ಕುಡಿಯುವ ನೀರಿನ ಯೋಜನೆಯ ಹಗರಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಅಪಾಯಕಾರಿ ರಾಸಾಯನಿಕಗಳಿಂದ ಕಲುಷಿತವಾಗಿರುವ ನೀರನ್ನು ಕುಡಿಯುತ್ತಿರುವ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಶುದ್ಧ ನೀರನ್ನು ನೀಡಲು ಸರಕಾರ ರೂಪಿಸಿರುವ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿರುವುದನ್ನು ವಿಧಾನ ಮಂಡಲದ ಉಭಯ ಸದನಗಳ ಜಂಟಿ ಸದನ ಸಮಿತಿ ಬಯಲಿಗೆ ತಂದಿದೆ. ಸಮಿತಿ ಹಲವಾರು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳು ಆತಂಕಕಾರಿಯಾಗಿವೆ. 2014ರಿಂದ ಜಾರಿಗೆ ಬಂದ ಈ ಯೋಜನೆಯನ್ವಯ ಹಂತ ಹಂತವಾಗಿ 2021ರವರೆಗೆ ರಾಜ್ಯದಲ್ಲಿ 26,000 ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗಳು ಆರಂಭಿಸಿದ ಈ ಯೋಜನೆಯನ್ನು ನಂತರದ ದಿನಗಳಲ್ಲಿ ನಗರಾಭಿವೃದ್ಧಿ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಗಳೂ ಕೈಗೆತ್ತಿಕೊಂಡು ಜಾರಿಗೊಳಿಸಿದವು. ಆದರೆ ಕ್ರಮೇಣ ರಾಜ್ಯದ ಕೆಲವೆಡೆ ಅಳವಡಿಸಿದ ಕುಡಿಯುವ ನೀರಿನ ಘಟಕಗಳು ಏಕಾಏಕಿ ನಿಂತು ಹೋದವು. ಕೆಲವೆಡೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋದರು.
ಈ ಕುರಿತು ತನಿಖೆಗೆ ಮುಂದಾದ ಜಂಟಿ ಸದನ ಸಮಿತಿಯ ಮುಂದೆ ಸರಕಾರದ ವಿವಿಧ ಇಲಾಖೆಗಳು ಸರಿಯಾದ ಮಾಹಿತಿಯನ್ನು ನೀಡಿಲ್ಲ. 26,569 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿದ ಸರಕಾರಿ ಇಲಾಖೆಗಳು ಉಳಿದ ಘಟಕಗಳ ಮಾಹಿತಿಯನ್ನು ನೀಡಲಿಲ್ಲ. ಇದರಿಂದ ಈ ಯೋಜನೆಯಲ್ಲಿ ಭಾರೀ ಹಗರಣ ನಡೆದಿರುವುದು ಬಹಿರಂಗವಾದಂತಾಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಂತರ್ಜಲ ತೀರ ಕೆಳಮಟ್ಟಕ್ಕೆ ಕುಸಿದಿದೆ.ಇದರಿಂದ ಫ್ಲೋರೈಡ್, ಆರ್ಸೆನಿಕ್ ಸೇರಿದಂತೆ ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುವ ನೀರನ್ನು ಜನಸಾಮಾನ್ಯರು ಕುಡಿಯುತ್ತಿದ್ದಾರೆಂದು ಅದನ್ನು ತಪ್ಪಿಸಲು ಸರಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲು ಹೊರಟರೆ ಅಲ್ಲಿಯೂ ವಂಚನೆ ಮತ್ತು ಹಗರಣ ನಡೆದಿರುವುದು ಕಳವಳಕಾರಿ ಸಂಗತಿಯಾಗಿದೆ.
