varthabharthi


ಮನೋ ಚರಿತ್ರ

ಮನದ ಮಣ್ಣಲ್ಲಿ ಮೊಳಕೆಯೊಡೆದ ದೈವ

ವಾರ್ತಾ ಭಾರತಿ : 19 Mar, 2023
ಯೋಗೇಶ್ ಮಾಸ್ಟರ್

ಮಗುತನ ಎಂಬುದಿದೆಯಲ್ಲಾ, ಅದು ಎಲ್ಲಾ ವಯಸ್ಕರಲ್ಲಿಯೂ ಹಲವಾರು ರೂಪಗಳಲ್ಲಿ ಇರುತ್ತದೆ. ಮುಗ್ಧತೆಯ ರೂಪದಲ್ಲಿ, ಹಟದ ರೂಪದಲ್ಲಿ, ದಡ್ಡತನದ ರೂಪದಲ್ಲಿ, ಅಸಹಾಯಕತನದ ರೂಪದಲ್ಲಿ, ಅವಲಂಬನದ ರೂಪದಲ್ಲಿ; ಹೀಗೆ, ವ್ಯಕ್ತಿಯ ಮಗುತನದ ಹಲವಾರು ಗುಣಗಳು ಅವರೆಷ್ಟೇ ವಯಸ್ಕರಾದರೂ ಅವರೊಳಗೆ ಇದ್ದೇ ಇರುತ್ತದೆ. ಅದು ಮನೋವೈಜ್ಞಾನಿಕವಾಗಿರುವಂತಹ ವಿಷಯ. ವ್ಯಕ್ತಿಯು ತನ್ನ ಬಾಲ್ಯದಲ್ಲಿ ಹೊಂದಿದ್ದ ಆಸೆ, ಕಲ್ಪನೆ, ಭಯ, ಭ್ರಮೆ, ನಿರೀಕ್ಷೆ, ಅಸಹನೆ, ಕೋಪ ಇತ್ಯಾದಿಗಳೆಲ್ಲಾ ವಯಸ್ಕನಾಗುತ್ತಿದ್ದಂತೆ ಹೋಗಿಬಿಡುವುದಿಲ್ಲ. ಅವು ಹೇಗೆ ಹೋಗಲು ಸಾಧ್ಯ? ಮನಸ್ಸಿನ ಹಸನಾದ ಮಣ್ಣಲ್ಲಿ ಬಿದ್ದಂತಹ ಬೀಜಗಳು ಹಾಗೆಲ್ಲಾ ಹೋಗುವುದೂ ಇಲ್ಲ. ಅವು ತಮ್ಮ ಸ್ವರೂಪಗಳನ್ನು ಬದಲಿಸಿಕೊಳ್ಳುತ್ತಿರುತ್ತವೆ ಅಥವಾ ಹೀಗೆ ಹೇಳಬಹುದು; ತಮ್ಮ ಹಿಡಿತದಲ್ಲಿರುವ ವಸ್ತುಗಳನ್ನು ಬದಲಿಸಿಕೊಳ್ಳುತ್ತಿರುತ್ತವೆ, ಆದರೆ ವಸ್ತುವನ್ನು ಮಾತ್ರ ಹಿಡಿದೇ ಇರುತ್ತವೆ ಎಂದು. ಮನಸ್ಸೂ ಕೂಡಾ ತನ್ನ ಧೋರಣೆ ಮತ್ತು ಚಿಂತನೆಯ ಹಿಡಿತದಲ್ಲಿರುವ ವಿಷಯಗಳನ್ನು ಬದಲಿಸಿಕೊಳ್ಳುತ್ತಿರುತ್ತದೆ. ಆದರೆ ಧೋರಣೆ ಮತ್ತು ಆಲೋಚನೆಯನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿರುತ್ತದೆ. ಆ ಧೋರಣೆ ಮತ್ತು ಆಲೋಚನೆಗಳ ಪ್ರೇರಕ ಭಾವಗಳೆಂದರೆ ಆಸೆ ಮತ್ತು ಭಯ. ಇಷ್ಟ, ಒಪ್ಪಿಗೆ, ನಿರಾಕರಣೆಗಳೇ ಮೊದಲಾದವು ಅವುಗಳನ್ನು ಉಪಚರಿಸುವ ಬಗೆಗಳು. ಭ್ರಮೆ, ಕಲ್ಪನೆ ಮತ್ತು ಚಿತ್ರಿಸಿಕೊಳ್ಳುವ ಸಾಮರ್ಥ್ಯ; ಇತ್ಯಾದಿಗಳೆಲ್ಲಾ ಆ ವಿಷಯಗಳನ್ನು ಗ್ರಹಿಸುವ ಬಗೆಗಳಾಗಿರುತ್ತವೆ. ಹಾಗೆಯೇ ಕೋಪ, ಸಂತೋಷ, ಅಸಹನೆ, ಬೇಸರ ಇತ್ಯಾದಿಗಳು ಅವುಗಳಿಂದ ಉಂಟಾಗಿರುವ ಪರಿಣಾಮಗಳಾಗಿರುತ್ತವೆ.

