‘ಮೀನುಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸೂಕ್ತಕ್ರಮ’
ಮಲ್ಪೆ, ಮಾ.19: ಕೇಂದ್ರ ಮೀನುಗಾರಿಕಾ ಸಚಿವಾಲಯದ ಮೂಲಕ ‘ಸಾಗರ ಪರಿಕ್ರಮ’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದರಂತೆ ದೇಶದ ಎಲ್ಲಾ ರಾಜ್ಯಗಳ ಕರಾವಳಿ ತೀರದಲ್ಲಿ ಮೀನುಗಾರರು ಇರುವೆಡೆಗೆ ತೆರಳಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಲಾಗುತ್ತಿದೆ. ಅವುಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮೀನುಗಾರರ ಬೇಡಿಕೆಗಳನ್ನು ಪಾಲಿಸಿಯಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಅವರು ಮಲ್ಪೆಯಲ್ಲಿ ನೆರೆದ ಮೀನುಗಾರರಿಗೆ ಭರವಸೆ ನೀಡಿದರು.
ಸಾಗರ ಪರಿಕ್ರಮದ ನಾಲ್ಕನೇ ಹಂತದಲ್ಲಿ ಇಂದು ಬೆಳಗ್ಗೆ ಮಲ್ಪೆಗೆ ಹಡಗಿನಲ್ಲಿ ಆಗಮಿಸಿದ ಸಚಿವರು, ಮಲ್ಪೆ ಬಂದರಿನಲ್ಲಿರುವ ಮಲ್ಪೆ ಮೀನುಗಾರರ ಸಂಘದ ಕಟ್ಟಡದಲ್ಲಿ ಆಯೋಜಿಸಲಾದ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರ ಬೇಡಿಕೆ, ಮನವಿಗಳನ್ನು ಸ್ವೀಕರಿಸಿ ಮಾತನಾಡುತಿದ್ದರು.
ಸಂವಾದದ ವೇಳೆ ವಿವಿಧ ಮೀನುಗಾರರ ಸಂಘಟನೆಗಳ ಪದಾಧಿಕಾರಿಗಳು ಸಚಿವರಿಗೆ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಸಲು ಪ್ರಯತ್ನಿಸಿದರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಗೋಪಾಲ ಆರ್.ಕೆ., ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮೀನುಗಾರರ ಪರವಾಗಿ ಅಹವಾಲುಗಳನ್ನು ಸಲ್ಲಿಸಿದರು.
ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಪಡೆಯಲು ಇರುವ ಸಂಕಷ್ಟ, ಬೋಟ್ ಗಳಿಗೆ ರೋಡ್ ಸೆಸ್ ವಿಧಿಸುವುದನ್ನು ತೆಗೆಯುವ ಬಗ್ಗೆ, ಅಂತಾರಾಜ್ಯ ಸಮನ್ವಯ ಸಮಿತಿ ರಚನೆ ಬಗ್ಗೆ, ಅನಿಯುಮಿತವಾಗಿ ಸೀಮೆಎಣ್ಣೆ ಸರಬರಾಜು ಮಾಡುವ ಬಗ್ಗೆ, ಮಲ್ಪೆಯಲ್ಲಿ ಹೊರ ಬಂದರು ನಿರ್ಮಾಣ ಬಗ್ಗೆ, ಈಗಿರುವ ಬಂದರನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ಮೀನುಗಾರಿಕೆಗೆ ಕೈಗಾರಿಕಾ ವಲಯ ರೂಪಿಸುವ ಬಗ್ಗೆ, ಹಳೆಯ ಬೋಟುಗಳ ಪುನರ್ ನಿರ್ಮಾಣಕ್ಕೆ ಸಹಾಯಧನ ನೀಡುವ ಬಗ್ಗೆ ದಯಾನಂದ ಸುವರ್ಣ ಮನವಿ ಸಲ್ಲಿಸಿದರು.
ಮಲ್ಪೆ ಬಂದರಿನೊಂದಿಗೆ ಮಂಗಳೂರು ಸೇರಿದಂತೆ ಎಲ್ಲಾ ಬಂದರುಗಳಲ್ಲೂ ಹೂಳೆತ್ತುವಂತೆ, ಮಲ್ಪೆಗೆ ಒಂದು ಡ್ರೆಜ್ಜಿಂಗ್ ಯಂತ್ರವನ್ನು ನೀಡುವಂತೆ, ಕೇರಳದಲ್ಲಿರುವಂತೆ ರಾಜ್ಯ ಕರಾವಳಿಯಲ್ಲೂ ಸಮುದ್ರ ಅಂಬುಲೆನ್ಸ್‌ನ್ನು ಮತ್ಸ್ಯಸಂಪದದಡಿ ನೀಡುವಂತೆ, ಹಿರಿಯ ಮೀನುಗಾರರಿಗೆ ಪಿಂಚಣಿ ನೀಡುವ ಬಗ್ಗೆ, ನಾಡದೋಣಿ ಮೀನುಗಾರರಿಗೆ ಪರ್ಯಾಯ ಇಂಧನ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಜಯ ಸಿ ಕೋಟ್ಯಾನ್ ಮನವಿ ಸಲ್ಲಿಸಿದರು.
ಕೃಷಿಕರ ಮಕ್ಕಳಿಗೆ ಕೃಷಿ ವೃತ್ತಿಯ ಸರ್ಟಿಫಿಕೇಟ್ ನೀಡುವಂತೆ, ಮೀನುಗಾರರ ಮಕ್ಕಳಿಗೆ ಮೀನುಗಾರ ವೃತ್ತಿಯ ಸರ್ಟಿಫಿಕೇಟ್ ನೀಡುವಂತೆ ಜಯ ಕೋಟ್ಯಾನ್ ಮನವಿ ಮಾಡಿದರು. ಇದರಿಂದ ಮಕ್ಕಳಿಗೆ ಮೀನುಗಾರಿಕಾ ಕಾಲೇಜುಗಳಲ್ಲಿ ಸೀಟು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ನಿಯಮಿತದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್‌ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.