varthabharthi


ಕಾಲಮಾನ

ಚಿಪ್ಕೊ 50: ಒಂದು ಅಲಕ್ಷಿತ ಪರಂಪರೆ

ವಾರ್ತಾ ಭಾರತಿ : 25 Mar, 2023
ರಾಮಚಂದ್ರ ಗುಹಾ

‘ಚಿಪ್ಕೊ ಚಳವಳಿ’ ಎಂದು ನಾವು ಕರೆಯುವ ಈ ಹೋರಾಟಕ್ಕೆ ಈಗ ಐವತ್ತು ವರ್ಷಗಳು. ಚಿಪ್ಕೊ ಚಳವಳಿಯನ್ನು ಕಾಡು, ಹುಲ್ಲುಗಾವಲು ಮತ್ತು ನೀರಿನ ಸಾಮುದಾಯಿಕ ನಿಯಂತ್ರಣವನ್ನು ಪ್ರತಿಪಾದಿಸುವ ಇತರ ತಳಮಟ್ಟದ ಹೋರಾಟದ ಸರಣಿಗಳು ಅನುಸರಿಸಿದವು. ಭಾರತದ ಅಭಿವೃದ್ಧಿ ಪಥದ ಮರುಸಂರಚನೆಯ ಮಾರ್ಗವನ್ನು ಅದು ತೋರಿಸಿತೆಂದು ಈ ಸಂಘರ್ಷಗಳನ್ನು ವಿಶ್ಲೇಷಿಸಿದ ವಿದ್ವಾಂಸರು ವಾದಿಸಿದ್ದಾರೆ. ಅವರು ಹೇಳುವಂತೆ, ದೇಶದ ಜನಸಂಖ್ಯಾ ದಟ್ಟಣೆ ಮತ್ತು ಉಷ್ಣ ವಲಯದ ಪರಿಸರದ ದುರ್ಬಲತೆ ಗಮನಿಸಿದರೆ, ಭಾರತ ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಅಭಿವೃದ್ಧಿಯ ಅತಿ ಶಕ್ತಿ, ಅತಿ ಬಂಡವಾಳ, ಅತಿ ಸಂಪನ್ಮೂಲ ಮಾದರಿಯನ್ನು ಅನುಸರಿಸುವಲ್ಲಿ ತಪ್ಪಿದೆ.ಮಾರ್ಚ್ 27, 1973ರಂದು ಅಲಕಾನಂದ ಕಣಿವೆಯ ಹಳ್ಳಿಯಾದ ಮಂಡಲ್‌ನಲ್ಲಿ ರೈತರ ಗುಂಪೊಂದು ಮರಗಳನ್ನು ಅಪ್ಪಿಕೊಳ್ಳುವ ಮೂಲಕ, ಮರ ಕಡಿಯುವುದಕ್ಕೆ ತಡೆಯೊಡ್ಡಿತು. ಮಂಡಲ್‌ನಲ್ಲಿ ಆರಂಭವಾದ ಈ ಹೊಸ ಬಗೆಯ ಅಹಿಂಸಾತ್ಮಕ ವಿಧಾನವನ್ನು ಉತ್ತರಾಖಂಡದ ಹಿಮಾಲಯದ ಇತರ ಭಾಗಗಳಲ್ಲಿನ ಹಳ್ಳಿಗಳು ಕೂಡ ಅಲ್ಲಿನ ಅರಣ್ಯ ರಕ್ಷಣೆಗಾಗಿ ಅನುಸರಿಸಿದವು.