ಈಗ ಇಷ್ಟು ತಿಳಿಯೋಣ. ಮಗು ತನ್ನಲ್ಲಿ ಉಂಟಾಗುವ ಆಸೆ ಮತ್ತು ಭಯದ ಕಾರಣಗಳಿಂದಾಗಿ ಕೆಲವು ವಸ್ತು ಅಥವಾ ವಿಷಯಗಳನ್ನು ಗಮನಕ್ಕೆ ತಂದುಕೊಳ್ಳುತ್ತದೆ. ಹಾಗೆ ಗಮನಕ್ಕೆ ತಂದುಕೊಂಡ ವಿಷಯಗಳನ್ನು ವಿವಿಧ ಸಮಯಗಳಲ್ಲಿ, ವಿವಿಧ ರೀತಿಗಳಲ್ಲಿ ಒಪ್ಪುವುದೋ, ನಿರಾಕರಿಸುವುದೋ, ಅರೆಮನಸ್ಸಿನಲ್ಲಿ ಉಪಚರಿಸುವುದೋ; ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅವನ್ನು ತನ್ನ ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತದೆ. ಬೇಸರ, ದುಃಖ, ಭಯ, ಅಭದ್ರತೆಯ ಭಾವನೆ, ಅಧೀನದಲ್ಲಿರುವಂತಹ ಒತ್ತಡದ ಭಾವನೆ, ನಿರಾಸೆಯೇ ಮೊದಲಾದವುಗಳಿಂದ ನಕಾರಾತ್ಮಕವಾದ ಪರಿಣಾಮಗಳು ಉಂಟಾಗಿ, ಅವುಗಳ ಪ್ರಭಾವಗಳಿಂದ ಉಂಟಾಗುವ ಮನೋಭಾವವೂ ನಕಾರಾತ್ಮಕವಾಗಿರುತ್ತದೆ. ಹಾಗೆಯೇ ಸಂತೋಷ, ತೃಪ್ತಿ, ಭದ್ರತೆಯ ಭಾವನೆ, ಮುಕ್ತವಾಗಿರುವಂತಹ ಭಾವನೆಯೇ ಮೊದಲಾದವುಗಳಿಂದ ಸಕಾರಾತ್ಮಕವಾದ ಭಾವನೆಗಳು ಉಂಟಾಗುತ್ತದೆ. ಯಾವುದೇ ಬಗೆಯ ಮನೋಭಾವಗಳು ದೀರ್ಘಕಾಲ ನಿಂತರೆ ಮತ್ತು ಚಟುವಟಿಕೆಯಲ್ಲಿದ್ದು ಜೀವಂತವಾಗಿ ದ್ದರೆ ಅದೇ ಮಗುವಿನ ಮನಸ್ಥಿತಿಯಾಗಿ ರೂಪುಗೊಳ್ಳುತ್ತದೆ. ಇಷ್ಟಾಯ್ತಾ? ಇನ್ನು ಮಗುವಿನ ಪರಿಸ್ಥಿತಿಯ ಬಗ್ಗೆ ಗಮನಿಸೋಣ. ಮಗುವಿನ ಅಗತ್ಯಗಳನ್ನು ಪೂರೈಸುವ ಹೊಣೆಗಾರಿಕೆ ಅದರ ಪಾಲಕರು ಹೊತ್ತುಕೊಳ್ಳುತ್ತಾರೆ. ಅವರು ಯಾರು ಬೇಕಾದರೂ ಆಗಿರಬಹುದು. ಮಗುವಿನ ಜೊತೆಗೆ ಇರುವ ಸಂಬಂಧ ಮುಖ್ಯವಲ್ಲ. ವಾಸ್ತವವಾಗಿ, ಅದರ ಆಹಾರ, ನೀರು, ಬಟ್ಟೆ, ಆಶ್ರಯ; ಇತ್ಯಾದಿ ಮೂಲಭೂತ ಅಗತ್ಯಗಳೊಂದಿಗೆ ಮಗುವು ಎಂದಿಗೂ ತೃಪ್ತಿಯನ್ನು ಹೊಂದುವುದಿಲ್ಲ. ಅದಕ್ಕೆ ಅಗತ್ಯ ಮತ್ತು ಆಸೆ ಎಂಬುದರ ವ್ಯತ್ಯಾಸ ಗೊತ್ತಿರುವುದಿಲ್ಲ.

