varthabharthi


ವಿಶೇಷ-ವರದಿಗಳು

ಅಭದ್ರವಾಗುತ್ತಿರುವ ವಿದೇಶಿ ಬ್ಯಾಂಕುಗಳು

ವಾರ್ತಾ ಭಾರತಿ : 28 Mar, 2023
ಟಿ.ಆರ್. ಭಟ್

ಅಮೆರಿಕ ಮತ್ತು ಸ್ವಿಟ್ಸರ್‌ಲ್ಯಾಂಡ್ ಮುಂದುವರಿದ ರಾಷ್ಟ್ರಗಳು ಮಾತ್ರವಲ್ಲ ಅಲ್ಲಿನ ಬ್ಯಾಂಕಿಂಗ್ ಉದ್ದಿಮೆಗಳು ವಿಶ್ವಾಸಾರ್ಹ, ಸುಭದ್ರ ಮತ್ತು ಅರ್ಥವ್ಯವಸ್ಥೆಯ ಬೆನ್ನೆಲುಬುಗಳಾಗಿ ಬೆಳೆದಿವೆ. ಹೀಗಿದ್ದೂ ಅಲ್ಲಿನ ಬ್ಯಾಂಕುಗಳು ಯಾಕೆ ಮುಳುಗಿದವು? ಅದರಿಂದ ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳು ಅರಿತುಕೊಳ್ಳಬೇಕಾದ ಪಾಠಗಳಿವೆಯೇ?


ಮುಕ್ತ ಅರ್ಥವ್ಯವಸ್ಥೆಯ ಅಮೆರಿಕದಲ್ಲಿ ಈ ತಿಂಗಳಿನಲ್ಲಿ ಎರಡು ಬ್ಯಾಂಕುಗಳು ಮುಳುಗಿವೆ, ಮೂರನೆಯದು ಮುಳುಗುವ ಸೂಚನೆಗಳಿವೆ. ಸುಭದ್ರ ಬ್ಯಾಂಕುಗಳ ತವರೂರು ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಒಂದು ದೊಡ್ಡ ಬ್ಯಾಂಕು ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಅಮೆರಿಕ ಮತ್ತು ಸ್ವಿಟ್ಸರ್‌ಲ್ಯಾಂಡ್ ಮುಂದುವರಿದ ರಾಷ್ಟ್ರಗಳು ಮಾತ್ರವಲ್ಲ ಅಲ್ಲಿನ ಬ್ಯಾಂಕಿಂಗ್ ಉದ್ದಿಮೆಗಳು ವಿಶ್ವಾಸಾರ್ಹ, ಸುಭದ್ರ ಮತ್ತು ಅರ್ಥವ್ಯವಸ್ಥೆಯ ಬೆನ್ನೆಲುಬುಗಳಾಗಿ ಬೆಳೆದಿವೆ. ಹೀಗಿದ್ದೂ ಅಲ್ಲಿನ ಬ್ಯಾಂಕುಗಳು ಯಾಕೆ ಮುಳುಗಿದವು? ಅದರಿಂದ ಭಾರತದಂತಹ ಪ್ರಗತಿಶೀಲ ರಾಷ್ಟ್ರಗಳು ಅರಿತುಕೊಳ್ಳಬೇಕಾದ ಪಾಠಗಳಿವೆಯೇ?

ಅಮೆರಿಕದ ಬ್ಯಾಂಕುಗಳ ಮುಳುಗಡೆ:

ಮಾರ್ಚ್ 10ಕ್ಕೆ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ 40 ವರ್ಷಗಳ ಹಿಂದೆ ಆರಂಭವಾದ ಸಿಲಿಕಾನ್ ವ್ಯಾಲಿ ಬ್ಯಾಂಕು (ಸಿಲಿಕಾನ್)ಮುಳುಗಿತು. ಕಳೆದ ಹಣಕಾಸು ವರ್ಷದಲ್ಲಿ ಅದರ ಆಸ್ತಿಗಳ ಮೌಲ್ಯ 209 ಬಿಲಿಯ ಡಾಲರ್‌ಗಳಷ್ಟಿತ್ತು. ಭಾರತದ ರೂ.ಗಳಲ್ಲಿ ಹೇಳುವುದಿದ್ದರೆ ಈಗಿನ ಡಾಲರ್ ರೂ. ವಿನಿಮಯ ದರದಲ್ಲಿ(1ಡಾ.=82 ರೂ.) ಸುಮಾರು 17,13,800 ಕೋಟಿ ರೂ.; ಅಂದರೆ ಗಾತ್ರದಲ್ಲಿ ಕರ್ನಾಟಕ ಮೂಲದ ಕೆನರಾ ಬ್ಯಾಂಕಿಗಿಂತ ದೊಡ್ಡದು (ಕೆನರಾ ಬ್ಯಾಂಕಿನ ಆಸ್ತಿಯ ಮೌಲ್ಯ 2022ಕ್ಕೆ 12,27,000 ಕೋಟಿ ರೂ. ಇತ್ತು).
ಅಮೆರಿಕದ ಠೇವಣಿ ವಿಮಾ ಸಂಸ್ಥೆ (ಫೆಡರಲ್ ಡೆಪೊಸಿಟ್ ಇನ್ಸೂರೆನ್ಸ್ ಕಾರ್ಪೊರೇಶನ್- ಎಫ್ ಡಿಐಸಿ)ಯು 2,50,000 ಡಾಲರ್ ತನಕದ ಠೇವಣಿಗಳನ್ನು ಸಂದಾಯಿಸುವ ಆಶ್ವಾಸನೆ ನೀಡಿದೆ. ಆದರೆ ಬ್ಯಾಂಕಿನ ಒಟ್ಟು ಠೇವಣಿಗಳ ಶೇ. 89ರಷ್ಟು ವಿಮೆಯ ಮಿತಿಯಿಂದ ಹೊರಗಿದ್ದು ಅವುಗಳು ವಾಪಸಾಗುವ ಸಾಧ್ಯತೆ ಇಲ್ಲ.

ಮಾರ್ಚ್ 12ಕ್ಕೆ ನ್ಯೂಯಾರ್ಕಿನ ಸಿಗ್ನೆಚರ್ ಬ್ಯಾಂಕು (ಸಿಗ್ನೆಚರ್) ಮುಳುಗಿತು. 2022ಕ್ಕೆ ಅದರ ಆಸ್ತಿಯ ಮೌಲ್ಯ ಸುಮಾರು 110 ಬಿಲಿಯ ಡಾಲರ್‌ಗಳಷ್ಟಿತ್ತು(ಸಿಲಿಕಾನಿನ ಅರ್ಧದಷ್ಟು). ಈ ಎರಡು ಬ್ಯಾಂಕುಗಳ ದಿವಾಳಿಯ ಗಾಳಿಗೆ ಕ್ಯಾಲಿಫೋರ್ನಿಯಾದ ಮತ್ತೊಂದು ಬ್ಯಾಂಕು- ಫಸ್ಟ್ ರಿಪಬ್ಲಿಕನ್ ಬ್ಯಾಂಕು (ಫರಿ) ತತ್ತರಿಸಿದೆ; ಅದರ ಮಿಲಿಯಗಟ್ಟಳೆ ಡಾಲರ್‌ಗಳ ಠೇವಣಿಗಳನ್ನು ಗ್ರಾಹಕರು ಹಿಂಪಡೆದಿದ್ದಾರೆ. ಮುಳುಗಡೆಯ ಭಯದಲ್ಲಿ ಅದರ ಶೇರುಗಳ ಮೌಲ್ಯ ಕುಸಿದಿದೆ. ಅಮೆರಿಕದ ದಿಗ್ಗಜ ಬ್ಯಾಂಕುಗಳು 'ಫರಿ'ಗೆ ಸಹಾಯಹಸ್ತವನ್ನೂ ಚಾಚಿವೆ. ಆದರೆ ಇಳಿಮುಖವಾದ ಶೇರುಗಳ ಬೆಲೆ ಏರುವ ಲಕ್ಷಣಗಳಿಲ್ಲ. ಅಮೆರಿಕದಲ್ಲಿ ಆಗುತ್ತಿರುವ ಹಣದ ಉಬ್ಬರ ಮತ್ತು ಬೆಲೆ ಏರಿಕೆಯನ್ನು ತಡೆಯಲು ಆ ದೇಶದ ಹಣಕಾಸು ವ್ಯವಸ್ಥೆಯ ನಿಯಂತ್ರಣದ ಜವಾಬ್ದಾರಿ ಹೊಂದಿದ (ಭಾರತದ ರಿಸರ್ವ್ ಬ್ಯಾಂಕಿಗೆ ಸಮಾನವಾದ) ಫೆಡರಲ್ ರಿಸರ್ವ್ ಬೋರ್ಡ್ ಹೋದ ಒಂದೇ ವರ್ಷದಲ್ಲಿ ಸಾಲಗಳ (ಬಾಂಡುಗಳ) ಮೇಲಿನ ಬಡ್ಡಿದರವನ್ನು ಏರಿಸುತ್ತಾ ಬಂದಿದೆ; ಈಗ ಅದು ಶೇ. 4.5ಕ್ಕೆ ತಲುಪಿದೆ (ಭಾರತದಲ್ಲಿ ಶೇ. 6.5). ಹೊಸ ಬಾಂಡಿನ ಬಡ್ಡಿ ಹೆಚ್ಚಾದಂತೆ ಹಿಂದೆ ಚಲಾವಣೆಯಲ್ಲಿದ್ದ ಕಡಿಮೆ ಬಡ್ಡಿಯ ಬಾಂಡುಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿಯುತ್ತದೆ. ಈ ಕುಸಿತದಿಂದ ಬ್ಯಾಂಕುಗಳ ಅಧೀನದಲ್ಲಿರುವ (ಚರಸೊತ್ತುಗಳಾದ) ಬಾಂಡುಗಳ ಅಪಮೌಲ್ಯವಾಗಿ ಬ್ಯಾಂಕುಗಳು ನಷ್ಟವನ್ನು ಅನುಭವಿಸುತ್ತವೆ. ಇದು ಬ್ಯಾಂಕುಗಳ ಲಾಭದಾಯಕತೆಯ ಬಗ್ಗೆ ಶಂಕೆಯನ್ನು ಉಂಟು ಮಾಡಿ ಗ್ರಾಹಕರ ಮೇಲೂ ಪ್ರಭಾವ ಬೀರುತ್ತದೆ.