‘ಚಿಪ್ಕೊ ಚಳವಳಿ’ ಎಂದು ನಾವು ಕರೆಯುವ ಈ ಹೋರಾಟಕ್ಕೆ ಈಗ ಐವತ್ತು ವರ್ಷಗಳು. ಚಿಪ್ಕೊ ಚಳವಳಿಯನ್ನು ಕಾಡು, ಹುಲ್ಲುಗಾವಲು ಮತ್ತು ನೀರಿನ ಸಾಮುದಾಯಿಕ ನಿಯಂತ್ರಣವನ್ನು ಪ್ರತಿಪಾದಿಸುವ ಇತರ ತಳಮಟ್ಟದ ಹೋರಾಟದ ಸರಣಿಗಳು ಅನುಸರಿಸಿದವು. ಭಾರತದ ಅಭಿವೃದ್ಧಿ ಪಥದ ಮರುಸಂರಚನೆಯ ಮಾರ್ಗವನ್ನು ಅದು ತೋರಿಸಿತೆಂದು ಈ ಸಂಘರ್ಷಗಳನ್ನು ವಿಶ್ಲೇಷಿಸಿದ ವಿದ್ವಾಂಸರು ವಾದಿಸಿದ್ದಾರೆ. ಅವರು ಹೇಳುವಂತೆ, ದೇಶದ ಜನಸಂಖ್ಯಾ ದಟ್ಟಣೆ ಮತ್ತು ಉಷ್ಣವಲಯದ ಪರಿಸರದ ದುರ್ಬಲತೆ ಗಮನಿಸಿದರೆ, ಭಾರತ ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಅಭಿವೃದ್ಧಿಯ ಅತಿ ಶಕ್ತಿ, ಅತಿ ಬಂಡವಾಳ, ಅತಿ ಸಂಪನ್ಮೂಲ ಮಾದರಿಯನ್ನು ಅನುಸರಿಸುವಲ್ಲಿ ತಪ್ಪಿದೆ. 1947ರಲ್ಲಿ ದೇಶ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದಾಗ, ಹೆಚ್ಚು ತಳಮಟ್ಟದ, ಸಮುದಾಯ ಆಧಾರಿತ ಮತ್ತು ಪರಿಸರ ಜವಾಬ್ದಾರಿಯ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಬೇಕಾಗಿತ್ತು. ಆಗಲೂ ತಿದ್ದಿಕೊಳ್ಳಲು ಅವಕಾಶವಿತ್ತು ಎಂದೇ ವಾದಿಸಲಾಗಿತ್ತು. ಸರಕಾರ ಮತ್ತು ನಾಗರಿಕರು ಚಿಪ್ಕೊ ಕಲಿಸಿದ ಪಾಠವನ್ನು ಗಮನಿಸಬೇಕು ಮತ್ತು ಸಾರ್ವಜನಿಕ ನೀತಿಗಳು ಮತ್ತು ಸಾಮಾಜಿಕ ನಡವಳಿಕೆಯನ್ನು ಅದಕ್ಕೆ ಅನುಗುಣವಾಗಿ ಬದಲಿಸಬೇಕು. ಭವಿಷ್ಯದ ಪೀಳಿಗೆಯ ಹಿತಾಸಕ್ತಿ ಮತ್ತು ಅಗತ್ಯಗಳನ್ನು ಹಾಳು ಮಾಡದೆಯೇ ಜನಸಾಮಾನ್ಯರನ್ನು ಬಡತನದಿಂದ ಮೇಲೆತ್ತಬಲ್ಲ ಆರ್ಥಿಕ ಅಭಿವೃದ್ಧಿಯ ಹೊಸ ಮಾದರಿ ಅಗತ್ಯವಿತ್ತು.

ಭಾರತದಲ್ಲಿ ಪರಿಸರ ಚರ್ಚೆ 1980ರ ದಶಕದಲ್ಲಿ ಬಹಳ ತೀವ್ರವಾಗಿತ್ತು. ಚರ್ಚೆ ಹಲವು ಹಂತಗಳಲ್ಲಿ ನಡೆಯಿತು. ಪರಿಸರ ಬಿಕ್ಕಟ್ಟು ಎತ್ತಿರುವ ನೈತಿಕ ಪ್ರಶ್ನೆಗಳು, ಪರಿಸರ ಸುಸ್ಥಿರತೆಯನ್ನು ಉತ್ತೇಜಿಸಲು ರಾಜಕೀಯ ಅಧಿಕಾರ ಹಂಚುವಿಕೆಯಲ್ಲಿ ಅಗತ್ಯ ಬದಲಾವಣೆಗಳು, ಆರ್ಥಿಕ ಮತ್ತು ಪರಿಸರ ಉದ್ದೇಶಗಳನ್ನು ಏಕಕಾಲದಲ್ಲಿ ಪೂರೈಸಬಲ್ಲ ಸೂಕ್ತ ತಂತ್ರಜ್ಞಾನಗಳ ವಿನ್ಯಾಸ ಇವೆಲ್ಲವುಗಳ ಚರ್ಚೆಯಾಯಿತು. ಅರಣ್ಯ, ನೀರು, ಸಾರಿಗೆ, ಶಕ್ತಿ, ಭೂಮಿ, ಜೀವವೈವಿಧ್ಯತೆ ಈ ಎಲ್ಲ ಸಂಪನ್ಮೂಲ ವಲಯವನ್ನು ಚರ್ಚೆ ಒಳಗೊಂಡಿತು. ಕೇಂದ್ರ ಮತ್ತು ರಾಜ್ಯಗಳಲ್ಲಿಯೂ ಮೊದಲ ಬಾರಿಗೆ ಪರಿಸರ ಸಚಿವಾಲಯ ರಚನೆ ಮೂಲಕ ಸರಕಾರ ಪ್ರತಿಕ್ರಿಯಿಸಬೇಕಾದ ಒತ್ತಡ ಉಂಟಾಯಿತು. ಹೊಸ ಕಾನೂನುಗಳು ಮತ್ತು ಹೊಸ ನಿಯಂತ್ರಣ ಸಂಸ್ಥೆಗಳನ್ನು ರೂಪಿಸಲಾಯಿತು. ಮೊದಲ ಬಾರಿಗೆ, ಪರಿಸರದ ಪ್ರಶ್ನೆಗಳ ಮೇಲಿನ ವೈಜ್ಞಾನಿಕ ಸಂಶೋಧನೆ ನಮ್ಮ ಪ್ರಮುಖ ಕಲಿಕಾ ಕೇಂದ್ರಗಳಲ್ಲಿ ಜಾಗ ಪಡೆಯಿತು.