ಅದರ ಆಸೆಗಳಿಗೆ ಅನೇಕ ಪ್ರೇರಣೆಗಳು ಇರುತ್ತವೆ. ಉದಾಹರಣೆಗೆ ಬಣ್ಣಬಣ್ಣದಾಗಿ ಕಾಣುವ ಗಿಲಿಕಿಯನ್ನು ಹಿಡಿದುಕೊಳ್ಳಲು ಯತ್ನಿಸುತ್ತದೆ. ಕಾಣಲು ಆಕರ್ಷಕವಾಗಿರುವುದು ಮತ್ತು ಹಿಡಿದು ಆಡಿಸಿದಾಗ ಸದ್ದು ಮಾಡುವುದು. ಆಕರ್ಷಣೆ ಮತ್ತು ಕುತೂಹಲಗಳಿರುವಂತಹ ವಿಷಯಗಳಿಗೆ ಮನಸೋಲುವ ಮಗು ಅವೆಲ್ಲವನ್ನೂ ಹೊಂದಲು ಇಷ್ಟಪಡುತ್ತದೆ. ಆದರೆ ಮಗುವಿಗೆ ಅದನ್ನು ತನಗೆ ತಾನೇ ಒದಗಿಸಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಅದು ದೊಡ್ಡವರ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಪರಾವಲಂಬನೆ ಮಗುವಿನ ಅತ್ಯಂತ ಸಹಜವಾದ ಗುಣ. ತಾನು ಆಧರಿಸಿರುವ ಹಿರಿಯರನ್ನು ಅದು ಕೇಳುವುದು, ಕೆಲವೊಮ್ಮೆ ದೊರೆಯುವುದು, ಕೆಲವೊಮ್ಮೆ ದೊರೆಯುವುದಿಲ್ಲ. ಏನೇ ಆದರೂ ಅದು ಹಿರಿಯರ ಮೂಲಕವೇ ತನ್ನ ಇಚ್ಛೆಯನ್ನು ಪೂರೈಸಿಕೊಳ್ಳಬೇಕು. ಹಾಗಾಗಿಯೇ ಆ ಮಗುವಿನ ದೃಷ್ಟಿಯಲ್ಲಿ ತನ್ನ ಹಿರಿಯರು ಹೆಚ್ಚೂಕಡಿಮೆ ಸರ್ವಶಕ್ತರು, ಸರ್ವಜ್ಞರು. ತನ್ನ ಪಾಲಕರ ವಿದ್ಯಾಭ್ಯಾಸ, ಕಲಿಕೆಯ ಮಟ್ಟ, ಗ್ರಹಿಕೆಯ ಮಟ್ಟ, ಅವರಿಗಿರುವ ಜ್ಞಾನಾರ್ಹತೆ, ಅರಿವು; ಇವುಗಳಾವುದನ್ನೂ ಅದು ತಿಳಿದಿರುವುದಿಲ್ಲ. ಹಾಗೆ ತನ್ನ ಪ್ರಶ್ನೆಗೆ ಉತ್ತರಿಸುವವರಿಗೆ ಇಂತಹ ಅರ್ಹತೆಗಳಿರಬೇಕು, ಮಾನದಂಡಗಳಿರಬೇಕು ಎಂದೂ ಅದಕ್ಕೆ ತಿಳಿದಿರುವುದಿಲ್ಲ.

