ಸತ್ಯಪಾಲ್ ಮಲಿಕ್ ಬಳಸಿ ಎಸೆದ ದಾಳ?
ಜಮ್ಮು-ಕಾಶ್ಮೀರ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ಸರಕಾರ ಹಿಂದೆಗೆದುಕೊಂಡಿದೆ. ಅಲ್ಲಿಗೆ, ತನಗೀಗ ಉಪಯೋಗವಿಲ್ಲದ ಮತ್ತೊಬ್ಬ ರಾಜಕಾರಣಿಯನ್ನು ಬಿಜೆಪಿ ಮುಲಾಜಿಲ್ಲದೆ ಬಿಸಾಡಿದೆ ಎಂಬುದು ಸ್ಪಷ್ಟವಾಗಿದೆ.
ಒಂದು ಕಾಲದಲ್ಲಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿದು, ತಾನೇ ಎಲ್ಲ ಎಂಬ ಭ್ರಮೆಯಲ್ಲಿ ಮೆರೆದಾಡಿದ್ದ ಈ ಸತ್ಯಪಾಲ್ ಮಲಿಕ್ ಈಗ ಬಿಜೆಪಿಯ ಪಾಲಿಗೆ ತಿಂದು ಮುಗಿಸಿದ ಬಾಳೆ ಹಣ್ಣಿನ ಸಿಪ್ಪೆಯಂತಾಗಿದ್ದಾರೆ.
ಝಡ್ ಪ್ಲಸ್ ಅಂದರೆ ಪ್ರಧಾನಿ ಬಳಿಕ ಈ ದೇಶದಲ್ಲಿ ಕೊಡುವ ಅತ್ಯಂತ ಗರಿಷ್ಠ ಭದ್ರತೆ. 10 ಕಮಾಂಡೋಗಳ ಸಹಿತ ಐವತ್ತಕ್ಕೂ ಹೆಚ್ಚು ಸುರಕ್ಷತಾ ಸಿಬ್ಬಂದಿ ಇರುವ ಬೃಹತ್ ಭದ್ರತಾ ವ್ಯವಸ್ಥೆ ಅದು. ಸೂಕ್ಷ್ಮ ಪ್ರದೇಶ ಜಮ್ಮು ಕಾಶ್ಮೀರದ ಒಬ್ಬ ಮಾಜಿ ಗವರ್ನರ್ಗಿದ್ದ ಈ ಝಡ್ ಪ್ಲಸ್ ಭದ್ರತೆ ಹಿಂದೆಗೆದುಕೊಂಡ ಮೇಲೆ ಅವರಿಗೆ ಒದಗಿಸಲಾಗಿರುವುದು ಒಬ್ಬ ವೈಯಕ್ತಿಕ ಭದ್ರತಾ ಅಧಿಕಾರಿ ಅಂದರೆ ಪಿಎಸ್ಒ ಮಾತ್ರ. ಇದರೊಂದಿಗೆ, ಈಗ ಇಷ್ಟಕ್ಕೆ ಮಾತ್ರವೇ ನೀವು ಅರ್ಹರು ಎಂದು ಒಂದು ಕಾಲದ ತನ್ನ ಆಜ್ಞಾಪಾಲಕ ಮಲಿಕ್ಗೆ ಬಿಜೆಪಿ ತಿವಿದು ತಿವಿದು ಹೇಳಿದಂತಾಗಿದೆ.
