ಕರ್ನಾಟಕ
ಒಕ್ಕಲಿಗರ ಮತ ಸೆಳೆಯಲು ಬಿಜೆಪಿಗರ 'ಉರಿಗೌಡ, ನಂಜೇಗೌಡ' ಕಡೆಯಿಂದ ಸಾಧ್ಯವಿಲ್ಲ: ಕುಮಾರಸ್ವಾಮಿ ತಿರುಗೇಟು

ಮಂಡ್ಯ, ಮಾ.19: ಉರಿಗೌಡ, ನಂಜೇಗೌಡ ಅನ್ನೋರು ಇಷ್ಟು ದಿನ ಎಲ್ಲಿದ್ರು? ಒಕ್ಕಲಿಗರ ಮತ ಸೆಳೆಯಲು ಇವರ ಕಡೆಯಿಂದ ಸಾಧ್ಯವಿಲ್ಲ. ಇದೆಲ್ಲಾ ಫಲ ಕೊಡುವುದಿಲ್ಲ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡರ ಪುತ್ಥಳಿ ನಿರ್ಮಾಣ ಮಾಡಲು ಮುಂದಾಗಿರುವ ಬಿಜೆಪಿಯವರಿಗೆ ದೇವಸ್ಥಾನ ಕಟ್ಟಿದರೂ ನಮ್ಮ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ತಾಲೂಕಿನ ವಿ.ಸಿ.ಫಾರಂನ ಹೆಲಿಪ್ಯಾಡ್‍ನಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಧಾರ್ಮಿಕ ಭಾವನೆಗಳನ್ನಿಡಿದು ಮತ ಕೇಳುವ ಹೀನಾಯ ಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಉರಿಗೌಡ, ದೊಡ್ಡ ನಂಜೇಗೌಡ ವಿಚಾರ ಪ್ರಸ್ಥಾಪಿಸುತ್ತಿರುವ ಬಿಜೆಪಿ ಸರಕಾರಕ್ಕೆ ರೈತರು ಮತ್ತು ಜನಸಾಮಾನ್ಯರ ಸಂಕಷ್ಟ ಬೇಕಾಗಿಲ್ಲ. ಮಳೆ ಬಂದು ರೈತನ ಬೆಳೆ ನಾಶವಾಗಿದೆ. ಉತ್ತರ ಕರ್ನಾಟಕದಲ್ಲಿ ಮೆಣಸಿಕಾಯಿ ಕೊಳೆತು ಹೋಗುತ್ತಿದೆ. ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಅವರು ಕಿಡಿಕಾರಿದರು.
ಉರಿಗೌಡ, ನಂಜೇಗೌಡ ಸಿನೆಮಾ ಮಾಡಿ ದುಡ್ಡು ಮಾಡಿಕೊಳ್ಳುವ ತವಕ ಬಿಜೆಪಿ ಮುಖಂಡರದ್ದಾಗಿದೆ. ಅವರು ಸಿನಿಮಾ ತೆಗೆದ್ರೆ ಅದಕ್ಕೂ ನನಗೂ ಏನು ಸಂಬಂಧವಿದೆ. ಈ ವಿಚಾರ ಅಪ್ರಸ್ತುತವಾದುದು ಎಂದು ಅವರು ಪ್ರತಿಕ್ರಿಯಿಸಿದರು.
ಮಾಜಿ ಸಚಿವ ನರೇಂದ್ರಸ್ವಾಮಿ ಜೆಡಿಎಸ್ ಪುಟ್ಗೋಸಿ ಪಕ್ಷ ಎಂಬ ಪದ ಬಳಕೆ ಮಾಡಿರುವುದನ್ನು ಕಟುವಾಗಿ ಖಂಡಿಸಿದ ಎಚ್‍ಡಿಕೆ, ಎಲೆಕ್ಷನ್ ರಿಸಲ್ಟ್ ಬಂದಾಗ ಕಾಂಗ್ರೆಸ್ ಸ್ಥಿತಿ ತಿಳಿಯಲಿದೆ. ವಿಪಕ್ಷ ಸ್ಥಾನದಲ್ಲಿರುವ ಅವರ ನಾಯಕರಿಗೆ ಕ್ಷೇತ್ರ ಹುಡಿಕಿ ಕೊಳ್ಳಲು ಸಾದ್ಯವಿಲ್ಲ. ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಜನಾನೇ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