varthabharthi


ವಿಶೇಷ-ವರದಿಗಳು

ಜಾಗತಿಕ ಬ್ಯಾಂಕ್ ಬಿಕ್ಕಟ್ಟಿನ ನಡುವೆ ನಿಮ್ಮ ಹಣ ಎಷ್ಟು ಸುರಕ್ಷಿತ

ವಾರ್ತಾ ಭಾರತಿ : 19 Mar, 2023
ಜಾರ್ಜ್ ಮ್ಯಾಥ್ಯೂ

ಜಾಗತಿಕ ಬ್ಯಾಂಕಿಂಗ್ ಕ್ಷೇತ್ರವು ಪ್ರಕ್ಷುಬ್ಧತೆಯಲ್ಲಿದೆ. ಈಗ ಪ್ರಕ್ಷುಬ್ಧತೆಯು ಅಮೆರಿಕದಿಂದ ಯುರೋಪ್‌ಗೆ ಹರಡುತ್ತಿದ್ದು, ಭಾರತ ಸೇರಿದಂತೆ ಇತರ ರಾಷ್ಟ್ರಗಳ ಮೇಲೂ ಪರಿಣಾಮಗಳ ಬಗ್ಗೆ ಆತಂಕಗಳು ಹೆಚ್ಚುತ್ತಿವೆ.
ಶೇರು ಮಾರುಕಟ್ಟೆಗಳು, ಕರೆನ್ಸಿಗಳು ಮತ್ತು ಬಾಂಡ್‌ಗಳಲ್ಲಿ ಆತಂಕ ಗೋಚರಿಸುತ್ತಿದ್ದು, ಭಾರತದಂತಹ ದೇಶಗಳ ಮೇಲೆ ಪರಿಣಾಮವು ಪರೋಕ್ಷ ಮತ್ತು ಬಹುಮುಖಿಯಾಗಿದೆ. ಬ್ಯಾಂಕ್ ಶೇರುಗಳಲ್ಲಿ ಕುಸಿತದಿಂದಾಗಿ ಹೂಡಿಕೆದಾರರು ಚಿಂತಿತರಾಗಿದ್ದರೆ ಬಾಂಡ್ ಇಳುವರಿಗಳಲ್ಲಿ ಕುಸಿತವು ಬಾಂಡ್ ಹೂಡಿಕೆದಾರರಿಗೆ, ಮುಖ್ಯವಾಗಿ ಬ್ಯಾಂಕುಗಳಿಗೆ ನಷ್ಟವನ್ನುಂಟು ಮಾಡಿದೆ. ಪರಸ್ಪರ ಸಂಬಂಧ ಹೊಂದಿರುವ ಆರ್ಥಿಕ ಜಗತ್ತಿನಲ್ಲಿ ಬ್ಯಾಂಕುಗಳು, ಶೇರುಗಳು ಮತ್ತು ಬಾಂಡ್‌ಗಳಲ್ಲಿಯ ನಿಮ್ಮ ಹಣ ಎಷ್ಟು ಸುರಕ್ಷಿತವಾಗಿದೆ?

ಏನಿದು ಬಿಕ್ಕಟ್ಟು?

ಅಮೆರಿಕದಲ್ಲಿ ಬಡ್ಡಿದರಗಳಲ್ಲಿ 450 ಮೂಲ ಅಂಕಗಳಷ್ಟು ಏರಿಕೆಯಾದ ಬಳಿಕ ಬಾಂಡ್ ಮಾರುಕಟ್ಟೆಯ ಪ್ರಕ್ಷುಬ್ಧತೆಯು ತೊಂದರೆಯ ಮೂಲವಾಗಿದೆ. ಸ್ಟಾರ್ಟ್‌ಅಪ್‌ಗಳಿಗೆ ದೊಡ್ಡ ಸಾಲಗಳನ್ನು ನೀಡುತ್ತಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಇದಕ್ಕೆ ಬಲಿಯಾಯಿತು. ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದವು ಮತ್ತು ಈ ಎಲ್ಲ ಹಣವನ್ನು ಎಸ್‌ವಿಬಿಯಲ್ಲಿ ಠೇವಣಿ ಮಾಡಲಾಗಿತ್ತು. 2020 ಮತ್ತು 2021ರಲ್ಲಿ ಬ್ಯಾಂಕಿನ ಠೇವಣಿಗಳಲ್ಲಿ 90 ಶತಕೋಟಿ ಡಾ.ಗಳಷ್ಟು ಏರಿಕೆಯಾಗಿತ್ತು.

