varthabharthi


ವಿಶೇಷ-ವರದಿಗಳು

ರಾಹುಲ್ ಗಾಂಧಿ ಭಾಷಣದಿಂದ... ಲೋಕಸಭಾ ಸದಸ್ಯತ್ವ ರದ್ದಾಗುವವರೆಗೆ

ವಾರ್ತಾ ಭಾರತಿ : 25 Mar, 2023
ಗಿರೀಶ್ ಕೋಟೆ

ರಾಹುಲ್ ಗಾಂಧಿ ಪ್ರಕರಣದಲ್ಲಿ ಏನೆಲ್ಲಾ-ಎಷ್ಟೆಲ್ಲಾ ತರಾತುರಿಯಲ್ಲಿ ನಡೆದುಹೋಯಿತು ಎನ್ನುವ ಸತ್ಯವನ್ನು ಈ ದಿನಾಂಕಗಳು ಬಿಚ್ಚಿಡುತ್ತಿವೆ. ಪ್ರಕರಣದ ವಿಚಾರಣೆ ಆರಂಭವಾದಾಗ ಇದ್ದ ನ್ಯಾಯಾಧೀಶರೇ ಬೇರೆ. ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರೇ ಬೇರೆ. ಸೂರತ್ ಸಿಜೆಎಂ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸುತ್ತಿದ್ದಂತೆ, ಈ ವಿಚಾರಣೆಗೆ ತಡೆ ಕೋರಿ ದೂರುದಾರರೇ ಹೈಕೋರ್ಟ್ ಮೆಟ್ಟಿಲೇರಿದ ಅಪರೂಪದಲ್ಲೇ ಅಪರೂಪದ ಪ್ರಸಂಗಕ್ಕೂ ಈ ಪ್ರಕರಣ ಸಾಕ್ಷಿಯಾಗಿದೆ.

2019ರಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ 2023ರಲ್ಲಿ ಅವರ ಲೋಕಸಭಾ ಸದಸ್ಯತ್ವ ರದ್ದಾಗುವವರೆಗೂ ನಡೆದ ನಾಟಕೀಯ ಘಟನಾವಳಿಗಳ ಚಿತ್ರಣ ಇಲ್ಲಿದೆ.

► ಲೋಕಸಭಾ ಚುನಾವಣೆಗಾಗಿ 2019ರ ಎಪ್ರಿಲ್ 13ರಂದು ಕೋಲಾರ ನಗರಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು.

► ಕೋಲಾರದ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ರಾಹುಲ್ ಪ್ರಚಾರಕ್ಕೆಂದು ಬಂದಿದ್ದರು.

► ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ, ದೇಶದ ಆರ್ಥಿಕತೆಗೆ ಧಕ್ಕೆ ತಂದು ವಿದೇಶಕ್ಕೆ ಪರಾರಿಯಾಗಿ ಐಷಾರಾಮಿ ಜೀವನ ನಡೆಸುತ್ತಿರುವ ಗುಜರಾತಿ ಉದ್ಯಮಿಗಳ ಹೆಸರನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ ದೇಶಕ್ಕೆ 13,500 ಕೋಟಿ ರೂ. ವಂಚಿಸಿದ್ದ ಮೆಹುಲ್ ಚೋಕ್ಸಿ, 14,000 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ, 425 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿರುವ ಲಲಿತ್ ಮೋದಿ ಹೆಸರುಗಳನ್ನು ಪ್ರಸ್ತಾಪಿಸಿದ್ದರು.

► ಹೀಗೆ ಪ್ರಸ್ತಾಪಿಸುತ್ತಾ, ಅದು ಹೇಗೆ ಈ ಎಲ್ಲಾ ಕಳ್ಳರ ಹೆಸರಿನಲ್ಲಿ ಸಾಮಾನ್ಯವಾಗಿ ಮೋದಿ ಉಪನಾಮ ಇರುತ್ತದೆ ಎಂದು ಪ್ರಶ್ನಿಸಿದ್ದರು.

► ರಾಹುಲ್ ಗಾಂಧಿಯವರ ಭಾಷಣವನ್ನು ಬಿ.ಎಲ್.ಶಂಕರ್ ಅವರು ಅನುವಾದಿಸಿದ್ದರು.

► ರಾಹುಲ್ ಗಾಂಧಿಯವರ ಎಪ್ರಿಲ್ 13ರ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ ಉಪನಾಮೆ ವಿರುದ್ಧ ಗುಜರಾತಿನ ಸೂರತ್ ಶಾಸಕ ಪೂರ್ಣೇಶ್ ಮೋದಿ ಕಾನೂನು ಕ್ರಮಕ್ಕೆ ಮುಂದಾದರು. ಇವರಿಗೆ ಸಾಕ್ಷಿಯಾಗಿ ನಿಂತಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಿ.ಎಂ.ರಘುನಾಥ್.

