ಆಧಾರ್-ಪಾನ್ ಜೋಡಣೆಗೆ ಅಂತಿಮ ದಿನಾಂಕ ವಿಸ್ತರಣೆಯಾಗಿದೆಯೇ?: ಇಲ್ಲಿದೆ ವಾಸ್ತವ
ಹೊಸದಿಲ್ಲಿ: ಆಧಾರ್-ಪಾನ್ (Aadhaar-PAN) ಜೋಡಣೆಗಾಗಿ ಇರುವ ಕೊನೆಯ ದಿನಾಂಕವನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂಬ ಕುರಿತು ವದಂತಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಈಗಾಗಲೇ ಸಂಬಂಧಿತ ಪ್ರಾಧಿಕಾರ ತಿಳಿಸಿದಂತೆ ಆಧಾರ್-ಪ್ಯಾನ್ ಜೋಡಣೆಗೆ ಈ ವರ್ಷದ ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಆದಾಯ ತೆರಿಗೆ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಲಭ್ಯ ಮಾಹಿತಿ ಪ್ರಕಾರ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಮಾರ್ಚ್ 31 ರೊಳಗಾಗಿ ರೂ. 1,000 ಶುಲ್ಕ ಪಾವತಿಸಿ ಮಾಡಬೇಕಿದೆ. ಇದಕ್ಕಾಗಿ ಇರುವ ಅಧಿಕೃತ ಲಿಂಕ್ https://eportal.incometax.gov.in/iec/foservices/#/pre-login/bl-link-aadhaar) ಆಗಿದೆ.
ಅನಿವಾಸಿ ಭಾರತೀಯರಿಗೆ, ಭಾರತೀಯರಲ್ಲದ ವ್ಯಕ್ತಿಗಳಿಗೆ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ಅಸ್ಸಾಂ, ಮೇಘಾಲಯ ಹಾಗೂ ಜಮ್ಮು ಕಾಶ್ಮೀರ ನಿವಾಸಿಗಳಿಗೆ ಪಾನ್-ಆಧಾರ್ ಜೋಡಣೆ ಅಗತ್ಯವಿಲ್ಲ.
ಮಾರ್ಚ್ 18 ರಂದು ಆದಾಯ ತೆರಿಗೆ ಇಲಾಖೆ ಮಾಡಿದ ಟ್ವೀಟ್ನಲ್ಲಿ ಹೀಗೆ ಹೇಳಲಾಗಿತ್ತು- "ಐಟಿ ಕಾಯಿದೆ 1961 ಪ್ರಕಾರ, ಎಲ್ಲಾ ಪಾನ್ ಕಾರ್ಡ್ ಹೊಂದಿರುವವರು, ಹಾಗೂ ವಿನಾಯಿತಿ ವಿಭಾಗದಡಿ ಬಾರದೇ ಇರುವವರು ತಮ್ಮ ಪಾನ್ ಅನ್ನು ಆಧಾರ್ ಜೊತೆಗೆ 31/3/23 ರೊಳಗೆ ಜೋಡಿಸುವುದು ಕಡ್ಡಾಯವಾಗಿದೆ. ಲಿಂಕ್ ಮಾಡದ ಪಾನ್ 1/4/23 ರ ನಂತರ ಕಾರ್ಯನಿರ್ವಹಿಸುವುದಿಲ್ಲ."