ಆದರೆ ಬ್ಯಾಂಕುಗಳು ಸಾಲಗಳನ್ನು ನೀಡುವ ಮೂಲಕ ಲಾಭ ಗಳಿಸಬೇಕು. ಎಸ್‌ವಿಬಿಯ ಗ್ರಾಹಕ ವರ್ಗದಲ್ಲಿ ಕ್ಯಾಲಿಫೋರ್ನಿಯಾದ ಟೆಕ್ ಸ್ಟಾರ್ಟ್‌ಅಪ್‌ಗಳು ಪ್ರಮುಖವಾಗಿದ್ದು, ಅವು ಈಗಾಗಲೇ ಸಾಕಷ್ಟು ನಗದು ರಾಶಿಯ ಮೇಲೆ ಕುಳಿತಿದ್ದು ಅವುಗಳಿಗೆ ಸಾಲದ ಅಗತ್ಯವಿರಲಿಲ್ಲ. ಹೀಗಾಗಿ ಎಸ್‌ವಿಬಿ 2021ರಲ್ಲಿ ಸುಮಾರು 88 ಶತಕೋಟಿ ಡಾ.ಗಳನ್ನು ಅಡಮಾನ-ಬೆಂಬಲಿತ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿತ್ತು. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುತ್ತಿದ್ದಂತೆ ಈ ಬಾಂಡ್‌ಗಳ ವೌಲ್ಯ ಕುಸಿಯಿತು ಮತ್ತು ಎಸ್‌ವಿಬಿಯ ಬಂಡವಾಳ ತಳಹದಿಯೂ ಕುಸಿಯಿತು ಎಂದು ಅಮೆರಿಕ ಹೆಜ್ ಫಂಡ್ ಹೆಡೆನೋವಾದ ಸಿಐಒ ಸುಮನ್ ಬ್ಯಾನರ್ಜಿಯವರು ಅಭಿಪ್ರಾಯಿಸಿದ್ದಾರೆ.

ಎಸ್‌ವಿಬಿಯ ಪತನವು ಸಿಗ್ನೇಚರ್ ಬ್ಯಾಂಕಿನ ವೈಫಲ್ಯಕ್ಕೆ ಕಾರಣವಾಯಿತು ಮತ್ತು ಬ್ಯಾಂಕಿಂಗ್ ಪ್ರಕ್ಷುಬ್ಧತೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಇದರ ಬೆನ್ನಿಗೆ ಬುಧವಾರ (ಮಾ.15) ಕ್ರೆಡಿಟ್ ಸ್ವೀಸ್‌ನ ಶೇರುಗಳ ವೌಲ್ಯ ರಾತ್ರೋರಾತ್ರಿ ಶೇ.24ರಷ್ಟು ಕುಸಿದಿದ್ದು,ಗುರುವಾರ ಸ್ವಿಸ್ ಸೆಂಟ್ರಲ್ ಬ್ಯಾಂಕಿನ ಮಧ್ಯಪ್ರವೇಶದ ಬಳಿಕ ಚೇತರಿಸಿಕೊಂಡಿದೆ.

