ಉರಿಗೌಡ, ನಂಜೇಗೌಡ ಸಿನೆಮಾ ಕೈ ಬಿಟ್ಟ ಮುನಿರತ್ನ: ಗುರುಗಳು ಹೇಳಿದಂತೆ ಕೇಳಬೇಕು ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಮಾ.20: ಉರೀಗೌಡ, ನಂಜೇಗೌಡ ಸಿನೆಮಾ ಸ್ಥಗಿತಗೊಳಿಸಲು ಗುರುಗಳು ತಿಳಿಸಿದ ಹಿನ್ನೆಲೆಯಲ್ಲಿ 'ಗುರುಗಳು ಹೇಳಿದಂತೆ ಕೇಳಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಸಚಿವ ಹಾಗೂ ಸಿನೆಮಾ ನಿರ್ಮಾಪಕ ಮುನಿರತ್ನ ಅವರು ಸಿನೆಮಾ ಮಾಡುತ್ತಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುನಿರತ್ನ ಅವರು ಸಿನೆಮಾ ಮಾಡಲು ಹೊರಟಿದ್ದು, ಅದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ಅವರಿಂದ ಪೂರ್ತಿ ಮಾಹಿತಿ ತಿಳಿದ ನಂತರ ಮಾತನಾಡುತ್ತೇನೆ' ಎಂದು ತಿಳಿಸಿದರು.
ಶ್ರೀಗಳ ಬೇಡ ಎಂದಿದ್ದಕ್ಕೆ ಮುನಿರತ್ನ ಹಿಂದೆ ಸರಿದಿದ್ದಾರೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಮೇಲಿನಂತೆ ಉತ್ತರಿಸಿದರು.
ಒಕ್ಕಲಿಗರ ಒಕ್ಕೂಟ ಸೇರಿದಂತೆ ಅನೇಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉರಿಗೌಡ-ನಂಜೇಗೌಡ ಸಿನೆಮಾ ನಿರ್ಮಾಣ ಮಾಡುವ ನಿರ್ಧಾರದಿಂದ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ.
ಇಂದು ಬೆಳಗ್ಗೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಸಚಿವ ಮುನಿರತ್ನ, 'ನಾನು ಯಾರಿಗೂ ಮನಸ್ಸು ನೋಯಿಸುವಂತಹ ಕೆಲಸ ಮಾಡುವುದಿಲ್ಲ. ಅಷ್ಟು ಕೆಟ್ಟ ಮನಸ್ಥಿತಿ ತನ್ನದ್ದಲ್ಲ. ಉರಿಗೌಡ-ನಂಜೇಗೌಡ ಸಿನೆಮಾ ನಿರ್ಮಾಣ ಮಾಡೋದಿರಲಿ, ಈ ಬಗ್ಗೆ ನಾನು ಹೇಳಿಕೆಯನ್ನೂ ಕೊಡುವುದಿಲ್ಲ' ಎಂದು ತಿಳಿಸಿದ್ದಾರೆ