ನಾನೂ ಕೂಡಾ ಮೋದಿ, ನನಗೂ ಅವಮಾನವಾಗಿತ್ತು: ರಾಹುಲ್ ಗಾಂಧಿ ವಿರುದ್ಧದ ತೀರ್ಪು ಸ್ವಾಗತಿಸಿದ BJP ಸಂಸದ ಸುಶೀಲ್ ಮೋದಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) 2019 ರಲ್ಲಿ ನೀಡಿದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಕ್ರಿಮಿನಲ್ ಮತ್ತು ಸಿವಿಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ಅವರನ್ನು ದೋಷಿ ಎಂದು ನೀಡಿರುವ ತೀರ್ಪನ್ನು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಶೀಲ್ ಮೋದಿ ಸ್ವಾಗತಿಸಿದ್ದಾರೆ.
"ನಾನು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ನಾನೂ ಕೂಡಾ ಮೋದಿ. ರಾಹುಲ್ ಗಾಂಧಿ ಹೇಳಿಕೆಯಿಂದ ನಾನು ಅವಮಾನಿತನಾಗಿದ್ದೆ" ಎಂದು ಅವರು ndtv ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಿಹಾರದಿಂದ ರಾಜ್ಯಸಭಾ ಸದಸ್ಯರೂ ಆಗಿರುವ ಸುಶೀಲ್ ಮೋದಿ, ನಾನು ಪಾಟ್ನಾ ನ್ಯಾಯಾಲಯದಲ್ಲೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಅದಕ್ಕೂ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ ಸೂರತ್ ನ್ಯಾಯಾಲಯವು, ನಂತರ ಮೇಲ್ಮನವಿ ಸಲ್ಲಿಸಲು ಅವರಿಗೆ 30 ದಿನಗಳ ಜಾಮೀನು ಮಂಜೂರು ಮಾಡಿತ್ತು.