ಭದ್ರತೆ ಹಿಂದೆಗೆದುಕೊಂಡು ಪಿಎಸ್ಒ ಮಾತ್ರ ನೀಡಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಲಿಕ್, ‘‘ಆ ಒಬ್ಬ ಪಿಎಸ್ಒ ಕೂಡ ಕಳೆದ ಮೂರು ದಿನಗಳಿಂದ ಬಂದಿಲ್ಲ. ನಾನೀಗ ರಕ್ಷಣೆಯಿಲ್ಲದವನಾಗಿದ್ದೇನೆ. ಯಾರೂ ನನ್ನ ಮೇಲೆ ದಾಳಿ ಮಾಡಬಹುದಾದ ಸ್ಥಿತಿಯಿದೆ. ನನಗೇನಾದರೂ ಆದರೆ ಅದಕ್ಕೆ ಕೇಂದ್ರ ಸರಕಾರವೇ ಹೊಣೆ’’ ಎಂದು ಅಲವತ್ತುಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಹಿಂದಿನ ಎಲ್ಲಾ ಮಾಜಿ ರಾಜ್ಯಪಾಲರಿಗೂ ಉತ್ತಮ ಭದ್ರತೆಯಿರುವಾಗ ತನ್ನನ್ನು ಈ ಸ್ಥಿತಿಗೆ ತಳ್ಳಿರುವ ಬಿಜೆಪಿಯ ನಡೆಗೆ ಮಲಿಕ್ ಸಿಟ್ಟಾಗಿದ್ದಾರಾದರೂ, ಅವರದೀಗ ಬಡವನ ಸಿಟ್ಟು.
ಇದೇ ಬಿಜೆಪಿಯ ಭಾಗವಾಗಿದ್ದೆ, ಅದಕ್ಕೆ ಅನುಕೂಲಕರವಾಗಿ ಏನೇನೆಲ್ಲ ಮಾಡಿದ್ದೆ ಎಂಬುದನ್ನು ನೆನೆಯುತ್ತ, ಹಳಹಳಸಿಕೊಂಡು ಕೂರುವುದಷ್ಟೇ ಈಗ ಅವರ ಪಾಲಿನ ಭಾಗ್ಯ. ಅವಕಾಶವಾದಿ ರಾಜಕಾರಣಿಯೊಬ್ಬ ಮುಟ್ಟುವ ಕೊನೆಯ ಹಂತ ಯಾವುದಿರುತ್ತದೆ ಎಂಬುದಕ್ಕೂ ಆ ಸತ್ಯಪಾಲ್ ಮಲಿಕ್ ಉದಾಹರಣೆಯಾಗುತ್ತಾರೆ.
ಚರಣ್ ಸಿಂಗ್ ಅವರ ಭಾರತೀಯ ಕ್ರಾಂತಿದಳದಿಂದ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದ್ದ ಜಾಟ್ ಸಮುದಾಯದ ಮಲಿಕ್, ಭಾರತೀಯ ಲೋಕದಳ ರಚನೆಯಾ ದಾಗ ಅದನ್ನು ಸೇರಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆನಂತರ ಜನತಾ ದಳ ಟಿಕೆಟ್ನಿಂದ ಲೋಕಸಭೆಗೆ ಆರಿಸಿಹೋಗಿದ್ದರು. ಅದಾದ ಬಳಿಕ ಸಮಾಜವಾದಿ ಪಕ್ಷದಿಂದ ಮತ್ತೆ ಲೋಕಸಭೆಗೆ ಸ್ಪರ್ಧಿಸಿದಾಗ ಹೀನಾಯ ಸೋಲು ಕಂಡಿದ್ದರು.
ಹೀಗೆ ಪಕ್ಷಾಂತರ ಚಾಳಿಯನ್ನೇ ಉದ್ದಕ್ಕೂ ಮುಂದುವರಿಸಿದ್ದ ಮಲಿಕ್ ಅವಕಾಶವಾದಿ ರಾಜಕಾರಣವನ್ನು ಬಿಜೆಪಿ ಗಮನಿಸಿತ್ತು. ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯವನ್ನು ಸೆಳೆಯುವುದಕ್ಕೆಂದೇ ಸೂಕ್ತ ಸಮಯದಲ್ಲಿ ಅವರನ್ನು ಬಳಸಿಕೊಳ್ಳಲು ಮುಂದಾಯಿತು. ಪಕ್ಷಕ್ಕೆ ಸೇರಿಸಿಕೊಂಡು, ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯನ್ನೂ ಕೊಟ್ಟಿತು. ಅವರನ್ನು ಸರಿಯಾಗಿಯೇ ಬಳಸಿಕೊಂಡು, ಒಂದಿಷ್ಟು ಸ್ಥಾನಮಾನಗಳನ್ನು ಕೊಡುತ್ತ ಹೋಯಿತು. ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲ ಹುದ್ದೆ ಕೊಟ್ಟು ತನಗೆ ಬೇಕಾದ್ದನ್ನು ಮಾಡಿಸಿತು. ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನೇ ತೆಗೆದು ಹಾಕಲು ಅಲ್ಲಿಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಮೊಹರಿನಂತೆ ಈ ಸತ್ಯಪಾಲ್ರನ್ನು ಬಳಸಿಕೊಂಡಿತು ಬಿಜೆಪಿ. ಆ ರಾಜ್ಯದ ಜನತೆಯ ಮೇಲಿನ ಪ್ರಹಾರದ ಆ ನಡೆಯನ್ನು ಒಂದಿಷ್ಟೂ ಪ್ರಶ್ನಿಸದೆ ಮೊಹರು ಒತ್ತಿದರು ಸತ್ಯಪಾಲ್ ಮಲಿಕ್.
