'ಹರಕುಬಾಯಿಗಳಿಗೆ ಹೊಲಿಗೆ ಬೀಳಲಿ': ಬಿಜೆಪಿ MLC ಆಯನೂರು ಮಂಜುನಾಥ್ ಹೆಸರಿನಲ್ಲಿ ಫ್ಲೆಕ್ಸ್, ಪೋಸ್ಟರ್
ಈಶ್ವರಪ್ಪ ಕಾಳೆಲೆದ ನೆಟ್ಟಿಗರು
ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಪ್ರತಿನಿಧಿಸುತ್ತಿರುವ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ಹೆಸರಿನಲ್ಲಿ ಮತ್ತೆ ಹೊಸ ಫ್ಲೆಕ್ಸ್ ಹಾಗೂ ಪೋಸ್ಟರ್ ಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್ ಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
''ಶಿವಮೊಗ್ಗದಲ್ಲಿ ಶಾಂತಿ – ಸೌಹಾರ್ದತೆ ನೆಲೆಸಲಿ ಈ ಬಾರಿ ಆಯನೂರು ಮಂಜುನಾಥ್'' ಎಂಬ ಘೋಷವಾಕ್ಯಗಳ ಪ್ಲೆಕ್ಸ್ ನಗರದ ಹಲವೆಡೆ ರಾರಾಜಿಸುತ್ತಿವೆ. ಈ ಬಾರಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ತಾವು ಪ್ರಬಲ ಅಕಾಂಕ್ಷಿ ಎಂಬುದನ್ನು ಆಯನೂರು ಮಂಜುನಾಥ್ ಅವರು ಈಗಾಗಲೆ ಘೋಷಿಸಿದ್ದಾರೆ. ನಾನು ಕೂಡ ಪ್ರಬಲ ಆಕಾಂಕ್ಷಿ ಎಂಬುದುದನ್ನು ವರಿಷ್ಠರಿಗೆ ಹಾಗೂ ಸಂಘಪರಿವಾರದ ನಾಯಕರಿಗೆ ಸಂದೇಶ ರವಾನಿಸಿದ್ದಾರೆನ್ನಲಾಗಿದೆ.
''ಕೆ.ಎಸ್ ಈಶ್ವರಪ್ಪರವರೇ, ಆಯನೂರು ಮಂಜುನಾಥವ್ರು ನಿಮ್ಮನ್ನ ಮೆನ್ಷನ್ ಮಾಡಿ (ಉಲ್ಲೇಖಿಸಿ) ಫ್ಲೆಕ್ಸ್ ಹಾಕ್ಸವ್ರೆ, ನಿಮ್ ಗಮನಕ್ಕೇನಾದ್ರೂ ಬಂತೇ....?'' ಎಂದು ಶಿವಪ್ರಸಾದ್ ಎಂಬವರು ಫೇಸ್ ಬುಕ್ ನಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ಇನ್ನು ವಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯಿಸಿ, ''ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈ ಬ್ಯಾನರ್ ಮೂಲಕ ನೀಡುತ್ತಿರುವ ಸಂದೇಶವೇನು? ಬ್ಯಾನರ್‌ನಲ್ಲಿ ಬಿಜೆಪಿ ಚಿಹ್ನೆಯೇ ಇಲ್ಲ, "ಹರಕು ಬಾಯಿ"ಗೆ ಹೊಲಿಗೆ ಬೀಳಲಿ ಎಂದು ಈಶ್ವರಪ್ಪರಿಗೆ ತಪರಾಕಿ. ಕೋಮುವಾದದ ಬಿಜೆಪಿ ವಿರುದ್ದ ಸೌಹಾರ್ದತೆಯ ಅಸ್ತ್ರ ಇದು. ಬಿ.ಎಸ್ ಯಡಿಯೂರಪ್ಪ ಅವರು ಬಿಟ್ಟಿರುವ ಅಸ್ತ್ರವೇ?'' ಎಂದು ಟ್ವೀಟ್ ಮಾಡಿದೆ.
ಪೋಸ್ಟರ್ ನಲ್ಲಿ ಏನಿದೆ?
''ಹಿಂದೂ ಬಾಂಧವರಿಗೆ ಯುಗಾದಿ ಮತ್ತು ಮುಸ್ಲಿಮ್ ಬಾಂಧವರಿಗೆ ರಮಝಾನ್ ಶುಭಾಶಯಗಳು''
''ಹರಕುಬಾಯಿಗಳಿಗೆ ಹೊಲಿಗೆ ಬೀಳಲಿ... ಮುರಿದ ಮನಸುಗಳ ಬೆಸುಗೆಯಾಗಲಿ... ಶಿವಮೊಗ್ಗ ದಲ್ಲಿ ಶಾಂತಿ – ಸೌಹಾರ್ದತೆ ನೆಲೆಸಲಿ...'' ಎಂದು ಬರೆಯಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಆಯನೂರು ಮಂಜುನಾಥ್ ಅವರು ಸ್ವಪಕ್ಷೀಯರ ವೈಫಲ್ಯ ಎತ್ತಿ ತೋರಿಸಿದ್ದಾರೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.
'ಪದೇ ಪದೇ ಕೋಮು ಸಂಘರ್ಷಗಳಿಂದ ಬಡವರು,ಕಾರ್ಮಿಕರು ನೆಮ್ಮದಿಯಿಂದ ಇರಲಾಗುತ್ತಿಲ್ಲ. ಶಾಂತಿ – ಸೌಹಾರ್ದತೆ ಕದಡುವವರನ್ನು ಮಟ್ಟ ಹಾಕಲು ಈ ಬಾರಿ ಆಯನೂರು ಮಂಜುನಾಥ್' ಎಂಬ ಪೋಸ್ಟರ್, ಫ್ಲೆಕ್ಸ್ ಗಳು ಕಳೆದ ಎರಡು ತಿಂಗಳಿಂದ ಕಾಣಿಸಿಕೊಳ್ಳುತ್ತಿವೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಈ ಬ್ಯಾನರ್ ಮೂಲಕ ನೀಡುತ್ತಿರುವ ಸಂದೇಶವೇನು?
— Karnataka Congress (@INCKarnataka) March 21, 2023
◆ಬ್ಯಾನರ್‌ನಲ್ಲಿ ಬಿಜೆಪಿ ಚಿಹ್ನೆಯೇ ಇಲ್ಲ
◆"ಹರಕು ಬಾಯಿ"ಗೆ ಹೊಲಿಗೆ ಬೀಳಲಿ ಎಂದು ಈಶ್ವರಪ್ಪರಿಗೆ ತಪರಾಕಿ
◆ಕೋಮುವಾದದ ಬಿಜೆಪಿ ವಿರುದ್ದ ಸೌಹಾರ್ದತೆಯ ಅಸ್ತ್ರ
ಇದು @BSYBJP ಅವರು ಬಿಟ್ಟಿರುವ ಅಸ್ತ್ರವೇ @BJP4Karnataka?#BJPvsBJP pic.twitter.com/7iTytOw1xy