1980ರ ಪರಿಸರ ಸಂಬಂಧಿ ಸಾಧನೆಗಳು ನಂತರದ ದಶಕಗಳಲ್ಲಿ, 1991ರಲ್ಲಿ ಅಳವಡಿಸಿಕೊಂಡ ಆರ್ಥಿಕ ಉದಾರೀಕರಣದ ನೀತಿಯಿಂದಾಗಿ ವ್ಯಾಪಕವಾಗಿ ಸ್ಥಗಿತಗೊಂಡವು. ಹಲವು ವಿಧಗಳಲ್ಲಿ, ಉದಾರೀಕರಣವು ಅಗತ್ಯವೂ ಆಗಿತ್ತು ಮತ್ತು ಮಿತಿಮೀರಿದ್ದೂ ಆಗಿತ್ತು. ನೆಹರೂ ಮತ್ತು ಇಂದಿರಾ ಅವಧಿಯ ಪರವಾನಿಗೆ-ಪರವಾನಿಗೆ ಕೋಟಾ ರಾಜ್, ಉದ್ಯಮಶೀಲತೆಯನ್ನು ಕುಂಠಿತಗೊಳಿಸಿತ್ತು ಮತ್ತು ಬೆಳವಣಿಗೆಯನ್ನು ಸ್ಥಗಿತಗೊಳಿಸಿತ್ತು. ಆದರೂ, ಮಾರುಕಟ್ಟೆ ಸ್ವಾತಂತ್ರ್ಯ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸುತ್ತಿದ್ದಾಗ ಪರಿಸರ ಆರೋಗ್ಯ ಮತ್ತು ಸುರಕ್ಷತೆ ಇನ್ನೂ ನಿಯಂತ್ರಣದ ಅಗತ್ಯವಿದ್ದ ಒಂದು ಕ್ಷೇತ್ರವಾಗಿತ್ತು. ಅನಿಯಂತ್ರಿತವಾಗಿದ್ದರೆ (ಭಾರತದಲ್ಲಿ ಸಾಮಾನ್ಯವಾಗಿ ಇರುವಂತೆ) ಗಾಳಿ, ನೀರು, ಮಣ್ಣು ಮತ್ತು ಕಾಡಿನ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುವ, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸುವ ರಾಸಾಯನಿಕ ಕೈಗಾರಿಕೆಗಳು ಮತ್ತು ಇನ್ನೂ ಹೆಚ್ಚಿನ ಗಣಿಗಾರಿಕೆಯ ವಿಷಯದಲ್ಲಿ ಇದು ವಿಶೇಷ ಸತ್ಯವಾಗಿತ್ತು. ಏತನ್ಮಧ್ಯೆ, ಉದಾರೀಕರಣದ ಪರಿಣಾಮವಾಗಿ ಮಧ್ಯಮ ವರ್ಗಕ್ಕೆ ಸಿಕ್ಕ ಅವಕಾಶಗಳ ಏರಿಕೆ ಖಾಸಗಿ ಸಾರಿಗೆಯಲ್ಲಿ ಭಾರೀ ಉತ್ಕರ್ಷವನ್ನು ಉಂಟುಮಾಡಿತು. ಪಳೆಯುಳಿಕೆ ಇಂಧನಗಳ ಬಳಕೆ ಮತ್ತು ವಾತಾವರಣದ ಮಾಲಿನ್ಯಕ್ಕೆ ಸೇರ್ಪಡೆಯೂ ಅಗಾಧವಾಯತು.

