ದುರಿತ ಕಾಲದ ಒತ್ತಡ, ಅತಂತ್ರ ಸ್ಥಿತಿಯ ನಡುವೆ ಜ್ಞಾನದೀಪಗಳು...
ಮಾರ್ಚ್ 27ಕ್ಕೆ ನಡೆಯಲಿರುವ ‘ವಿಶ್ವರಂಗಭೂಮಿ ದಿನಾಚರಣೆ’ ಅಂಗವಾಗಿ ಈ ವರ್ಷ ಈಜಿಪ್ಟ್ನ ರಂಗನಟಿ ಸಮೀಹಾ ಅಯ್ಯೂಬ್ ಅವರು ಸಂದೇಶ ನೀಡಿದ್ದಾರೆ.
1962ರಿಂದ ವಿಶ್ವ ರಂಗಭೂಮಿ ದಿನವನ್ನು ಅಂತರ್ರಾಷ್ಟ್ರೀಯ ರಂಗ ಸಂಸ್ಥೆಗಳು, ರಂಗಕೇಂದ್ರಗಳು, ಅಂತರ್ರಾಷ್ಟ್ರೀಯ ರಂಗ ಸಂಸ್ಥೆಗಳ ಸದಸ್ಯರು, ರಂಗಭೂಮಿ ವೃತ್ತಿಪರರು, ನಾಟಕ ಸಂಸ್ಥೆಗಳು, ನಾಟಕ ವಿಶ್ವವಿದ್ಯಾನಿಲಯಗಳು ಮತ್ತು ರಂಗ ಪ್ರೇಮಿಗಳು ಮಾರ್ಚ್ 27ರಂದು ವಿಶ್ವದಾದ್ಯಂತ ಆಚರಿಸುತ್ತಾರೆ. ಈ ದಿನ ರಂಗಭೂಮಿ ಎಂಬ ಕಲಾ ಪ್ರಕಾರದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಮಾನ್ಯ ಮಾಡುವ ಹಾಗೂ ಆಚರಣೆಯ ದಿನವಾಗಿರುತ್ತದೆ. ರಂಗಭೂಮಿಯ ಮೌಲ್ಯವನ್ನು ಇನ್ನೂ ಗುರುತಿಸದ ಸರಕಾರಗಳಿಗೆ ರಾಜಕಾರಣಿಗಳಿಗೆ ಮತ್ತು ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ.
ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಗೆ ರಂಗಭೂಮಿಯ ಸಾಮರ್ಥ್ಯದ ಅರಿವನ್ನು ಉಂಟುಮಾಡುವ ಜಾಗೃತ ದಿನವಾಗಿರುತ್ತದೆ. ಪ್ರತೀ ವರ್ಷವೂ ವಿವಿಧ ದೇಶಗಳ ಕಲಾವಿದರನ್ನು ಗುರುತಿಸಿ, ಅವರಿಂದ ಸಂದೇಶವನ್ನು ಪಡೆದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲಾಗುತ್ತದೆ. ಸಾಮೂಹಿಕವಾಗಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಚರಿಸುವ ರಂಗ ತಂಡಗಳು, ಸಂಸ್ಥೆಗಳು ಆ ಸಂದೇಶವನ್ನು ಸಮಾರಂಭದಲ್ಲಿ ಓದುವ ಮುಖಾಂತರ ಸಾವಿರಾರು ಜನರ ಗಮನಕ್ಕೆ ತರುವ ಮುಖಾಂತರ, ಸಮಾರಂಭವನ್ನು ಪ್ರಾರಂಭಿಸಲಾಗುತ್ತದೆ; ಸಂದೇಶದ ಸಾಮಾಜಿಕ ಅಂಶಗಳ ಕುರಿತು