ಉರಿಗೌಡ-ನಂಜೇಗೌಡ ಸಿನೆಮಾ ಮಾಡೋದಿರಲಿ, ಆ ಬಗ್ಗೆ ಇನ್ಮುಂದೆ ಮಾತಾಡಲ್ಲ: ಸಚಿವ ಮುನಿರತ್ನ
ಬೆಂಗಳೂರು, ಮಾ.20: ಒಕ್ಕಲಿಗರ ಒಕ್ಕೂಟ ಸೇರಿದಂತೆ ಅನೇಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉರಿಗೌಡ-ನಂಜೇಗೌಡ ಸಿನೆಮಾ ನಿರ್ಮಾಣ ಮಾಡುವ ನಿರ್ಧಾರದಿಂದ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ.
ಇಂದು ಬೆಳಗ್ಗೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವ ಮುನಿರತ್ನ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಸಚಿವ ಮುನಿರತ್ನ, ನಾನು ಯಾರಿಗೂ ಮನಸ್ಸು ನೋಯಿಸುವಂತಹ ಕೆಲಸ ಮಾಡುವುದಿಲ್ಲ. ಅಷ್ಟು ಕೆಟ್ಟ ಮನಸ್ಥಿತಿ ತನ್ನದ್ದಲ್ಲ. ಉರಿಗೌಡ-ನಂಜೇಗೌಡ ಸಿನೆಮಾ ನಿರ್ಮಾಣ ಮಾಡೋದಿರಲಿ, ಈ ಬಗ್ಗೆ ನಾನು ಹೇಳಿಕೆಯನ್ನೂ ಕೊಡುವುದಿಲ್ಲ ಎಂದು ತಿಳಿಸಿದರು.
ಉರಿಗೌಡ-ನಂಜೇಗೌಡ ವಿಚಾರ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಮುನಿರತ್ನ ಅವರು ಈ ಹೆಸರನ್ನು ನೋಂದಣಿ ಮಾಡಿಸಿ, ಚಲನಚಿತ್ರ ಮಾಡುವುದಾಗಿ ಘೋಷಿಸಿ, ಮುಹೂರ್ತದ ದಿನಾಂಕವನ್ನೂ ಪ್ರಕಟಿಸಿದ್ದರು. ಆದರೆ ಇಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಸ್ವಾಮೀಜಿಯ ಸೂಚನೆಯಂತೆ ವಿವಾದಿತ ಉರಿಗೌಡ-ನಂಜೇಗೌಡ ವಿಚಾರದಿಂದ ಮುನಿರತ್ನ ಹಿಂದೆ ಸರಿದಿದ್ದಾರೆ.