ಉಡುಪಿ, ಬೈಂದೂರಿಗೆ ಕೆಆರ್‌ಎಸ್ ಸಂಭಾವ್ಯ ಅಭ್ಯರ್ಥಿ ಘೋಷಣೆ
ಉಡುಪಿ: ರಾಜ್ಯದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ತಿಳಿಸಿದ್ದಾರೆ.
ಅದರಂತೆ ಉಡುಪಿ ಜಿಲ್ಲೆಯಲ್ಲೂ ಎಲ್ಲಾ ಐದು ಕ್ಷೇತ್ರಗಳಲ್ಲಿ ಕೆಆರ್‌ಎಸ್ ಪಕ್ಷ ಸ್ಪರ್ಧಿಸಲಿದ್ದು, ಸದ್ಯಕ್ಕೆ ಉಡುಪಿ ಹಾಗೂ ಬೈಂದೂರು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ಇಂದು ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿಗೆ ರಾಮದಾಸ್ ಭಟ್ ಹಾಗೂ ಬೈಂದೂರು ಕ್ಷೇತ್ರಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ರಮೇಶ್ ನಾಯ್ಕ್‌ರನ್ನು ಸಂಭಾವ್ಯ ಅಭ್ಯರ್ಥಿಗಳಾಗಿ ಘೋಷಿಸಿದ್ದು, ಬೆಂಗಳೂರಿನಲ್ಲಿ ಸಭೆಯ ಬಳಿಕ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ರಘುಪತಿ ಭಟ್ ತಿಳಿಸಿದರು.
ಜಿಲ್ಲೆಯ ಉಳಿದ ಮೂರು ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನ ಬೆಂಗಳೂರಿನಲ್ಲಿ ಸದ್ಯವೇ ನಡೆಯಲಿದ್ದು, ಅಲ್ಲೇ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದರು.
ಕೆಆರ್‌ಎಸ್ ನಿಜವಾದ ಅರ್ಥದಲ್ಲಿ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷವೆಂದು ಕರೆದುಕೊಂಡ ರಘುಪತಿ ಭಟ್, ರಾಜ್ಯದ ಜನಸಾಮಾನ್ಯರು, ತಜ್ಞರು, ಚಿಂತಕರ ಜೊತೆ ವ್ಯಾಪಕವಾಗಿ ಚರ್ಚಿಸಿ ಹಾಗೂ ಸಂವಾದಗಳನ್ನು ನಡೆಸಿ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಏನೇನು ಯೋಜನೆಗಳನ್ನು ರೂಪಿಸಬೇಕು, ಏನೇನು ಕಾರ್ಯಕ್ರಮಗಳನ್ನು ಪಕ್ಷ ಅನುಷ್ಠಾನಗೊಳಿಸಲಿದೆ ಎಂಬುದನ್ನು ಪ್ರಣಾಳಿಕೆ ಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಹಲವು ಬಾರಿ ಜನರೊಂದಿಗೆ ಸೇರಿ ಹೋರಾಟ ರೂಪಿಸಿರುವ ಕೆಆರ್‌ಎಸ್ ಪಕ್ಷ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಅಗ್ರಪ್ರಾಶಸ್ತ್ಯ ನೀಡಲಿದೆ. ಲಂಚಮುಕ್ತ ಕರ್ನಾಟಕಕ್ಕಾಗಿ ಮತ್ತು ದಕ್ಷ ಆಡಳಿತಕ್ಕಾಗಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಿದೆ ಎಂದರು.
ದಕ್ಷ ಮತ್ತು ಪಾರದರ್ಶಕ ಆಡಳಿತದೊಂದಿಗೆ ರಾಜ್ಯ ಸರಕಾರದಲ್ಲಿ ಈಗ ಖಾಲಿ ಇರುವ ಮೂರು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವ ಭರವಸೆ ನೀಡುತ್ತದೆ. ಬಡತನ ನಿರ್ಮೂಲನೆಗಾಗಿ ಸಂಪೂರ್ಣ ಮದ್ಯ ನಿಷೇಧ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆ ಹಾಗೂ ತಾಲೂಕು ಮಟ್ಟದಲ್ಲಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರೋಗ್ಯ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗು ವುದು. ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ ಸದ್ಯ ಪಕ್ಷಕ್ಕೆ ಸದ್ಯ 150 ಸದಸ್ಯರಿದ್ದು, ಈಗಷ್ಟೇ ಪಕ್ಷದ ಸಂಘಟನೆಯನ್ನು ಪ್ರಾರಂಭಿಸಲಾಗಿದೆ. ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾಗುವ ಪ್ರತಿಯೊಬ್ಬರಲ್ಲೂ ಕ್ಷೇತ್ರಗಳಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ತಿಳಿಸಲಾಗುವುದು. ಪಕ್ಷದ ಬಲವರ್ಧನೆಗೆ ವಿಶೇಷ ಕಾರ್ಯಕ್ರಮ ಗಳನ್ನು ಹಾಕಕೊಳ್ಳಲಾಗುವುದು ಎಂದು ರಘುಪತಿಭಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಶೋಕ್ ರಾಜ್, ಜಿಲ್ಲಾ ಸಂಚಾಲಕ ಇಕ್ಬಾಲ್ ಕುಂಜಿಬೆಟ್ಟು, ಪಕ್ಷದ ಉಡುಪಿ ಅಭ್ಯರ್ಥಿ ರಾಮದಾಸ ಭಟ್ ಉಪಸ್ಥಿತರಿದ್ದರು.