ತಿಳಿ ಹಾಸ್ಯದ ಬಣ್ಣ ಹಚ್ಚಿಕೊಂಡ ‘ಪ್ರಸಂಗಗಳು’
ಕನ್ನಡ ಸಾಹಿತ್ಯ ಲೋಕದಲ್ಲಿ ಕತೆ, ಕವಿತೆ, ಲೇಖನಗಳ ಮೂಲಕ ಚರ್ಚೆಯಲ್ಲಿರುವವರು ಮುಂಬೈಯ ಗೋಪಾಲ್ ತ್ರಾಸಿ. ಮುಂಬೈ ಕನ್ನಡ ಲೋಕದ ‘ನೆಲದ ನಕ್ಷತ್ರ’ವೆಂದು ಗುರುತಿಸಲ್ಪಡುತ್ತಿರುವ ಗೋಪಾಲ್ ಅವರ ಹತ್ತನೇ ಕೃತಿ ‘ಒಟ್ರಾಸಿ ಪ್ರಸಂಗಗಳು’. ಹರಟೆಗಳೆಂದು ಕರೆಯಬಹುದಾದ ಸುಮಾರು 14 ‘ಅಧಿಕ ಪ್ರಸಂಗ’ಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಮುಂಬೈಯ ಚಲಿಸುವ ಲೋಕಲ್ ಟ್ರೇನ್‌ನ ಕಿಟಕಿಯಲ್ಲಿ ನೋಡಿದ ದೃಶ್ಯಗಳಿಗೆ ಮರು ರೂಪಕೊಟ್ಟು ಬಣ್ಣ ಬಳಿಯುವ ಕಲಾವಿದನಂತೆ, ಗೋಪಾಲ್ ತನ್ನ ದೈನಂದಿನ ಬದುಕಿನಲ್ಲಿ ಎದುರಾದ ಹಲವು ಸಣ್ಣ ಪುಟ್ಟ ಘಟನೆಗಳನ್ನು ತಿಳಿ ಹಾಸ್ಯದ ಬಣ್ಣ ಹಚ್ಚಿ ಮರು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ದಿನನಿತ್ಯ ನಾವು ಚರ್ಚಿಸುವ ರಾಜಕೀಯ, ಸಾಮಾಜಿಕ ವಿಷಯಗಳನ್ನು ವಿಡಂಬನೆಯ ಮೂಲಕ ತೀಡುವ ಪ್ರಯತ್ನ ನಡೆಸಿದ್ದಾರೆ. ಆದುದರಿಂದಲೇ, ಇಲ್ಲಿರುವ ಬರಹಗಳನ್ನು ಹರಟೆಯೆಂದು ತೀರಾ ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆಯೇ ಲಲಿತ ಪ್ರಬಂಧದ ಭಾರವನ್ನೂ ಬೆನ್ನಲ್ಲಿ ಹೊತ್ತುಕೊಂಡಿಲ್ಲ. ಮುಂಬೈಯ ಬದುಕಿನ ನಾನಾ ದರ್ಶನಗಳನ್ನು ತಿಳಿಯಾಗಿ, ಹಸನ್ಮುಖಿಯಾಗಿ ಅವರು ತೆರೆದಿಟ್ಟಿದ್ದಾರೆ.
