ಬ್ರಿಟನ್ ಸಂಸ್ಥೆಯ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ
ಬೆಂಗಳೂರು: ಭಾರ್ತಿ ಸಂಸ್ಥೆಯ ಸಹ ಸಂಸ್ಥೆಯಾದ ವನ್‌ವೆಬ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರವಿವಾರ ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಬ್ರಿಟನ್ ಸಂಸ್ಥೆಯ ಮೊದಲ ಪೀಳಿಗೆಯ (ಜೆನ್-1) ಉಪಗ್ರಹಗಳನ್ನು ಕೆಳ ಭೂ ಕಕ್ಷೆಗೆ ಸೇರಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಂತಾಗಿದೆ.
ಜಿಎಸ್‌ಎಲ್‌ವಿ-ಎಂಕೆ3 ಮುಂಜಾನೆ 9 ಗಂಟೆಗೆ ನಭಕ್ಕೆ ಚಿಮ್ಮಿದ್ದು, ಬೇರ್ಪಡೆಗೆ ಮುನ್ನ ಸುಮಾರು 20 ನಿಮಿಷಗಳ ಉಡಾವಣೆ ಸರಣಿಯನ್ನು ಪಠ್ಯ ನಿಖರತೆಯೊಂದಿಗೆ ಪೂರ್ಣಗೊಳಿಸಿದೆ. "ಎಲ್ಲ ಕಕ್ಷಾ ಮಾನದಂಡಗಳನ್ನು ಸಾಧಿಸಲಾಗಿದೆ. 36 ಉಪಗ್ರಹಗಳನ್ನು ನಾಲ್ಕು ಒಂಬತ್ತು ಹಂತ ಹಾಗೂ ಪ್ರತಿ ನಾಲ್ಕು ಉಪಗ್ರಹಗಳ ಸರಣಿಯ ರೂಪದಲ್ಲಿ ನಿಯೋಜಿಸಲಾಗಿದೆ" ಎಂದು ಮಿಷನ್ ಡೈರೆಕ್ಟರ್ ಎಸ್.ಮೋಹನ್ ಕುಮಾರ್ ಹೇಳಿದ್ದಾರೆ.
ಎರಡು ಬ್ಯಾಚ್ ಉಪಗ್ರಹಗಳು 19ನೇ ನಿಮಿಷದಲ್ಲಿ ಬೇರ್ಪಟ್ಟರೆ, ಉಳಿದ ಎರಡು ಬ್ಯಾಚ್‌ಗಳು 13 ನಿಮಿಷಗಳ ಬಳಿಕ ಬೇರ್ಪಟ್ಟವು. ಕೊನೆಯ 20 ಉಪಗ್ರಹಗಳು ಗೋಚರವಾಗದ ಪ್ರದೇಶದಲ್ಲಿ ಬೇರ್ಪಟ್ಟಿದ್ದು, ಬೆಳಿಗ್ಗೆ 10.10ರ ವೇಳೆಗೆ ಅಂತಿಮ ದೃಢೀಕರಣ ಬಂದಿದೆ. ಯಾವುದೇ ಗೊಂದಲಗಳು ಇಲ್ಲದೇ ಸರಿಯಾದ ಕಕ್ಷೆಯಲ್ಲಿ ಅತ್ಯಂತ ಭಾರವಾದ ಪೇಲೋಡ್‌ಗಳನ್ನು ಸೇರಿಸಿದ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.