ಬಿಜೆಪಿಗೆ ದ್ವೇಷ ಹರಡುವ ತಂತ್ರ ಬಿಟ್ಟರೆ ಇನ್ನೇನು ಗತಿಯಿಲ್ಲ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು, ಮಾ. 27: ‘ಜನಪರ ಆಡಳಿತವನ್ನು ಗಾಳಿಗೆ ತೂರಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿಗರಿಗೆ, ಈ ಚುನಾವಣೆಯಲ್ಲಿ ದ್ವೇಷ ಹರಡುವ ತಂತ್ರ ಬಿಟ್ಟರೆ ಇನ್ನೇನು ಗತಿಯಿಲ್ಲ ಎಂದು ಕಾಣುತ್ತದೆ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಕೇಂದ್ರ ಸಚಿವ ಅಮಿತ್ ಶಾ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂಬ ಕಾರಣಕ್ಕೆ ಅದನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಸಂವಿಧಾನದಲ್ಲಿ ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲದಿದ್ದಾಗಲೂ ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿ ಮಾಡಿದ್ದೇಕೆ ಎಂಬ ಪ್ರಶ್ನೆಯನ್ನು ಇವರು ಕೇಳಿಕೊಳ್ಳುವುದಿಲ್ಲ’ ಎಂದು ಪ್ರಶ್ನಿಸಿದ್ದಾರೆ.
‘ಸಂವಿಧಾನದಲ್ಲಿ ಆರ್ಥಿಕತೆ ಆಧಾರಿತವಾದ ಮೀಸಲಾತಿಗೆ ಅವಕಾಶವೇ ಇಲ್ಲ. ಧಾರ್ಮಿಕ ಸಾಮರಸ್ಯ ಮೂಡಿಸಬೇಕಾದ ನೆಲದಲ್ಲಿ, ಧಾರ್ಮಿಕ ಒಡಕನ್ನು ಮೂಡಿಸುತ್ತಿರುವ ಬಿಜೆಪಿಗರು ಚುನಾವಣಾ ಸಂದರ್ಭ ಎಂದರೆ ದ್ವೇಷ ಹರಡುವ ಸಂದರ್ಭ ಎಂದು ತಪ್ಪಾಗಿ ಗ್ರಹಿಸಿದ್ದಾರೆ’ ಎಂದು ಮಹದೇವಪ್ಪ ಇದೇ ವೇಳೆ ಟೀಕಿಸಿದ್ದಾರೆ.