ಅಂತಾರಾಷ್ಟ್ರೀಯ
ಇಮ್ರಾನ್ ಅಥವಾ ನಾವು ಒಬ್ಬರು ಮಾತ್ರ ಉಳಿಯಬಹುದು: ಪಾಕ್ ಸಚಿವರ ವಿವಾದಾತ್ಮಕ ಹೇಳಿಕೆ

ಇಸ್ಲಮಾಬಾದ್, ಮಾ.27: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ದ್ವೇಷದ ರಾಜಕಾರಣ ನಡೆಸುತ್ತಿದ್ದು `ಒಂದೋ ನಾವಿರಬೇಕು ಅಥವಾ ಅವರು ಇರಬೇಕು' ಎಂಬ ಹಂತಕ್ಕೆ ರಾಜಕೀಯವನ್ನು ಕೊಂಡೊಯ್ದಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದು, ತನ್ನ ಅಸ್ತಿತ್ವಕ್ಕೆ ಬೆದರಿಕೆ ಎದುರಾದರೆ ಆಡಳಿತಾರೂಢ ಮೈತ್ರಿಕೂಟ ಯಾವ ಹಂತಕ್ಕೂ ಹೋಗಲು ಸಿದ್ಧವಿದೆ ಎಂದು ಎಚ್ಚರಿಸಿದ್ದಾರೆ.
ಇಮ್ರಾನ್ಖಾನ್ ತಮ್ಮ ಪಕ್ಷದ ಶತ್ರುವಾಗಿದ್ದಾರೆ ಮತ್ತು ಅವರನ್ನು ಹಾಗೆಯೇ ನಡೆಸಿಕೊಳ್ಳಲಾಗುವುದು ಎಂದು ಖಾಸಗಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ್ ಮುಸ್ಲಿಮ್ ಲೀಗ್- ನವಾಝ್(ಪಿಎಂಎಲ್-ಎನ್) ಪಕ್ಷದ ಹಿರಿಯ ಮುಖಂಡ ಸನಾವುಲ್ಲಾ ಹೇಳಿದ್ದಾರೆ. ಸನಾವುಲ್ಲಾ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರ ನಿಷ್ಟಾವಂತನಾಗಿದ್ದಾರೆ.
ತನ್ನ ಅಸ್ತಿತ್ವಕ್ಕೆ ಬೆದರಿಕೆ ಎದುರಾಗಿದೆ ಎಂದು ಆಡಳಿತ ಪಕ್ಷಕ್ಕೆ ಭಾಸವಾದರೆ, ತನ್ನ ಮುಖ್ಯ ರಾಜಕೀಯ ವಿರೋಧಿಯ ವಿರುದ್ಧ ಅದು ಯಾವುದೇ ಹಂತಕ್ಕೆ ಹೋಗಲೂ ಸಿದ್ಧವಿರುತ್ತದೆ. ಒಂದಾ ಅವರನ್ನು ರಾಜಕೀಯ ಕ್ಷೇತ್ರದಿಂದ ತೊಡೆದುಹಾಕಬೇಕು ಅಥವಾ ನಮ್ಮನ್ನು' ಎಂದು ಸನಾವುಲ್ಲಾ ಹೇಳಿದ್ದಾರೆ.
ಇಮ್ರಾನ್ಖಾನ್ ನನ್ನನ್ನು ನಿಂದಿಸಿದ್ದಾರೆ, ಪ್ರಧಾನಿಯನ್ನು, ಸೇನಾಧಿಕಾರಿಯನ್ನು ನಿಂದಿಸಿದ್ದು ತನ್ನ ಹತ್ಯೆಗೆ ಪಿತೂರಿ ನಡೆಸಿರುವುದಾಗಿ ದೂರಿದ್ದಾರೆ. ಇಮ್ರಾನ್ ಅವರ ಇಂತಹ ಹೇಳಿಕೆ ಎರಡೂ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಬಹುದು ಮತ್ತು ಅವರ ಅಥವಾ ನಮ್ಮ ಕೊಲೆಯಾಗಬಹುದು(ಪರಸ್ಪರ ಪಕ್ಷದ ಕಾರ್ಯಕರ್ತರಿಂದ)' ಎಂದು ಸನಾವುಲ್ಲಾ ಹೇಳಿದ್ದಾರೆ. ಇಂತಹ ಹೇಳಿಕೆ ಪಾಕಿಸ್ತಾನದಲ್ಲಿ ಅರಾಜಕತೆಗೆ ಕಾರಣವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸನಾವುಲ್ಲಾ ` ಅರಾಜಕತೆ ಪಾಕಿಸ್ತಾನದಲ್ಲಿ ಈಗಲೂ ಇದೆ' ಎಂದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