varthabharthi


ವಿಶೇಷ-ವರದಿಗಳು

ಸುಪ್ರೀಂ ಕೋರ್ಟ್‌ನ ಈಚಿನ ಎರಡು ಆದೇಶಗಳು

ಮಸೀದಿಗೆ ನಿರಾಕರಣೆ; ಮನು ಪ್ರತಿಮೆಗೆ ಮನ್ನಣೆ

ವಾರ್ತಾ ಭಾರತಿ : 19 Mar, 2023
ವಿನಯ್ ಕೆ.

ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿರುವ ಮಸೀದಿಯ ತೆರವಿಗೆ ಸೂಚಿಸಿ, ಸುಪ್ರೀಂ ಕೋರ್ಟ್ ಮೂರು ತಿಂಗಳ ಗಡುವು ಕೊಟ್ಟಿದೆ. ಆದರೆ ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಬದ್ಧ ವಿರೋಧಿ ಆಶಯಗಳ ಪಿತಾಮಹ, ಮಹಿಳಾ ವಿರೋಧಿ, ಮನುಷ್ಯ ವಿರೋಧಿ ನೀತಿಗಳನ್ನು ರೂಪಿಸಿದ, ದಲಿತ ದಮನಿತರ, ಮಹಿಳೆಯರ ಶೋಷಣೆಯ ಪ್ರತೀಕವಾಗಿರುವ ಮನುವಿನ ಪ್ರತಿಮೆಯನ್ನು ರಾಜಸ್ಥಾನ ಹೈಕೋರ್ಟ್ ಆವರಣದಿಂದ ತೆಗೆಯಬೇಕೆಂದು ಕೋರಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಒಂದು, ಇದೇ ಮಾರ್ಚ್ 13ರಂದು ನೀಡಲಾಗಿರುವ, ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿನ ಮಸೀದಿ ತೆಗೆಸುವ ಆದೇಶ. ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನ ಆವರಣದಲ್ಲಿರುವ ಮಸೀದಿಯನ್ನು 3 ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಅಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತಾಗಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮಸೀದಿ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ 2017ರಲ್ಲಿ ಆದೇಶಿಸಿತ್ತು. ಹೈಕೋರ್ಟ್ ನ ಈ ಆದೇಶ ಪ್ರಶ್ನಿಸಿ ವಕ್ಫ್ ಮಸ್ಜಿದ್ ಹೈಕೋರ್ಟ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರ ಪೀಠವು ಅರ್ಜಿ ವಜಾಗೊಳಿಸಿದೆ.

ಮಸೀದಿ ಜಾಗದ ಲೀಸ್ ಅವಧಿ ಮುಗಿದಿದ್ದು, ಅದರ ಮೇಲೆ ಹಕ್ಕು ಸಾಧಿಸಲು ಅರ್ಜಿದಾರರಿಗೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ. ಮಸೀದಿ ಕೆಡವಲು ಅರ್ಜಿದಾರರಿಗೆ ಇನ್ನೂ ಮೂರು ತಿಂಗಳು ಕಾಲಾವಕಾಶ ನೀಡುತ್ತೇವೆ. ಮೂರು ತಿಂಗಳೊಳಗೆ ಮಸೀದಿ ತೆರವುಗೊಳಿಸದೇ ಹೋದರೆ ಅದನ್ನು ಕೆಡವಲು ಸಂಬಂಧಿಸಿದ ಅಧಿಕಾರಿಗಳು ಮತ್ತು ಹೈಕೋರ್ಟ್ ಮುಕ್ತ ಎಂದೂ ಪೀಠ ಹೇಳಿದೆ. ಈಗಿರುವ ಮಸೀದಿ ಸಮೀಪದಲ್ಲಿಯೇ ಭೂಮಿ ಮಂಜೂರು ಮಾಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ನ್ಯಾಯಪೀಠ ಅವಕಾಶ ನೀಡಿದೆ.

