ಬಂದ್ ಮಾಡಿಸುವುದಕ್ಕೆ ರಾಜಕಾರಣಿಗಳಿಗೆ ಇಲ್ಲಿದೆ ಅವಕಾಶ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಉರಿ ನಂಜು ಮಾತುಗಳು ಜನಸಾಮಾನ್ಯರು ಉಸಿರಾಡುವ ಗಾಳಿಯನ್ನು ವಿಷಮಯಗೊಳಿಸುತ್ತಿವೆ. ನಾಡಿನ ಅಭಿವೃದ್ಧಿಯ ಬಗ್ಗೆ ಮಾತನಾಡುವ ನೈತಿಕ ಸ್ಥೈರ್ಯವಿಲ್ಲದ ರಾಜಕೀಯ ನಾಯಕರು, ಜನರ ನಡುವೆ ದ್ವೇಷವನ್ನು ಬಿತ್ತಿ ಚುನಾವಣೆಯನ್ನು ಗೆಲ್ಲುವ ಯತ್ನದಲ್ಲಿದ್ದಾರೆ. ಬೆಲೆಯೇರಿಕೆ, ನಿರುದ್ಯೋಗ, ಬಡತನ ಇತ್ಯಾದಿಗಳಿಂದಾಗಿ ಮುಖತೋರಿಸಲಾಗದ ಸ್ಥಿತಿಯಲ್ಲಿರುವ ನಾಯಕರಿಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯಬೇಕಾಗಿದೆ. ಹಾಲು ಕುಡಿಸಿ ತೃಪ್ತಿ ಪಡಿಸುವುದಕ್ಕಿಂತ ಭಂಗಿ ಕುಡಿಸಿ ವಿಸ್ಮತಿಗೆ ತಳ್ಳುವುದು ಹೆಚ್ಚು ಸುಲಭ ಎಂದು ಅವರು ನಂಬಿದ್ದಾರೆ. ಆದುದರಿಂದಲೇ ರಾಜ್ಯಾದ್ಯಂತ ದ್ವೇಷದ ಭಂಗಿ ಹಂಚುವುದರಲ್ಲಿ ನಿರತರಾಗಿದ್ದಾರೆ. ಕೆಲವು ವಿಷಯಗಳಿಗೆ ಸಂಬಂಧಿಸಿ ಜನರು ಆಗ್ರಹಿಸದೇ ಇದ್ದರೂ ಅವುಗಳನ್ನು ಈಡೇರಿಸುವುದರಲ್ಲಿ ರಾಜಕಾರಣಿಗಳಿಗೆ ಅತೀವ ಆಸಕ್ತಿಯಿರುತ್ತದೆ. ಅವುಗಳನ್ನು ಈಡೇರಿಸುವುದರಿಂದ ಜನರಿಗೆ ಲಾಭವಾಗುವುದಕ್ಕಿಂತ ರಾಜಕಾರಣಿಗಳಿಗೆ ಲಾಭವಿರುವುದೇ ಇದಕ್ಕೆ ಕಾರಣ. ‘ಗೋಕಳ್ಳತನವಾಗುತ್ತಿದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ’ ಎಂದು ಈ ರಾಜ್ಯದ ಯಾವುದೇ ಗೋ ಸಾಕುತ್ತಿರುವ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಿಲ್ಲ. ಗೋವುಗಳೊಂದಿಗೆ ಸಂಬಂಧವೇ ಇಲ್ಲದ ಸಂಘಪರಿವಾರ ಕಾರ್ಯಕರ್ತರ ಮೂಲಕ ಈ ಬೇಡಿಕೆ ಮುಂದಿರಿಸಿ, ಬಳಿಕ ಜಾನುವಾರು ಸಾಗಾಟಕ್ಕೆ ನಿಯಮಗಳನ್ನು ಹೇರಿ ರೈತರ ಬದುಕನ್ನು ರಾಜಕಾರಣಿಗಳು ಮೂರಾಬಟ್ಟೆ ಮಾಡಿದರು. ‘ನಮ್ಮನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ’ ಎಂದು ಯಾವುದೇ ಶ್ರೀಸಾಮಾನ್ಯ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಿಲ್ಲ. ಮತಾಂತರ ವಿರೋಧಿ ಕಾಯ್ದೆ ಬೇಕು ಎಂದು ಜನರು ಬೀದಿಗಿಳಿದದ್ದೂ ಇಲ್ಲ. ಇಷ್ಟಾದರೂ ರಾಜಕಾರಣಿಗಳೇ ಅತ್ಯಾಸಕ್ತಿಯಿಂದ ಈ ಕಾಯ್ದೆಯನ್ನು ಜಾರಿಗೆ ತಂದರು.
