varthabharthi


ದಕ್ಷಿಣ ಕನ್ನಡ

ಕೊಣಾಜೆ: ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

ವಾರ್ತಾ ಭಾರತಿ : 26 Mar, 2023

ಪ್ರಕಾಶ್ ಗಟ್ಟಿ

ಕೊಣಾಜೆ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ರವಿವಾರ ನಡೆದಿದೆ.

ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು 20 ರಷ್ಟು ನೆಂಟರು, ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು (ಬಂಬು) ಅಡ್ಡವಾಗಿ ಹಾಕಿದ್ದರು. ಅದರಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ನದಿ ನೀರಿನ ಹೂಳಿನಲ್ಲಿ ಹೂತುಹೋಗಿದ್ದರು. ಈಜಲು ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಈಜುಗಾರರು ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿ ಸಾಧ್ಯವಾಗದೇ ಇದ್ದಾಗ, ಉತ್ತರ ಪ್ರದೇಶ ಮೂಲದ ಮರಳು ತೆಗೆಯುವ ಕಾರ್ಮಿಕರು ಶೋಧ ನಡೆಸಿ ಮೇಲಕ್ಕೆ ಎತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಮೃತರು ಬೈಕಂಪಾಡಿಯ ಎಂ.ಸಿ.ಎಫ್‌ನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಉದ್ಯೋಗದ ಜೊತೆಗೆ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಗತಿ ಪರ ಕೃಷಿಕರೂ ಆಗಿದ್ದರು.

ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)