varthabharthi


ರಾಷ್ಟ್ರೀಯ

ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ವೇಳೆ ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಮೃತ್ಯು

ವಾರ್ತಾ ಭಾರತಿ : 18 Mar, 2023

Photo: Twitter/@anshuman_sunona

ಬಿಲಾಸ್‌ಪುರ: ತನ್ನ ಕಾಲೇಜು ಸಹಪಾಠಿಗಳೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದ ವೇಳೆ 20 ವರ್ಷದ ಯುವಕನೊಬ್ಬ ಕಟ್ಟಡದ ಕಿಟಕಿಯ ಚಾವಣಿ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಘತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ. ಈ ಘಟನೆಯನ್ನು ಆತನ ಇಬ್ಬರು ಗೆಳೆಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮೃತ ಯುವಕನನ್ನು ಆಶುತೋಷ್ ಸಾಹು ಎಂದು ಗುರುತಿಸಲಾಗಿದೆ.

ಈ ಘಟನೆಯು ಬಿಲಾಸ್‌ಪುರ ಜಿಲ್ಲೆಯ ವಿಜ್ಞಾನ ಕಾಲೇಜಿನಲ್ಲಿ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ನಡೆದಿದ್ದು, ಆತ ಅಲ್ಲಿ ತನ್ನ ಗೆಳೆಯರೊಂದಿಗೆ ವ್ಯಾಸಂಗ ಮಾಡುತ್ತಿದ್ದ. ಆದರೆ, ಯುವಕನ ತಂದೆಯು ಈ ಸಂಬಂಧ ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ. ಆಕಸ್ಮಿಕ ಸಾವಿನ ಕುರಿತು ಸರ್ಕಂದ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದೆ.

ಬಿಸಿಎ ವ್ಯಾಸಂಗ ಮಾಡುತ್ತಿದ್ದ ಸಾಹು ಮತ್ತು ಆತನ ಕನಿಷ್ಠ ನಾಲ್ಕು ಮಂದಿ ಗೆಳೆಯರು ಕಾಲೇಜು ಕಟ್ಟಡದ ಮೇಲೆ ಹೋಗಿದ್ದಾರೆ. ಅಲ್ಲಿಂದ ಆತ ಕಿಟಕಿಯ ಚಾವಣಿಯ ಮೇಲೆ ಇಳಿದಿದ್ದಾನೆ. ವಿಡಿಯೊದಲ್ಲಿ ಆತ ಚಾವಣಿಯ ಮೇಲೆ ಜಿಗಿಯುತ್ತಿರುವುದು ದಾಖಲಾಗಿದ್ದು, ಆತನ ಗೆಳೆಯರ ಪೈಕಿ ಒಬ್ಬ, "ನಿನ್ನ ತೂಕಕ್ಕೆ ಚಾವಣಿ ಮುರಿಯುವುದಿಲ್ಲ" ಎಂದು ಕೂಗುತ್ತಿರುವುದು ದಾಖಲಾಗಿದೆ.

ಅಷುತೋಷ್ ಸಾಹು ತನ್ನ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಬಿಲಾಸ್‌ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, "ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ಸಂದರ್ಭಗಳಲ್ಲೂ ಮುನ್ನೆಚ್ಚರಿಕೆ ಅಗತ್ಯ" ಎಂದು ಎಚ್ಚರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)