1990ರ ದಶಕ ಮತ್ತು ಆನಂತರ, ಪರಿಸರದ ಅವನತಿಯ ವೇಗ ತೀವ್ರಗೊಂಡಿತು; ವ್ಯಂಗ್ಯವೆಂದರೆ, ಪರಿಸರವಾದಿಗಳ ಮೇಲಿನ ದಾಳಿಗಳಿಗೂ ಕಾರಣವಾಯಿತು. ಗಣಿಗಾರಿಕೆ ಕಂಪೆನಿಗಳು ಮಧ್ಯ ಭಾರತದಾದ್ಯಂತ ಕಾಡುಗಳನ್ನು ಧ್ವಂಸಗೊಳಿಸಿದವು ಮತ್ತು ಬುಡಕಟ್ಟು ಜನರನ್ನು ಸ್ಥಳಾಂತರಿಸಿದವು. ಇದರ ವಿರುದ್ಧ ಪ್ರತಿಭಟಿಸಿದವರನ್ನು ನಕ್ಸಲೈಟ್‌ಗಳೆಂದು ರಾಕ್ಷಸೀಕರಿಸಲಾಯಿತು ಮತ್ತು ಅನೇಕ ವೇಳೆ ದೀರ್ಘಾವಧಿಯವರೆಗೆ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಕೆಲವೊಮ್ಮೆ (ಸ್ಟಾನ್ ಸ್ವಾಮಿ ಪ್ರಕರಣದಲ್ಲಿ ಆದಂತೆ) ಜೈಲಿನಲ್ಲಿಯೇ ಸಾಯುತ್ತಿದ್ದರು. ಗಣಿಗಾರಿಕೆ ಮತ್ತು ಇತರ ರೀತಿಯ ಸಂಪನ್ಮೂಲ ಹೊರತೆಗೆಯುವಿಕೆಯಲ್ಲಿ ತೊಡಗಿಸಿಕೊಂಡ ಕಂಪೆನಿಗಳು ಎಲ್ಲಾ ಪಕ್ಷಗಳ ರಾಜಕಾರಣಿಗಳೊಂದಿಗೆ ನಿಕಟ ಪಾಲುದಾರಿಕೆ ಬೆಳೆಸಿಕೊಂಡವು. ಗುತ್ತಿಗೆಗಳಿಗೆ ಬದಲಾಗಿ ಅವರ ಕೈಬಿಸಿಮಾಡುವುದು, ಸಾರ್ವಜನಿಕ ಪರಿಶೀಲನೆಯಿಂದ ವಿನಾಯಿತಿ ಪಡೆಯುವುದು ನಡೆಯತೊಡಗಿತು. ಮುಖ್ಯವಾಹಿನಿಯ ಪತ್ರಿಕೆಗಳಲ್ಲಿನ ವಾಣಿಜ್ಯ ಪರ ಅಂಕಣಕಾರರು ಪರಿಸರ ಹೋರಾಟಗಾರರನ್ನು ಬಲಿಪಶುಗಳನ್ನಾಗಿಸುವಲ್ಲಿ, ಅವರ ಕಾಳಜಿಯನ್ನು ತಳ್ಳಿಹಾಕುವಲ್ಲಿ ಕೈಜೋಡಿಸಿದರು. ಚಿಪ್ಕೊದ ಐವತ್ತು ವರ್ಷಗಳ ನಂತರ, ಪರಿಸರ ಕಾಳಜಿಯು ಸಾರ್ವಜನಿಕ ಚರ್ಚೆಗಳಲ್ಲಿ ಕಾಣಿಸಿಕೊಂಡರೆ, ಅವು ಹವಾಮಾನ ಬದಲಾವಣೆಗೆ ಸಂಬಂಧಿಸಿದವಾಗಿವೆ. ಪ್ರತೀ ಅನಿರೀಕ್ಷಿತ ಬರ, ಚಂಡಮಾರುತ, ಪ್ರವಾಹ ಅಥವಾ ಕಾಳ್ಗಿಚ್ಚಿನೊಂದಿಗೆ, ಹವಾಮಾನ ಬದಲಾವಣೆಯ ಸಂದೇಹವಾದಿಗಳ ಸಂಖ್ಯೆ ಮತ್ತಷ್ಟು ಕುಸಿಯುತ್ತದೆ. ನಾವು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟಿನ ಅರಿವು ವಿಶೇಷವಾಗಿ ಯುವಕರಲ್ಲಿ ಹೆಚ್ಚಾಗಿರುತ್ತದೆ. ತಮ್ಮ ಜೀವಿತಾವಧಿಯ ಇನ್ನೂ ಬಹುಕಾಲವನ್ನು ಅವರು ಇದರೊಂದಿಗೆ ಕಳೆಯಬೇಕಾದವರಾಗಿದ್ದಾರೆ.

