varthabharthi


ರಾಷ್ಟ್ರೀಯ

ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಅಮೃತಪಾಲ್, ಸಹಚರರ ವಿರುದ್ಧ ಇನ್ನೊಂದು ಎಫ್ಐಆರ್

ವಾರ್ತಾ ಭಾರತಿ : 19 Mar, 2023

ಅಮೃತಪಾಲ್ ಸಿಂಗ್ (Photo: ANI)

ಚಂಡಿಗಡ, ಮಾ.19: ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಮತ್ತು ಆತನ ಕೆಲವು ಸಹಚರರ ವಿರುದ್ಧ ರವಿವಾರ ಹೊಸ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಮೃತಸರ ಗ್ರಾಮೀಣ ಎಸ್ಎಸ್ಪಿ ಸತಿಂದರ್ ಸಿಂಗ್ ತಿಳಿಸಿದರು.

ಅಮೃತಪಾಲ್ನ ಏಳು ಸಹಚರರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ. ಪಂಜಾಬ ಪೊಲೀಸರು ಶನಿವಾರ ಅಮೃತಪಾಲ್ ವಿರುದ್ಧ ಬೃಹತ್ ದಾಳಿಯನ್ನು ಆರಂಭಿಸಿದ್ದು,ಆತನ ನೇತೃತ್ವದ ‘ವಾರಿಸ್ ಪಂಜಾಬ ದೆ’ ಸಂಘಟನೆಯ 78 ಸದಸ್ಯರನ್ನು ಬಂಧಿಸಿದ್ದಾರೆ. ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಈಗಲೂ ತಲೆಮರೆಸಿಕೊಂಡಿದ್ದು,ಆತನ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಹೇಳಿದರು.

ಶನಿವಾರ ಅಮೃತಪಾಲ್ ಪ್ರಯಾಣಿಸುತ್ತಿದ್ದ ವಾಹನವನ್ನು ಬೆನ್ನಟ್ಟಿದ್ದ ಪೊಲೀಸರು ಜಲಂಧರ್ ಸಮೀಪ ಅದನ್ನು ತಡೆದಿದ್ದರಾದರೂ ಕೂದಲೆಳೆಯ ಅಂತರದಿಂದ ಆತ ತಪ್ಪಿಸಿಕೊಂಡಿದ್ದ.

ಫೆ.23ರ ಅಜ್ನಾಲಾ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಅಮೃತಪಾಲ್ ಮತ್ತು ಆತನ ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಂಧಿತರಿಂದ ಆರು 12 ಬೋರ್ ಬಂದೂಕುಗಳನ್ನು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಸಿಂಗ್ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)