‘ಮೇನಕೆಯಲ್ಲ...’ ಬರಹ ಸೀರೆಗೆ ಮೋಸ ಹೋದ ‘ವಿಶ್ವಾ’ಮಿತ್ರರ ಸಂಕಟಗಳನ್ನು ತಮಾಷೆಗೈದರೆ, ‘ಹೀಗೊಂದು ಕೊರೆತ’ದಲ್ಲಿ, ಮುಂಬೈ ಶಹರದಲ್ಲಿ ಕೊರೆಯುವುದನ್ನೇ ಹವ್ಯಾಸ ಮಾಡಿಕೊಂಡವರ ಕೈಗೆ ಸಿಲುಕಿಕೊಂಡಾಗ ಎದುರಾಗುವ ಧರ್ಮ ಸಂಕಟಗಳನ್ನು ತಮಾಷೆಯಾಗಿ ನಿರೂಪಿಸುತ್ತಾರೆ. ಕೆಲವೊಮ್ಮೆ ಈ ಕೊರೆತದ ಆಳದಲ್ಲಿ ಮಾನವೀಯ ಸಂಬಂಧದ ಒಸರು ಅಡಗಿಕೊಂಡಿರುವ ಬಗೆಯನ್ನು ಅವರು ಈ ಸಂದರ್ಭದಲ್ಲಿ ಮರೆಯುವುದಿಲ್ಲ. ‘ಲೈಟ್ ಕಾಫಿ’ಯ ಮೂಲಕ ಕಾಫಿಯ ಬಗೆ ಬಗೆಯನ್ನು ವಿವರಿಸುತ್ತಾ ಅದಕ್ಕೆ ತಳಕು ಹಾಕಿಕೊಂಡಿರುವ ಮನುಷ್ಯ ಗುಣಗಳನ್ನೂ ತಮಾಷೆಯಾಗಿ ನಿರೂಪಿಸುತ್ತಾರೆ. ‘ಅಭಾಕುಸಂ’ ಅಖಿಲ ಭಾರತೀಯ ಕುಡುಕರ ಸಂಸಾರ, ಬದುಕಿನ ತಾಪತ್ರಯಗಳನ್ನು ತೆರೆದಿಟ್ಟರೆ, ‘ಇದೊಂದು ಕೆಟ್ಟ ಚಟಾರಿ...’ ಬರಹದಲ್ಲಿ ಬರಹಗಾರನ ಸಂಕಟಗಳನ್ನು ತಮಾಷೆಯಾಗಿ ತೆರೆದಿಡಲಾಗಿದೆ. ಬಜೆಟ್‌ನಂತಹ ಗಂಭೀರ ವಿಷಯವನ್ನೂ ತನ್ನ ತಮಾಷೆಯ ಇಕ್ಕಳಕ್ಕೆ ಹಾಕಿ ಬಗ್ಗಿಸಿರುವುದು ಲೇಖಕರ ಹೆಚ್ಚುಗಾರಿಕೆ. ‘‘ಇಲ್ಲಿನ ಲೇಖನಗಳನ್ನು ಓದುವಾಗ ಲೇಖಕ ತ್ರಾಸಿ ಅವರ ಮೃದು ಹಾಸ್ಯ ಗುಣ, ಔಚಿತ್ಯ ಪ್ರಜ್ಞೆ, ಭಾಷಾ ಮಾಧುರ್ಯದ ಲಯ, ಪ್ರಸಂಗ ಸನ್ನಿವೇಶಗಳನ್ನು ವಿವರ ವಿವರವಾಗಿ ಕಡೆದು ಬಿಡಿಸುವ ಕಲಾವಂತಿಕೆ, ಒಂದು ಪ್ರಬುದ್ಧ ದೃಷ್ಟಿಕೋನ ಎಲ್ಲವೂ ಮನಸ್ಸಿಗೆ ತಾಕುತ್ತವೆ....’’ ಎಂದು ಮುನ್ನುಡಿಯಲ್ಲಿ ಹಿರಿಯ ಲೇಖಕ ಪ್ರೊ. ಎಂ. ಕೃಷ್ಣೇಗೌಡರು ಬರೆಯುತ್ತಾರೆ.
ಮುಂಬೈ ಚುಕ್ಕಿ ಸಂಕುಲ ಪ್ರಕಾಶನ ಈ ಕೃತಿಯನ್ನು ಹೊರ ತಂದಿದೆ. ಒಟ್ಟು ಪುಟಗಳು 102. ಕೃತಿಯ ಮುಖಬೆಲೆ 125 ರೂ. ಆಸಕ್ತರು 99302 62088 ದೂರವಾಣಿಯನ್ನು ಸಂಪರ್ಕಿಸಬಹುದು.