ಎಲ್ಲವನ್ನೂ ತಾನೇ ಮಾಡುತ್ತಿದ್ದೇನೆ, ತನ್ನ ಪ್ರಭಾವ ಇಷ್ಟೆಲ್ಲ ಇದೆ ಎಂಬ ಭ್ರಮೆಯಲ್ಲಿ ಮಲಿಕ್ ಬಿಜೆಪಿ ತಾಳಕ್ಕೆ ಕುಣಿಯುತ್ತಾ ಹೋದರು. ತನ್ನ ಕೆಲಸ ಆದ ಮೇಲೆ ಇವರಿಂದ ಆಗಬೇಕಾದ್ದು ಏನೂ ಇಲ್ಲ ಎಂದು ಗೊತ್ತಾಗುತ್ತಲೇ ಮುಲಾಜಿಲ್ಲದೆ, ಒಂದಿಷ್ಟೂ ತಡಮಾಡದೆ ಬಿಸಾಡಿಬಿಟ್ಟಿತು.
2017ರಲ್ಲಿ ಬಿಹಾರ ಗವರ್ನರ್ ಆಗಿ ನೇಮಕಗೊಂಡಿದ್ದ ಮಲಿಕ್ ಅವರನ್ನು 2018ರಲ್ಲಿ ಜಮ್ಮು-ಕಾಶ್ಮೀರಕ್ಕೆ, 2019ರಲ್ಲಿ ಗೋವಾಕ್ಕೆ, 2020ರಲ್ಲಿ ಮೇಘಾಲಯಕ್ಕೆ ವರ್ಗಾಯಿಸಲಾಗಿತ್ತು. ರಾಜ್ಯಪಾಲರಾಗಿ ಅವರ ಐದು ವರ್ಷಗಳ ಅವಧಿ ಹೀಗೆ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿ, ಅಕ್ಟೋಬರ್ 2022ರಲ್ಲಿ ಅಧಿಕಾರಾವಧಿ ಮುಗಿದಿತ್ತು. 2019ರ ಆಗಸ್ಟ್ನಲ್ಲಿ ಕೇಂದ್ರ ಸರಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದಾಗ ಮಲಿಕ್ ರಾಜ್ಯಪಾಲರಾಗಿದ್ದರು.
ಜಮ್ಮು-ಕಾಶ್ಮೀರದಿಂದ ಗೋವಾಕ್ಕೆ ಹೋದ ಮೇಲೆ ಹಲವಾರು ವಿಷಯಗಳಲ್ಲಿ ಅವರು ಕೇಂದ್ರ ಸರಕಾರವನ್ನು ಎದುರುಹಾಕಿಕೊಂಡಿದ್ದರು. ಮುಖ್ಯವಾಗಿ, ಕೃಷಿ ಕಾನೂನುಗಳ ವಿರುದ್ಧದ ರೈತರ ಹೋರಾಟವನ್ನು ಅವರು ಬೆಂಬಲಿಸಿದ್ದರು. ಜಮ್ಮು ಕಾಶ್ಮೀರದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂ. ಆಮಿಷ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಈ ಸಂಬಂಧ ಸಿಬಿಐ ಅವರನ್ನು ಕಳೆದ ವರ್ಷ ವಿಚಾರಣೆಗೆ ಒಳಪಡಿಸಿತ್ತು.