ಠೇವಣಿಗಳನ್ನು ಮರಳಿಪಡೆಯಲು ಗ್ರಾಹಕರು ಬ್ಯಾಂಕುಗಳಿಗೆ ಧಾವಿಸುತ್ತಾರೆ. ಏಕಾಏಕಿ ಠೇವಣಿ ಮರುಪಾವತಿ ಮಾಡಲು ಬ್ಯಾಂಕುಗಳಲ್ಲಿ ಮೀಸಲಿರಿಸಿದ ನಿಧಿಯು ಸಾಲುವುದಿಲ್ಲ; ಆಗ ಹೊರಗಿನವರ- ಸರಕಾರ, ಕೇಂದ್ರೀಯ ಬ್ಯಾಂಕು ಮತ್ತು ದೊಡ್ಡ ಬ್ಯಾಂಕುಗಳ ಸಹಾಯವನ್ನು ಕೇಳಬೇಕಾಗುತ್ತದೆ. ಸಿಲಿಕಾನ್, ಸಿಗ್ನೆಚರ್ ಮತ್ತು ಫರಿ ಬ್ಯಾಂಕುಗಳ ಅಧೀನದಲ್ಲಿದ್ದ ಕಡಿಮೆ ಬೆಲೆಯ ಬಾಂಡುಗಳ ಅಪಮೌಲ್ಯದಿಂದ ನಷ್ಟವಾಗಿ ಅವುಗಳು ತೀವ್ರವಾದ ಸಂಕಷ್ಟಕ್ಕೆ ಗುರಿಯಾದವು. ಸಿಲಿಕಾನ್‌ನ ವ್ಯವಹಾರವು ನವೋದ್ಯಮ ಮತ್ತು ಅವುಗಳಿಗೆ ಹಣಸಹಾಯ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಗ್ರಾಹಕರು ತಮ್ಮ ಠೇವಣಿಗಳನ್ನು ಸಿಲಿಕಾನ್ ನಲ್ಲೇ ಇಡುತ್ತಿದ್ದವು. ಬ್ಯಾಂಕು ನಷ್ಟಹೊಂದಿ ಅಭದ್ರವಾಗಬಹುದೆಂಬ ಶಂಕೆ ತಲೆದೋರಿದಾಗ ಆ ಸಂಸ್ಥೆಗಳು ತಮ್ಮ ಠೇವಣಿಗಳನ್ನು ಮರುಪಡೆಯಲು ಆರಂಭಿಸಿದವು. ಒಂದು ಬ್ಯಾಂಕು ಕಷ್ಟಕ್ಕೆ ಸಿಲುಕಿದಾಗ ಆ ಭೀತಿಯ 'ವೈರಾಣು' ಉಳಿದ ಸಂಸ್ಥೆಗಳಿಗೂ ಹರಡುತ್ತದೆ. ಈ ಕಾರಣಕ್ಕಾಗಿ ಇನ್ನೆರಡು ಬ್ಯಾಂಕುಗಳೂ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂತು.

