varthabharthi


ವಿಶೇಷ-ವರದಿಗಳು

ಮುಖ್ಯವಾಗುವುದು ಅಭಿವೃದ್ಧಿಯೋ? ಅಖಾಡದಲ್ಲಿನ ಆಟವೋ?

ವಾರ್ತಾ ಭಾರತಿ : 17 Mar, 2023
ಎಂ. ಎಚ್.

40 ಪರ್ಸೆಂಟ್ ಕಮಿಷನ್, ಮತದಾರರಿಗೆ ಹಣ ಆರೋಪ ಜನ ಮರೆಯುವರೇ? | ಹ್ಯಾಟ್ರಿಕ್ ಗೆಲುವು ಕಂಡ ಮುನಿರತ್ನ ಈ ಬಾರಿಯೂ ಗೆಲುವು ಸಾಧಿಸುವರೇ? | ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ತಂತ್ರವೇನು? | ರಾಜರಾಜೇಶ್ವರಿ ನಗರದಲ್ಲಿ ಅಭಿವೃದ್ಧಿಗಿಂತ ಅಖಾಡದಲ್ಲಿನ ಆಟ ಮುಖ್ಯವೇ?

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ

ಮುನಿರತ್ನ

ಬಿಜೆಪಿ ನಾಯಕ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರೂ ಬೊಮ್ಮಾಯಿ ಸಂಪುಟದಲ್ಲಿ ತೋಟಗಾರಿಕೆ ಸಚಿವರೂ ಆಗಿರುವ ಅವರು, ಚಲನಚಿತ್ರ ನಿರ್ಮಾಪಕರೂ ಹೌದು. ‘ರಕ್ತಕಣ್ಣೀರು’, ‘ಕುರುಕ್ಷೇತ್ರ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಮೊದಲು ಕಾಂಗ್ರೆಸ್‌ನಲ್ಲಿದ್ದವರು ಬಳಿಕ ಬಿಜೆಪಿ ಸೇರಿ, ಬೊಮ್ಮಾಯಿ ಸಂಪುಟದಲ್ಲಿ ಸಚಿವರೂ ಆದರು. ಮತ್ತೆ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ಬೆಂಗಳೂರಿನ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರವೂ ಒಂದು. ಕಳೆದ ಉಪಚುನಾವಣೆಯಲ್ಲಿ ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೂ ಗಮನ ಸೆಳೆದಿದ್ದ ಕ್ಷೇತ್ರವಾಗಿತ್ತು. ಮೊದಲು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ರಾಜರಾಜೇಶ್ವರಿ ನಗರ, 2008ರಲ್ಲಿ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. ಈಗಾಗಲೇ ಉಪಚುನಾವಣೆ ಸೇರಿ 3 ಚುನಾವಣೆಗಳನ್ನು ಕಂಡಿದೆ. ಕ್ಷೇತ್ರದಲ್ಲಿ ಬಿಬಿಎಂಪಿಯ 9 ವಾರ್ಡ್‌ಗಳು ಬರುತ್ತವೆ. ಲಕ್ಷ್ಮೀದೇವಿ ನಗರ, ಸರಕಾಲಹಳ್ಳಿ, ಜೆ.ಪಿ. ಪಾರ್ಕ್, ಯಶವಂತಪುರ, ಎಚ್.ಎಂ.ಟಿ, ಲಗ್ಗೆರೆ, ಜ್ಞಾನ ಭಾರತಿ, ರಾಜರಾಜೇಶ್ವರಿ ನಗರ, ಕೊಟ್ಟಿಗೆಪಾಳ್ಯ ಇವು ಆ ವಾರ್ಡ್‌ಗಳು.