ವಿಮರ್ಶೆ ಮಾಡಲಾಗುತ್ತದೆ; ವಿವಿಧ ಕಲಾಪ್ರಕಾರಗಳ ಕಲಾವಿದರಿಗೆ ಗೌರವ ಸನ್ಮಾನವನ್ನು ಮಾಡಲಾಗುತ್ತದೆ; ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂತರ್ರಾಷ್ಟ್ರೀಯ ರಂಗಭೂಮಿ ಸಂಸ್ಥೆಯ ಸಮ್ಮೇಳನ ಹೆಲ್ಸಿಂಕಿಯಲ್ಲಿ ಮೊದಲಿಗೆ ಮತ್ತು ನಂತರದಲ್ಲಿ ವಿಯೆನ್ನಾದಲ್ಲಿ ನಡೆಯಿತು. 1961ರ ಜೂನ್ನಲ್ಲಿ ನಡೆದ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಫಿನ್ನಿಶ್ ರಂಗಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಆರ್ವಿ ಕಿವಿಮಾ ಅವರು ಪ್ರತೀ ವರ್ಷವೂ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸಬೇಕು ಎನ್ನುವ ಇಂಗಿತವನ್ನು ಸಭೆಯಲ್ಲಿ ಮಂಡಿಸಿದರು. 1962, ಮಾರ್ಚ್ 27ರಂದು ಪ್ಯಾರೀಸ್ನಲ್ಲಿ ನಡೆದ ಅಂತರ್ರಾಷ್ಟ್ರೀಯ ರಂಗಸಂಸ್ಥೆಯ ಸಮಾರಂಭದಿಂದ ವಿಶ್ವ ರಂಗಭೂಮಿ ದಿನ ಆಚರಣೆಗೆ ಬಂದಿದೆ. ಇಂದಿಗೆ ನೂರಕ್ಕೂ ಹೆಚ್ಚಿನ ದೇಶಗಳಲ್ಲಿ ಮಾರ್ಚ್ 27ಕ್ಕೆ ವಿಶ್ವರಂಗಭೂಮಿ ದಿನಾಚರಣೆ ನಡೆಯುತ್ತಲಿದೆ. ಫ್ರಾನ್ಸ್ ದೇಶದ ಕವಿ, ನಾಟಕಕಾರ, ಕಥೆಗಾರ, ವಿನ್ಯಾಸಕ, ಚಲನಚಿತ್ರ ನಿರ್ದೇಶಕ, ಅಮೂರ್ತ ಚಿತ್ರಕಲಾವಿದ ಝಾನ್ ಕೊಕ್ಟೇಯುವಿಯಾ 1962 ರಲ್ಲಿ ಮೊದಲ ವಿಶ್ವರಂಗಭೂಮಿ ದಿನಾಚರಣೆಯ ಸಂದೇಶವನ್ನು ನೀಡಿದವರು. ಆಗ ಅವರಿಗೆ 73 ವರ್ಷ. 2002ರಲ್ಲಿ ಭಾರತ ದೇಶದಿಂದ ಸಂದೇಶವನ್ನು ಪ್ರಸಿದ್ಧ ಕನ್ನಡ ನಾಟಕಕಾರ ಗಿರೀಶ್ ಕಾರ್ನಾಡ್ ಅವರು ನೀಡಿದರು. ಈ ವರ್ಷ (2023) ಈಜಿಪ್ಟ್ನ ರಂಗನಟಿ ಸಮೀಹಾ ಅಯ್ಯೂಬ್ ಅವರು ಸಂದೇಶ ನೀಡಿರುತ್ತಾರೆ. ಈಗ ಸಮೀಹಾ ಅವರ ವಯಸ್ಸು 93 ವರ್ಷ.
ಅವರು ನೀಡಿದ ಸಂದೇಶವನ್ನು ರಂಗಕರ್ಮಿ ಬಿ. ಸುರೇಶ್ ಅನುವಾದಿಸಿದ್ದು ಇಲ್ಲಿದೆ.