ವಾತಾವರಣದಲ್ಲಿ ಮನುಷ್ಯ ಪ್ರೇರಿತ ಅನಿಲಗಳ ಶೇಖರಣೆಯ ಪರಿಣಾಮಗಳು ಬಹುಶಃ ಇಂದಿನ ಅತ್ಯಂತ ದೊಡ್ಡ ಪರಿಸರ ಸವಾಲಾಗಿರಬಹುದು. ಆದರೂ, ಇದು ಒಂದೇ ಅಲ್ಲ. ವಾಸ್ತವವಾಗಿ, ಹವಾಮಾನ ಬದಲಾವಣೆ ಅಸ್ತಿತ್ವದಲ್ಲಿಲ್ಲದಿದ್ದರೂ ಭಾರತ ಪರಿಸರ ವಿಪತ್ತು ವಲಯವಾಗಿರುತ್ತಿತ್ತು. ವಿಶ್ವಾದ್ಯಂತದ ಅತಿ ಹೆಚ್ಚಿನ ವಾಯು ಮಾಲಿನ್ಯ ಉತ್ತರ ಭಾರತದ ನಗರಗಳಲ್ಲಿ ಕಂಡುಬರುತ್ತಿದೆ. ಜಲ ಮಾಲಿನ್ಯ ಕಡಿಮೆ ಗಂಭೀರ ಮಟ್ಟದ್ದಾಗಿದೆ. ವಾಸ್ತವವಾಗಿ, ಈ ನಗರಗಳು ಐತಿಹಾಸಿಕವಾಗಿ ನೆಲೆಗೊಂಡಿದ್ದ ದೊಡ್ಡ ನದಿಗಳು ಜೈವಿಕವಾಗಿ ಸತ್ತಿವೆ. ಎಲ್ಲೆಂದರಲ್ಲಿ ಅಂತರ್ಜಲ ಕ್ಷೀಣಿಸುತ್ತಿದೆ. ಮಣ್ಣಿನ ರಾಸಾಯನಿಕ ಮಾಲಿನ್ಯ ಹೆಚ್ಚಿನ ಮಟ್ಟದಲ್ಲಿದೆ. ದುರ್ಬಲ ಕರಾವಳಿ ಪರಿಸರ ವ್ಯವಸ್ಥೆಗಳು ಅಡ್ಡಾದಿಡ್ಡಿ ಮತ್ತು ಅನಿಯಂತ್ರಿತ ಕಟ್ಟಡ ನಿರ್ಮಾಣದಿಂದ ನಾಶವಾಗುತ್ತಿವೆ. ಮಿಶ್ರ ಉಷ್ಣವಲಯದ ಕಾಡುಗಳ ದೊಡ್ಡ ಪ್ರದೇಶಗಳು ಕಲ್ಲಿದ್ದಲು ಗಣಿಗಳಿಂದ ನಾಶವಾಗುತ್ತಿವೆ. ನೆಲದಡಿ ಬೆಲೆಬಾಳುವ ಅದಿರುಗಳನ್ನು ಹೊಂದಿರದ ಪ್ರದೇಶದ ಕಾಡುಗಳು ವಿನಾಶಕಾರಿ ಮತ್ತು ಭಾರತದ ಪಾಲಿಗೆ ಸಾಮಾನ್ಯವಾಗಿ ವಿಲಕ್ಷಣವಾಗಿರುವ ಕಳೆಗಳ ಕಾರಣದಿಂದಾಗಿ ಕಡಿಯಲ್ಪಡುತ್ತವೆ ಇಲ್ಲವೆ ಆಕ್ರಮಣಕ್ಕೊಳಗಾಗುತ್ತಿವೆ.

ಮೇಲೆ ವಿವರಿಸಲಾದ ಪರಿಸರ ಅವನತಿಯ ಬಹು ರೂಪಗಳು ಕೇವಲ ಸೌಂದರ್ಯದ ಪರಿಣಾಮಗಳನ್ನು ಮಾತ್ರ ಹೊಂದಿದವುಗಳಲ್ಲ. ದೊಡ್ಡ ಮಟ್ಟದ ಆರ್ಥಿಕ ವೆಚ್ಚಕ್ಕೂ ಕಾರಣವಾಗುವಂಥವು. ವಾಯು ಮತ್ತು ಜಲ ಮಾಲಿನ್ಯ ಜನರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಅವರನ್ನು ಕೆಲಸದಿಂದ ದೂರವಿಡುತ್ತದೆ. ಮಣ್ಣು ತುಂಬಾ ವಿಷಕಾರಿಯಾದಾಗ, ಹಿಂದೆ ಫಲವತ್ತಾಗಿದ್ದ ಭೂಮಿಗಳು ಕೃಷಿಯಿಂದ ಹೊರಗುಳಿಯುತ್ತವೆ. ಕಾಡುಗಳು ಮತ್ತು ಹುಲ್ಲುಗಾವಲುಗಳು ಖಾಲಿ ಯಾದಾಗ, ಗ್ರಾಮೀಣ ಜೀವನೋಪಾಯಕ್ಕೆ ಅಭದ್ರತೆ ಕಾಡುತ್ತದೆ.

