'ಗೋ ಸೇವಾ ಆಯೋಗ' ಸ್ಥಾಪಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ
ಮುಂಬೈ: 2015ರ ಗೋಮಾಂಸವನ್ನು ನಿಷೇಧಿಸುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಜಾನುವಾರುಗಳ ಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲು ಗೋಸೇವಾ ಆಯೋಗವನ್ನು (cow service commission) ಸ್ಥಾಪಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ (Maharashtra Cabinet) ಒಪ್ಪಿಗೆ ನೀಡಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಆಯೋಗ ಸ್ಥಾಪನೆಗೆ 10 ಕೋಟಿ ರೂ. ಮಂಜೂರು ಮಾಡಿದೆ. ಈ ವಾರ ರಾಜ್ಯ ವಿಧಾನಸಭೆಯ ಮುಂದೆ ಕರಡು ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಗೋ ಸೇವಾ ಆಯೋಗವು ಜಾನುವಾರುಗಳ ಪಾಲನೆಯನ್ನು ಮೇಲ್ವಿಚಾರಣೆ ಮಾಡಲಿದ್ದು, ಜಾನುವಾರುಗಳಲ್ಲಿ ಯಾವುದು ಅನುತ್ಪಾದಕ ಮತ್ತು ಹಾಲುಕರೆಯುವಿಕೆ, ಸಂತಾನೋತ್ಪತ್ತಿ ಸೇರಿದಂತೆ ಕೃಷಿ ಕಾರ್ಯಗಳನ್ನು ನಿರ್ವಹಿಸಲು ಅನರ್ಹವಾಗಿದೆ ಎಂಬುದನ್ನು ನಿರ್ಣಯಿಸಲಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನುತ್ಪಾದಕ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಕಳುಹಿಸುವುದನ್ನು ತಡೆಯಲು ಆಯೋಗವು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಆಯೋಗವು ಸಮನ್ವಯ ಸಾಧಿಸಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಹಾರಾಷ್ಟ್ರ ಪ್ರಾಣಿ ಸಂರಕ್ಷಣೆ (ತಿದ್ದುಪಡಿ) ಪ್ರಾಣಿ ಕಾಯ್ದೆ, 1995ರ ಅಡಿಯಲ್ಲಿ ರಾಜ್ಯದಲ್ಲಿ ಗೋಹತ್ಯೆಯು ಕಾನೂನುಬಾಹಿರವಾಗಿದೆ.
24 ಸದಸ್ಯರ ಈ ಆಯೋಗವು ಬಿಡಾಡಿ ಮತ್ತು ಅನುತ್ಪಾದಕ ದನಗಳಿಗೆ ಆಶ್ರಯ ನೀಡಲು ರಚಿಸಲಾದ ಎಲ್ಲಾ ಗೋಶಾಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅಗತ್ಯವಿದ್ದರೆ ಈ ಸಂಸ್ಥೆಗಳಿಗೆ ಹಣಕಾಸಿನ ನೆರವು ಕೂಡಾ ನೀಡಬಹುದು ಎಂದು ಅಧಿಕಾರಿಯೊಬ್ಬರು 'ಹಿಂದೂಸ್ತಾನ್ ಟೈಮ್ಸ್'ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಿಸುವುದು ಹೇಗೆ?