ವಿಶ್ವದ ಎಲ್ಲಾ ಮೂಲೆಗಳಲ್ಲಿ ಇರುವ ಎಲ್ಲ ರಂಗಬಂಧುಗಳಿಗೆ, ವಿಶ್ವರಂಗದಿನದ ಈ ಸಂದೇಶವನ್ನು ಬರೆಯುವಾಗ, ನಿಮ್ಮಂದಿಗೆ ಮಾತಾಡುವ ಅವಕಾಶ ಸಿಕ್ಕಿರುವುದಕ್ಕಾಗಿ ಅತೀವ ಸಂತೋಷದ ಜೊತೆಗೆ ನಾವೆಲ್ಲರೂ ಅಂದರೆ ಕಲಾವಿದರು ಮತ್ತು ಕಲಾವಿದರಲ್ಲದವರು ಅನುಭವಿಸುತ್ತಿರುವ ದುರಿತ ಕಾಲದ ಒತ್ತಡಗಳು ಮತ್ತು ಅತಂತ್ರ ಸ್ಥಿತಿಗಾಗಿ ದೇಹದ ಕಣಕಣವೂ ಕಂಪಿಸುತ್ತಿದೆ ಎಂಬುದು ಸಹ ಸತ್ಯವೆ. ವಿಶ್ವವು ಈಗ ಎದುರಿಸುತ್ತಿರುವ ಯುದ್ಧಗಳು, ನೈಸರ್ಗಿಕ ವಿಕೋಪಗಳು ಮತ್ತಿತರ ಮನುಷ್ಯರೇ ಸೃಷ್ಟಿಸಿದ ಸಂಕಟಗಳ ನೇರ ಪರಿಣಾಮವೇ ಇದಾಗಿದೆ. ಇವು ಬಹಿರಂಗವನ್ನು ಮಾತ್ರವಲ್ಲ, ಅಂತರಂಗದ ಮನಃಶಾಂತಿಯನ್ನು ಸಹ ಕದಡುತ್ತಿವೆ.
ನಾನು ನಿಮ್ಮಂದಿಗೆ ಮಾತನಾಡುತ್ತಿರುವ ಈ ಸಮಯದಲ್ಲಿ ಎಲ್ಲರೂ ಒಂಟಿಯಾದ ದ್ವೀಪಗಳಂತೆ ಅಥವಾ ಮಂಜು ಮುಸುಕಿದ ಸಮುದ್ರದಲ್ಲಿ ತೇಲುತ್ತಿರುವ ಹಡಗುಗಳಂತೆ ಭಾಸವಾಗುತ್ತಿದ್ದಾರೆ. ಈ ಹಡಗುಗಳು ತಾವು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ತಲುಪಬೇಕಾದ ಗಮ್ಯದ ಯಾವ ಗುರುತುಗಳನ್ನೂ ದಿಗಂತದಲ್ಲಿ ಕಾಣಲಾಗದೆ, ಸುರಕ್ಷಿತ ತಾಣದಲ್ಲಿ ಲಂಗರು ಹಾಕುವ ಬಯಕೆಯನ್ನು ತಪ್ಪಿಸುವ ಭಯಂಕರ ಬಿರುಗಾಳಿ ಹಾಗೂ ಉಬ್ಬರವಿಳಿತ ತುಂಬಿದ ಸಮುದ್ರದಲ್ಲಿ, ಹಾಯಿಗಳಿಲ್ಲದ ದೋಣಿಗಳಂತೆ ಬಹುಕಾಲದಿಂದ ಸಾಗುತ್ತಿವೆಯೇನೋ ಎನಿಸುತ್ತಿದೆ.
