ಅಮಿತ್ ಶಾ ರಾಜ್ಯ ಭೇಟಿ ವೇಳೆ ಭದ್ರತಾ ಲೋಪ: ಇಬ್ಬರು ವಿದ್ಯಾರ್ಥಿಗಳ ಬಂಧನ
ಬೆಂಗಳೂರು, ಮಾ.27: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ವೇಳೆ ಭದ್ರತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಬಂಧಿತರನ್ನು ಬೆಂಗಳೂರಿನ ನೀಲಸಂದ್ರ ನಿವಾಸಿಗಳಾದ *ಇಮ್ರಾನ್ ಮತ್ತು ಜಿಬ್ರಾನ್* ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ ಹೊಸದಿಲ್ಲಿಗೆ ಹಿಂತಿರುಗಲು ಶಾ ಅವರು ರವಿವಾರ ತಡರಾತ್ರಿ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಆರೋಪಿ ವಿದ್ಯಾರ್ಥಿಗಳು ನಿಯಮಗಳನ್ನು ಉಲ್ಲಂಘಿಸಿ ಅಮಿತ್ ಶಾ ಅವರ ಬೆಂಗಾವಲು ವಾಹನಗಳೊಂದಿಗೆ ಸಫೀನಾ ಪ್ಲಾಜಾದಿಂದ ಮಣಿಪಾಲ್ ಸೆಂಟರ್‍ವರೆಗೆ ಹೇಗೋ ಹಠಾತ್ತನೆ ಮಧ್ಯೆ ಪ್ರವೇಶಿಸಿ ಪ್ರಯಾಣಿಸಿದ್ದಾರೆ. 300 ಮೀಟರ್‍ವರೆಗೆ ಪೊಲೀಸರು ತಡೆಯಲು ಯತ್ನಿಸಿದರೂ, ಬೈಕ್ ಸವಾರರು ಸವಾರಿ ಮುಂದುವರಿಸಿದ್ದರು.
ಪೊಲೀಸರು ಮಣಿಪಾಲ ಕೇಂದ್ರದಲ್ಲಿ ಅವರನ್ನು ತಡೆದು ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪರಾರಿಯಾಗುವಲ್ಲಿ ಯಶಸ್ವಿಯಾದರೂ, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರನ್ನು ಕಂಡ ವಿದ್ಯಾರ್ಥಿಗಳು ಗಾಬರಿಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ವಿವರಿಸಿವೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ಯಾವುದೇ ಅಪರಾಧ ಹಿನ್ನೆಲೆ ಅಥವಾ ಯಾವುದೇ ಕೆಟ್ಟ ಉದ್ದೇಶವನ್ನು ಹೊಂದಿಲ್ಲ ಎಂದು ತಿಳಿದಿದೆ. ಆದರೆ, ಯಾವುದೇ ಅವಕಾಶ ನೀಡದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಭಾರತೀನಗರ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 353 ರ ಅಡಿಯಲ್ಲಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕಾಗಿ ಮತ್ತು 279 ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಭವ್ಯ ನರಸಿಂಹಮೂರ್ತಿಗೆ ಕೈ ತಪ್ಪಿದ ಟಿಕೆಟ್: ಗಮನ ಸೆಳೆದ ಟ್ವೀಟ್