ಪರಿಸರ ದುರುಪಯೋಗದ ಆರ್ಥಿಕ ಪರಿಣಾಮಗಳು ಹೆಚ್ಚಾಗಿ ಭಾರತದ ಅತ್ಯಂತ ಪ್ರಸಿದ್ಧ ಅರ್ಥಶಾಸ್ತ್ರಜ್ಞರ-ನೊಬೆಲ್ ಪ್ರಶಸ್ತಿ ವಿಜೇತರನ್ನೂ ಸೇರಿಸಿ ಯಾರ ಗಮನಕ್ಕೆ ಬರುತ್ತಿಲ್ಲ. ಆದರೂ, ಅಷ್ಟಾಗಿ ಪ್ರಸಿದ್ಧರಲ್ಲದ ಕೆಲವರು ಈ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಒಂದು ದಶಕದ ಹಿಂದೆ, ಅರ್ಥಶಾಸ್ತ್ರಜ್ಞರ ಗುಂಪು ಭಾರತದಲ್ಲಿ ಪರಿಸರ ನಾಶದ ವಾರ್ಷಿಕ ವೆಚ್ಚವು ಸುಮಾರು 3.75 ಟ್ರಿಲಿಯನ್ ರೂ. ಎಂದು ಅಂದಾಜಿಸಿದೆ. ಇದು ಜಿಡಿಪಿಯ 5.7 ಪ್ರತಿಶತಕ್ಕೆ ಸಮಾನವಾಗಿದೆ (ನೋಡಿ: ಮುತ್ತುಕುಮಾರ ಮಣಿ, ಸಂಪಾದಕ, Greening India’s Growth: Costs, Valuations, and Trade-Offs (ಹೊಸದಿಲ್ಲಿ: ರೌಟ್ಲೆಡ್ಜ್, 2013). ಈಗ ಗಾಳಿ ಮತ್ತು ನೀರು ಎಷ್ಟು ಹೆಚ್ಚು ಕಲುಷಿತಗೊಂಡಿದೆ, ಮಣ್ಣು ಎಷ್ಟು ಹೆಚ್ಚು ವಿಷಕಾರಿಯಾಗಿದೆ ಇತ್ಯಾದಿಗಳನ್ನು ಗಮನಿಸಿದರೆ, ಇಂದು ಆರ್ಥಿಕ ವೆಚ್ಚಗಳು ಬಹುಶಃ ಇನ್ನೂ ಹೆಚ್ಚಿರಬಹುದು.

ಭಾರತದಲ್ಲಿ, ಪರಿಸರ ನಾಶದ ಹೊರೆ ಮುಖ್ಯವಾಗಿ ಬಡವರ ಮೇಲೆ ಬೀಳುತ್ತದೆ ಎಂಬುದನ್ನು ಗುರುತಿಸುವುದು ಮುಖ್ಯ. ದಿಲ್ಲಿಯ ವಿದ್ಯುಚ್ಛಕ್ತಿ ಅಗತ್ಯಗಳಲ್ಲಿ ಹೆಚ್ಚಿನ ಪಾಲನ್ನು ಪೂರೈಸುವ ಸಿಂಗ್ರೌಲಿ ಪ್ರದೇಶದ ಗ್ರಾಮೀಣ ನಿವಾಸಿಗಳು ಕಲ್ಲಿದ್ದಲು ಗಣಿಗಾರಿಕೆಯ ಪರಿಣಾಮವಾಗಿ ಮಾರಣಾಂತಿಕ ಮಾಲಿನ್ಯವನ್ನು ಎದುರಿಸುತ್ತಿರುವುದು ಮಾತ್ರವಲ್ಲ, ಸ್ವತಃ ಬಹುತೇಕ ವಿದ್ಯುತ್ ಇಲ್ಲದೆಯೇ ಇದ್ದಾರೆ (ನೋಡಿ: ಎ.ವಸುಧಾ, ‘Dark and Toxic Under the Lamp: Industrial Pollution and Health Damage in Singrauli’, ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ, 4ನೇ ಮಾರ್ಚ್ 2023). ರಾಜಧಾನಿಯಲ್ಲಿಯೇ, ಶ್ರೀಮಂತರು ಒಳಾಂಗಣ ಪ್ಯೂರಿಫೈಯರ್‌ಗಳನ್ನು ಬಳಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಇವು ಕಾರ್ಮಿಕ ಸಮುದಾಯದ ಕೈಗೆಟುಕುವುದಿಲ್ಲ.

