ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ವಿಶೇಷ ಪೀಠ ರಚಿಸಲು ಒಪ್ಪಿದ ಸುಪ್ರೀಂ
ಹೊಸದಿಲ್ಲಿ: ಗುಜರಾತ್‌ನಲ್ಲಿ 2002 ರಲ್ಲಿ ನಡೆದ ಗಲಭೆಗಳ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನು (Bilkis Bano) ಪ್ರಕರಣದ 11 ಅಪರಾಧಿಗಳ ಶಿಕ್ಷೆ ವಜಾಗೊಳಿಸಿ ಅವರನ್ನು ಕಳೆದ ವರ್ಷ ಬಿಡುಗಡೆಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ವಿಶೇಷ ಪೀಠ ರಚಿಸಲು ಸುಪ್ರೀಂ ಕೋರ್ಟ್ (Supreme Court) ಇಂದು ಒಪ್ಪಿದೆ.
ಹೊಸ ಪೀಠ ಸ್ಥಾಪಿಸಲಾಗುವುದು ಎಂದು ಇಂದು ಬಿಲ್ಕಿಸ್ ಬಾನು ಅವರ ವಕೀಲೆ ಶೋಭಾ ಗುಪ್ತಾ ಅವರಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮತ್ತು ಜೆ ಬಿ ಪರ್ಡಿವಾಲ ಅವರ ಪೀಠ ಭರವಸೆ ನೀಡಿದೆ.
ಈ ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಮತ್ತು ಹೊಸ ಪೀಠ ಸ್ಥಾಪನೆಯಾಗಬೇಕು ಎಂದು ಶೋಭಾ ಗುಪ್ತಾ ಹೇಳಿದಾಗ ಈ ಕುರಿತು ಇಂದು ಸಂಜೆ ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.
ಮೇ 13, 2022 ರಂದು ಉನ್ನತ ನ್ಯಾಯಾಲಯವು ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿ ಅವಧಿಪೂರ್ವ ಬಿಡುಗಡೆ ಕುರಿತಂತೆ ಸರ್ಕಾರದ ಜುಲೈ 9, 1992 ನೀತಿಯ ಅನ್ವಯ ಪ್ರಕರಣದ ಅಪರಾಧಿಯೋರ್ವ ಮಾಡಿದ ಅಪೀಲನ್ನು ಎರಡು ತಿಂಗಳೊಳಗೆ ನಿರ್ಧರಿಸುವಂತೆ ಸೂಚಿಸಿತ್ತು.
ಈ ಪ್ರಕರಣದ ಎಲ್ಲಾ 11 ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಗುಜರಾತ್ ಸರ್ಕಾರ ಕಳೆದ ವರ್ಷದ ಆಗಸ್ಟ್ 15 ರಂದು ಅವರನ್ನು ಬಿಡುಗಡೆಗೊಳಿಸಿತ್ತು.
ಮೇ 12, 2022ರ ಆದೇಶ ಕುರಿತಂತೆ ಬಿಲ್ಕಿಸ್ ಬಾನು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಇದನ್ನೂ ಓದಿ: ಸೂಕ್ತ ಸಮರ್ಥನೆ ಇಲ್ಲದೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಬೇಡಿ: ನ್ಯಾಯಾಧೀಶರುಗಳಿಗೆ ಸುಪ್ರೀಂ ಕೋರ್ಟ್ ತಾಕೀತು