ದ್ವೇಷದ ರಾಜಕಾರಣ ದೇಶಕ್ಕೆ ಒಳಿತಲ್ಲ: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಅನರ್ಹತೆಗೆ ಬಿಎಸ್‌ಪಿ ನಾಯಕಿ ಪ್ರತಿಕ್ರಿಯೆ
ಲಕ್ನೋ, ಮಾ.27: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವ ಬಗ್ಗೆ ಶನಿವಾರ ಪ್ರತಿಕ್ರಿಯಿಸಿರುವ ಬಿಎಸ್‌ಪಿ, ನಾಯಕಿ ಮಾಯಾವತಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡನ್ನೂ ಟೀಕಿಸಿದ್ದಾರೆ. ದ್ವೇಷದ ರಾಜಕಾರಣವು ಹಿಂದೆಯೂ ದೇಶಕ್ಕೆ ಒಳಿತು ಮಾಡಿಲ್ಲ, ಭವಿಷ್ಯದಲ್ಲಿಯೂ ಮಾಡಲಾರದು ಎಂದವರು ಹೇಳಿದ್ದಾರೆ.
‘‘1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದಿರುವುದೆಲ್ಲಾ ಸರಿಯೇ ಮತ್ತು ಈಗ ರಾಹುಲ್ ಗಾಂಧಿಯವರ ವಿಷಯದಲ್ಲಿ ನಡೆಯುತ್ತಿರುವುದು ಸಮರ್ಥನೀಯವೇ ಎಂಬ ಬಗ್ಗೆ ಕಾಂಗ್ರೆಸ್ ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ ’’ ಎಂದವರು ಹೇಳಿದ್ದಾರೆ.
ಅತಿಯಾದ ರಾಜಕೀಯ ಸ್ವಾರ್ಥದಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಾರ್ವಜನಿಕರ ಕಲ್ಯಾಣದ ಬಗ್ಗೆ ಹಾಗೂ ಬಡತನ, ನಿರುದ್ಯೋಗ ಮತ್ತು ಹಿಂದುಳಿಯುವಿಕೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಇದು ಅತ್ಯಂತ ವಿಷಾದನೀ ಹಾಗೂ ದುರದೃಷ್ಟಕರ ಎಂದವರು ಹಿಂದಿಯಲ್ಲಿ ಟ್ವೀಟಿಸಿದ್ದಾರೆ.
‘‘ಕಳೆದ 75 ವರ್ಷಗಳಲ್ಲಿ ದೇಶವನ್ನು ಆಳಿರುವ ಸರಕಾರಗಳು ಸಂವಿಧಾನದ ಪವಿತ್ರವಾದ ಆಶಯದಂತೆ, ಪ್ರಜಾತಾಂತ್ರಿಕ ಪದ್ಧತಿಗಳು ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ಪ್ರಾಮಾಣಿಕತೆ ಹಾಗೂ ಬದ್ಧತೆಯೊಂದಿಗೆ ಕೆಲಸ ಮಾಡಿರುತ್ತಿದ್ದರೆ ಭಾರತವು ಈಗ ನಿಜಕ್ಕೂ ಮುಂಚೂಣಿಯ ಹಾಗೂ ಆದರ್ಶಮಯ ಮಾನವತಾ ಹಾಗೂ ಅಭಿವೃದ್ಧಿಹೊಂದಿದ ದೇಶವಾಗಿರುತ್ತಿತ್ತು’’ ಎಂದವರು ಹೇಳಿದ್ದಾರೆ.