'ಡೇರ್‌ಡೆವಿಲ್ ಮುಸ್ತಫಾ' ಟೀಸರ್ ಬಿಡುಗಡೆ: ಇದು ತೇಜಸ್ವಿ ಓದುಗರೇ ನಿರ್ಮಿಸಿದ ಚಿತ್ರ
ಅಬಚೂರು ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದಾರೆ 'ಜಮಾಲ್ ಅಬ್ದುಲ್ಲಾ ಮುಸ್ತಫಾ ಹುಸೇನ್ʼ !
ಬೆಂಗಳೂರು: ಕನ್ನಡದ ಹೆಸರಾಂತ ಕತೆಗಾರ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ರಚನೆಯ 'ಡೇರ್ ಡೆವಿಲ್ ಮುಸ್ತಫಾ' ಪಾತ್ರ ಕನ್ನಡದ ಬೆಳ್ಳಿತೆರೆಯಲ್ಲಿ ಮೂಡಿ ಬರುತ್ತಿದೆ. ಹೊಸಬರ ತಂಡವೇ ಮಾಡಿರುವ ಈ ಚಿತ್ರ ಆರಂಭ ಹಂತದಿಂದಲೂ ಸಾಕಷ್ಟು ಗಮನ ಸೆಳೆಯುತ್ತಾ ಬಂದಿದ್ದು, ಇದೀಗ ಚಿತ್ರ ತಂಡವು ಸಿನೆಮಾದ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿದೆ. ಪೂರ್ಣ ಚಂದ್ರ ತೇಜಸ್ವಿ (ಪೂಚಂತೇ) ಅವರ ಓದುಗರೇ ಚಿತ್ರವನ್ನು ತಯಾರಿಸಿರುವುದು ಈ ಚಿತ್ರದ ವಿಶೇಷ.
ಇದಕ್ಕೂ ಮುನ್ನ ಚಿತ್ರದ ಮುಖ್ಯ ಕಥಾ ಪಾತ್ರ ಡೇರ್ ಡೆವಿಲ್ ಮುಸ್ತಫಾ ಯಾರು ಎಂದು ಕೇಳುವ ಪ್ರೋಮೋ ಬಿಡುಗಡೆ ಮಾಡಿದ್ದು, ಈ ಬಾರಿ ಮುಸ್ತಫಾ ಕಾಲೇಜು ಪ್ರವೇಶಾತಿಗೆ ಅರ್ಜಿ ಹಾಕುವ ಪ್ರಸಂಗದ ಬಗ್ಗೆ ಪ್ರೋಮೋ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಮುಸ್ಲಿಮರ ಬಗ್ಗೆ ಇರುವ ಹಲವು ಪೂರ್ವಗ್ರಹಗಳನ್ನು ಒಡೆದು ಹಾಕುವ ಪ್ರಯತ್ನವನ್ನು ಚಿತ್ರ ತಂಡ ಮಾಡಿದ್ದು, ಕಾಲೇಜಿನ ಪ್ರಾಂಶುಪಾಲರೇ ಹೇಗೆ ಪೂರ್ವಗ್ರಹ ಪೀಡಿತರಾಗಿರುತ್ತಾರೆ ಎನ್ನುವುದನ್ನು ವಿಡಂಬನೆ ಮೂಲಕ ಚಿತ್ರಿಸಿದ್ದಾರೆ.
ಪ್ರೋಮೋಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಕನ್ನಡದ ಚಿತ್ರರಂಗದಲ್ಲಿ ಹೊಸಬರ ಹೊಸ ಪ್ರಯತ್ನದ ಬಗೆಗೆ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಸ್ಪಂದನೆ ಲಭಿಸುತ್ತಿದೆ.
ಕಥಾನಾಯಕ ಯಾರೆಂದು ನೀವು ನೋಡಬೇಕಿದ್ದರೆ, ಡಾಲಿ ಪಿಕ್ಚರ್ಸ್ ಟ್ವಟಿರ್‌ನಲ್ಲಿರುವ ʼಮುಸ್ತಫಾ ಯಾರುʼ ಎಂಬ ಪೋಸ್ಟ್ 1000 ಬಾರಿ ರೀಟ್ವಿಟ್ ಆದರೆ, ಬಹಿರಂಗಪಡಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ, ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಚಿತ್ರತಂಡ ಬಯಸಿದಷ್ಟು ರೀ ಟ್ವಿಟ್ ಸಿಕ್ಕಿವೆ. ಅದರ ಬೆನ್ನಲ್ಲೇ ಮುಸ್ತಫಾ ಲುಕ್ ರಿವೀಲ್ ಆಗಿದೆ. ಬಿಡುಗಡೆ ದಿನಾಂಕವನ್ನು ಚಿತ್ರತಂಡವು ಇನ್ನೂ ಘೋಷಿಸಿಲ್ಲ.
ಚಿತ್ರವನ್ನು ಧನಂಜಯ್ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ವಿತರಿಸುತ್ತಿದ್ದು, ಶಶಾಂಕ್ ಸೋಘಲ್ ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ ಕೂಡಾ ಇವರೇ ಬರೆದಿದ್ದಾರೆ. ರಾಹುಲ್ ರಾಯ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಸಂಗೀತ ಮತ್ತು ಸಾಹಿತ್ಯವನ್ನು ನವನೀತ್ ಶ್ಯಾಮ್ ಮಾಡಿದ್ದಾರೆ. ಚಿತ್ರದಲ್ಲಿ, ಶಿಶಿರ್ ಬೈಕಾಡಿ, ಆದಿತ್ಯಾ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶೀತ್ ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸಹಿತ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.