ಭಾರತದ ಮೇಲೆ ಪರಿಣಾಮವೇನು?
ಸ್ಟಾರ್ಟ್‌ಅಪ್‌ಗಳು: ಬೆಂಗಳೂರು ಮೂಲದ ಅನೇಕ ಸ್ಟಾರ್ಟ್‌ಅಪ್‌ಗಳು ತಮ್ಮ ಸಾಗರೋತ್ತರ ಖಾತೆಗಳನ್ನು ಎಸ್‌ವಿಬಿಯಲ್ಲಿ ಹೊಂದಿದ್ದವು. ಎಸ್‌ವಿಬಿಯನ್ನು ಫೆಡರಲ್ ನಿಯಂತ್ರಣಕ್ಕೆ ಒಳಪಡಿಸಲಾಗಿದ್ದರಿಂದ ತಮ್ಮ ಬ್ಯಾಂಕ್ ಠೇವಣಿಗಳನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮಾ.10ರಂದು ಹೆಚ್ಚಿನ ಸ್ಟಾರ್ಟ್‌ಅಪ್‌ಗಳ ಅರಿವಿಗೆ ಬಂದಿತ್ತು.
ವಿಮೆ ರಕ್ಷಣೆ 2,50,000 ಡಾ.ಗಳವರೆಗಿನ ಠೇವಣಿಗಳಿಗೆ ಸೀಮಿತವಾಗಿದ್ದರಿಂದ 170 ಶತಕೋಟಿ ಡಾಲರ್ ಠೇವಣಿಗಳ ''ಶೇ.96ಕ್ಕೂ ಅಧಿಕ ಮೊತ್ತ ಫೆಡರಲ್ ಠೇವಣಿ ವಿಮೆ ರಕ್ಷಣೆಯನ್ನು ಹೊಂದಿರಲಿಲ್ಲ. ಸಂಸ್ಥಾಪಕರು,ಮುಖ್ಯ ಹಣಕಾಸು ಅಧಿಕಾರಿಗಳು ಮತ್ತು ವಿಸಿ (ವೆಂಚರ್ ಕ್ಯಾಪಿಟಲ್ ಸಂಸ್ಥೆ)ಗಳು ವಾರಾಂತ್ಯವನ್ನು ಆತಂಕದಲ್ಲಿಯೇ ಕಳೆದಿದ್ದರು. ಠೇವಣಿದಾರರ ಸುರಕ್ಷತೆಗಾಗಿ ಮತ್ತು ಹಣಕಾಸು ವ್ಯವಸ್ಥೆ ಕುಸಿತವನ್ನು ತಡೆಯಲು ಅಮೆರಿಕ ಸರಕಾರ ಮತ್ತು ಫೆಡರಲ್ ರಿಸರ್ವ್ ಮಧ್ಯ ಪ್ರವೇಶಿಸಬೇಕಾಯಿತು. ಸ್ಪಷ್ಟವಾಗಿ, ಎಲ್ಲ ಬ್ಯಾಂಕುಗಳು ನಾವು ಗ್ರಹಿಸಿದಷ್ಟು ಸುರಕ್ಷಿತವಾಗಿಲ್ಲ. ಎಲ್ಲ ಹಣವನ್ನು ಬ್ಯಾಂಕಿನಲ್ಲಿಡುವುದು ಅಪಾಯಕಾರಿಯಾಗುತ್ತದೆ'' ಎಂದು ಕ್ವಾಂಟಮ್ ಮ್ಯೂಚುವಲ್ ಫಂಡ್‌ನ ಫಂಡ್ ಮ್ಯಾನೇಜರ್ ಪಂಕಜ ಪಾಠಕ್ ಹೇಳಿದ್ದಾರೆ.

ಮಾರುಕಟ್ಟೆಗಳಿಗೆ ಹೊಡೆತ:
ಎರಡು ಬ್ಯಾಂಕುಗಳ ಕುಸಿತ ಭಾರತೀಯ ಬ್ಯಾಂಕುಗಳ ಮೇಲೆ ವ್ಯವಸ್ಥಿತ ಪರಿಣಾಮವನ್ನು ಬೀರಲಿಲ್ಲವಾದರೂ ಬಿಕ್ಕಟ್ಟು ಭಾರತದಲ್ಲಿ ಬ್ಯಾಂಕ್ ಶೇರುಗಳ ಮೇಲೆ ಪರಿಣಾಮವನ್ನುಂಟು ಮಾಡಿದೆ. ಎಲ್ಲಿಯೇ ಆದರೂ ದೊಡ್ಡ ಬ್ಯಾಂಕೊಂದರ ವೈಫಲ್ಯವು ವಿಶ್ವಾದ್ಯಂತ ಸಾಂಕ್ರಾಮಿಕ ಪರಿಣಾಮವನ್ನುಂಟು ಮಾಡಬಹುದು ಎಂದು ಠೇವಣಿದಾರರು ಮತ್ತು ಹೂಡಿಕೆದಾರರು ಭೀತಿಗೊಳಗಾಗಿದ್ದಾರೆ. ''ಅಮೆರಿಕದಲ್ಲಿ ಎಸ್‌ವಿಬಿ ಬ್ಯಾಂಕಿನ ಪತನವು ಭಾರತೀಯ ಮಾರುಕಟ್ಟೆಗಳಲ್ಲಿಯ ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮವನ್ನುಂಟು ಮಾಡಿದೆ'' ಎಂದು ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಚೀಫ್ ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿಸ್ಟ್ ವಿ.ಕೆ.ವಿಜಯಕುಮಾರ್ ಹೇಳಿದ್ದಾರೆ. ಗುರುವಾರದ ವೇಳೆಗೆ ಸೆನ್ಸೆಕ್ಸ್ ಒಂದು ವಾರದಲ್ಲಿ ಶೇ.3.63ರಷ್ಟು ಇಳಿಕೆಯಾಗಿತ್ತು.