ಮಸೀದಿಯ ಆಡಳಿತ ಸಮಿತಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಮಸೀದಿಯು 1950ರ ದಶಕದಿಂದಲೂ ಇದೆ ಮತ್ತು ಅದನ್ನು ಏಕಾಏಕಿ ಆವರಣದಿಂದ ತೆರವುಗೊಳಿಸಬೇಕೆಂದು ಹೇಳುವುದು ಸಾಧ್ಯವಿಲ್ಲ ಎಂದರು. 2017ರಲ್ಲಿ ಸರಕಾರ ಬದಲಾಯಿತು ಮತ್ತು ಅಂದಿನಿಂದ ಎಲ್ಲವೂ ಬದಲಾಗಿಬಿಟ್ಟಿತು. ಹೊಸ ಸರಕಾರ ರಚನೆಯಾದ 10 ದಿನಗಳ ನಂತರ ಪಿಐಎಲ್ ಸಲ್ಲಿಸಲಾಗುತ್ತದೆ. ಅವರು ನಮಗೆ ಪರ್ಯಾಯ ಜಾಗ ನೀಡುವವರೆಗೆ ಬೇರೆಡೆ ಸ್ಥಳಾಂತರ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮಸೀದಿಯನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ಬಗ್ಗೆ ಒಮ್ಮತಕ್ಕೆ ಬರುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಕಕ್ಷಿದಾರರಿಗೆ ಸೂಚಿಸಿತ್ತು. ಇದೀಗ ಮಸೀದಿ ತೆರವಿಗೆ ಸೂಚಿಸಿ, ಮೂರು ತಿಂಗಳ ಗಡುವು ಕೊಟ್ಟಿದೆ.

ಸುಪ್ರೀಂ ಕೋರ್ಟ್‌ನ ಇನ್ನೊಂದು ಆದೇಶ. ರಾಜಸ್ಥಾನ ಹೈಕೋರ್ಟ್ ಆವರಣದಲ್ಲಿರುವ ಮನು ಪ್ರತಿಮೆ ತೆರವಿಗೆ ಅದೆಷ್ಟೋ ಕಾಲದಿಂದ ದಲಿತ ಹೋರಾಟಗಾರರು, ಜಾತಿ ವಿರೋಧಿ ಸಂಘಟನೆಗಳು, ಮಹಿಳಾ ಸಂಘಟನೆಗಳು ಆಗ್ರಹಿಸುತ್ತಾ, ಹೋರಾಡುತ್ತಾ ಬಂದಿವೆ. ಆದರೆ ಕಳೆದ ತಿಂಗಳು 24ರಂದು ಈ ಮನುವಿನ ಪ್ರತಿಮೆ ತೆಗೆಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಬದ್ಧ ವಿರೋಧಿ ಆಶಯಗಳ ಪಿತಾಮಹ, ಮಹಿಳಾ ವಿರೋಧಿ, ಮನುಷ್ಯ ವಿರೋಧಿ ನೀತಿಗಳನ್ನು ರೂಪಿಸಿದ, ದಲಿತ ದಮನಿತರ, ಮಹಿಳೆಯರ ಶೋಷಣೆಯ ಪ್ರತೀಕವಾಗಿರುವ ಮನುವಿನ ಪ್ರತಿಮೆಯನ್ನು ರಾಜಸ್ಥಾನ ಹೈಕೋರ್ಟ್ ಆವರಣದಿಂದ ತೆಗೆಯಬೇಕೆಂದು ಕೋರಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಖ್ಯಾತ ಅಂಕಣಕಾರ ಪಿ.ಸಾಯಿನಾಥ್ ಒಂದೆಡೆ ಹೀಗೆ ಹೇಳುತ್ತಾರೆ: ರಾಜಸ್ಥಾನ ಮನುವಿನ ನೀತಿಯನ್ನೇ ಬದುಕುತ್ತಾ ಬಂದಿದೆ. ಈ ರಾಜ್ಯದಲ್ಲಿ ಪ್ರತೀ 60 ಗಂಟೆಗೆ ಒಬ್ಬ ದಲಿತ ಮಹಿಳೆಯ ಅತ್ಯಾಚಾರ ಜರುಗುತ್ತಿದೆ. 9 ದಿನಕ್ಕೊಮ್ಮೆ ಒಬ್ಬ ದಲಿತನ ಹತ್ಯೆಯಾಗುತ್ತಿದೆ. 65 ಗಂಟೆಗಳಿಗೆ ಒಬ್ಬ ದಲಿತ ಗಂಭೀರ ಹಲ್ಲೆಗೊಳಗಾಗುತ್ತಿದ್ದಾನೆ. ಐದು ದಿನಕ್ಕೊಮ್ಮೆ ದಲಿತ ಕುಟುಂಬದ ಮೇಲೆ ಅಥವಾ ಆಸ್ತಿಯ ಮೇಲೆ ದಾಳಿಗಳಾಗುತ್ತಿವೆ. ಪ್ರತೀ ನಾಲ್ಕು ಗಂಟೆಗೊಮ್ಮೆ ಈ ಪ್ರಕರಣಗಳ ನೋಂದಣಿ ಭಾರತೀಯ ದಂಡ ಸಂಹಿತೆಯ ‘ಇತರ’ ವಿಭಾಗದಲ್ಲಿ ಸೇರಿ ಹೋಗುತ್ತಿವೆ. ಭಾರತೀಯ ದಂಡ ಸಂಹಿತೆಯ ‘ಇತರ’ ವಿಭಾಗವೆಂದರೆ ಅದು ಕೊಲೆ, ಅತ್ಯಾಚಾರ, ಲೂಟಿ, ಗಂಭೀರ ಗಾಯಗಳಿಂದ ಹೊರತಾದ ಪರಿಚ್ಛೇದ. ಆರೋಪಿಗಳಿಗೆ ಶಿಕ್ಷೆ ಆಗುವುದು ಅತ್ಯಂತ ಅಪರೂಪ. ಶಿಕ್ಷೆಯಾದ ಪ್ರಮಾಣವೂ ಶೇ. 2ರಿಂದ 3 ಮಾತ್ರ. ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆಯ, ನ್ಯಾಯಾಲಯದ ಮೆಟ್ಟಿಲನ್ನೂ ಹತ್ತುವುದಿಲ್ಲ. ಲೆಕ್ಕವಿಲ್ಲದಷ್ಟು ದೂರುಗಳನ್ನು ಅಂತಿಮ ವರದಿ (ಎಫ್‌ಐಆರ್)ಯಲ್ಲಿ ಹುಗಿದು ಸಮಾಧಿ ಮಾಡಲಾಗುತ್ತದೆ. ಪ್ರಾಮಾಣಿಕವಾದ ಗಂಭೀರ ಪ್ರಕರಣಗಳನ್ನೂ ನಾಶ ಮಾಡಿ ಹಾಕಲಾಗುತ್ತದೆ.