ಮುನಿರತ್ನ ಪ್ರಭಾವ

ಕಳೆದ ಉಪಚುನಾವಣೆ ಗೆದ್ದು, ಬಿಜೆಪಿ ಶಾಸಕರಾಗಿ, ಬಳಿಕ ಸಚಿವರೂ ಆಗಿರುವ ಮುನಿರತ್ನ ಪ್ರಭಾವ ಕ್ಷೇತ್ರದಲ್ಲಿ ಜೋರಾಗಿಯೇ ಇದೆ ಎನ್ನಲಾಗುತ್ತದೆ. 2013ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ ಮುನಿರತ್ನ, 2018ರಲ್ಲೂ ಕಾಂಗ್ರೆಸ್‌ನಿಂದಲೇ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದರು. ಉಪಚುನಾವಣೆಯಲ್ಲಿ 58,000 ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಿದರು. ಸಚಿವ ಸಂಪುಟದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ಆರೋಪಗಳ ಸುಳಿಯಲ್ಲಿ

ಗುತ್ತಿಗೆದಾರರು ಮಾಡಿದ 40 ಪರ್ಸೆಂಟ್ ಕಮಿಷನ್ ಆರೋಪ ಮುನಿರತ್ನ ವಿರುದ್ಧವೂ ಇದೆ. ದಾಖಲೆ ಕೊಡದಿದ್ದರೆ ಸುಮ್ಮನೆ ಬಿಡಲಾರೆ ಎಂದು ಮುನಿರತ್ನ ಎಚ್ಚರಿಸಿದ್ದೂ ಸುದ್ದಿಯಾಗಿತ್ತು. ಟೆಂಡರ್ ನೀಡಲು ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಸೂಲಿ ಮಾಡಿದ್ದಾರೆ ಎಂಬುದು ಮುನಿರತ್ನ ವಿರುದ್ಧ ಗುತ್ತಿಗೆದಾರರ ಸಂಘದ ಆರೋಪವಾಗಿತ್ತು.

ಹಾಗೆ ನೋಡಿದರೆ ಮುನಿರತ್ನ ವಿರುದ್ಧ ಆರೋಪಗಳು ಹೊಸದೇನಲ್ಲ. ಉಪಚುನಾವಣೆ ಸಮಯದಲ್ಲಂತೂ ಮತದಾರರರಿಗೆ ಹಣ ಹಂಚಿದ ಆರೋಪ ಮುನಿರತ್ನ ವಿರುದ್ಧ ಕೇಳಿಬಂದಿತ್ತು ಮಾತ್ರವಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್ ಕೂಡ ದಾಖಲಾಗಿತ್ತು. ಮತಹಾಕಿದರೆ 5 ಸಾವಿರ ರೂ. ಕೊಡುವುದಾಗಿ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ ಎಂದು ದೂರಲಾಗಿತ್ತು.

ಕಾಂಗ್ರೆಸ್ ವಿರುದ್ಧ ಸವಾಲು

ಮೊದಲು ತಾವಿದ್ದ ಕಾಂಗ್ರೆಸ್ ವಿರುದ್ಧ ಸವಾಲೆಸೆಯುವ ರೀತಿಯಲ್ಲಿ ಈಚೆಗೆ ಮುನಿರತ್ನ ಹೇಳಿಕೆಗಳು ಸಾಮಾನ್ಯವಾಗಿವೆ. ಸಿದ್ದರಾಮಯ್ಯ ಅವರಿಗೆ ಸುತ್ತಲಿನವರಿಂದಲೇ ಸೋಲಾಗಲಿದೆ ಎಂದಿರುವ ಮುನಿರತ್ನ, ಹೈಕಮಾಂಡ್ ಸೂಚಿಸಿದರೆ ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡುತ್ತೇನೆ. ಕೋಲಾರದಿಂದ ಸ್ಪರ್ಧೆ ಮಾಡುವುದಕ್ಕೂ ಸಿದ್ಧ ಎಂದಿದ್ದಾರೆ.

ಇನ್ನೊಂದೆಡೆ ಡಿ.ಕೆ. ಸಹೋದರರ ವಿರುದ್ಧವೂ ತೊಡೆತಟ್ಟಿರುವ ಮುನಿರತ್ನ, ‘‘ಅವರಿಬ್ಬರೂ ಬೇಕಾದರೆ ರಾಜರಾಜೇಶ್ವರಿ ನಗರದಲ್ಲಿ ನನ್ನ ವಿರುದ್ಧ ನಿಲ್ಲಲಿ’’ ಎಂದೂ ಹೇಳಿದ್ದಾರೆ. ‘‘ಈ ಹಿಂದೆ ಎಷ್ಟು ಅಂತರದಿಂದ ಸೋಲಿಸಿದ್ದೇನೆ ಎಂಬುದು ಅವರಿಗೆ ನೆನಪಿರಬೇಕಲ್ಲವೇ?’’ ಎಂದೂ ಕೆಣಕಿದ್ದಾರೆ.