ಮನುಷ್ಯರು ಬದುಕಲು ಮತ್ತು ನಿಜವಾಗಿಯೂ ಏಳಿಗೆ ಹೊಂದಲು ಬಯಸಿದರೆ ಪ್ರಕೃತಿಯನ್ನು ಗೌರವಿಸಬೇಕು ಮತ್ತು ತಮ್ಮದೇ ಗಡಿಯೊಳಗೆ ಬದುಕಬೇಕು ಎಂಬ ಚಿಪ್ಕೊ ಪಾಠವನ್ನು ಇಂದು ಭಾರತದಲ್ಲಿ ಎಲ್ಲೆಡೆ ಉಲ್ಲಂಘಿಸಲಾಗುತ್ತಿದೆ ಮತ್ತು ಚಿಪ್ಕೊದ ಸ್ವಂತ ಹಿಮಾಲಯದ ತಾಯ್ನೊಡಿನಲ್ಲಿಯೇ ಆಗುತ್ತಿರುವಷ್ಟು ಭಯಂಕರವಾಗಿ ಇನ್ನೆಲ್ಲಿಯೂ ಆಗುತ್ತಿಲ್ಲ. ಜೋಶಿಮಠದ ದುರಂತ ಒಂದು ಎಚ್ಚರಿಕೆಯಾಗಿದೆ. 1970ರ ದಶಕದಿಂದಲೂ ವಿಜ್ಞಾನಿಗಳು ಮತ್ತು ಹೋರಾಟಗಾರರು (ಚಿಪ್ಕೊ ನಾಯಕ ಚಂಡಿ ಪ್ರಸಾದ್ ಭಟ್ ಸೇರಿದಂತೆ) ಈ ಪರಿಸರ ಶಿಥಿಲ ಪರ್ವತ ಪ್ರದೇಶದಲ್ಲಿ ರಸ್ತೆಗಳು ಮತ್ತು ಹೊಟೇಲ್‌ಗಳ ಅಜಾಗರೂಕ ವಿಸ್ತರಣೆ, ಸುರಂಗಗಳ ಸ್ಫೋಟ, ಜಲವಿದ್ಯುತ್ ಯೋಜನೆಗಳ ನಿರ್ಮಾಣದ ವಿರುದ್ಧ ಅಪಾಯದ ಎಚ್ಚರಿಕೆಗಳ ಸರಣಿಯನ್ನೇ ನೀಡಿದ್ದರು. ನಂತರದ ಸರಕಾರಗಳು ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದವು. ಹಾಗೆಯೇ ಸುಪ್ರೀಂ ಕೋರ್ಟ್ ಕೂಡ ತಾನೇ ನೇಮಿಸಿದ ಸಮಿತಿಯ ವಾದ ಮತ್ತು ದೊಡ್ಡ ಪ್ರಮಾಣದ ದಾಖಲಾತಿ ವರದಿಯನ್ನು ತಿರಸ್ಕರಿಸಿತು ಮತ್ತು ಅಸಮರ್ಪಕ ಕಲ್ಪನೆಯ, ಅತ್ಯಂತ ವಿನಾಶಕಾರಿ ಚಾರ್ ಧಾಮ್ ಹೆದ್ದಾರಿ ಯೋಜನೆಗೆ ಹಸಿರು ನಿಶಾನೆ ತೋರಿಸಿತು. ಜೋಶಿಮಠದ ಮುಳುಗಡೆ ಅಂತಹ ಇನ್ನಷ್ಟು ಅನಾಹುತಗಳ ಮುನ್ಸೂಚನೆಯಾಗಿದೆ. ಆದರೂ ರಾಜ್ಯ ಮತ್ತು ಅದರ ಗುತ್ತಿಗೆದಾರ ಮಿತ್ರರು ‘ಅಭಿವೃದ್ಧಿ’ ಹೆಸರಿನಲ್ಲಿ ಹಿಮಾಲಯದ ಜನರು ಮತ್ತು ಪರಿಸರದ ಮೇಲಿನ ಆಕ್ರಮಣವನ್ನು ಮುಂದುವರಿಸುವುದನ್ನು ನಿಲ್ಲಿಸುವುದಿಲ್ಲ. (ನೋಡಿ: ರವಿ ಚೋಪ್ರಾ, ‘Joshimath: An Avoidable Disaster’ ದಿ ಇಂಡಿಯಾ ಫೋರಮ್, 7ನೇ ಮಾರ್ಚ್ 2023, https://www.theindiaforum.in/environment/joshimath-avoidable-disaster)

