varthabharthi


ವಿಶೇಷ-ವರದಿಗಳು

ಪೊಮ್ಮಲರಿಗೆ ಮೀಸಲಾತಿ ದೊರಕೀತೇ?

ವಾರ್ತಾ ಭಾರತಿ : 21 Mar, 2023
ಕೆ.ಎನ್.ಲಿಂಗಪ್ಪ (ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಇಂತಹ ಸಮಾಜವನ್ನು ಈವರೆಗೂ ಗುರುತಿಸದಿರುವುದು ಸಂವಿಧಾನದತ್ತ ಆಶಯಗಳಿಗೆ ವ್ಯತಿರಿಕ್ತವಾಗಿದೆ. ಪಂಬಲ ಅಥವಾ ಪೊಮ್ಮಲ ಜಾತಿಯನ್ನು ಗುರುತಿಸಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದ್ದಲ್ಲಿ ಈ ಜನಾಂಗದ ಮುಂದಿನ ಪೀಳಿಗೆಯು ಶೈಕ್ಷಣಿಕವಾಗಿ ಸ್ವಲ್ಪಮಟ್ಟಿಗಾದರೂ ಅಭಿವೃದ್ಧಿ ಹೊಂದಬಹುದೆಂಬ ಒತ್ತಾಸೆಯಿಂದ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವುದರಿಂದ ಔದ್ಯೋಗಿಕವಾಗಿಯೂ ಸಹ ಅನುಕೂಲವಾಗಬಹುದೆಂಬ ಅಂಶಗಳನ್ನೂ ಮನಗಂಡು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪಂಬಲ ಅಥವಾ ಪೊಮ್ಮಲ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ಸೇರಿಸಲು ಸರಕಾರಕ್ಕೆ ಶಿಫಾರಸು ಮಾಡಿದೆ. ಸರಕಾರ ಮಾತ್ರ ಈ ದಿಸೆಯಲ್ಲಿ ಕುಂಭಕರ್ಣ ನಿದ್ದೆಯಲ್ಲಿದೆ.


ಬದುಕನ್ನು ಅರಸಿ ನಾಲ್ಕೈದು ತಲೆಮಾರುಗಳ ಹಿಂದೆಯೇ, ಆಂಧ್ರಪ್ರದೇಶದ ಗಡಿ ಭಾಗದಿಂದ ಬಂದು ನೆಲೆಸಿದವರೇ ಪೊಮ್ಮಲರು. ಪೊಮ್ಮಲ ಎಂಬುದು ಒಂದು ಜಾತಿಯ ಹೆಸರು. ಅಂದಿಗೆ ಸುಮಾರು ಹತ್ತಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ಕರ್ನಾಟಕದ ಚಿಂತಾಮಣಿ ತಾಲೂಕಿನ ಕುಗ್ರಾಮ ಒಂದಾದ ಕೃಷ್ಣರಾಜಪುರಕ್ಕೆ ಆಂಧ್ರದಿಂದ ಬಂದವರು. ಆದ್ದರಿಂದ ಇವರ ಜನಸಂಖ್ಯೆಯು ಆಂಧ್ರದಲ್ಲಿ ಎಷ್ಟಿದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಹಾಗೆ ಬಂದವರು ಮೊದ ಮೊದಲಿಗೆ ಕೃಷಿ ಕೂಲಿಯ ಜೊತೆಗೆ ಇನ್ನಿತರ ಸಣ್ಣಪುಟ್ಟ ಮನೆ ಕೆಲಸಗಳನ್ನು ಮಾಡಿಕೊಂಡು ಹೇಗೋ ಜೀವ ಹೊರೆದು ಕೊಳ್ಳುತ್ತಿರುವರು ಎಂದ ಮೇಲೆ ಅವರ ಕಡುಬಡತನದ ಬಗ್ಗೆ ಪ್ರತ್ಯೇಕ ಹೇಳಬೇಕಿಲ್ಲ. ಸದ್ಯ ಕೃಷ್ಣರಾಜಪುರದಲ್ಲಿ 30 ರಿಂದ 40 ಮನೆಗಳಿದ್ದು, 200ರಿಂದ 250 ಮಂದಿ ಆ ಜಾತಿಯವರಿರಬಹುದು. ಬಹುತೇಕ ಇವರು ಕಚ್ಚಾ ಮನೆ ಅಥವಾ ಗುಡಿಸಲು ವಾಸಿಗಳು.
ಪೊಮ್ಮಲರನ್ನು ‘ಪಂಬಲ’(pambala), ‘ಪಂಲಾ’(pamla), ‘ಪೊಮ್ಲ’(pomla), ‘ಪೊಮ್ಮಲ’ (pommala) ಎಂಬೆಲ್ಲ ಹೆಸರಿನಿಂದ ಕರೆಯುವರು ಎಂದು ಆ ಜನ ಹೇಳಿಕೊಳ್ಳುವರು. ಎಡ್ಗರ್ ಥರ್ಸ್ಟನ್ ಮತ್ತು ರಂಗಾಚಾರಿ ಅವರ ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು ಎಂಬ ಪುಸ್ತಕದಲ್ಲಿ ‘ಪಂಬಲ’(pambala) ಎಂದೇ ನಮೂದಾಗಿದೆ. ಬಹುಶಃ ಗ್ರಾಮೀಣರ ಬಾಯಲ್ಲಿ ಉಚ್ಚಾರಣೆಯ ಪ್ರಮಾದದಿಂದ ಹೆಸರುಗಳು ಬದಲಾಗಿರುವ ಸಾಧ್ಯತೆಯೂ ಇದೆ.