ಬಾಂಡ್ ಇಳುವರಿ ಕುಸಿತ:
  ಬಡ್ಡಿದರಗಳಲ್ಲಿ ಏರಿಕೆಯು ಬಾಂಡ್ ಮಾರುಕಟ್ಟೆಯಲ್ಲಿ ಸಮಸ್ಯೆಗಳಿಗೆ ಕಾರಣವಾಗಿದೆ. 10 ವರ್ಷಗಳ ಸರಕಾರಿ ಬಾಂಡ್‌ಗಳು ಮಾ.13ಕ್ಕೆ ಇದ್ದಂತೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ 11 ಮೂಲ ಅಂಕಗಳಷ್ಟು ಕುಸಿತ ಕಂಡಿವೆ. ಐದು ವರ್ಷಗಳ ಬಾಂಡ್‌ಗಳೂ ಕುಸಿತವನ್ನು ಕಂಡಿವೆ.
ಮಾರುಕಟ್ಟೆಯಲ್ಲಿ ಬಡ್ಡಿದರಗಳು ಏರಿಕೆಯಾದರೆ ಹೂಡಿಕೆದಾರರು ಹಳೆಯ ಬಾಂಡ್‌ಗಳನ್ನು ಖರೀದಿಸುವುದಿಲ್ಲ, ಹೆಚ್ಚಿನ ಬಡ್ಡಿದರದೊಂದಿಗೆ ಬರುವ ಹೊಸ ಬಾಂಡ್‌ಗಳನ್ನು ಖರೀದಿಸುತ್ತಾರೆ. ಪರಿಣಾಮವಾಗಿ ನಿಮ್ಮ ಬಾಂಡ್‌ನ ಇಳುವರಿಯನ್ನು ಹೆಚ್ಚಿಸಲು ಅದರ ಬೆಲೆಯನ್ನು ತಗ್ಗಿಸಬೇಕಾಗುತ್ತದೆ. ಬೆಲೆಗಳು ತಗ್ಗಿಸಲ್ಪಟ್ಟಾಗ ಕಡಿಮೆ ಮುಖಬೆಲೆಯಿಂದಾಗಿ ಕೂಪನ್ ದರವು ಹೆಚ್ಚುತ್ತದೆ, ತನ್ಮೂಲಕ ಬಾಂಡ್ ಇಳುವರಿ ಹೆಚ್ಚಾಗುತ್ತದೆ.