ಜಮ್ಮು ಮತ್ತು ಕಾಶ್ಮೀರ ನೌಕರರ ಆರೋಗ್ಯ ವಿಮಾ ಯೋಜನೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ ಮತ್ತು ಕಿರು ಹೈಡ್ರೋ ಇಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ಗಾಗಿ 2019ರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ಸಂಸ್ಥೆಗೆ 2,200 ಕೋಟಿ ರೂ. ಮೌಲ್ಯದ ಸಿವಿಲ್ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಎಂದು ಮಲಿಕ್ ಆರೋಪಿಸಿದ ನಂತರ ಸಿಬಿಐ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿತ್ತು. ಮೊದಲ ಎಫ್ಐಆರ್ನಲ್ಲಿ ಸಿಬಿಐ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಟ್ರಿನಿಟಿ ರೀ ಇನ್ಶೂರೆನ್ಸ್ ಬ್ರೋಕರ್ಗಳನ್ನು ಆರೋಪಿಗಳು ಎಂದು ಹೆಸರಿಸಿತ್ತು.
‘‘ಮೋದಿ ಬಹಳ ದುರಹಂಕಾರಿ. ರೈತರು ನನಗಾಗಿ ಸತ್ತರೇ ಎಂದು ನನ್ನನ್ನು ಪ್ರಶ್ನಿಸಿದ್ದರು’’ ಎಂದು ಮೇಘಾಲಯ ಗವರ್ನರ್ ಆಗಿದ್ದ ವೇಳೆ ಸತ್ಯಪಾಲ್ ಗಂಭೀರ ಆರೋಪ ಮಾಡಿದ್ದರು. ಮೇಘಾಲಯ ರಾಜ್ಯಪಾಲರಾಗಿದ್ದ ಹೊತ್ತಲ್ಲಿಯೇ, ಕೇಂದ್ರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೆ ಉಪರಾಷ್ಟ್ರಪತಿಯಾಗ ಬಹುದು ಎಂದು ಮಲಿಕ್ ಹೇಳಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು.
ಬಿಜೆಪಿ ಸೆಳೆತಕ್ಕೆ ಒಳಗಾಗಿ, ಅದು ಕೊಟ್ಟದ್ದನ್ನೆಲ್ಲ ಅನುಭವಿಸಿ, ಅದು ಹೇಳಿದಂತೆಲ್ಲ ಕುಣಿದು, ಕಡೆಗೆ ಅದರ ವಿರುದ್ಧ ತಿರುಗಿಬಿದ್ದು ಅಧ್ವಾನ ಮಾಡಿಕೊಂಡಿರುವ ಮಲಿಕ್ ಈಗ ಅಕ್ಷರಶಃ ಬೆಪ್ಪುತಕ್ಕಡಿ, ಬಳಸಿ ಬಿಸಾಡಿದ ದಾಳ.
ಬಿಜೆಪಿಗೆ ಯಾರನ್ನು ಯಾವಾಗ ಹೇಗೆಲ್ಲಾ ಬಳಸಿಕೊಳ್ಳಬೇಕು ಮತ್ತು ಅವರು ಉಪಯೋಗಕ್ಕಿಲ್ಲ ಎಂದಾದ ಮರುಕ್ಷಣದಲ್ಲೇ ಹೇಗೆ ನಿವಾರಿಸಿಕೊಳ್ಳಬೇಕು, ಕಿತ್ತೆಸೆಯಬೇಕು, ಮೂಲೆಗುಂಪಾಗಿಸಬೇಕು ಎಂಬುದು ಬಹಳ ಚೆನ್ನಾಗಿಯೇ ಗೊತ್ತು. ಬಿಜೆಪಿ ಬಳಸಿ ಬಿಸಾಡಿದವರ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿರುವ ಮಲಿಕ್ ಈಗ ಗೋಳೋ ಎನ್ನುತ್ತ ಅಸಹಾಯಕ ಸ್ಥಿತಿಯಲ್ಲಿ ಒದ್ದಾಡುತ್ತಿರುವುದು ಬಿಜೆಪಿಯ ಬಾಲಬಡುಕ ರಾಜಕಾರಣಿಗಳಿಗೆಲ್ಲ ಕಾಣಿಸಬೇಕಿದೆ.