ಸ್ವಿಸ್ ಬ್ಯಾಂಕಿನ ಬಿಕ್ಕಟ್ಟು:

ಅಮೆರಿಕದಲ್ಲಿ ಬ್ಯಾಂಕುಗಳು ಮುಳುಗಿದ ಬಿಸಿ ಸುದ್ದಿ ಆರುವ ಮೊದಲೇ ಸ್ವಿಟ್ಸರ್‌ಲ್ಯಾಂಡ್ ಮೂಲದ ಕ್ರೆಡಿಟ್ ಸ್ಯುಸೆ ('ಕ್ರೆಸು') ಬ್ಯಾಂಕು ತೀವ್ರ ಸಂಕಷ್ಟಕ್ಕೊಳಗಾಗಿ ಮುಳುಗುವ ಹಂತಕ್ಕೆ ತಲುಪಿತು. 1856ರಲ್ಲಿ ಆರಂಭವಾದ 'ಕ್ರೆಸು' ಒಂದು ಸುಭದ್ರ ಬ್ಯಾಂಕಾಗಿ ಬೆಳೆಯಿತು. ಯುರೋಪ್, ಅಮೆರಿಕ ಮತ್ತು ಏಶ್ಯದ ಅನೇಕ ದೇಶಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ ವ್ಯವಹಾರ ಕುಶಲತೆಯಿಂದ ಮುಂಚೂಣಿಗೆ ಬಂತು. 2007-08ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತಡೆಯಿಲ್ಲದೆ ವೃದ್ಧಿ ಹೊಂದಿತು. ಅದೇ ದೇಶದ ವಿಶ್ವ ವಿಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಅದರ 'ಬ್ರಾಂಡ್ ಅಂಬಾಸಡರ್' ಕೂಡ ಆಗಿದ್ದರು. 2008ರ ನಂತರ ಕ್ರೆಸುವಿನ ವ್ಯವಹಾರಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೂಚಾನವಾಗಿ ಬಳಕೆಯಲ್ಲಿದ್ದ ನೀತಿಗಳನ್ನು ಬದಿಗಿಟ್ಟು ನಡೆದವು. ಸಾಲ ನೀಡುವುದರಲ್ಲಿ, ಗ್ರಾಹಕ ಕಂಪೆನಿಗಳನ್ನು ಆಕರ್ಷಿಸುವುದರಲ್ಲಿ, ಕಂಪೆನಿಗಳಿಗೆ ಹೂಡಿಕೆಯ ಬಗ್ಗೆ ಸಲಹೆಗಳನ್ನು ನೀಡುವ ಕ್ರಮದಲ್ಲಿ, ತನ್ನ ಸಂಪತ್ತನ್ನು ಹೂಡುವ ಪ್ರಕ್ರಿಯೆಯಲ್ಲಿ ಹೀಗೆ ಬೇರೆ ಬೇರೆ ವ್ಯವಹಾರದಲ್ಲಿ ವೃತ್ತಿಪರ ಮೌಲ್ಯಮಾಪನ ಹಿಂದೆ ಸರಿದು, ಲಾಭ ಸಂಪಾದನೆಯೇ ಮುಖ್ಯ ಗುರಿಯಾಯಿತು. ಗ್ರಾಹಕರ ಸಂಪತ್ತನ್ನು ವಿನಿಯೋಗಿಸುವ ಕ್ರಮಗಳೂ ಪ್ರಶ್ನಾರ್ಹವಾದವು. ಕೆಲವು ದೊಡ್ಡ ವ್ಯವಹಾರಗಳಲ್ಲಿ ಬೃಹತ್ ನಷ್ಟವನ್ನು ಕ್ರೆಸು ಅನುಭವಿಸಿತು. ಈ ನಷ್ಟ ಶೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು. 2007ರಲ್ಲಿ 80 ಸ್ವಿಸ್ ಫ್ರಾಂಕ್ ಬೆಲೆಯಿದ್ದ ಕ್ರೆಸುವಿನ ಶೇರು ಈ ಮಾರ್ಚ್‌ಗೆ 1.56 ಫ್ರಾಂಕಿಗೆ ಕುಸಿಯಿತು. ತನ್ನ ಬಹುದೊಡ್ಡ ಶೇರುದಾರ (ಶೇ. 10ರಷ್ಟು) ಸೌದಿ ನ್ಯಾಶನಲ್ ಬ್ಯಾಂಕಿನಿಂದ ಸಹಾಯ ಪಡೆಯಲು ಕ್ರೆಸು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಬ್ಯಾಂಕು ದಿವಾಳಿಯ ಅಂಚಿಗೆ ತಲುಪಿತ್ತು. ಜಗತ್ತಿನ ದೊಡ್ಡ 30 ಬ್ಯಾಂಕುಗಳಲ್ಲಿ ಒಂದಾದ 'ಕ್ರೆಸು' ಮುಳುಗಿದ್ದರೆ ಸ್ವಿಟ್ಸರ್‌ಲ್ಯಾಂಡ್ ಮಾತ್ರವಲ್ಲ, ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಡೋಲಾಯಮಾನ ವಾಗುತ್ತಿತ್ತು. ಹಾಗಾಗಿ ಅದನ್ನು ಮುಳುಗಡೆಯಾಗಲು ಸರಕಾರವು ಬಿಡಲಿಲ್ಲ. ದೊಡ್ಡ ಹಣಕಾಸು ಸಂಸ್ಥೆ ಮುಳುಗಿದರೆ ಅದರಿಂದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಮುಳುಗಬಹುದೆಂಬ ಸಂದೇಹ ಬಲವಾದಾಗ ಅದನ್ನು ಸಂಕಟದಿಂದ ಸರಕಾರವೇ ರಕ್ಷಿಸುತ್ತದೆ; ಹೀಗಾಗಿ 'ಗಾತ್ರ ದೊಡ್ಡದಾದಷ್ಟು ಮುಳುಗಡೆಯಾಗುವ ಸಾಧ್ಯತೆ ದೂರವಾಗುತ್ತದೆ!' ಬ್ಯಾಂಕಿಂಗ್ ಪರಿಭಾಷೆಯಲ್ಲಿ ಅದನ್ನು 'Too big to fail' (ಟೂ ಬಿಗ್ ಟು ಫೈಲ್) ಅನ್ನಲಾಗುತ್ತದೆ.