ಹಿಂದೆಂದಿಗಿಂತಲೂ ಇಂದು ಜನರ ನಡುವೆ ಅತಿ ಹೆಚ್ಚು ಸಂಪರ್ಕ ಸಾಧಿಸಲಾಗಿದೆ. ಅದೇ ಕಾಲಕ್ಕೆ ಹೆಚ್ಚು ಅಂತರಗಳು-ಅಪಸ್ವರಗಳು ಸಹ ಇಂದು ನಮ್ಮ ನಡುವೆ ಇವೆ. ಸಮಕಾಲೀನ ವಿಶ್ವವೇ ಈ ಬಗೆಯ ವೈರುಧ್ಯವನ್ನು ನಮ್ಮ ಮೇಲೆ ಹೇರಿದೆ. ಎಲ್ಲಾ ಭೌಗೋಳಿಕ ಗಡಿಗಳನ್ನು ದಾಟಿ ಸುದ್ದಿಗಳನ್ನು ಜಗತ್ತಿನ ಎಲ್ಲ ಮೂಲೆಗೂ ತಲುಪಿಸುವ ಶಕ್ತಿಯನ್ನು ಆಧುನಿಕ ಸಂಪರ್ಕ ತಂತ್ರಜ್ಞಾನವು ಪಡೆದಿರುವ ಕಾಲದಲ್ಲಿಯೇ ವಿಶ್ವದೆಲ್ಲೆಡೆ ಹುಟ್ಟುತ್ತಿರುವ ತರ್ಕಾತೀತ ಅಪಸ್ವರಗಳು, ಮೂಲಭೂತವಾದಿ ಮನಃಸ್ಥಿತಿಯ ವಿವಾದಗಳು- ಒಬ್ಬರಿಂದೊಬ್ಬರ ನಡುವೆ ದೂರತ್ವವನ್ನು ಸೃಷ್ಟಿಸಿ ಮನುಷ್ಯತ್ವದಿಂದಲೇ ಬಹುತೇಕರನ್ನು ವಿಮುಖರನ್ನಾಗಿಸಿದೆ.
ರಂಗಭೂಮಿಯ ಮೂಲಗುಣವೇ ಮಾನವೀಯ ಕ್ರಿಯೆಗಳ ಮೂಲಕ ನೋಡುಗರ ಬದುಕಿಗೆ ಕನ್ನಡಿಯಾಗುವುದು. ವಿಶ್ವರಂಗಭೂಮಿಯ ದಿಗ್ಗಜ ಎನಿಸಿಕೊಂಡ ಸ್ಟಾನಿಸ್ಲಾವಸ್ಕಿ ಹೇಳುತ್ತಾನೆ- ‘ನಿಮ್ಮ ಕಾಲಿಗೆ ಮೆತ್ತಿದ ಕೆಸರಿನ ಜೊತೆಗೆ ರಂಗಭೂಮಿಗೆ ಬರಬೇಡಿ. ಆ ಕೆಸರು, ಕೊಳೆ, ಧೂಳನ್ನು ಹೊರಗೆ ಬಿಟ್ಟುಬಿಡಿ. ನಿಮ್ಮ ಸಂಕಟಗಳನ್ನು, ಭಿನ್ನಾಭಿಪ್ರಾಯಗಳನ್ನು, ಜಗಳಗಳನ್ನು ನಿಮ್ಮ ಹೊರಗಿನ ವಸ್ತ್ರಗಳ ಜೊತೆಗೆ ರಂಗಮಂದಿರದ ಬಾಗಿಲಾಚೆಯೇ ಬಿಟ್ಟುಬಿಡಿ. ಅವೆಲ್ಲವೂ ನಿಮ್ಮ ಜೀವನವನ್ನು ಮಾತ್ರವಲ್ಲ ನಿಮ್ಮ ಮನಸ್ಸನ್ನು ಸಹ ಕಲೆ ಎಂಬುದರಿಂದ ದೂರ ಮಾಡುತ್ತವೆ’ ನಾವು ರಂಗಮಂದಿರದ ವೇದಿಕೆಯನ್ನು ಹತ್ತುವಾಗ ಮನುಷ್ಯತ್ವ ಎಂಬ ಏಕೈಕ ಶಕ್ತಿಯ ಜೊತೆಗೆ ಹತ್ತುತ್ತೇವೆ ಮತ್ತು ಜಗತ್ತಿನ ಹಲವು ಜೀವಗಳನ್ನು ಪಾತ್ರವಾಗಿ ಆವಾಹಿಸಿಕೊಂಡು, ವೇದಿಕೆಯ ಮೇಲೆ ಜೀವಂತವಾಗಿಸುತ್ತೇವೆ. ಹಾಗೆ ಅರಳಿದ ಪ್ರತೀ ಪಾತ್ರವೂ ತನ್ನ ಪರಿಮಳದ ಮೂಲಕವೇ ಇತರರನ್ನು ಅರಳಿಸುತ್ತದೆ.