ಇದಕ್ಕೆ ಸರಿಯಾಗಿಯೇನೊ ಎಂಬಂತೆ, ಈ ರಾಜ್ಯದ ಹೈಕೋರ್ಟ್ ಆವರಣದಲ್ಲಿ, ಶೋಷಣೆಯ ಪ್ರತೀಕವಾಗಿರುವಂಥ ಮನು ಪ್ರತಿಮೆ ರಾರಾಜಿಸುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ನ್ಯಾಯಾಲಯದ ಆವರಣದಲ್ಲಿ ಜಾಗವಿಲ್ಲ. ಅವರ ಪ್ರತಿಮೆ ಹೊರಗೆ ಬೀದಿಯಲ್ಲಿದೆ. ನ್ಯಾಯಸ್ಥಾನದ ಆವರಣದಲ್ಲಿನ ಈ ಮನು ಪ್ರತಿಮೆ ತೆರವಿಗೆ ಅದೆಷ್ಟೋ ಕಾಲದಿಂದ ದಲಿತ ಹೋರಾಟಗಾರರು, ಜಾತಿ ವಿರೋಧಿ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. ಆದರೆ ಫೆಬ್ರವರಿ 24ರಂದು ಸುಪ್ರೀಂ ಕೋರ್ಟ್ ಈ ಸಂಬಂಧದ ಪಿಐಎಲ್ ಅನ್ನು ವಜಾಗೊಳಿಸಿದೆ.

ರಾಮ್ಜಿ ಲಾಲ್ ಭೈರ್ವಾ ಎಂಬವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಂ.ಎಂ. ಸುಂದರೇಶ್ ಅವರಿದ್ದ ಪೀಠ, ಇಂಥದೇ ಅರ್ಜಿ ಈಗಾಗಲೇ ಹೈಕೋರ್ಟ್ ಮುಂದೆಯೂ ಇದ್ದು, ಹೈಕೋರ್ಟ್ ಮೊರೆಹೋಗುವಂತೆ ಸೂಚಿಸಿದೆ.

ಮನು ಪ್ರತಿಮೆ ಹೈಕೋರ್ಟ್ ಆವರಣದಲ್ಲಿ ಸ್ಥಾಪನೆಯಾದದ್ದು ಫೆಬ್ರವರಿ 10, 1989ರಂದು. ರಾಜಸ್ಥಾನದ ಉನ್ನತ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಪದಮ್ ಕುಮಾರ್ ಜೈನ್, ಮಾಜಿ ಮುಖ್ಯ ನ್ಯಾಯಮೂರ್ತಿ ಎನ್.ಎಂ. ಕಾಸ್ಲಿವಾಲ್ ಅವರಿಗೆ ಪತ್ರ ಬರೆದು ಮಾಡಿಕೊಂಡ ಮನವಿಯ ಮೇರೆಗೆ ಪ್ರತಿಮೆ ಸ್ಥಾಪಿಸಲಾಯಿತು.

ರಾಜಸ್ಥಾನ ಹೈಕೋರ್ಟ್ ಜುಲೈ 28, 1989ರಂದು ಅದನ್ನು ತೆಗೆದುಹಾಕಲು ಆಡಳಿತಾತ್ಮಕ ಆದೇಶ ನೀಡಿತು. ಆದರೆ, ವಿಶ್ವ ಹಿಂದೂ ಪರಿಷತ್ ಮುಖಂಡ ಆಚಾರ್ಯ ಧರ್ಮೇಂದ್ರ ಮತ್ತಿತರರು ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಆಗಸ್ಟ್ 1989ರಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಹೈಕೋರ್ಟ್ ಪ್ರತಿಮೆ ತೆಗೆಯುವುದನ್ನು ತಡೆಯಿತು ಮತ್ತು ಈ ವಿಷಯವನ್ನು ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತದೆ ಎಂದು ಹೇಳಿತು.

ಈ ಪಿಐಎಲ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅತ್ಯಂತ ಹಳೆಯ ರಿಟ್ ಅರ್ಜಿ ಎಂದು ಹೇಳಲಾಗುತ್ತದೆ. ಕಡೆಯದಾಗಿ ಇದರ ವಿಚಾರಣೆ ನಡೆದದ್ದು 2015ರಲ್ಲಿ. ಆಗ ಬ್ರಾಹ್ಮಣ ವಕೀಲರ ಗುಂಪಿನ ಪ್ರತಿಭಟನೆಯಿಂದಾಗಿ ವಿಚಾರಣೆಗೆ ಅಡ್ಡಿಯಾಯಿತೆಂಬ ವರದಿಗಳಿವೆ.

2015ರಲ್ಲಿ ಪ್ರಕರಣದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ದಲಿತ ಗುಂಪುಗಳ ವಕೀಲರಾಗಿ ಹಾಜರಾಗಿದ್ದ ಜೈಪುರ ಮೂಲದ ವಕೀಲ ಎ.ಕೆ. ಜೈನ್ ‘ಔಟ್‌ಲುಕ್’ಗೆ ಹೇಳಿರುವ ಪ್ರಕಾರ, ಮನುಸ್ಮತಿ ದಲಿತರ ಮೇಲೆ ದೌರ್ಜನ್ಯವೆಸಗುತ್ತಿದೆ ಎಂಬುದನ್ನು ನಿರೂಪಿಸಲು ಅವರು ಅದರ ಒಂದು ಭಾಗವನ್ನು ಓದಲು ಪ್ರಾರಂಭಿಸುತ್ತಿದ್ದಂತೆ, ಬಾರ್ ಅಸೋಸಿಯೇಷನ್ ಪದಾಧಿಕಾರಿಗಳೂ ಸೇರಿ ಸುಮಾರು 400 ಬ್ರಾಹ್ಮಣ ವಕೀಲರು ಒಟ್ಟಾಗಿ ಪ್ರತಿಭಟಿಸಿ, ವಿಚಾರಣೆಗೆ ಅಡ್ಡಿಪಡಿಸಿದ್ದರು.

ಕಳೆದ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಈ ಪ್ರತಿಮೆಯ ತೆರವಿಗಾಗಿ ಒತ್ತಾಯಿಸಿ ಆಗಿರುವ ಪ್ರತಿಭಟನೆಗಳು, ಕಾನೂನು ಹೋರಾಟಗಳು ಹಲವು. ದಲಿತ ನಾಯಕರಾದ ಕಾನ್ಶಿರಾಮ್ ಮತ್ತು ರಾಮದಾಸ್ ಅಠವಳೆ ಅಂಥವರೂ ಜೈಪುರಕ್ಕೆ ತೆರಳಿ ಪ್ರತಿಮೆ ವಿರುದ್ಧ ಪ್ರತಿಭಟನೆ ನಡೆಸಿದ್ದಿದೆ. ಕಾನ್ಶಿರಾಮ್ ಅವರು ಈಗ ಇಲ್ಲ. ಅಠವಳೆ ಈಗ ಬಿಜೆಪಿ ಜೊತೆ ಸೇರಿಕೊಂಡು ಕೇಂದ್ರದಲ್ಲಿ ಸಚಿವರಾಗಿದ್ದಾರೆ.