ಇವರ ಪ್ರವೃತ್ತಿ ಚರ್ಮದಿಂದ ತಯಾರಿಸಿದ ತಮಟೆಯಾಕಾರದ ಒಂದು ವಾದ್ಯ ಬಾರಿಸುವುದು. ಆ ವಾದ್ಯವನ್ನು ಪಂಬ ಅಥವಾ ಡೋಲು ಎಂದು ಕರೆಯುವರು. ಇತರ ಚರ್ಮ ವಾದ್ಯವಾದ ‘ಮದ್ದಲೆ’ ಹಾಗೂ ‘ಕವಾಡಿ’ಯನ್ನು ಬಾರಿಸುವ ಕಲೆ ಇವರಿಗೆ ತಿಳಿದಿದೆ. ಆಡು ಮಾತಿನಲ್ಲಿ ಈ ಉಪ ಕಸುಬಿನ ಕಲೆಯನ್ನು ‘ಪಂಬಲ’ ಅಥವಾ ‘ಪೊಮ್ಮಲ’ ಎಂದು ಕರೆಯುತ್ತಾರೆ. ಅದೇ ಕಾರಣದಿಂದ ಇವರು ಜಾತಿಯಿಂದ ಪೊಮ್ಮಲರಾಗಿರುವರು. ಈ ವಾದ್ಯಗಳನ್ನು ಗ್ರಾಮದ ಹಬ್ಬ-ಹರಿದಿನ, ಜಾತ್ರೆಗಳಲ್ಲಿ ನುಡಿಸುವ ಸಂಪ್ರದಾಯ ಇವರದು.

ಎಡ್ಗರ್ ಥರ್ಸ್ಟನ್ ಮತ್ತು ರಂಗಚಾರಿಯವರ ಪುಸ್ತಕದಲ್ಲಿ ಪಂಬಲರ ಕುರಿತು ಈ ರೀತಿ ವಿವರಿಸಲಾಗಿದೆ. ‘‘ಪಂಬಲರು ಅಥವಾ ಡೋಲು (ಪಂಬ) ಜನರನ್ನು ಮಾಲ ಎಂದು ಕರೆಯುತ್ತಾರೆ. ಮಾಲಾ ವಿವಾಹಗಳಲ್ಲಿ ಮತ್ತು ಅವರ ದೇವತೆಗಳ ಗೌರವಾರ್ಥವಾಗಿ ಆಚರಿಸುವ ಉತ್ಸವಗಳಲ್ಲಿ ಸಂಗೀತಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂಕಮ್ಮನ ಕಥೆಯ ನಿರೂಪಣೆಯಲ್ಲಿ ಮತ್ತು ಗಮಲ್ಲರ ಪೆದ್ದದಿನವು ಮರಣ ಧಾರ್ಮಿಕ ಕ್ರಿಯೆಯಲ್ಲಿ ಮುಗ್ಗು (ನೆಲದ ಮೇಲೆ ಚಿತ್ತಾರ ಬಿಡಿಸುವುದು) ರಚನೆಯಲ್ಲೂ ಅವರು ಭಾಗವಹಿಸುತ್ತಾರೆ.’’

