ಬೆಂಗಳೂರಿನ 5 ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡಿ: ಮೃತ್ಯುಂಜಯಸ್ವಾಮಿ
ಬೆಂಗಳೂರು, ಮಾ.27: ‘ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವೀರಶೈವ-ಲಿಂಗಾಯತ ಸಮುದಾಯಕ್ಕೆ ಬೆಂಗಳೂರಿನ ಕನಿಷ್ಠ ಐದು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಮೃತ್ಯುಂಜಯಸ್ವಾಮಿ, ‘ನಗರದಲ್ಲಿ ಸುಮಾರು 30ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ವೀರಶೈವ-ಲಿಂಗಾಯತ ಸಮಾಜವನ್ನು ರಾಜಕೀಯ ಪಕ್ಷಗಳು ಕಡೆಗಣಿಸಿವೆ ಎಂದು ಆರೋಪಿಸಿದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದ ಅಭ್ಯರ್ಥಿ ಪಟ್ಟಿಯಲ್ಲಿ ಬೇರೆ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡಿದ್ದು, ನಗರದ 28 ಕ್ಷೇತ್ರಗಳ ಪೈಕಿ ಸುಮಾರು 17 ಕ್ಷೇತ್ರಗಳಲ್ಲಿ ನಿರ್ಣಾಯವಾಗಿರುವ ನಮ್ಮ ಸಮಾಜದಲ್ಲಿ ಒಬ್ಬರಿಗೂ ಟಿಕೇಟ್ ನೀಡದೇ ನಿರ್ಲಕ್ಷ್ಯ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ಜನಸಂಖ್ಯೆ ಅನುಗುಣವಾಗಿ ಸಮುದಾಯಕ್ಕೆ ನಗರದಲ್ಲಿ ಕನಿಷ್ಠ ಐದು ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಎಲ್ಲಾ ಪ್ರಮುಖ ಪಕ್ಷಗಳಿಗೂ ಈಗಾಗಲೇ ಮನವಿ ಪತ್ರ ನೀಡಲಾಗಿದೆ. ಯಾವ ಪಕ್ಷದಿಂದ ಟಿಕೇಟ್ ನೀಡಲಾಗುತ್ತದೆಯೋ ಆ ಪಕ್ಷಕ್ಕೆ ನಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗುತ್ತದೆ ಎಂದು ಮೃತ್ಯುಂಜಯಸ್ವಾಮಿ ತಿಳಿಸಿದರು.