ಅಕ್ಟೋಬರ್ 8, 2018ರಂದು, ಮಹಾರಾಷ್ಟ್ರದ ಔರಂಗಾಬಾದ್‌ನಿಂದ ರಾಜಸ್ಥಾನಕ್ಕೆ ಬಂದ ಶೀಲಾ ಬಾಯಿ ಹಾಗೂ ಕಾಂತ ರಮೇಶ್ ಆಯಿರೆ ಎಂಬ ಇಬ್ಬರು ದಲಿತ ಮಹಿಳೆಯರು ಹೈಕೋರ್ಟ್ ಆವರಣದಲ್ಲಿನ ಮನು ಪ್ರತಿಮೆಗೆ ಕಪ್ಪುಬಣ್ಣ ಬಳಿದದ್ದು ವಿಶೇಷ ಘಟನೆಯಾಗಿತ್ತು. ಅವರ ಇಂಥದೊಂದು ಪ್ರತಿಭಟನೆ ಎರಡು ವಾರ ಕಾಲ ಅವರನ್ನು ಜೈಲಿಗೆ ತಳ್ಳುವುದಕ್ಕೆ ಕಾರಣವಾಗಿತ್ತು. ಅಕ್ಟೋಬರ್ 22, 2018ರಂದು ಅವರಿಗೆ ಜಾಮೀನು ನೀಡಲಾಯಿತು.

2020ರಲ್ಲಿ ದಲಿತ ಹಕ್ಕುಗಳ ಕಾರ್ಯಕರ್ತರು ಪ್ರತಿಮೆ ತೆರವಿಗೆ ಒತ್ತಾಯಿಸಿ ಹೈಕೋರ್ಟ್ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು. 2021ರಲ್ಲಿ ಶಿಕ್ಷಣ ತಜ್ಞರು ಮತ್ತು ಪತ್ರಕರ್ತರು ಸೇರಿದಂತೆ ಸುಮಾರು 500 ದಲಿತ ಕಾರ್ಯಕರ್ತರು, ಕಾಂಗ್ರೆಸ್ ಸರಕಾರವಿದ್ದ ಹಿನ್ನೆಲೆಯಲ್ಲಿ ಈ ವಿಷಯವನ್ನು ಪರಿಶೀಲಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಈ ಪ್ರತಿಮೆ ದಲಿತರು ಮತ್ತು ಮಹಿಳೆಯರ ಮೆಲಿನ ದಬ್ಬಾಳಿಕೆಯ ಪ್ರತಿರೂಪ. ಜಾತಿಯ ಆಧಾರದ ಮೇಲೆ ತಾರತಮ್ಯ ಬಿಂಬಿಸುವ ಸಂಕೇತ ಎಂದು ಅವರು ಪತ್ರದಲ್ಲಿ ಹೇಳಿದ್ದರು. ಆದರೆ ಅದರಿಂದ ಏನೂ ಆಗಲಿಲ್ಲ. ರಾಜಸ್ಥಾನದಲ್ಲಿ ಈಗಲೂ ಕಾಂಗ್ರೆಸ್ ಸರಕಾರವೇ ಇದೆ. ಆದರೆ ಹೈಕೋರ್ಟ್ ಆವರಣದಲ್ಲಿ ನಮ್ಮ ದೇಶದ ಸಂವಿಧಾನವನ್ನೇ ಅಣಕಿಸುವಂತೆ ಮನುವಿನ ಪ್ರತಿಮೆಯೂ ಹಾಗೆಯೇ ಇದೆ.

ಈಗ, ಪಿಐಎಲ್ ವಜಾಗೊಳಿಸುವುದರೊಂದಿಗೆ ಇಷ್ಟೆಲ್ಲ ಜನರ ಬಲವಾದ ಆಗ್ರಹವನ್ನು ನಿರಾಕರಿಸಿದಂತಾಗಿದೆ.

ಪ್ರತಿಮೆ ಸ್ಥಾಪನೆಯಾದ ಹೊತ್ತಲ್ಲಿ ಅದರ ತೆರವಿಗೆ ಮುಂದಾಗಿದ್ದ ನ್ಯಾಯಾಲಯ, ಆನಂತರದ ಬೆಳವಣಿಗೆಗಳ ಎದುರು ಮಣಿದ ಬಳಿಕ ಮನು ಪ್ರತಿಮೆ ಭದ್ರವಾಗಿಬಿಟ್ಟಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)