ಸುಮ್ಮನೆ ನಂಬಿರುತ್ತದೆ, 'ಇವರಿಗೆ ಎಲ್ಲಾ ಗೊತ್ತು' ಅಂತ. ಹಾಗಾಗಿ ಬರಿದೇ ವಿಶ್ವಾಸದಿಂದ ಅದು ಕೇಳುತ್ತದೆ. ಅವರು ಹೇಳುವುದು ಸರಿಯೋ ತಪ್ಪೋ ಅದನ್ನೂ ನೋಡುವುದಿಲ್ಲ. ಸರಿ ಎಂದೇ ಮಗು ಭಾವಿಸುತ್ತದೆ. ತುಲನೆ ಮಾಡಿ ನೋಡಲು ವಸ್ತು ಮತ್ತು ವಿಷಯಗಳು ಅದರ ಮಟ್ಟಕ್ಕೆ ಒದಗುವುದು ಅಷ್ಟೇನು ಸುಲಭವಲ್ಲ. ಮಗುವಿನ ಮನಸ್ಸಿನ ಮಣ್ಣು ಬಹಳ ಫಲವತ್ತಾಗಿಯೂ ಇರುವುದರಿಂದ ಮತ್ತು ತುಲನಾತ್ಮಕ ದೃಷ್ಟಿ ಇಲ್ಲದಿರುವುದರಿಂದ ಹಿರಿಯರ ಮೂಲಕ ಬಂದಂತಹ ವಿಷಯಗಳನ್ನು ಸ್ವೀಕರಿಸುತ್ತದೆ. ಅವರ ಬಗ್ಗೆ ಇರುವಂತಹ ತನ್ನ ಧೋರಣೆ ಹಾಗೂ ನಿಲುವುಗಳನ್ನು ಗಟ್ಟಿಯಾಗಿಯೇ ಬಿತ್ತಿಕೊಳ್ಳುತ್ತದೆ. ಇದೂ ಒಂದು ಮಗುತನದ ಗುಣ. ಮಗುವಿನ ಈ ಗುಣವೇ, ಪರಾವಲಂಬತನದ ಸ್ವಭಾವವೇ ದೈವೀಭಕ್ತಿಯ ಅಡಿಪಾಯ. ಮಗುವು ತನ್ನ ಹಿರಿಯರಲ್ಲಿ ತನಗೆ ಬೇಕಾದ್ದನ್ನು ಕೇಳುವುದೇ ಪ್ರಾರ್ಥನೆ. ದೇವರು ಪೋಷಕರ ವಿರಾಟ್ ರೂಪ.