ರಾಜ್ಯದ 26,000ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕಗಳ ಪೈಕಿ 7,893 ಘಟಕಗಳಲ್ಲಿ ಸರಕಾರದ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. 2,606 ಘಟಕಗಳನ್ನು ಟೆಂಡರ್ ಪ್ರಕ್ರಿಯೆ ನಡೆಸದೆ ಅಳವಡಿಸಲಾಗಿದೆ. ಹಾಗೂ 3,581 ಘಟಕಗಳ ಅಳವಡಿಕೆಯ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ಇಲ್ಲ. ಈ ಅಂಶಗಳನ್ನು ಗಮನಿಸಿದರೆ ಸರಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಹಗರಣದಲ್ಲಿ ಶಾಮೀಲಾಗಿರುವುದು ಖಚಿತವಾಗುತ್ತದೆ.ಕುಡಿಯುವ ನೀರಿನಲ್ಲಿ ಲಪಟಾಯಿಸುವ ಜನರ ಜೀವದ ಜೊತೆ ಆಟ ಆಡುವ ಈ ಪ್ರವೃತ್ತಿ ಆತಂಕಕಾರಿಯಾಗಿದೆ.
ಲಭ್ಯವಿರುವ ನೀರಿನ ಗುಣಮಟ್ಟದ ಬಗ್ಗೆ ಪ್ರಯೋಗಾಲಯದಿಂದ ಪರೀಕ್ಷಿಸಿ ವರದಿ ಪಡೆಯದೆ 2,195 ಘಟಕಗಳನ್ನು ಅಳವಡಿಸಲಾಗಿದೆ ಮತ್ತು 2,263 ಘಟಕಗಳಿಗೆ ಪೂರೈಸುತ್ತಿರುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಕುಡಿಯುವ ನೀರಿನ ಹೆಸರಿನಲ್ಲಿ ಜನರಿಗೆ ಮಾಡಿರುವ ವಂಚನೆಯಲ್ಲದೆ ಬೇರೇನೂ ಅಲ್ಲ.
ಶುದ್ಧ ಕುಡಿಯುವ ನೀರಿನ ಈ ಯೋಜನೆಯಲ್ಲಿ ಪ್ರತೀ ಘಟಕಕ್ಕೆ ಸರಾಸರಿ 7.48 ಲಕ್ಷ ರೂ. ವೆಚ್ಚವಾಗುತ್ತದೆ. ಇದೇ ಯೋಜನೆಯ ಕೆಲವು ಘಟಕಗಳಿಗೆ 45 ಲಕ್ಷ ರೂ.ಗಳವರೆಗೆ ವೆಚ್ಚ ಮಾಡಿರುವುದು ಸದರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಖಚಿತಪಡಿಸುತ್ತದೆ ಎಂದು ಸದನ ಸಮಿತಿ ಹೇಳಿರುವುದು ಭ್ರಷ್ಟಾಚಾರದ ವ್ಯಾಪಕತೆಯ ಮೇಲೆ ಬೆಳಕು ಚೆಲ್ಲುತ್ತದೆ.
ಶುದ್ಧ ಕುಡಿಯುವ ನೀರಿನ ಈ ಯೋಜನೆಯಲ್ಲಿ ಪ್ರತೀ ಹಂತದಲ್ಲೂ ಅಕ್ರಮ ನಡೆದಿದೆ, ಕಾನೂನು ಉಲ್ಲಂಘನೆಯಾಗಿದೆ. ಹಾಗಾಗಿ ಈ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಸದನ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.ಸರಕಾರ ಈ ಶಿಫಾರಸನ್ನು ವಿಳಂಬ ಮಾಡದೆ ಒಪ್ಪಿಕೊಂಡು ತನಿಖೆಗೆ ಆದೇಶ ನೀಡಬೇಕು. ಕುಡಿಯುವ ನೀರಿನ ಹೆಸರಿನಲ್ಲಿ ಜನರ ಜೀವದ ಜೊತೆಗೆ ಆಟ ಆಡಿದವರನ್ನು ಸುಮ್ಮನೆ ಬಿಡಬಾರದು. ಇದಕ್ಕೆ ಕಾರಣರಾದ ಎಲ್ಲರನ್ನೂ ದಂಡನೆಗೆ ಗುರಿಪಡಿಸಬೇಕು.
ಈಗ ಕಾರ್ಯನಿರ್ವಹಿಸುತ್ತಿರುವ ಕುಡಿಯುವ ನೀರಿನ ಘಟಕಗಳ ನೀರನ್ನು ಉನ್ನತ ಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕು.ಕಲುಷಿತ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳಿರುವ ನೀರು ಪೂರೈಕೆಯಾಗುವುದು ಕಂಡು ಬಂದರೆ ಅಂತಹ ಘಟಕಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಅಂತಹ ಕಡೆ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು.
