ಮಂಗಳೂರು: ಉಚಿತ ಇಫ್ತಾರ್ ಸೇವೆ ನೀಡುತ್ತದೆ ಇಂಪೈರ್ ಹೋಟೆಲ್
ಮಂಗಳೂರು: ಪವಿತ್ರ ರಂಝಾನ್ ತಿಂಗಳು ಆರಂಭಗೊಳ್ಳುತ್ತಿದ್ದಂತೆ, ನಗರದ ಇಂಪೈರ್ ಹೋಟೆಲ್ ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವ 'ಉಚಿತ ಇಫ್ತಾರ್' ಯೋಜನೆಯನ್ನು ಮತ್ತೊಮ್ಮೆ ಪ್ರಾರಂಭಿಸಿದೆ.
ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ಇರುವ ಈ ರೆಸ್ಟೋರೆಂಟ್ ನಲ್ಲಿ ರಂಝಾನ್ ಮಾಸದಲ್ಲಿ ಉಪವಾಸಿಗರಿಗೆ ಕಳೆದ ನಾಲ್ಕು ವರ್ಷಗಳಿಂದ ಉಚಿತ ಆಹಾರ ನೀಡಲಾಗುತ್ತಿದೆ. ಉಪವಾಸ ಮಾಡುವವರು ಇಫ್ತಾರ್ ಸಮಯದಲ್ಲಿ ರೆಸ್ಟೋರೆಂಟ್‌ಗೆ ಹೋಗಿ, ಉಚಿತ ಇಫ್ತಾರ್ ಸೌಲಭ್ಯವನ್ನು ಪಡೆಯಬಹುದು.
ರೆಸ್ಟೋರೆಂಟ್‌ನ ಮಾಲೀಕರಲ್ಲಿ ಒಬ್ಬರಾಗಿರುವ ಕೆ ಮಹಮ್ಮದ್ ಸರ್ಫ್ರಾಝ್ ಅವರು, ತಾವು ತಿನ್ನುವ ಆಹಾರವನ್ನೇ ಇಫ್ತಾರ್ ನಲ್ಲಿ ಉಚಿತವಾಗಿ ಬಡಿಸಲಾಗುತ್ತಿದ್ದು, ಆಹಾರದ ಗುಣಮಟ್ಟದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
“ರಂಝಾನ್ ಸಮಯದಲ್ಲಿ ಮಾತ್ರವಲ್ಲ, ರಂಝಾನ್ ಹೊರತಾದ ದಿನಗಳಲ್ಲಿಯೂ ಕೂಡಾ, ಆಹಾರವನ್ನು ದುಡ್ಡು ತೆತ್ತು ಪಡೆಯಲು ಸಾಧ್ಯವಾಗದ ಜನರು ನಮ್ಮ ರೆಸ್ಟೋರೆಂಟ್‌ಗೆ ಬಂದು ತಿನ್ನಬಹುದು. ನಮ್ಮ ರೆಸ್ಟೋರೆಂಟ್‌ನಲ್ಲಿ ಜನರು ತಿನ್ನಲು ಹಣ ಬೇಕಾಗಿಲ್ಲ ಎಂಬ ಉದ್ದೇಶದಿಂದ ನಾವು ವ್ಯವಹಾರವನ್ನು ನಡೆಸುತ್ತೇವೆ” ಎಂದು ಇನ್ನೋರ್ವ ಮಾಲೀಕ ಮಹಮ್ಮದ್ ತನ್ವೀಝ್ ವಾರ್ತಾ ಭಾರತಿಗೆ ತಿಳಿಸಿದ್ದಾರೆ.
“ಯಾರೂ ಹಸಿವಿನಿಂದ ಮಲಗದ ಮಂಗಳೂರನ್ನು ನಾವು ಕನಸು ಕಾಣುತ್ತೇವೆ. ಆದ್ದರಿಂದ ಯಾರಾದರೂ ಆಹಾರವನ್ನು ಪಡೆಯಲು ಸಾಧ್ಯವಾಗದೆ ನಮ್ಮ ಬಳಿಗೆ ಬಂದಾಗ, ನಾವು ಅವರಿಗೆ ಬಡಿಸುತ್ತೇವೆ, ಇತರೆ ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರು ತಿನ್ನುವ ಮುನ್ನ ನಮ್ಮಲ್ಲಿ ದುಡ್ಡು ಇಲ್ಲ ಎಂದು ನಮಗೆ ತಿಳಿಸಬೇಕಾಗಿಯೂ ಇಲ್ಲ” ಎಂದು ಸರ್ಫರಾಝ್ ಹೇಳಿದ್ದಾರೆ.