ಜನಪರವಾದ ಕಾಯ್ದೆಗಳನ್ನು ಜಾರಿಗೊಳಿಸಿ ಜನರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದು ಅಸಾಧ್ಯವಾಗಿರುವುದರಿಂದ ಇಂತಹ ಅನಗತ್ಯ ಕಾಯ್ದೆಗಳನ್ನೇ ಜನರ ಅಗತ್ಯ ಕಾಯ್ದೆಗಳಾಗಿ ರಾಜಕಾರಣಿಗಳು ಬಿಂಬಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಸಂಘಪರಿವಾರದ ಮಾನಸ ಪುತ್ರರಾಗಿರುವ ಉರಿ ಮತ್ತು ನಂಜುಗಳೆಂಬ ಎರಡು ಕೂಸುಗಳನ್ನು ಬಿಜೆಪಿ ನಾಯಕರು ಹೊರ ಬಿಟ್ಟಿದ್ದಾರೆ. ಇತಿಹಾಸದ ಮೇಲೆ ಸೂಸು ಮಾಡುವ ಮೂಲಕ ಈ ಕೂಸುಗಳು ಸುದ್ದಿಯಲ್ಲಿವೆಯಾದರೂ ನಾಡಿನ ಜನತೆ ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯ ನಾಯಕರು ನಿರಾಶರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ವರಿಷ್ಠರ ಗಮನವನ್ನು ಸೆಳೆದು, ಬಿಜೆಪಿಯಲ್ಲಿ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಒಂದೇ ಉದ್ದೇಶದಿಂದ ಬಸವನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪರಂತಹ ನಾಯಕರು ಬೀದಿ ಗದ್ದಲ ಎಬ್ಬಿಸುತ್ತಿದ್ದಾರೆ. ಸ್ವತಃ ಬಿಜೆಪಿಗೇ ತಲೆನೋವಾಗಿಬೆಳೆದಿರುವ ಯತ್ನಾಳ್, ಆ ತಲೆನೋವನ್ನು ಇದೀಗ ಜನಸಾಮಾನ್ಯರಿಗೂ ಹಂಚುವ ಸಿದ್ಧತೆಯಲ್ಲಿದ್ದಾರೆ. ಅದರ ಭಾಗವಾಗಿಯೇ ‘‘ಬಿಜೆಪಿ ಚುನಾವಣೆಯಲ್ಲಿ ಗೆದ್ದರೆ ರಾಜ್ಯದಲ್ಲಿ ಮದ್ರಸಗಳನ್ನು ಬಂದ್ ಮಾಡಿಸುತ್ತೇವೆ’’ ಎಂದು ಕರೆ ನೀಡಿದ್ದಾರೆ. ಈ ರಾಜ್ಯದ ಶ್ರೀಸಾಮಾನ್ಯರು ಬಿಜೆಪಿಯ ಬಳಿ ಯಾವತ್ತೂ ‘‘ರಾಜ್ಯದ ಮದ್ರಸಗಳನ್ನು ಬಂದ್ ಮಾಡಿ’’ ಎಂದು ಒತ್ತಾಯಿಸಿದ್ದೇ ಇಲ್ಲ. ಇಷ್ಟಾದರೂ ಈ ಕೊಡುಗೆಯನ್ನು ಯತ್ನಾಳ್ ತಾವಾಗಿಯೇ ನೀಡಿದ್ದಾರೆ.