ನಾಟಕಕಾರರು, ನಿರ್ದೇಶಕರು, ನಟರು, ನೇಪಥ್ಯದವರು, ಕವಿಗಳು, ಸಂಗೀತಗಾರರು, ನೃತ್ಯ ಸಂಯೋಜಕರು, ತಂತ್ರಜ್ಞರು- ಯಾರೊಬ್ಬರನ್ನೂ ಬಿಡದೆ ಎಲ್ಲರೂ ಖಾಲಿ ವೇದಿಕೆಯ ಮೇಲೆ ಹೊಸ ಜೀವವನ್ನು ಸೃಷ್ಟಿಸುತ್ತೇವೆ. ಈ ಜೀವವು ಬಹುಕಾಲ ಉಳಿಯಲು - ಅದನ್ನು ಕೈ ಹಿಡಿದು ನಡೆಸುವವರು, ಪ್ರೀತಿಯಿಂದ ಅಪ್ಪುವವರು, ಕರುಣೆ ತೋರುವವರು ಮತ್ತು ಯಾವ ಹಾದಿ ಸರಿ ಎಂದು ಸಮಚಿತ್ತದಿಂದ ತಿಳಿಹೇಳುವ ಮನಸ್ಸುಗಳ ಅಗತ್ಯವಿದೆ.
ಏನೂ ಇಲ್ಲದ ರಂಗದ ಮೇಲೆ ಜೀವ ತರುವವರು ನಾವು ಎನ್ನುವಾಗ ನಾನು ಅತಿರೇಕದ ಮಾತಾಡುತ್ತಿಲ್ಲ. ಆ ಜೀವವು ಕತ್ತಲಿನಲ್ಲಿ ಸಣ್ಣ ಕೆಂಡದ ಹಾಗೆ ಉರಿಯುವಂತಹದು. ಇರುಳನ್ನು ಒರೆಸುವ ದೀಪದಂತಹುದು, ನಡುಗುವ ಚಳಿಯಲ್ಲಿ ಮೈ ಬೆಚ್ಚಗೆ ಮಾಡುವಂತಹುದು. ಅಂತಹ ಜೀವವನ್ನು ಹೊರುವವರು, ಸೃಷ್ಟಿಸುವವರು, ಅದೇ ಆಗುವವರೂ ನಾವೇ. ಆ ಜೀವಕ್ಕೆ ಬಣ್ಣ ಮತ್ತು ಅರ್ಥವನ್ನು ಕೊಡುವವರೂ ನಾವೇ. ಆ ಜೀವವನ್ನು ಇತರರು ಅರ್ಥ ಮಾಡಿಕೊಳ್ಳಲು ಬೇಕಾದ ಕಾರಣವನ್ನು ಸೃಷ್ಟಿಸುವವರೂ ನಾವೇ, ಕಲೆ ಎಂಬ ಬೆಳಕಿನ ಮೂಲಕ ಅಜ್ಞಾನ ಮತ್ತು ಅತಿರೇಕವನ್ನು ಎದುರಿಸುವ ಹೂರಣ ಒದಗಿಸುವವರೂ ನಾವೇ. ಜೀವನದ ಎಲ್ಲಾ ಸಾರವನ್ನು ಬಿಗಿದಪ್ಪಿಕೊಂಡು ಬದುಕುವ ಶಕ್ತಿಯನ್ನು ಜಗತ್ತಿಗೆ ಹಂಚುವವರೂ ನಾವೇ.