ದೈವಾರಾಧನೆ ಮತ್ತು ಪ್ರಾರ್ಥನೆಗೆ ಮಗುವಿನ ಮನಸ್ಥಿತಿ ಮತ್ತು ಪರಿಸ್ಥಿತಿಗಳೇ ಮೂಲ ಸೆಲೆ. ಈ ಮನಸ್ಥಿತಿ ಮತ್ತು ಪರಿಸ್ಥಿತಿಗಳು ಬರಿಯ ವ್ಯಕ್ತಿಗತವಾಗಿ ಮಾತ್ರವಲ್ಲ, ಸಾಮೂಹಿಕವಾಗಿಯೂ ಇತ್ತು ಮತ್ತು ಇವೆ. ಆದಿಮ ಕಾಲದಲ್ಲಿ ಗುಂಪುಗಳ ಸಂಕಲಿತ ಮನಸ್ಥಿತಿಯೂ ಕೂಡಾ ಹೀಗೇ ಇದ್ದದ್ದು. ತಮ್ಮ ಆಸೆಯನ್ನು ಪೂರೈಸಿಕೊಳ್ಳಲು, ತಮ್ಮ ಭಯವನ್ನು ನಿವಾರಿಸಿಕೊಳ್ಳಲು ಅವರು ಪಡುತ್ತಿದ್ದ ಪಾಡುಗಳ ತೀವ್ರತೆಯ ಮೇಲೆ ದೇವರ ಪರಿಕಲ್ಪನೆ ಕೂಡ ಗಾಢವಾಗುತ್ತಿತ್ತು. ಒಟ್ಟಾರೆ ಹೀಗೆಂದುಕೊಳ್ಳೋಣ, ಮಗುವೊಂದು ತಾನು ಆಧರಿಸಿರುವ ಹೆತ್ತವರ ಅಥವಾ ಪೋಷಕರ ಅಥವಾ ಪಾಲಕರ ಮೇಲಿನ ಪರಾವಲಂಬತನ ಮತ್ತು ಗ್ರಹಿಸುವ ಮನಸ್ಥಿತಿಯೇ ದೇವರನ್ನೂ ವಿಶ್ವಾಸಿಸುವುದು ಎಂದು. ಪ್ರಕೃತಿಯಲ್ಲಿ ಕಾಣುವ ವಿದ್ಯಮಾನಗಳಾಗಲಿ, ಸಂಗತಿಗಳಾಗಲಿ ತಮ್ಮ ನಿಯಂತ್ರಣವನ್ನು ಮೀರಿದ್ದು, ಅವು ತಮ್ಮ ಜೀವನದ ಅಗತ್ಯವೂ ಆಗಿರುತ್ತಿತ್ತು, ವಿಕೋಪಕ್ಕೆ ಹೋಗುವಾಗ ಜೀವಭಯವನ್ನೂ ಕೂಡಾ ಉಂಟು ಮಾಡುತ್ತಿತ್ತು ಎಂಬುದನ್ನು ಆದಿಮ ವ್ಯಕ್ತಿ ಮತ್ತು ಸಮೂಹಗಳು ತಿಳಿದಿದ್ದವು. ದೇವರ ಪರಿಕಲ್ಪನೆಗೆ ಮೂಲವೇ ಮಗುವು ತಾನು ಆಧರಿಸಿರುವ ಪಾಲಕರ ಕಲ್ಪನೆ ಮತ್ತು ಅನುಭವ.

ಯಾರೊಬ್ಬನು ತನ್ನ ಜೀವನದ ಸಂಪೂರ್ಣ ಆಗುಹೋಗುಗಳು ತನ್ನ ಸ್ವೀಕಾರ ಮತ್ತು ನಿರಾಕರಣೆಯ ಮೇಲೆ ಆಧರಿಸಿರುತ್ತವೆ ಎಂಬುದನ್ನು ಅರಿತುಕೊಂಡು, ಅದರಲ್ಲಿ ದೃಢತೆಯನ್ನು ತಾಳಿರುತ್ತಾನೋ ಅವನಿಗೆ ದೇವರ ಪರಿಕಲ್ಪನೆಯ ಅಗತ್ಯವೂ, ಪ್ರಾರ್ಥನೆಯ ಅವಲಂಬನೆಯೂ ಬೇಕಾಗಿರುವುದಿಲ್ಲ. ಮಗುವಿನ ಮನಸ್ಸಿನ ಪರಾವಲಂಬತನದ ಮನೋಭಾವ ಜೀವಂತವಾಗಿರುವವರೆಗೂ ವ್ಯಕ್ತಿಯು ಅದೆಷ್ಟೇ ವಯಸ್ಕನಾಗಿರಲಿ ದೇವರ ಮೇಲಿನ ನಂಬಿಕೆಯನ್ನು ಬಿಡುವುದಿಲ್ಲ. ಪ್ರಾರ್ಥನೆಯನ್ನು ನಿಲ್ಲಿಸುವುದಿಲ್ಲ. ಇಂತಹ ಮನುಷ್ಯನ ಮನಸ್ಸಿನ ಮೂಲಸೆಲೆಗಳಾದ ಆಸೆ, ಅಗತ್ಯಗಳು ಮತ್ತು ಭಯಗಳು ಹುಟ್ಟಿಸಿರುವ ದೇವರ ಪರಿಕಲ್ಪನೆಗಳು ಕಾಲದಿಂದ ಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ನಾನಾ ಕಾರಣಗಳಿಂದ ಬದಲಾಗುತ್ತಾ ಬಂದವು. ವಿವಿಧ ದೇಶಗಳಲ್ಲಿ, ವಿವಿಧ ಸಂಸ್ಕೃತಿಗಳಲ್ಲಿ, ವಿವಿಧ ಸನ್ನಿವೇಶಗಳಲ್ಲಿ, ವಿವಿಧ ಕಾರಣ ಮತ್ತು ಪರಿಣಾಮಗಳಲ್ಲಿ ಜಗತ್ತಿನಾದ್ಯಂತ ದೇವರ ಪರಿಕಲ್ಪನೆಯನ್ನು ಧಾರ್ಮಿಕ ಸುಧಾರಕರು ಬದಲಾಯಿಸುತ್ತಾ ಬಂದರು.

