ಕೊಲೆ ಯತ್ನ, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಮಾಜಿ ಎಸ್ಪಿ ಶಾಸಕನ ವಿರುದ್ಧ ಎಫ್ಐಆರ್
ಇಟಾಹ್, ಮಾ.19: ಒಂದು ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನು ಕೊಲೆಗೈಯಲು ಯತ್ನಿಸಿದ ಹಾಗೂ ಆತನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ರಾಮೇಶ್ವರ ಸಿಂಗ್ ಯಾದವ್ , ಆತನ ಸಹೋದರ ಮತ್ತು ಇತರ ನಾಲ್ವರ ವಿರುದ್ಧ ಉತ್ತರಪ್ರದೇಶ ಪೊಲೀಸರು ರವಿವಾರ ಎಫ್ಐಆರ್ ದಾಖಲಿಸಿದ್ದಾರೆ.
ಮಾಜಿ ಶಾಸಕನಾದ ಯಾದವ್ ಹಾಗೂ ಅತನ ಕಿರಿಯ ಸಹೋದರ ಜುಗೇಂದ್ರ ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಪ್ರಸಕ್ತ ಇಬ್ಬರೂ ಜೈಲಿನಲ್ಲಿದ್ದಾರೆ.
ಲಾಲ್ ದುಂಡ್ವಾರಾ ಗ್ರಾಮದ ನಿವಾಸಿ ಸಂಜು ಎಂಬವರು ರಾಮೇಶ್ವರ ಯಾದವ್ ಮತ್ತಿತರ ಆರೋಪಿಗಳ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆಯೆಂದು ಮಾಲಾವನ್ ನಗರದ ಠಾಣಾಧಿಕಾರಿ ದೇವೇಂದ್ರನಾಥ್ ಮಿಶ್ರಾ ತಿಳಿಸಿದ್ದಾರೆ.
2022ರ ಫೆಬ್ರವರಿ 11ರಂದು ರಾಮೇಶ್ವರ ಯಾದವ್, ಅವರ ಕಿರಿಯ ಸಹೋದರ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜುಗೇಂದ್ರ, ಸೋದರಳಿಯಂದಿರಾದ ಪ್ರಮೋದ್ ಯಾದವ್ ಮತ್ತು ಸುಬೋಧ್ ಯಾದವ್ ಮತ್ತಿಬ್ಬರೊಂದಿಗೆ ಕೂಡಿಕೊಂಡು ತನಗೆ ಹಾಗೂ ತನ್ನ ಪತ್ನಿಯ ಮೇಲೆ ದಾಳಿ ನಡೆಸಿದರೆಂದು ದೂರುದಾರ ಸಂಜು ಆಪಾದಿಸಿದ್ದಾರೆ.
ಆರೋಪಿಗಳು ತನ್ನ ಪತ್ನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಆತ ಆರೋಪಿಸಿದ್ದಾರೆ. ಆರೋಪಿಗಳು ತನ್ನನ್ನು ಕೊಲ್ಲಲು ಯತ್ನಿಸಿದ್ದು, ಅದೃಷ್ಟವಶಾತ್ ತಾನುಪಾರಾಗಿರುವುದಾಗಿ ಸಂಜು ಹೇಳಿದ್ದಾರೆ.