ಢಿಕ್ಕಿ ಹೊಡೆಯುವಷ್ಟು ಸಮೀಪಕ್ಕೆ ಬಂದ ಏರ್ ಇಂಡಿಯಾ, ನೇಪಾಳ್ ಏರ್‌ಲೈನ್ಸ್ ವಿಮಾನಗಳು; ತಪ್ಪಿದ ಭಾರೀ ದುರಂತ
ಮೂವರು ಉದ್ಯೋಗಿಗಳು ಅಮಾನತು
ಕಠ್ಮಂಡು: ಶುಕ್ರವಾರ ಮುಂಜಾನೆ ಮಲೇಷ್ಯಾದ ಕೌಲಾಲಂಪುರ್‌ನಿಂದ ಕಠ್ಮಂಡುಗೆ ಆಗಮಿಸಿದ್ದ ನೇಪಾಳ ಏರ್‌ಲೈನ್ಸ್‌ನ ಏರ್‌ಬಸ್ ಎ-320 ಹಾಗೂ ಹೊಸ ದಿಲ್ಲಿಯಿಂದ ಕಠ್ಮಂಡುಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನವು ಬಹುತೇಕ ಢಿಕ್ಕಿ ಹೊಡೆದುಕೊಳ್ಳುವಷ್ಟು ಸಮೀಪಿಸಿದ್ದವು ಎಂದು ವರದಿಯಾಗಿದೆ.
ನೇಪಾಳ ನಾಗರಿಕ ವಿಮಾನ ಯಾನ ಪ್ರಾಧಿಕಾರವು ಅಜಾಗರೂಕತೆ ತೋರಿದ ಕಾರಣಕ್ಕೆ ತನ್ನ ವಾಯು ಸಂಚಾರ ನಿಯಂತ್ರಣ ವಿಭಾಗದ ಮೂವರು ಉದ್ಯೋಗಿಗಳನ್ನು ಅಮಾನತುಗೊಳಿಸಿದೆ ಎಂದು ನೇಪಾಳ ನಾಗರಿಕ ವಿಮಾನ ಯಾನ ಪ್ರಾಧಿಕಾರದ ವಕ್ತಾರ ಜಗನ್ನಾಥ ನಿರೌಲಾ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಘಟನೆ ನಡೆದ ಸಂದರ್ಭದಲ್ಲಿ ಒಂದೇ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನವು 19,000 ಅಡಿ ಎತ್ತರದಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್‌ನ ವಿಮಾವು 15,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ನಿರೌಲಾ ಹೇಳಿದ್ದಾರೆ.
ರಾಡಾರ್‌ನಲ್ಲಿ ಎರಡು ವಿಮಾನಗಳು ಒಂದೇ ಎತ್ತರದಲ್ಲಿ ಹಾರಾಡುತ್ತಿರುವುದು ಕಂಡು ಬಂದಾಗ, ನೇಪಾಳ ಏರ್‌ಲೈನ್ಸ್ ವಿಮಾನವು 7,000 ಅಡಿಯಷ್ಟು ಕೆಳಗಿಳಿಯಿತು ಎಂದು ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನ ಯಾನ ಪ್ರಾಧಿಕಾರವು ಮೂರು ಸದಸ್ಯರ ತನಿಖಾ ತಂಡವನ್ನು ರಚಿಸಿದೆ.
ಘಟನೆಯ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯ ಮೇಲುಸ್ತುವಾರಿ ಹೊತ್ತಿದ್ದ ಮೂವರು ನಿಯಂತ್ರಕರನ್ನು ನೇಪಾಳ ನಾಗರಿಕ ವಿಮಾನ ಯಾನ ಪ್ರಾಧಿಕಾರವು ಅಮಾನತುಗೊಳಿಸಿದೆ.
ಘಟನೆಯ ಕುರಿತು ಏರ್ ಇಂಡಿಯಾ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.