varthabharthi


ಕರ್ನಾಟಕ

ಸಾರಿಗೆ ನೌಕರರ ಮುಷ್ಕರ ವಾಪಸ್

ವಾರ್ತಾ ಭಾರತಿ : 19 Mar, 2023

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ವಾಪಸ್ ಬಗ್ಗೆ ನೌಕರರು ಮಾ.21ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತಸುಬ್ಬರಾವ್ ತಿಳಿಸಿದ್ದಾರೆ.

ರವಿವಾರ ಅನಂತಸುಬ್ಬರಾವ್ ಸೇರಿದಂತೆ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನೌಕರರ ವೇತನವನ್ನು ಶೇ.15ಕ್ಕೆ ಏರಿಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದು, ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಸಕರಾತ್ಮಕವಾಗಿ ಸ್ಪಂದಿಸಿದರು. 

ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಮೇರೆಗೆ ಮುಷ್ಕರ ವಾಪಸ್ ಪಡೆಯಲಾಗಿದೆ. ವೇತನ ಹೆಚ್ಚಳ ಹಾಗೂ ಭತ್ಯೆ ಸೇರಿದಂತೆ ಉಳಿದ ಎಲ್ಲ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಲಾಗುತ್ತದೆ. ಆದರೆ, ಮೂರು ವರ್ಷಗಳಿಂದ ವೇತನ ಹೆಚ್ಚಳ ವಿಷಯವು ನನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಶೇ.15ರಷ್ಟು ವೇತನ ಹೆಚ್ಚಿಸಿ ಬಗೆಹರಿಸಿದ್ದಾರೆ. ಹಿಂದಿನ ಬಾಕಿ ಪಾವತಿ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಿಕ್ಕಿದೆ ಎಂದು ಅನಂತಸುಬ್ಬರಾವ್ ಉಲ್ಲೇಖಿಸಿದರು.

ಪ್ರಯಾಣಿಕರ ಆತಂಕ ದೂರ: ‘ನೌಕರರ ಮುಷ್ಕರ ಹಿನ್ನೆಲೆ ಯುಗಾದಿ ಹಬ್ಬದಲ್ಲಿ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇತ್ತು. ಆದರೆ, ಸಾರಿಗೆ ನೌಕರರು ಮುಷ್ಕರ ಹಿಂಪಡೆದಿರುವ ಹಿನ್ನೆಲೆ ಊರುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಆತಂಕ ದೂರವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)