ಠೇವಣಿದಾರರ ಹಣ ಸುರಕ್ಷಿತವೇ? 
ಅಮೆರಿಕದಲ್ಲಿ ಬ್ಯಾಂಕ್ ಠೇವಣಿಗಳಲ್ಲಿ ಬಹುದೊಡ್ಡ ಭಾಗವು ಕಾರ್ಪೊರೇಟ್ ಸಂಸ್ಥೆಗಳದ್ದಾಗಿರುತ್ತದೆ, ಆದರೆ ಭಾರತದಲ್ಲಿ ಕೌಟುಂಬಿಕ ಉಳಿತಾಯಗಳು ಬ್ಯಾಂಕ್ ಠೇವಣಿಗಳಲ್ಲಿ ದೊಡ್ಡ ಪಾಲನ್ನು ಹೊಂದಿವೆ. ಇಂದು ಹೆಚ್ಚಿನ ಠೇವಣಿಗಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿವೆ ಮತ್ತು ಉಳಿದ ಠೇವಣಿಗಳು ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆ್ಯಕ್ಸಿಸ್‌ನಂತಹ ಅತ್ಯಂತ ಪ್ರಬಲ ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿವೆ. ಹೀಗಾಗಿ ಗ್ರಾಹಕರು ತಮ್ಮ ಠೇವಣಿಗಳ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಬ್ಯಾಂಕುಗಳು ಯಾವುದೇ ಸಮಸ್ಯೆಯನ್ನು ಎದುರಿಸಿದಾಗೆಲ್ಲ ಸರಕಾರವು ಅವುಗಳ ನೆರವಿಗೆ ಧಾವಿಸಿದೆ ಎಂದು ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈಗ ಬಡ್ಡಿದರಗಳು ಹೆಚ್ಚುತ್ತಿರುವುದರಿಂದ ಉಳಿತಾಯದಾರರು ಬ್ಯಾಂಕ್ ಠೇವಣಿಗಳತ್ತ ಗಮನ ಹರಿಸುತ್ತಿದ್ದಾರೆ. ಅನೇಕ ಬ್ಯಾಂಕುಗಳು 15 ತಿಂಗಳುಗಳ ಅವಧಿಯ ಠೇವಣಿಗಳ ಮೇಲೆ ವಾರ್ಷಿಕ ಶೇ.7ಕ್ಕೂ ಅಧಿಕ ಬಡ್ಡಿ ನೀಡುತ್ತಿವೆ. ಒಂದು ವರ್ಷದ ಅವಧಿಯ ಠೇವಣಿಯ ಮೇಲೆ ಕಳೆದ ವರ್ಷ ಕೇವಲ ಶೇ.4.4 ಬಡ್ಡಿಯನ್ನು ನೀಡುತ್ತಿದ್ದ ಎಸ್‌ಬಿಐ ಈಗ ಶೇ.6.98ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಭಾರತದಲ್ಲಿ ಐದು ಲ.ರೂ.ವರೆಗಿನ ಠೇವಣಿಗಳು ವಿಮೆ ರಕ್ಷಣೆಯನ್ನು ಹೊಂದಿವೆ, ಅಂದರೆ ಓರ್ವ ವ್ಯಕ್ತಿ ಬ್ಯಾಂಕಿನಲ್ಲಿ 50 ಲ.ರೂ.ಗಳ ಠೇವಣಿಯನ್ನು ಹೊಂದಿದ್ದರೆ ಬ್ಯಾಂಕು ವಿಫಲಗೊಂಡ ಸಂದರ್ಭದಲ್ಲಿ ಕೇವಲ ಐದು ಲ.ರೂ.ಗಳನ್ನು ಮರಳಿ ಪಡೆಯುತ್ತಾನೆ. ಆದರೂ, ಕಳೆದ ಕೆಲವು ವರ್ಷಗಳಲ್ಲಿ ಎಲ್‌ವಿಬಿ, ಪಿಎಂಸಿ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ನಂತಹ ಕೆಲವು ಖಾಸಗಿ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ಠೇವಣಿದಾರರ ಹಿತರಕ್ಷಣೆಗಾಗಿ ಸರಕಾರ ಮತ್ತು ಆರ್‌ಬಿಐ ಮಧ್ಯ ಪ್ರವೇಶಿಸಿದ್ದವು.

2022, ಡಿ.22ರಂದು ಬಿಡುಗಡೆಗೊಂಡ ಆರ್‌ಬಿಐನ ಹಣಕಾಸು ಸ್ಥಿರತೆ ವರದಿಯು ಜಾಗತಿಕ ಬಿಕ್ಕಟ್ಟುಗಳು ಮತ್ತು ಹಣಕಾಸು ಮಾರುಕಟ್ಟೆ ಏರಿಳಿತ ಗಳಿಂದ ಅಪಾಯವು ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಂಡಿದೆ ಎಂದು ಎಚ್ಚರಿಕೆಯನ್ನು ನೀಡಿದೆ. ಆದರೂ, ವಾಣಿಜ್ಯ ಬ್ಯಾಂಕ್‌ಗಳು ಉತ್ತಮ ಬಂಡವಾಳವನ್ನು ಹೊಂದಿವೆ ಮತ್ತು ಮಧ್ಯಸ್ಥಗಾರರಿಂದ ಯಾವುದೇ ಹೊಸ ಬಂಡವಾಳ ಹೂಡಿಕೆಯ ಅನುಪಸ್ಥಿತಿಯಲ್ಲಿಯೂ ಸ್ಥೂಲ ಆರ್ಥಿಕ ಆಘಾತಗಳನ್ನು ತಡೆದುಕೊಳ್ಳಲು ಸಮರ್ಥವಾಗಿವೆ ಎಂದೂ ವರದಿಯು ಹೇಳಿದೆ.

ಕೃಪೆ: : indianexpress.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)