► ಈ ರಘುನಾಥ್ ಅಖಿಲ ಭಾರತ ಗಾಣಿಗ (ತೈಲಿಕ್ ಸಾಹು) ಮಹಾಸಭಾದ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರು 1992ರಿಂದ 1996ರವರೆಗೆ ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 1983 ಹಾಗೂ 1994ರಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

► ಪೂರ್ಣೇಶ್ ಮೋದಿಯವರು ಸೂರತ್ ವಿಚಾರಣಾ ನ್ಯಾಯಾಲಯದಲ್ಲಿ 2019ರ ಎಪ್ರಿಲ್ 16ರಂದು ಐಪಿಸಿ ಸೆಕ್ಷನ್ 499 ಮತ್ತು 500 ಹಾಗೂ 504ರ ಅಡಿಯಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ಹಾಗೂ ರಾಹುಲ್ ಗಾಂಧಿಯವರು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ಬಗ್ಗೆ ವಿವರಣೆ ನೀಡಲು ಸೂಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

► 2019ರ ಮೇ 2ರಂದು ಸೂರತ್ ಸಿಜೆಎಂ (ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್) ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿತು.

► 2019ರ ಜುಲೈ 16ರಂದು ಸಿಜೆಎಂ ನ್ಯಾಯಾಲಯ ರಾಹುಲ್ ಗಾಂಧಿಯವರು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೆ ವಿನಾಯಿತಿ ನೀಡಿ ಮುಂದಿನ ವಿಚಾರಣೆಯನ್ನು 2019ರ ಅಕ್ಟೋಬರ್ 10ಕ್ಕೆ ಮುಂದೂಡಿತು.

► 2019ರ ಅಕ್ಟೋಬರ್ 10ರಂದು ಸೂರತ್ ಸಿಜೆಎಂ ಎ.ಎನ್.ದವೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾದ ರಾಹುಲ್‌ಗಾಂಧಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದರು.

► 2020ರ ಜೂನ್ 24ರಂದು ರಾಹುಲ್ ಗಾಂಧಿಯವರು, ‘‘ದೂರಿನಲ್ಲಿರುವ ರೀತಿಯಲ್ಲಿ ತಾವು ಹೇಳಿಕೆ ನೀಡಿಲ್ಲ’’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

► 2021ರ ಅಕ್ಟೋಬರ್ 29ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.

► 2022ರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಅವರಿಗೆ ಮತ್ತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಬೇಕು ಹಾಗೂ ಇಲೆಕ್ಟ್ರಾನಿಕ್ ಸಾಕ್ಷ್ಯಗಳಲ್ಲಿರುವ ಸಂಗತಿಗಳನ್ನು (ಕಂಟೆಂಟ್) ರಾಹುಲ್ ಗಾಂಧಿ ವಿವರಿಸಬೇಕು ಎಂದು ಪೂರ್ಣೇಶ್ ಮೋದಿ ಸೂರತ್ ಸಿಜೆಎಂ ನ್ಯಾಯಾಲಯಕ್ಕೆ ಮನವಿ ಮಾಡಿದರು.

► ಮೋದಿಯವರ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಸಾಕ್ಷ್ಯ ವಿಚಾರಣೆಯನ್ನು ಆರಂಭಿಸುವುದಾಗಿ ತಿಳಿಸಿ, ಪ್ರಕರಣದ ಸಾಕ್ಷ್ಯ ವಿಚಾರಣೆ ಕೈಗೆತ್ತಿಕೊಂಡಿತು.

► ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಮುಂದಾಗುತ್ತಿದ್ದಂತೆ, ದೂರುದಾರರಾದ ಪೂರ್ಣೇಶ್ ಮೋದಿಯವರು ಗುಜರಾತ್ ಹೈಕೋರ್ಟ್ ಬಾಗಿಲು ಬಡಿದರು. ತಾವೇ ದೂರುದಾರರಾಗಿರುವ, ಸಾಕ್ಷ್ಯ ವಿಚಾರಣೆ ಆರಂಭವಾಗಲಿರುವ ಪ್ರಕರಣದ ವಿಚಾರಣೆಗೆ ತಡೆ ಕೋರಿದರು.

► ತಮ್ಮದೇ ದೂರಿನ ವಿಚಾರಣೆಗೆ ದೂರುದಾರರೇ ತಡೆ ಕೋರಿದ ಅಪರೂಪದ ಪ್ರಕರಣ ಇದಾಗಿತ್ತು. ಸೂರತ್ ಸಿಜೆಎಂ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ನಲ್ಲಿ ತಡೆ ಕೋರುವ ವೇಳೆಯಲ್ಲಿ ಪೂರ್ಣೇಶ್ ಪರ ವಕೀಲರು, ‘‘ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಬಳಿ ಸಾಕ್ಷ್ಯಗಳ ಕೊರತೆ ಇದೆ’’ ಎಂದು ಪ್ರಸ್ತಾಪಿಸಿದ್ದಾಗಿ ದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

► 2022ರ ಮಾರ್ಚ್ 7ರಂದು ಗುಜರಾತ್ ಹೈಕೋರ್ಟ್ ಸೂರತ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ತಡೆಯಾಜ್ಞೆ ನೀಡಿತು. ದೂರುದಾರರೇ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ತಂದ ಅಪರೂಪದಲ್ಲೇ ಅಪರೂಪದ ಪ್ರಸಂಗ ಇದಾಗಿತ್ತು.