‘‘ಅಸ್ಸಾಮ್‌ನಲ್ಲಿ ಮದ್ರಸಗಳನ್ನು ಬಂದ್ ಮಾಡಿಸಿದಂತೆ, ರಾಜ್ಯದಲ್ಲೂ ಬಂದ್ ಮಾಡಿಸುತ್ತೇವೆ. ಅದಕ್ಕಾಗಿ ನಿಮ್ಮ ಮತಗಳನ್ನು ನೀಡಿ’’ ಎಂದು ಅವರು ಜನರನ್ನು ಕೇಳಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕವನ್ನು ಅವರು ಇನ್ನೊಂದು ಅಸ್ಸಾಂ ಮಾಡಲು ಹೊರಟಿದ್ದಾರೆ. ಇತ್ತ ಶೇ. 40 ಕಮಿಶನ್ ಕುಖ್ಯಾತಿಯ ಮಾಜಿ ಸಚಿವ ಈಶ್ವರಪ್ಪರು ‘ಅಝಾನ್ ಬಂದ್ ಮಾಡಿಸುವೆ’ ಎಂಬ ಭರವಸೆಯನ್ನು ನೀಡಿದ್ದಾರೆ. ಇಂತಹ ಬಂದ್ ಬಗ್ಗೆಯೂ ಜನರೇನು ಅವರಿಗೆ ಮನವಿ ಮಾಡಿಲ್ಲ. ಒಟ್ಟಿನಲ್ಲಿ ಈಗಾಗಲೇ ಹಲವು ಉದ್ಯಮಗಳನ್ನು ಬಂದ್ ಮಾಡಿಸಿದ, ಸಾವಿರಾರು ಸರಕಾರಿ ಶಾಲೆಗಳನ್ನು ಬಂದ್ ಮಾಡಿಸಿದ, ಬ್ಯಾಂಕ್‌ಗಳನ್ನು ಬಂದ್ ಮಾಡಿಸಿದ ಈ ನಾಯಕರ ಪಾಲಿಗೆ, ಚುನಾವಣೆಯಲ್ಲಿ ನೀಡಬಹುದಾದ ಸುಲಭ ಭರವಸೆಯೆಂದರೆ ‘ಬಂದ್’ ಮಾಡಿಸುವುದು. ಜನರನ್ನು ನೈತಿಕವಾಗಿ ತಿದ್ದುವ, ಅವರಲ್ಲಿ ಮನುಷ್ಯತ್ವವನ್ನು ಅರಳಿಸುವ ಯಾವುದೇ ಸಂಸ್ಥೆಗಳು ಅಸ್ತ್ತಿತ್ವದಲ್ಲಿದ್ದರೂ ಅದರಿಂದ ಆಪತ್ತು ಎಂದು ಅರಿತಿರುವ ರಾಜಕೀಯ ನಾಯಕರು ಅವುಗಳ ಬಂದ್‌ಗಳ ಬಗ್ಗೆ ಆಸಕ್ತಿ ವಹಿಸುವುದು ಸಹಜವೇ ಆಗಿದೆ.
ನಿಜಕ್ಕೂ ಇವರಿಗೆ ಬಂದ್ ಮಾಡಿಸುವ ಬಗ್ಗೆ ಅತ್ಯಾಸಕ್ತಿ ಇದೆ ಎಂದಾದರೆ ಬಂದ್ ಮಾಡಿಸುವ ಹತ್ತು ಹಲವು ಕ್ಷೇತ್ರಗಳು ಇವೆ. ಈಗಾಗಲೇ ನಾಡಿನಾದ್ಯಂತ ಮಹಿಳೆಯರು ‘ಶರಾಬು ಅಂಗಡಿ’ಗಳನ್ನು ಬಂದ್ ಮಾಡಿಸಿ ಎಂದು ದೊಡ್ಡ ಮಟ್ಟದಲ್ಲಿ ರ್ಯಾಲಿ ನಡೆಸಿದ್ದಾರೆ. ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಇರುವ ಈ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಿದ್ದೇ ಆದರೆ ನಾಡಿಗೆ ಹಲವು ಲಾಭಗಳಿವೆ. ಸರಕಾರ ಈಗಾಗಲೇ ಆರೋಗ್ಯ ಕ್ಷೇತ್ರಕ್ಕಾಗಿ ಕೋಟ್ಯಂತರ ರೂ.ಯನ್ನು ವ್ಯಯ ಮಾಡುತ್ತಿದೆ. ಕುಡಿತದಿಂದಾಗಿ ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೈಹಿಕ ಆರೋಗ್ಯ ಮಾತ್ರವಲ್ಲ, ಕುಟುಂಬದ ಆರ್ಥಿಕ ಆರೋಗ್ಯಗಳೂ ಕೆಟ್ಟು ಅದರ ದುಷ್ಪರಿಣಾಮವನ್ನು ಮಹಿಳೆ, ಮಕ್ಕಳು ಉಣ್ಣುತ್ತಿದ್ದಾರೆ. ಮಕ್ಕಳು ಅರ್ಧದಲ್ಲೇ ಶಾಲೆ ತೊರೆಯುವುದಕ್ಕೆ, ಅಪೌಷ್ಟಿಕತೆಯಿಂದ ನರಳುವುದಕ್ಕೆ ಮದ್ಯದ ಕೊಡುಗೆ ಬಹುದೊಡ್ಡದು. ಬಹುತೇಕ ಕೌಟುಂಬಿಕ ದೌರ್ಜನ್ಯಗಳಿಗೆ ಕಾರಣ ಮದ್ಯದ ಚಟ. ಗ್ರಾಮೀಣ ಪ್ರದೇಶದ ಮಹಿಳೆಯರ ಬದುಕು ಈ ಶರಾಬು ಅಂಗಡಿಗಳಿಂದಾಗಿ ನರಕವಾಗಿದೆ.