ತೆಲುಗು ಮಾತನಾಡುವ ಆಂಧ್ರ ಮೂಲದವರಾದುದರಿಂದ ಇವರ ಮಾತೃಭಾಷೆ ಸಹಜವಾಗಿ ತೆಲುಗು ಆಗಿರುತ್ತದೆ. ಕರ್ನಾಟಕಕ್ಕೆ ವಲಸೆ ಬಂದ ನಂತರದಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ಅಸ್ಪಷ್ಟವಾಗಿ ಕನ್ನಡ ಮಾತನಾಡುವರು. ಇತ್ತೀಚಿನ ದಿನಗಳಲ್ಲಿ ಇವರ ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಿರುವುದರಿಂದ ಕನ್ನಡವನ್ನು ಚೆನ್ನಾಗಿ ಮಾತನಾಡುವರು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡದಿರುವುದರಿಂದ ಶೈಕ್ಷಣಿಕವಾಗಿ ಬಹಳ ಹಿಂದುಳಿದಿದ್ದಾರೆ. ಇತ್ತೀಚೆಗೆ ಒಬ್ಬಿಬ್ಬರು ಎಸೆಸೆಲ್ಸಿ ತೇರ್ಗಡೆ ಹೊಂದಿದವರು ಇದ್ದಾರೆ ಎಂದು ತಿಳಿದುಬಂದಿದೆ. ಸರಕಾರವು ಕಡ್ಡಾಯ ಮಾಡಿರುವ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಪಡೆದುಕೊಂಡಿರುವರಾದರೂ, ಪಡಿತರ ಚೀಟಿಗಳನ್ನು ಪಡೆಯಲು ಪಡಿಪಾಟಲು ಪಡುತ್ತಿದ್ದಾರೆ.

ಮೇಲ್ಜಾತಿಯವರು ಮನೆಯ ಒಳಗಡೆ ಇವರನ್ನು ಬಿಟ್ಟುಕೊಳ್ಳುವುದಿಲ್ಲ, ಹಾಗಾಗಿ ನಾವು ಅಸ್ಪೃಶ್ಯರು ಎಂದು ಯಾವ ಸಂಕೋಚವೂ ಇಲ್ಲದೆ ಹೇಳಿಕೊಳ್ಳುವರು. ಸಾಮಾಜಿಕವಾಗಿ ಅತಿ ಕೆಳಸ್ತರದಲ್ಲಿರುವ ಇವರು ಅತ್ಯಂತ ಹಿಂದುಳಿದವರಾಗಿದ್ದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿದ್ದಾರೆ. ಆಂಧ್ರಪ್ರದೇಶದಲ್ಲಿ ಪಂಬಲ ಜಾತಿಯನ್ನು ಅತ್ಯಂತ ಹಿಂದುಳಿದ ವರ್ಗದ ‘ಎ’ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕದಲ್ಲಿ ಯಾವ ಪಟ್ಟಿಯಲ್ಲಿಯೂ ಇವರು ಸೇರಿಲ್ಲ.

ಅರೆ ಅಲೆಮಾರಿಗಳಾಗಿ ಬದುಕುತ್ತಿರುವ ಈ ಪಂಬಲರ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಅವರಲ್ಲಿ ಇನ್ನೂ ಅರೆ ಅಲೆಮಾರಿತನ ಉಳಿದುಕೊಂಡಿದೆ ಎಂದು ತಿಳಿದು ಬರುತ್ತದೆ. ಯಾವುದೇ ಒಂದು ಸಮೂಹ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅದಕ್ಕೊಂದು ನಿಶ್ಚಿತವಾದ ನೆಲೆ, ಆರ್ಥಿಕವಾದ ಅವಲಂಬನೆ, ಸಾಮಾಜಿಕವಾದ ಭದ್ರತೆ, ಖಂಡಿತ ಬೇಕು. ಇಂತಹದು ಯಾವುದೇ ಇಲ್ಲದಿದ್ದಾಗ ಅಂತಹ ಸಮೂಹ ಅಲೆಮಾರಿಯಾಗಿಯೋ ಅಥವಾ ಅರೆಅಲೆಮಾರಿಯಾಗಿಯೋ ಉಳಿಯಲೇ ಬೇಕಾಗುತ್ತದೆ. ನೂರಿನ್ನೂರು ವರ್ಷಗಳ ಹಿಂದೆ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಲು ವಲಸೆ ಬಂದ ಇವರ ಸ್ಥಿತಿ ಇಂದಿಗೂ ಕಿಂಚಿತ್ತು ಬದಲಾಗಿಲ್ಲ.