ಸರಕಾರದ ಕುಡಿಯುವ ನೀರಿನ ಘಟಕಗಳ ಹಗರಣ ಒಂದು ಕಡೆಯಾದರೆ ರಾಜ್ಯದ ಎಲ್ಲ್ಲಾ ಜಿಲ್ಲೆಗಳ, ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ಖಾಸಗಿ ಘಟಕಗಳ ಹಗರಣ ಇನ್ನೂ ಭಯಾನಕವಾಗಿದೆ. ಕುಡಿಯುವ ನೀರೆಂದು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡದ ಅತ್ಯಂತ ಕಳಪೆ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ವ್ಯಾಪಾರ ರಾಜ್ಯದಲ್ಲಿ ಅತ್ಯಂತ ವ್ಯಾಪಕವಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಹಾಕಿಕೊಂಡು ಅವರಿಗೆ ತೃಪ್ತಿಯಾಗುವಷ್ಟು ಕಾಣಿಕೆಗಳನ್ನು ನೀಡಿ ಯಾವುದಾವುದೋ ಹೆಸರಿನಲ್ಲಿ ಈ ನೀರನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೂಡ ಸರಕಾರ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಸ್ವಾತಂತ್ರ್ಯ ಬಂದು ಏಳು ದಶಕಗಳ ನಂತರವೂ ಕುಡಿಯುವ ನೀರಿನ ಪರಿಸ್ಥಿತಿ ಇಷ್ಟೊಂದು ಆತಂಕಕಾರಿಯಾಗಲು ಕಾರಣ ಬರೀ ನೀರಿನ ಅಭಾವವಲ್ಲ. ಸರಿಯಾದ ನಿರ್ವಹಣೆ ಇಲ್ಲದಿರುವುದು ನಿಜವಾದ ಕಾರಣವಾಗಿದೆ. ನದಿ ನೀರನ್ನು ಸಂಸ್ಕರಿಸಿ ಕುಡಿಯಲು ಉಪಯೋಗಿಸುವ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಕೈಗಾರಿಕಾ ತ್ಯಾಜ್ಯದಿಂದ ನದಿಗಳ ನೀರು ಕೂಡ ಕಲುಷಿತವಾಗುತ್ತಿದೆ. ಅದನ್ನು ತಡೆಯಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಾಲಿನ್ಯ ಎಷ್ಟು ತೀವ್ರ ಸ್ವರೂಪ ತಾಳಿದೆಯೆಂದರೆ ಅಣೆಕಟ್ಟುಗಳ ಹಿನ್ನೀರು ಕೂಡ ಪರಿಶುದ್ಧವಾಗಿ ಉಳಿದಿಲ್ಲ.
ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಮಾತ್ರ ಅವಲಂಬಿಸುವುದು ಸರಿಯಲ್ಲ. ಈಗಂತೂ ಕುಡಿಯುವ ನೀರಿಗಾಗಿ ಕೊರೆಯುತ್ತಿದ್ದ ಕೊಳವೆ ಬಾವಿಗಳ ನೀರನ್ನು ಕೃಷಿ ಮತ್ತು ಕೈಗಾರಿಕೆಗಳಿಗೂ ಉಪಯೋಗಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಅಂತರ್ಜಲ ಕ್ರಮೇಣ ನಶಿಸಿ ಹೋಗುತ್ತಿದೆ. ಚಿಕ್ಕ ಬಳ್ಳಾಪುರ, ಕೋಲಾರದಂಥ ಜಿಲ್ಲೆಗಳಲ್ಲಿ ಏಳು ನೂರು ಅಡಿಯವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಹಾಗಾಗಿ ಅಂತರ್ಜಲ ಬಳಕೆಯ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.
ಕುಡಿಯುವ ನೀರಿನ ಖಾಸಗಿ ವಹಿವಾಟಿನಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವ ಜೊತೆಗೆ ರಾಜ್ಯದ ಎಲ್ಲ, ನಗರ ಪಟ್ಟಣ ಹಾಗೂ ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಸರಕಾರದ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಕೂಡ ಜನಜಾಗೃತಿ ಮೂಡಿಸಬೇಕು.