► 7-2-2023ರಂದು ರಾಹುಲ್ ಗಾಂಧಿ ಅದಾನಿ ಕುರಿತಾಗಿ ಲೋಕಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದರು. ಇದಾಗಿ 9 ದಿನಗಳ ಬಳಿಕ ಅಂದರೆ 16-2-2023ರಂದು ಪೂರ್ಣೇಶ್ ಮೋದಿಯವರು ಹೈಕೋರ್ಟ್ ಮೆಟ್ಟಿಲೇರಿ ತಾವೇ ತಮ್ಮ ದೂರಿಗೆ ತಂದಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿದರು. ಈ ವೇಳೆ, ‘‘ಸೂರತ್ ಸಿಜೆಎಂ ನ್ಯಾಯಾಲಯದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ಬಂದಿವೆ. ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆ ಕಾರಣದಿಂದ ವಿಚಾರಣೆಗೆ ಅಡ್ಡಿಯಾಗಿದೆ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಬೇಕು’’ ಎಂದು ಮನವಿ ಮಾಡಿದರು.

► 16-2-2023ರಂದು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ವಿಪುಲ್ ಎಂ.ಪಂಚೋಲಿ ಅವರಿದ್ದ ಏಕಸದಸ್ಯ ಪೀಠ ತಡೆಯಾಜ್ಞೆಯನ್ನು ತೆರವುಗೊಳಿಸಿತು.

► ಹೈಕೋರ್ಟ್ ಕಳೆದ ಒಂದು ವರ್ಷದಿಂದ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸುವ ವೇಳೆಯಲ್ಲಿ ‘‘ದೂರುದಾರರ ದೂರಿನ ಗುಣಾವಗುಣಗಳನ್ನು (ಮೆರಿಟ್ಸ್) ಹೈಕೋರ್ಟ್ ಪರೀಕ್ಷಿಸಿಲ್ಲ’’ ಎಂದು ಸ್ಪಷ್ಟವಾಗಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

► ತಡೆಯಾಜ್ಞೆ ತೆರವುಗೊಳಿಸಿದ ಬಳಿಕದ 11 ದಿನಕ್ಕೆ ಅಂದರೆ 27-2-2023ರಂದು ಮತ್ತೆ ರಾಹುಲ್ ಪ್ರಕರಣದ ವಿಚಾರಣೆ ಆರಂಭವಾಯಿತು. ಅಂದರೆ, ಒಂದು ವರ್ಷದಿಂದ ತಡೆಯಾಜ್ಞೆಗೆ ಒಳಪಟ್ಟಿದ್ದ ಪ್ರಕರಣಕ್ಕೆ ರಾಹುಲ್ ಗಾಂಧಿ ಅದಾನಿ ವಿರುದ್ಧ ಮಾತನಾಡಿದ 20 ದಿನಗಳ ಒಳಗಾಗಿ ವಿಚಾರಣೆ ಆರಂಭವಾಯಿತು.

► ರಾಹುಲ್ ಅದಾನಿ ವಿರುದ್ಧ ಮಾತನಾಡಿದ 20 ದಿನಗಳಲ್ಲಿ ಪುನಃ ಆರಂಭವಾದ ವಿಚಾರಣೆ ಕೇವಲ 20 ದಿನಗಳಲ್ಲಿ ಮುಕ್ತಾಯಗೊಂಡು ಅಂತಿಮ ತೀರ್ಪನ್ನು 17-3-2023ರಂದು ಕಾಯ್ದಿರಿಸಲಾಯಿತು.

ಮಾರ್ಚ್ 17ರಂದು ಕಾಯ್ದಿರಿಸಿದ ತೀರ್ಪು ಮಾರ್ಚ್ 20ರಂದು ಘೋಷಿಸಲಾಯಿತು. ರಾಹುಲ್ ಗಾಂಧಿ ತಪ್ಪಿತಸ್ಥರು ಎಂದು ಸಿಜೆಎಂ ನ್ಯಾಯಾಧೀಶ ಎಚ್.ಎಚ್.ವರ್ಮ ತೀರ್ಪು ನೀಡಿದರು. ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಯಿತು.

► ಅಂದರೆ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಅದಾನಿ ವಿರುದ್ಧ ಮಾತನಾಡಿದ 35 ದಿನಗಳಲ್ಲಿ ಅವರನ್ನು ಅಪರಾಧಿ ಎಂದು ಘೋಷಿಸಲಾಯಿತು. 37 ದಿನಗಳಲ್ಲಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು. (ನ್ಯಾಯಾಲಯದ ರಜಾ ದಿನಗಳನ್ನು ಕಳೆದರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಅದಾನಿ ವಿರುದ್ಧ ಮಾತನಾಡಿದ 25 ದಿನಗಳ ಒಳಗೇ ಇಷ್ಟೆಲ್ಲವೂ ನಡೆದುಹೋಗಿದೆ).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)