ಶ್ರಮ, ಸಮಯ, ಬೆವರು, ಕಣ್ಣೀರು, ನೆತ್ತರು ಮತ್ತು ಬುದ್ಧಿಶಕ್ತಿಯ ಜೊತೆಗೆ ನಮ್ಮದೆಂಬ ಎಲ್ಲವನ್ನೂ ತೊಡಗಿಸಿ ಸತ್ಯ, ಸೌಂದರ್ಯ, ಸದ್ಗುಣ ಎಂಬ ಮೂಲಭೂತ ವಿವರಗಳ ಮೂಲಕ, ಈ ಬದುಕು ಎಂಬುದು ಬದುಕಲು ಅರ್ಹವಾದುದು ಎಂಬ ಬಹುಮುಖ್ಯ ಸಂದೇಶ ದಾಟಿಸುವವರೂ ನಾವೇ.
ನಾನಿಂದು ನಿಮ್ಮಂದಿಗೆ ಮಾತಾಡುತ್ತಾ ಇರುವುದು ಎಲ್ಲ ಕಲೆಗಳನ್ನು ಒಳಗೊಂಡ ಅಪ್ಪನಂತಿರುವ ನಮ್ಮ ರಂಗಭೂಮಿ ಎಂಬುದನ್ನು ಸಂಭ್ರಮಿಸುವುದಕ್ಕಲ್ಲ. ಬದಲಿಗೆ, ನಾನು ನಿಮ್ಮನ್ನೆಲ್ಲ ಆಹ್ವಾನಿಸುತ್ತಾ ಇದ್ದೇನೆ. ನಾವೆಲ್ಲರೂ ಕೈ ಕೈ ಹಿಡಿದು, ಭುಜಕ್ಕೆ ಭುಜ ಕೊಟ್ಟು, ಧ್ವನಿ ಎತ್ತರಿಸಿ ಮಾತಾಡುವುದನ್ನು ರಂಗಭೂಮಿಯಲ್ಲಿ ಕಲಿತಿರುವಂತೆಯೇ ಒಕ್ಕೊರಲಿನಿಂದ ಧ್ವನಿ ಎತ್ತಿ ಕೂಗುತ್ತಾ, ಜಗತ್ತಿನ ಎಲ್ಲ ಮನಃಸಾಕ್ಷಿಯನ್ನು ಎಚ್ಚರಿಸುವಂತೆ, ಆ ಮೂಲಕ ಅವರೆಲ್ಲರೂ ಇರಬಹುದಾದ ಮಾನವತೆಯನ್ನು ಹುಡುಕಿ ತೆಗೆವಂತೆ ಮಾತಾಡೋಣ. ಹಾಗೆ ಎಚ್ಚರಗೊಳ್ಳಬೇಕಾದವನು ಸಹ ಸಂಪೂರ್ಣ ಮುಕ್ತ ಮನಸ್ಸಿನ, ಸಹಿಷ್ಣುತೆ ಇರುವ, ಪ್ರೇಮ- ಕರುಣೆ ತೋರುವ, ಕಕ್ಕುಲಾತಿಯಿಂದ ಎಲ್ಲರನ್ನೂ ನೋಡುವ, ಎಲ್ಲರನ್ನೂ ಒಳಗೊಳ್ಳುವ ಮನುಷ್ಯನೇ ಆಗಿರುತ್ತಾನೆ. ಆ ಮೂಲಕ ಎಲ್ಲಾ ರಾಕ್ಷಸೀ ಮನೋಭಾವಗಳನ್ನು, ವರ್ಣಭೇದವನ್ನು, ರಕ್ತಪಾತಕ್ಕೆಳಸುವ ಸಂಘರ್ಷಗಳನ್ನು, ಏಕಪಕ್ಷೀಯ ವಾತಾವರಣವನ್ನು ಮತ್ತು ಆತಂಕವನ್ನು ಕೊಡವಿ ನಮ್ಮ ಸಮಾಜದಿಂದ ದೂರ ಇಡೋಣ. ಮನುಷ್ಯನು ಈ ಭೂಮಿಯ ಮೇಲೆ ಮತ್ತು ಈ ಆಕಾಶದ ಕೆಳಗೆ ಸಹಸ್ರಾರು ವರ್ಷಗಳಿಂದ ನಡೆದಿದ್ದಾನೆ, ನಡೆಯುತ್ತಿದ್ದಾನೆ, ಮುಂದೆಯೂ ನಡೆಯುತ್ತಾನೆ. ಆತನ ಕಾಲುಗಳನ್ನು ಈ ಯುದ್ಧಗಳ ಸಂತೆಯಿಂದ, ನೆತ್ತರು ಹರಿಸುವ ಅಪದ್ಧಗಳಿಂದ ಹೊರಗೆ ತೆಗೆಯಿರಿ ಮತ್ತು ಅದೆಲ್ಲವನ್ನೂ ಹೊರಗಿಟ್ಟು, ಈ ರಂಗಭೂಮಿ ಎಂಬ ವಿಶ್ವದ ಬಾಗಿಲನ್ನು ಪ್ರವೇಶಿಸಲು ತಿಳಿಸಿ. ಇಂದಿನ ದಿನಗಳಲ್ಲಿ ಹಲವು ಅನುಮಾನಗಳಲ್ಲಿ, ಶಂಕೆಗಳಲ್ಲಿ, ಸಂದೇಹಗಳ ಮೋಡದಲ್ಲಿ ಮರೆಯಾಗಿರುವವರನ್ನು ಮರಳಿ ಮಾನವೀತೆಯ ಕಡೆಗೆ ತರುವವರು ಮತ್ತು ನಾವೆಲ್ಲರೂ ಸೋದರರೆಂಬ ಭಾವವನ್ನು ಹಂಚುವ ಶಕ್ತಿ ಇರುವವರು ಕಲಾವಿದರು ಮಾತ್ರವೇ ಎಂಬುದು ನೆನಪಿನಲ್ಲಿರಲಿ.
ಆದಿಮ ಕಾಲದಲ್ಲಿ ಮೊದಲ ಬಾರಿ ರಂಗವನ್ನು ಹತ್ತಿದ ನಟನಿಂದ ಇಂದಿನವರೆಗೆ, ಎಲ್ಲಾ ನಟರೂ ಜ್ಞಾನದೀಪವನ್ನು ಉರಿಸಲು ಮುಂಚೂಣಿಯಲ್ಲಿದ್ದವರು, ಇರುವವರು. ಈಗ ನಮ್ಮ ಆದ್ಯತೆಯು ನಮ್ಮೆದುರಿಗಿರುವ ಅಸಹ್ಯ ಸಂಘರ್ಷಗಳನ್ನು, ನೆತ್ತರು ಹೊಳೆ ಹರಿಸುವ ಯುದ್ಧಗಳನ್ನು, ಕೋಮುವಾದ ಮತ್ತು ದ್ವೇಷ ಹರಡುವ ಅಮಾನವೀಯತೆಯನ್ನು ತೊಳೆದು, ಶುದ್ಧ ಮತ್ತು ಸುಂದರವಾದ ಮಾನವೀಯತೆಯನ್ನು ಹರಡುವುದೇ ಆಗಿದೆ. ನಮ್ಮನ್ನು ಹೊರತುಪಡಿಸಿ ಮತ್ಯಾರಿಗೂ ಹೀಗೆ ಜೀವನವನ್ನು ಪ್ರೀತಿಸುವುದನ್ನು ಕಲಿಸಲು ಸಾಧ್ಯವಿಲ್ಲ. ನೆಮ್ಮದಿಯ ಹಾಗೂ ಮಾನವೀಯ ಜಗತ್ತನ್ನು ಸೃಷ್ಟಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ.