varthabharthi


ಮನೋ ಚರಿತ್ರ

ಅವಿತಿರುವ ಆಸೆಗಳು

ವಾರ್ತಾ ಭಾರತಿ : 26 Mar, 2023
ಯೋಗೇಶ್ ಮಾಸ್ಟರ್

ಕುತೂಹಲ ಎನ್ನುವುದು ಪ್ರಚೋದನೆಯೂ ಹೌದು, ಸೆಳೆತವೂ ಹೌದು. ಅದರಲ್ಲಿ ಹುಡುಕಾಟವಿರುತ್ತದೆ. ತೃಪ್ತಿಯ ಹುಡುಕಾಟವಿರುತ್ತದೆ. ತೃಪ್ತಿಯನ್ನು ಹೊಂದುವ ಆನಂದದ ನಿರೀಕ್ಷೆ ಇರುತ್ತದೆ. ಯಾವುದೋ ವ್ಯಕ್ತಿಗೆ ಯಾವುದಾದರೊಂದರಲ್ಲಿ ಕುತೂಹಲವಿದೆ ಎಂದರೆ ಆ ವಿಷಯದ ಬಗ್ಗೆ ಪ್ರಚೋದನೆ ಇದೆ ಮತ್ತು ಆ ವಿಷಯದ ಬಗ್ಗೆ ಆಸಕ್ತಿ ಹುಟ್ಟಿಸುವಷ್ಟು ಮಾಹಿತಿ ಇದ್ದು, ಅದನ್ನು ಮತ್ತಷ್ಟು ತಿಳಿಯುವ, ಅನುಭವಿಸುವ ಅಥವಾ ಆನಂದಿಸುವ ಸಾಧ್ಯತೆಗಳ ಕಡೆಗೆ ಸೆಳೆತವಿದೆ ಎಂದಾಗುತ್ತದೆ. ಸಮಾಜದಲ್ಲಿ ಹುಟ್ಟುವಂತಹ ಒಂದು ಮಗುವಿಗೆ ಅನೇಕ ವಿಷಯಗಳಲ್ಲಿ ಕುತೂಹಲಗಳು ಹುಟ್ಟುತ್ತವೆ. ತೃಪ್ತಿ ಮತ್ತು ಆನಂದವೆರಡನ್ನು ಪಡೆಯಲು ಹುಡುಕಾಟವನ್ನೂ ಆರಂಭಿಸುತ್ತದೆ. ಅದಕ್ಕೆ ಅನೇಕಾನೇಕ ರೀತಿಗಳಲ್ಲಿ ಯಾವ ಯಾವ ಕುತೂಹಲ ಗಳನ್ನು ತನ್ನ ಹಿರಿಯರು, ತನ್ನ ಕುಟುಂಬ, ತನ್ನ ಸಮಾಜವು ಪುರಸ್ಕರಿಸುವುದು ಮತ್ತು ಕಡೆಗಣಿಸುವುದು ಎಂಬುದು ತಿಳಿಯುತ್ತದೆ.

ಹಾಗಾಗಿ, ಕುಟುಂಬ ಮತ್ತು ಸಮಾಜದಿಂದ ಸಮ್ಮತವಾಗಿರುವ ಕುತೂಹಲಗಳನ್ನು ಮಾತ್ರ ವ್ಯಕ್ತಿಯು ಪ್ರಕಟಿಸುವನು. ಹಾಗೆಯೇ ಯಾವ್ಯಾವ ಕುತೂಹಲಗಳನ್ನು ಕಳಂಕಿತವೆಂದು ಕುಟುಂಬ ಮತ್ತು ಸಮಾಜ ಭಾವಿಸುವುದೋ ಅಂತಹ ಕುತೂಹಲಗಳನ್ನು ಪ್ರಕಟಿಸದಿದ್ದರೂ ಅವುಗಳು ಅವನಲ್ಲಿ ಗುಪ್ತವಾಗಿ ತೃಪ್ತಿಪಡುವ ಮಾರ್ಗವನ್ನು ಕಂಡುಕೊಳ್ಳಲು ಯತ್ನಿಸುತ್ತಲಿರುವುದು. ಅಂತಹ ಕುತೂಹಲಗಳಲ್ಲಿ ಸಾಮಾನ್ಯವಾಗಿ ಲೈಂಗಿಕತೆ ಮುಖ್ಯ ಸ್ಥಾನದಲ್ಲಿರುತ್ತದೆ. ನಂತರ ತನ್ನ ಸಮೀಪವರ್ತಿಗಳು ತಮ್ಮಿಂದ ಮುಚ್ಚಿಟ್ಟಿರುವಂತಹ ವಿಷಯಗಳಲ್ಲಿ ಕುತೂಹಲಿಗಳಾಗಿರುತ್ತಾರೆ. ಅವುಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದರೂ ಏನೂ ತಿಳಿದಿಲ್ಲವೆಂಬಂತೆ ರಹಸ್ಯವನ್ನು ನಿರ್ವಹಿಸಿಕೊಂಡಿರುತ್ತಾರೆ. ಒಂದು ವಿಷಯ ನೆನಪಿಡಿ. ಯಾವುದೇ ಒಂದು ವಿಷಯ ಅಥವಾ ವಸ್ತು ನಮ್ಮಲ್ಲಿ ರಹಸ್ಯ ಕುತೂಹಲವಾಗಿರುತ್ತದೆಯೋ ಅದು ಮಾನಸಿಕ ವ್ಯಸನವಾಗಿ ರೂಪಾಂತರಗೊಳ್ಳುತ್ತಿರುತ್ತದೆ. ವ್ಯಸನವೆಂಬುದೇ ಮನಸ್ಸಿನೊಳಗಿನ ಒಂದು ಹುಣ್ಣು. ಅದು ಕುತೂಹಲದ ರೂಪದಲ್ಲಿ ಎಷ್ಟೇ ಹುಡುಕಾಟಗಳನ್ನು ಮಾಡುತ್ತಾ, ಸೆಳೆತಗಳಿಗೆ ಒಳಗಾಗುತ್ತಾ ತೃಪ್ತಿಪಡುತ್ತಾ ತಣಿಯುತ್ತಿದ್ದರೂ, ಆನಂದವನ್ನು ಪಡೆಯುತ್ತಿದ್ದರೂ, ಸಾಮಾನ್ಯವಾದ ಆನಂದದಿಂದ ಪಡೆಯುವಂತಹ ಮಾನಸಿಕ ಆರೋಗ್ಯವನ್ನು ಆ ಆನಂದದಿಂದ ಪಡೆಯಲಾಗುವುದಿಲ್ಲ.

ಆನಂದವು ಮಾನಸಿಕ ಆರೋಗ್ಯವನ್ನು ನೀಡುತ್ತದೆ. ರಹಸ್ಯವಾದ ಆನಂದವು ಮಾನಸಿಕ ಒತ್ತಡಗಳನ್ನು ಉಂಟು ಮಾಡುತ್ತದೆ. ಲೈಂಗಿಕತೆಯು ಮನೋಲೋಕದ ರಹಸ್ಯ ಸಾಮ್ರಾಜ್ಯದ ಚಕ್ರವರ್ತಿಯಾದ್ದರಿಂದ ಅದರ ಉದಾಹರಣೆಯನ್ನು ತೆಗೆದುಕೊಂಡೆ. ಆದರೆ ಅದೇ ರೀತಿ ಕಳ್ಳತನ, ಸುಳ್ಳು, ಅಮಲಿನ ವಸ್ತುಗಳ ವ್ಯಸನವೇ ಮೊದಲಾದ ರಾಜರು, ಸಾಮಂತರು, ಪಾಳೆಗಾರರೂ ಬೇಕಾದಷ್ಟಿದ್ದಾರೆ. ಅವರೆಲ್ಲರೂ ಆಳುತ್ತಾರೆ. ವ್ಯಕ್ತಿಯ ಮನೋಭೂಮಿಕೆಯಲ್ಲಿ ಆಡಳಿತವನ್ನು ಅವರು ತಮ್ಮಿಷ್ಟಕ್ಕೆ ಬಂದಂತೆ ನಡೆಸುತ್ತಾರೆ. ಪಡುವಂತಹ ಆನಂದ, ಬರುವಂತಹ ಕೋಪ, ಆಗುವಂತಹ ನಿರಾಶೆ, ಬಾಧಿಸುವಂತಹ ದುಃಖ; ಯಾವುದಾದರೂ ವ್ಯಕ್ತಗೊಳ್ಳಬೇಕು. ಅವುಗಳು ವ್ಯಕ್ತಗೊಳ್ಳದೇ ಮನಸ್ಸಿನೊಳಗೆಯೇ ಅವಿತಿಟ್ಟುಕೊಂಡರೆ, ಅವುಗಳೋ ಯಾವಾಗಂದರಾವಾಗ ಬಂದುಬಿಡು ವಂತಹ ಸೂಚನೆಗಳನ್ನು ತೋರುತ್ತಿರುತ್ತದೆ. ಆದ್ದರಿಂದ ತಾವೇ ಒತ್ತಡವನ್ನು ಹೇರಿಕೊಳ್ಳಬೇಕು.

ಸ್ವಯಂಪ್ರೇರಿತವಾಗಿ ಒತ್ತಡಗಳನ್ನು ಹೇರಿಕೊಳ್ಳುವಾಗ ಮನುಷ್ಯನ ಮನಸ್ಸು ತನ್ನೊಳಗಿನ ವ್ರಣಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತವೆ. ಹೊರಗೆ ಮಾತಾಡುವ ವಿಷಯವು ತನ್ನೊಳಗಿನ ವಿಷಯಕ್ಕೆ ವ್ಯತಿರಿಕ್ತವಾಗಿದ್ದರಂತೂ ಮುಗಿಯಿತು. ಮುಖವಾಡಗಳನ್ನು ಧರಿಸಬೇಕು. ಮುಖವಾಡಗಳನ್ನು ಧರಿಸುವುದು ಅನಿವಾರ್ಯವಾದಾಗ, ಮುಕ್ತವಾಗಿ ಮಾತಾಡಲಾಗದೆ ಕೃತಕತೆಯ ಪದಗಳನ್ನು ಪೋಣಿಸುವಾಗ, ಒಳಗೆ ಅಪ್ಪಿರುವುದನ್ನು ಹೊರಗೆ ತಪ್ಪೆಂದು ಒಪ್ಪುವಾಗ; ವ್ಯಕ್ತಿಯು ಆಂತರಿಕವಾಗಿ ಛಿದ್ರವಾಗುತ್ತಾ ಹೋಗುತ್ತಾನೆ. ತಾನು ತನ್ನೊಳಗೇ ಕಟ್ಟಿಕೊಂಡಿರುವ ಜಗತ್ತು, ಸೃಷ್ಟಿಸಿಕೊಂಡಿರುವ ಪರಿಸರ ಮತ್ತು ಅದಕ್ಕೆ ವ್ಯತಿರಿಕ್ತವಾಗಿ ಹೊರಗೊಂದು ಜಗತ್ತು, ಸಮಾಜ ಮತ್ತು ಕುಟುಂಬವು ನಿರ್ಮಿಸಿರುವಂತಹ ನೈತಿಕ, ಸಾಮಾಜಿಕ ಪರಿಸರ; ಈ ಎರಡೂ ವ್ಯಕ್ತಿಗೆ ವಾಸ್ತವವೇ. ಅವನ ಮನಸ್ಸಿನಲ್ಲಿ ಆಗುತ್ತಿರುವಂತಹ ಸಂಗತಿಗಳು ಅವಾಸ್ತವವೇನಲ್ಲ. ಅವನ ಪಾಲಿಗೆ ಮಾತ್ರವಲ್ಲ ಅಸ್ತಿತ್ವದಲ್ಲಿ ಎರಡೂ ಇರುವುದರಿಂದ, ಎರಡೂ ವಾಸ್ತವಗಳೇ. ಯಾವುದೂ ಸುಳ್ಳಲ್ಲ. ಆದರೆ, ಇವುಗಳನ್ನು ಸತ್ಯವೆಂದು ಒಪ್ಪಿಕೊಳ್ಳುವು ದರಲ್ಲಿಯೇ ಸಮಸ್ಯೆ ಇರುವುದು. ಯಾವಾಗಲೂ ಸತ್ಯವೇ ಸಮಸ್ಯೆ. ಇನ್ನೂ ಹೇಳುವುದಾದರೆ ಸತ್ಯ ಮತ್ತು ಸುಳ್ಳುಗಳು ಎಂಬುದೇ ಇಲ್ಲ. ಅದು ಬರಿಯ ಗ್ರಹಿಕೆಯನ್ನು ಆಧರಿಸಿದೆ. ಒಪ್ಪಿದರೆ ಸತ್ಯ, ಒಪ್ಪದಿದ್ದರೆ ಸುಳ್ಳು. ಚೆನ್ನಾಗಿ ನೆನಪಿಡಿ.

ಮನೋಲೋಕದಲ್ಲಿ ವ್ಯಕ್ತಿಯ ಅಂತರ್ಯವು ಒಪ್ಪಿದ ವಿಷಯಗಳೆಲ್ಲವೂ ಸತ್ಯವಾಗುತ್ತದೆ. ಒಪ್ಪದಿರುವು ದೆಲ್ಲವೂ ಸುಳ್ಳಾಗುತ್ತದೆ. ಇದು ಸತ್ಯ ಇದು ಸುಳ್ಳು ಎಂದು ವ್ಯಕ್ತಿಗಳ ನಡುವೆ ವಾದ ವಿವಾದಗಳಾಗುವುದು ಈ ಕಾರಣದಿಂದಲೇ. ಅವರು ಒಪ್ಪಿರುವುದಿಲ್ಲ. ಹಾಗಾದರೆ, ವಾಸ್ತವದಲ್ಲಿ ಸಂಗತಿಗಳು, ವಿಷಯಗಳು, ವಸ್ತುಗಳು ಇಲ್ಲವೇ ಇಲ್ಲವಾ? ಇವೆ. ಅವು ಬರೀ ಇವೆ. ಸತ್ಯವಾಗಿಯೂ ಇಲ್ಲ. ಸುಳ್ಳಾಗಿಯೂ ಇಲ್ಲ. ಸರಿ, ಸತ್ಯವಾಗಿಯೂ ಇವೆ. ಸುಳ್ಳಾಗಿಯೂ ಇವೆ. ಒಟ್ಟಾರೆ ಅಸ್ತಿತ್ವದಲ್ಲಿವೆ. ಆದರೆ ಇವುಗಳೆಲ್ಲದರ ವಿಚಾರಗಳು ವ್ಯಕ್ತಿಯ ಮನಸ್ಸು ಭಾವಿಸುವುದರ ಮೇಲೆ ಆಧಾರಿತವಾಗಿವೆ. ಇದೆ ಇಲ್ಲ, ಸತ್ಯ ಸುಳ್ಳು, ಅಸ್ತಿತ್ವವೇ ಮೊದಲಾದ ತಾತ್ವಿಕ ವಾದಗಳೀಗ ಬೇಡ. ಆದರೆ ಇವುಗಳಿಂದ ನಲುಗುತ್ತಿರುವ ಮನಸ್ಸು, ಆ ಮನಸ್ಸು ತೋರುತ್ತಿರುವಂತಹ ವರ್ತನೆಗಳು, ಆ ವರ್ತನೆಗಳಿಂದ ಸಮಾಜ ಮತ್ತು ಕುಟುಂಬದಲ್ಲಿ ರೂಪುಗೊಳ್ಳುತ್ತಿರುವ ಪ್ರತಿವರ್ತನೆಗಳು, ಮನಸ್ಸಿನ ಪ್ರೇರಣೆಯಿಂದ ಮಾಡುವ ಕ್ರಿಯೆ, ಅದಕ್ಕೆ ಸಿಗುವ ಪ್ರತಿಕ್ರಿಯೆಯಿಂದ ಉಂಟಾಗುವ ಮನೋಭಾವ, ಮತ್ತದರಿಂದ ಉಂಟಾಗುವ ಮನಸ್ಥಿತಿ, ಈ ಮನಸ್ಥಿತಿಯ ಸ್ಥಿತಿ ಗತಿಗಳ ಆಧಾರದಿಂದ ರೂಪುಗೊಳ್ಳುವ ವ್ಯಕ್ತಿತ್ವ, ಈ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾ ಹಣೆಪಟ್ಟಿಗಳನ್ನು ಕಟ್ಟುವ ಕುಟುಂಬ ಮತ್ತು ಸಮಾಜ; ಇವುಗಳಿಗೇನು ಮಾಡುವುದು? ಇದು ಪ್ರಶ್ನೆ! ವ್ಯಕ್ತಿಯಲ್ಲಿ ರಹಸ್ಯವಾಗಿರುವಂತಹ ವಿಷಯವು ಹೇಗೆ ಹುಟ್ಟಿತು? ಆ ವ್ಯಕ್ತಿ ಆ ವಿಷಯದ ಕರ್ತೃವಲ್ಲ. ಆ ವ್ಯಕ್ತಿಯೇ ಮೊದಲ ಬಾರಿಗೆ ಆ ವಿಷಯವನ್ನು ಸೃಷ್ಟಿಸಿಲ್ಲ.

ಅಂದ ಮೇಲೆ ಆ ವಿಷಯವು ವ್ಯಕ್ತಿಯಿಂದ ವ್ಯಕ್ತಿಗೆ, ಪೀಳಿಗೆಯಿಂದ ಪೀಳಿಗೆಗೆ, ಜನಾಂಗದಿಂದ ಜನಾಂಗಗಳಿಗೆ ಗುಪ್ತವಾಗಿ ದಾಟಿಸುತ್ತಲೇ ಬರುತ್ತಿವೆ. ಯಾವಾಗ ವ್ಯಕ್ತಿಯು ಈ ಒತ್ತಡದಿಂದ ಮುಕ್ತನಾಗಲು ಸಮಾಜದ ವಿರುದ್ಧವಾಗಿ ಬಂಡಾಯವೆದ್ದು ‘‘ನಾನು ಇರುವುದೇ ಹೀಗೆ’’ ಎಂದು ತನ್ನನ್ನು ಪ್ರಕಟಗೊಳಿಸಿಕೊಳ್ಳುತ್ತಾನೋ ಆಗ ಅವನು ಮಾನಗೆಟ್ಟವನಾಗುತ್ತಾನೆ. ಮಾನ ಎಂಬುದು ಸಮಾಜದ ಸಾರ್ವತ್ರಿಕ ಅಭಿಪ್ರಾಯದ ಮಾನದಂಡದಿಂದ ಅಳೆದು ನೀಡುವಂತಹ ಒಂದು ಒಪ್ಪಿಗೆ. ಈ ಒಪ್ಪಿಗೆಯನ್ನು ಪಡೆಯಲು ವ್ಯಕ್ತಿ ತನ್ನ ಅನೇಕ ಆಂತರಿಕ ಕುತೂಹಲಗಳನ್ನು, ಆಸಕ್ತಿಗಳನ್ನು, ಇಷ್ಟಗಳನ್ನು ಬಲಿಗೊಡಲೇ ಬೇಕು. ಮೂರೂ ಬಿಟ್ಟವರು ಊರಿಂದಾಚೆಗೆ. ಅವರು ಬಹಿಷ್ಕೃತರಾಗುತ್ತಾರೆ. ಮನುಷ್ಯ ಸಂಘಜೀವಿ. ಸಾಮಾಜಿಕ ಪಶು. ಅವನು ಈ ಬಹಿಷ್ಕಾರವನ್ನು ಸಹಿಸಲಾರ. ಈ ಜಗತ್ತಿನ ಪರಾವಲಂಬಿ ಜೀವಿಗಳಲ್ಲಿ ಮನುಷ್ಯನಿಗೆ ಮೊದಲ ಸ್ಥಾನ. ಅವನಷ್ಟು ಅವಲಂಬಿತರು ಇನ್ನಾರೂ ಇಲ್ಲ. ಇಡೀ ಸೃಷ್ಟಿಯ ಜೀವರಾಶಿಗಳೆಲ್ಲಾ ಪರಸ್ಪರ ಅವಲಂಬಿತವಾಗಿವೆ ನಿಜ.

ಆದರೆ, ಅವು ನೈಸರ್ಗಿಕವಾಗಿ ಅವಲಂಬಿತವಾಗಿವೆ. ಸೃಷ್ಟಿಯ ನೇಮದಲ್ಲಿ ನಿಷ್ಠವಾಗಿವೆ. ಈ ಮನುಷ್ಯನದೋ ಕರ್ಮ ಏನೆಂದರೆ, ನೈಸರ್ಗಿಕವಾಗಿರುವುದೆಲ್ಲಾ ಅವನಲ್ಲಿ ಜೀವಂತವಾಗಿರುತ್ತವೆ. ಆದರೆ ಅವನು ಅನೈಸರ್ಗಿಕವಾಗಿ ಬದುಕುತ್ತಾ ನೈಸರ್ಗಿಕವಾಗಿರುವುದನ್ನು ದಮನ ಮಾಡುವುದು. ಜೊತೆಗೆ ಹಾಗೆ ದಮನ ಮಾಡುವ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡು ಕೃತಕವಾಗಿ (ಆ ವ್ಯವಸ್ಥೆಯ ಕಾರಣವಾಗಿ) ಪರಾವಲಂಬಿಯಾಗಿರುವುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)