ಕಾಂಗ್ರೆಸ್ ಮತ್ತು ಮುನಿರತ್ನ ಮಧ್ಯೆ ಹೀಗೆ ಸಮರ ನಡೆದೇ ಇದೆ. ಇತ್ತೀಚೆಗೆ ಮುನಿರತ್ನ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನವೂ ನಡೆದಿತ್ತು. ಕ್ಷೇತ್ರದಲ್ಲಿ ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದ ವೇಳೆಯೇ ‘ಕೆರೆಕಳ್ಳ ಮುನಿರತ್ನ’ ಎಂಬ ಬರಹವಿರುವ ಬ್ಯಾನರ್ ಅಳವಡಿಸಲಾಗಿತ್ತು. 72 ಎಕರೆ ಕೆರೆ ಮುಚ್ಚಿ ಮೈದಾನ ಮಾಡಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಆರೋಪಿಸಲಾಗಿತ್ತು. 

ಭಾರೀ ಪೈಪೋಟಿ

ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಮುನಿರತ್ನ ವಿರುದ್ಧ ಈ ಸಲ ಭಾರೀ ಪೈಪೋಟಿ ಸಾಧ್ಯತೆಯಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಹನುಮಂತರಾಯಪ್ಪಈ ಬಾರಿಯೂ ಇಲ್ಲಿ ಕಾಂಗ್ರೆಸ್‌ನಿಂದಲೇ ಮುನಿರತ್ನಗೆ ಎದುರಾಳಿಯಾಗಲಿದ್ದಾರೆ ಎನ್ನಲಾಗಿದೆ. ಒಕ್ಕಲಿಗರ ಸಂಖ್ಯೆ ಹೆಚ್ಚಿರುವ ಕಾರಣ ಜೆಡಿಎಸ್ ಕೂಡ ಇದನ್ನು ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಗಣಿಸಿದೆ. ಜೆಡಿಎಸ್‌ನಿಂದ ತಿಮ್ಮನಂಜಯ್ಯ ಹಾಗೂ ವಿ. ಕಷ್ಣಮೂರ್ತಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

ಅಭಿವೃದ್ಧಿಯೋ ಪ್ರಭಾವವೊ?

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ ಎಂಬಂತೆ ಕಂಡರೂ ಇನ್ನೂ ಸುಧಾರಣೆಯಾಗಬೇಕಾಗಿರುವುದು ಬಹಳ ಇದೆ. ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಿಂದ ಮೈಸೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ ತನಕ ಹರಡಿಕೊಂಡಿರುವ ಕ್ಷೇತ್ರದಲ್ಲಿ ನೈಸ್ ರಸ್ತೆ, ವಿಶ್ವದರ್ಜೆ ಆಸ್ಪತ್ರೆ, ಮಾಲ್‌ಗಳಿವೆ. ರಿಯಲ್ ಎಸ್ಟೇಟ್ ಕಾರಣದಿಂದಾಗಿ ಇಲ್ಲಿ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ ಎಂದೇನೂ ಹೇಳಲಾಗದು. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹೀಗೆ ಆಗಬೇಕಾದದ್ದು ಬಹಳ ಇದೆ. ಕೊಳೆಗೇರಿಗಳೂ ಕ್ಷೇತ್ರದಲ್ಲಿವೆ.

ಆದರೆ ಪ್ರಭಾವಿ ನಾಯಕ ಮುನಿರತ್ನ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಅಭಿವೃದ್ಧಿಗಿಂತ ಅಖಾಡದಲ್ಲಿನ ಆಟವೇ ಮುಖ್ಯವಾಗುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದು ಕುರುಕ್ಷೇತ್ರಕ್ಕೆ ಮುನಿರತ್ನ ಸಜ್ಜಾಗಿದ್ದಾರೆ. ಎದುರಾಳಿಗಳ ತಂತ್ರ ಹೇಗಿರಲಿದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)