ಹಾಸನ | ಬೈಕ್ ವ್ಹೀಲಿಂಗ್ ವಿಚಾರದಲ್ಲಿ ಯುವಕನ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಹಾಸನ: ಮಾ,21: ವ್ಹೀಲಿಂಗ್ ಮಾಡುವ ವಿಚಾರದಲ್ಲಿ ಯುವಕನೋರ್ವನ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಮಾಹಿತಿ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರೋಹನ್ ಗೌಡ (24), ಪ್ರಜ್ವಲ್ ಜೆ ಎಸ್ (23) ಪ್ರಜ್ವಲ್ ಸಿಎನ್(24) ಸುದರ್ಶನ್(25) ಎಂಬುವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
''ಮಾಚ್ 17 ರಂದು ಗವೇನಹಳ್ಳಿ ಬೈಪಾಸ್ ಹತ್ತಿರ ವ್ಹೀಲಿಂಗ್ ವಿಚಾರವಾಗಿ ಹೇಮಂತ್ ಎಂಬ ಯುವಕನ ಹತ್ಯೆ ನಡೆದಿತ್ತು. 80 ಫೀಟ್ ರಸ್ತೆ ನಿವಾಸಿ ಸುಮಂತ್ (20) ವರ್ಷ ಎಂಬುವನೇ ಮೃತಪಟ್ಟ ಯುವಕ'' ಎಂದು ತಿಳಿಸಿದರು.
''ಮೃತ ಯುವಕ ಗವೇನಹಳ್ಳಿ ಬಳಿ ತನ್ನ ಬೈಕ್‍ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ವ್ಹೀಲಿಂಗ್ ಮಾಡದಂತೆ ಗವೇನಹಳ್ಳಿ ಗ್ರಾಮದ ಯುವಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಗಲಾಟೆ ಶುರುವಾಗಿದೆ. ಅಲ್ಲೇ ಇದ್ದ ಸ್ಥಳೀಯರು ಗಲಾಟೆ ಬಿಡಿಸಿ ಕಳುಹಿಸಿದ್ದರು''.
''ಇಷ್ಟಕ್ಕೆ ಸುಮ್ಮನಾಗದ ಸುಮಂತ್ ಲಾಂಗ್ ಹಾಗೂ ಚಾಕುಗಳ ಜೊತೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಕೊಂಡು ಗವೇನಹಳ್ಳಿಗೆ ಬಂದಿದ್ದಾನೆ. ವ್ಹೀಲಿಂಗ್ ಮಾಡುವುದನ್ನು ತಡೆದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಗ್ರಾಮದ ಪ್ರಜ್ವಲ್ ಮತ್ತು ಕೆಲವು ಯುವಕರು ಚಾಕು, ಲಾಂಗ್ ಕಿತ್ತುಕೊಂಡ ಸುಮಂತ್ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾರೆ. ತಕ್ಷಣ ಗಾಯಾಳು ಸುಮಂತ್‍ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ'' ಎಂದು ಮಾಹಿತಿ ನೀಡಿದರು.
''ಆರೋಪಿಗಳ ಪತ್ತೆಗೆ ಬಡಾವಣೆ ಠಾಣೆಯ ಪಿಐ ಸ್ವಾಮಿನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು'' ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ತಿಳಿಸಿದರು.