ದೇವರು ಎಂಬುದು ಬರಿದೇ ಪರಿಕಲ್ಪನೆಯಾಗಿದ್ದು, ವಾಸ್ತವ ಸಂಗತಿಯಾಗಿರದಿದ್ದ ಕಾರಣದಿಂದಲೇ ಆ ಅಧ್ಯಾತ್ಮ ವ್ಯಕ್ತಿಗಳು, ಧಾರ್ಮಿಕ ಮುಖಂಡರೂ ದೇವರ ಪರಿಕಲ್ಪನೆಗಳನ್ನು ತಮ್ಮ ಕಾಲದ ಅಗತ್ಯ ಮತ್ತು ಒತ್ತಡಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು, ಹೆಸರಿಟ್ಟುಕೊಳ್ಳಲು, ಬೇಕಾದ ವಿಧಿನಿಯಮಗಳನ್ನು ಹೊಂದಲು ಅಥವಾ ಸೃಷ್ಟಿಸಲು ಸಾಧ್ಯವಾಯಿತು. ಯಾರ್ಯಾರನ್ನೋ ದೈವೀಕರಿಸಲೂ ಸಾಧ್ಯವಾಯಿತು. ಈ ಜಗತ್ತಿನಲ್ಲಿ ಪ್ರತಿಯೊಂದು ನಾಗರಿಕತೆ, ಸಂಸ್ಕೃತಿ, ಸಾಮಾಜಿಕ ದೃಷ್ಟಿಗಳು, ಆಧ್ಯಾತ್ಮಿಕ ಒಳನೋಟಗಳು ತಮಗೆ ತೋರಿದಂತೆ ದೇವರನ್ನು ವ್ಯಾಖ್ಯಾನಿಸಿವೆ. ಆದರೆ ಅವರಿಗ್ಯಾರಿಗೂ ತಮ್ಮ ಮಗುತನದ ಕಾಲದ ಪರಾವಲಂಬತನದ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವೇ ಆಗಿಲ್ಲ ಹಾಗೂ ಅದರ ತಳಹದಿಯ ಮೇಲೆಯೇ ತಮ್ಮ ವಿವರಣೆಗಳನ್ನು, ಕಲ್ಪನೆಗಳನ್ನು, ವ್ಯಾಖ್ಯಾನಗಳನ್ನು ಮತ್ತು ಸಿದ್ಧಾಂತಗಳನ್ನು ಕಟ್ಟಿ, ಆಚಾರ ವಿಚಾರಗಳನ್ನು ರೂಪಿಸಿದರು. ಈ ದೇವರ ಚರಿತ್ರೆಯು ದೇವರೆಂಬ ಪರಿಕಲ್ಪನೆಯನ್ನು ನಾಶಪಡಿಸುವುದಿಲ್ಲ ಎಂಬ ಖಾತರಿ ನನಗಿದೆ. ಅದನ್ನು ಕಲ್ಪಿಸಿಕೊಂಡಂತೆ ಅದು ಇದ್ದಿದ್ದರೆ ಈ ಜಗತ್ತು ಅದೆಷ್ಟು ಸುಂದರವಾಗಿರುತ್ತಿತ್ತು ಎಂದೂ ಆಸೆಯಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)