ಈ ಜನಾಂಗವು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಲ್ಲಾ ತರಹದ ಅರ್ಹತೆ ಹೊಂದಿದ್ದರೂ ಆ ಸೌಲಭ್ಯ ದೊರೆಯದೆ ಸರ್ವರಿಗೂ ಸಮಪಾಲು-ಸಮಬಾಳು ಎಂಬ ನ್ಯಾಯಪರ ತತ್ವದಿಂದ ವಂಚನೆಗೊಳಪಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಸಮಾಜವನ್ನು ಈವರೆಗೂ ಗುರುತಿಸದಿರುವುದು ಸಂವಿಧಾನದತ್ತ ಆಶಯಗಳಿಗೆ ವ್ಯತಿರಿಕ್ತವಾಗಿದೆ. ಪಂಬಲ ಅಥವಾ ಪೊಮ್ಮಲ ಜಾತಿಯನ್ನು ಗುರುತಿಸಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿದ್ದಲ್ಲಿ ಈ ಜನಾಂಗದ ಮುಂದಿನ ಪೀಳಿಗೆಯು ಶೈಕ್ಷಣಿಕವಾಗಿ ಸ್ವಲ್ಪಮಟ್ಟಿಗಾದರೂ ಅಭಿವೃದ್ಧಿ ಹೊಂದಬಹುದೆಂಬ ಒತ್ತಾಸೆಯಿಂದ ಮತ್ತು ಶೈಕ್ಷಣಿಕವಾಗಿ ಮುಂದೆ ಬರುವುದರಿಂದ ಔದ್ಯೋಗಿಕವಾಗಿಯೂ ಸಹ ಅನುಕೂಲವಾಗಬಹುದೆಂಬ ಅಂಶಗಳನ್ನೂ ಮನಗಂಡು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪಂಬಲ ಅಥವಾ ಪೊಮ್ಮಲ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ಸೇರಿಸಲು ಸರಕಾರಕ್ಕೆ ಶಿಫಾರಸು ಮಾಡಿದೆ.

ಸರಕಾರ ಮಾತ್ರ ಈ ದಿಸೆಯಲ್ಲಿ ಕುಂಭಕರ್ಣ ನಿದ್ದೆಯಲ್ಲಿದೆ. ಸರಕಾರದ ನಿರ್ದಿಷ್ಟ ಸಮುದಾಯದ ಬಗ್ಗೆ ತಾನು ಹೊಂದಿರುವ ಮಮಕಾರ ಕುರಿತು ಒಂದು ಸ್ಪಷ್ಟ ಉದಾಹರಣೆ ಇಲ್ಲಿದೆ. ಸಾಂವಿಧಾನಿಕ ಆಯೋಗ ಒಂದಕ್ಕೆ ಒಂದೇ ಸಮುದಾಯದ 4 ಮಂದಿ ಸದಸ್ಯರನ್ನು ನೇಮಕ ಮಾಡುವ ಸಮುದಾಯ ಪ್ರಜ್ಞೆಯನ್ನು ಹೊಂದಿರುವ ಈ ಸ್ವಜನ (ಸ್ವಜಾತಿ)ಪಕ್ಷಪಾತ ಸರಕಾರಕ್ಕೆ, ಅತೀವ ಸಂಕಷ್ಟದಲ್ಲಿರುವ, ಅಲಕ್ಷಿತ-ಅಲ್ಪಸಂಖ್ಯಾತ ಹಾಗೂ ಅತ್ಯಂತ ತಳ ಜಾತಿ ಒಂದನ್ನು ಅರ್ಹತೆ ಇದ್ದರೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಸರಕಾರಕ್ಕೆ ಯೋಚಿಸಲು ಸಮಯವೇ ಇಲ್ಲ! ಸರಕಾರದ ಈ ಸಾಧನೆ(?)-ಸಾಮರ್ಥ್ಯ(?)ವನ್ನು ಅಳೆಯಲು ಸಮಾನ ಅಳತೆಗೋಲನ್ನು ತರುವುದಾದರೂ ಎಲ್ಲಿಂದ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)