ನಮ್ಮ ಈಗಿನ ಸಂಕಟವನ್ನು ವಿಶೇಷವಾಗಿ ದುರಂತವಾಗಿಸುವ ಸಂಗತಿಯೆಂದರೆ, ಹೆಚ್ಚು ಸಮರ್ಥನೀಯ ಮಾರ್ಗವನ್ನು ರೂಪಿಸುವಲ್ಲಿ ನಮಗೆ ಸಹಾಯ ಮಾಡಲು ನಾವು ಈಗ ಸಾಕಷ್ಟು ವೈಜ್ಞಾನಿಕ ಪರಿಣತಿಯನ್ನು ಹೊಂದಿದ್ದೇವೆ. ಐಐಟಿಗಳಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ, ಸರಕಾರೇತರ ಸಂಶೋಧನಾ ಕೇಂದ್ರಗಳಲ್ಲಿ, ಪರಿಸರಕ್ಕೆ ಖಂಡಿತ ಹಾನಿಯಾಗದಂತೆ ಹೆಚ್ಚು ಪರಿಣಾಮಕಾರಿ ಸಾರಿಗೆ ಮತ್ತು ಇಂಧನ ನೀತಿಗಳನ್ನು ವಿನ್ಯಾಸಗೊಳಿಸಲು ಮತ್ತು ಅನುಷ್ಠಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಹಾಯ ಮಾಡುವ ಅತ್ಯುತ್ತಮ ವೃತ್ತಿಪರರ ಗುಂಪನ್ನು ಭಾರತ ಹೊಂದಿದೆ. ಆದರೂ, ಪರಿಣತಿಯು ಲಭ್ಯವಿದ್ದರೂ, ಇದು ಅಪರೂಪವಾಗಿದೆ. ಯಾವತ್ತಾದರೂ ಒದಗಿದರೂ, ಬಹುಶಃ ಇದು ಒಂದು ಕಡೆ ರಾಜಕಾರಣಿಗಳು ಮತ್ತು ಇನ್ನೊಂದು ಕಡೆ ಗುತ್ತಿಗೆದಾರರು ಮತ್ತು ಕೈಗಾರಿಕೋದ್ಯಮಿಗಳ ನಡುವಿನ ಹಿತಕರ ಸಂಬಂಧವನ್ನು ಹಾಳುಮಾಡುತ್ತದೆ.

1922ರ ಉಪನ್ಯಾಸದಲ್ಲಿ, ರವೀಂದ್ರನಾಥ ಟಾಗೋರ್ ಅವರು ಆಧುನಿಕ ಯಂತ್ರೋಪಕರಣಗಳು ಮನುಷ್ಯರನ್ನು, ಚೇತರಿಕೆಗೆ ಪ್ರಕೃತಿಯ ಶಕ್ತಿ ಸಂಪೂರ್ಣ ಮೀರುವ ರೀತಿಯಲ್ಲಿ ಲೂಟಿಯ ಪ್ರವೃತ್ತಿಯಲ್ಲಿ ತೊಡಗಲು ಉತ್ತೇಜಿಸಿವೆ ಎಂದು ಹೇಳಿದ್ದರು. ಲಾಭಕೋರರು ಈ ಗ್ರಹದ ಸಂಗ್ರಹಿತ ಬಂಡವಾಳದಲ್ಲಿ ದೊಡ್ಡ ತೂತುಗಳನ್ನೇ ಕೊರೆದರು. ಅವರು ಅಸ್ವಾಭಾವಿಕವಾದ ಬಯಕೆಗಳನ್ನು ಸೃಷ್ಟಿಸಿದರು ಮತ್ತು ಈ ಅಗತ್ಯಗಳನ್ನು ಬಲವಂತವಾಗಿ ಪ್ರಕೃತಿಯಿಂದ ಹೊರತೆಗೆಯಲಾಯಿತು. ಈ ಪ್ರವೃತ್ತಿಗಳು ಅನಿಯಂತ್ರಿತವಾಗಿ ಮುಂದುವರಿದರೆ, ಮಾನವರು ನೀರನ್ನು ಖಾಲಿಮಾಡಿ, ಮರಗಳನ್ನು ಕಡಿದು, ಗ್ರಹದ ಮೇಲ್ಮೈಯನ್ನು ಮರುಭೂಮಿಯಾಗಿಸುವ ಭವಿಷ್ಯದ ಮುನ್ಸೂಚನೆಯನ್ನು ಟಾಗೋರ್ ಅವತ್ತೇ ನೀಡಿದ್ದರು. ಅವರು ಕೊಟ್ಟ ಎಚ್ಚರಿಕೆಗಳನ್ನು ಪರಿಗಣಿಸಲು ಇನ್ನೂ ತುಂಬ ತಡವೇನೂ ಆಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)