ ಮಾಪನ ಸಂಪೂರ್ಣ ದತ್ತಾಂಶ ಆಧಾರಿತವಾಗಿದ್ದು ಬರುವ ಶಿಕ್ಷಣ ತಜ್ಞರು ಕೂಡ ಕಾಲೇಜುಗಳಲ್ಲಿ ಮತ್ತದೇ ಅವರು ಸಲ್ಲಿಸಿದ್ದ ದತ್ತಾಂಶಗಳ ಪರಿಶೀಲನೆ ಮಾಡುವರು. ಇವತ್ತು ಉನ್ನತ ಶಿಕ್ಷಣ ಗಮನಾರ್ಹವಾಗಿ ಬದಲಾಗುತ್ತಿದ್ದು ಉನ್ನತ ಶಿಕ್ಷಣದ ಬಗ್ಗೆಯಾಗಲಿ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ಇವತ್ತಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾವುದೇ ಗಂಭೀರ ಚಿಂತನೆ-ಚರ್ಚೆಗಳನ್ನು ಮಾಡದೆ ಕೇವಲ ದತ್ತಾಂಶಗಳ ಪರಿಶೀಲನೆಗೆ ನ್ಯಾಕ್ ಸಿಮೀತವಾಗಿದೆ.
ಜಾಗತಿಕ ಉನ್ನತ ಶಿಕ್ಷಣ ವಲಯದಲ್ಲಿ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ಇತ್ತೀಚಿನ ವಿದ್ಯಮಾನವಾಗಿದ್ದು, ಹಿಂದುಳಿದ, ದಲಿತ ಮತ್ತು ಬಡ ವರ್ಗದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಪಡೆಯಲು ಉತ್ತೇಜಿಸುವ ಪ್ರಯತ್ನ ಮಾಡಬೇಕಿದೆ. ಅದರೆ ನ್ಯಾಕ್ ತಂಡ ಗ್ರಾಮೀಣ ಭಾಗದ ದಲಿತ ಹಿಂದುಳಿದ ವರ್ಗದಿಂದ ಬರುವ ವಿದ್ಯಾರ್ಥಿಗಳಿರುವ ಕಾಲೇಜುಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದರಿಂದ ಇಂತಹ ಕಾಲೇಜುಗಳು ಮುಂದಿನ ದಿನಗಳಲ್ಲಿ ಸೂಕ್ತ ಅನುದಾನಗಳ ಕೊರತೆ ಮತ್ತು ಇತರ ಸೌಲಭ್ಯಗಳಿಂದ ವಂಚಿತವಾಗುವ ಪ್ರಮೇಯವೇ ಹೆಚ್ಚು. ಹೀಗಾಗಿ ಇಂತಹ ಕಾಲೇಜುಗಳ ಮೌಲ್ಯಮಾಪನಕ್ಕೆ ಬೇರೆಯದೇ ಮಾನದಂಡಗಳನ್ನು ಬಳಸುವಂತಾಗಬೇಕು.
ಒಟ್ಟಾರೆ ಏಕೆ ದೇಶದ ಶೇ. 75ರಷ್ಟು ಕಾಲೇಜುಗಳು ಇನ್ನೂ ನ್ಯಾಕ್‌ನ ಮಾನ್ಯತೆ ಒಳಪಟ್ಟಿಲ್ಲ ಜೊತೆಗೆ ಇತ್ತೀಚೆಗೆ ನ್ಯಾಕ್ ಬಗ್ಗೆ ಮಾಡಲಾಗಿರುವ ಗಂಭೀರ ಆರೋಪಗಳ ಬಗ್ಗೆ ಉನ್ನತ ಶಿಕ್ಷಣ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಯ ಅಗತ್ಯವಿದೆ.