ಕಾರ್ಮಿಕರು ಕೂಡ ದುಡಿದ ಹಣವನ್ನು ಪೂರ್ಣವಾಗಿ ಮದ್ಯದಂಗಡಿಗಳಿಗೆ ತೆತ್ತು, ಬದುಕನ್ನು ಛಿದ್ರ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ನಾಯಕರು ಕನಿಷ್ಠ ಹಿಂದೂಗಳ ಮೇಲೆ ಕಾಳಜಿಯನ್ನು ಹೊಂದಿರುವುದು ನಿಜವಾದರೂ ಮೊದಲು ಈ ಶರಾಬು ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ ಆಸಕ್ತಿ ವಹಿಸಬೇಕು. ಮದ್ರಸಗಳಲ್ಲಿ ಶರಾಬು ಕುಡಿಯಬೇಡಿ, ಮದ್ಯದ ದಾಸರಾಗಬೇಡಿ ಎಂದು ಕಲಿಸಲಾಗುತ್ತದೆ. ದಾನ ಧರ್ಮಗಳನ್ನು ಮಕ್ಕಳಿಗೆ ಬೋಧಿಸಲಾಗುತ್ತದೆ. ಬಡವರಿಂದ ಬಡ್ಡಿ ಕಿತ್ತುಕೊಳ್ಳಬೇಡಿ ಎಂದು ಕಲಿಸುತ್ತದೆ. ಬಹುಶಃ ಕೆಲವು ರಾಜಕಾರಣಿಗಳು ಮದ್ರಸಗಳನ್ನು ಬಂದ್ ಮಾಡಿಸಲು ಹೊರಟಿರುವುದು ಈ ಕಾರಣಕ್ಕಿರಬಹುದೇ ಎಂದು ಜನರು ಅನುಮಾನ ಪಡುವಂತಾಗಿದೆ. ಬಂದ್ ಮಾಡಿಸುವುದಾದರೆ ಶರಾಬು ಅಂಗಡಿಗಳನ್ನು ಬಂದ್ ಮಾಡಿಸುವ ಭರವಸೆ ಗಳನ್ನು ಚುನಾವಣೆಯಲ್ಲಿ ನೀಡಿ. ಬಡವರನ್ನು, ರೈತರನ್ನು ಬಡ್ಡಿ , ಚಕ್ರಬಡ್ಡಿ ಹಾಕಿ ಸುಲಿಯುವ ಫೈನಾನ್ಸ್‌ಗಳನ್ನು ಬಂದ್ ಮಾಡಿಸುವ ಭರವಸೆಗಳನ್ನು ನೀಡಿ. ವಿದ್ಯಾರ್ಥಿಗಳ ಬದುಕನ್ನು ನುಂಗಿ ಹಾಕುತ್ತಿರುವ ಡ್ರಗ್ಸ್, ಗಾಂಜಾಗಳನ್ನು ಬಂದ್ ಮಾಡಿಸುವ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಿ. ಇವೆಲ್ಲದರ ಬಗ್ಗೆ ವೌನ ತಾಳಿ ಮದ್ರಸ ಬಂದ್ ಮಾಡುತ್ತೇವೆ, ಅಝಾನ್ ಬಂದ್ ಮಾಡುತ್ತೇವೆ ಎನ್ನುವ ರಾಜಕಾರಣಿಗಳ ಬಾಯಿಯನ್ನು ಜನಸಾಮಾನ್ಯರೇ ಈ ಬಾರಿಯ ಚುನಾವಣೆಯಲ್ಲಿ ಬಂದ್ ಮಾಡಿಸಲಿದ್ದಾರೆ. ಇದರಲ್ಲಿ ಅನುಮಾನವಿಲ್ಲ.