ಈ ಗಂಭೀರ ಪರಿಸ್ಥಿತಿಯಲ್ಲಿ ಸ್ವಿಸ್ ಸರಕಾರ, ಕೇಂದ್ರೀಯ ಬ್ಯಾಂಕು ಮತ್ತು ಹಣಕಾಸು ವ್ಯವಸ್ಥೆಯ ನಿಯಂತ್ರಕರು ರಂಗಪ್ರವೇಶಿಸಿ ಇನ್ನೊಂದು ದೊಡ್ಡ ಬ್ಯಾಂಕು ಆಗಿರುವ ಯುಬಿಎಸ್, ಕ್ರೆಸುವನ್ನು ಸ್ವಾಧೀನ ಪಡಿಸಿಕೊಳ್ಳಲು ಒತ್ತಾಯಿಸಿದವು; ಮಾರ್ಚ್ 19ರಂದು ಯುಬಿಎಸ್ ಒಪ್ಪಿತು. ಪರಿಹಾರವಾಗಿ 3 ಬಿಲಿಯ ಫ್ರಾಂಕು ಮೌಲ್ಯವನ್ನು ಕ್ರೆಸುಗೆ ಕೊಡಲು ಒಪ್ಪಂದವಾಯಿತು (ಇತ್ತೀಚೆಗಷ್ಟೆ ಕ್ರೆಸುವಿನ ಶೇರುಗಳ ಮೌಲ್ಯ 7.4 ಬಿಲಿಯ ಫ್ರಾಂಕುಗಳಷ್ಟಿತ್ತು). ಕ್ರೆಸು ಶೇರುದಾರರು ತಮ್ಮ ಪ್ರತೀ 22.48 ಶೇರುಗಳಿಗೆ ಯುಬಿಎಸ್‌ನ 1 ಶೇರು (ಅದರ ಮೌಲ್ಯ 0.76 ಫ್ರಾಂಕ್) ಪಡೆಯಲಿದ್ದಾರೆ. ಮಾತ್ರವಲ್ಲ ತನ್ನ ಬಂಡವಾಳವನ್ನು ಹೆಚ್ಚಿಸುವ ಉದ್ದೇಶದಿಂದ ಹಿಂದೆ ಬಿಡುಗಡೆಮಾಡಿದ ಸುಮಾರು 16 ಬಿಲಿಯ ಫ್ರಾಂಕ್ ಮೌಲ್ಯದ ಕ್ರೆಸುವಿನ ಬಾಂಡುಗಳು ರದ್ದಿಯಾಗಲಿವೆ. 50,000 ಉದ್ಯೋಗಿಗಳಲ್ಲಿ ಹಲವಾರು ಮಂದಿ ತಮ್ಮ ಉದ್ಯೋಗವನ್ನು ಕಳಕೊಳ್ಳಲಿದ್ದಾರೆ. ಅನೇಕ ಶಾಖೆಗಳನ್ನು ಮುಚ್ಚುವ ಸಾಧ್ಯತೆ ಇದೆ. ವಿಲೀನದಿಂದ ಯುಬಿಎಸ್‌ಗೆ ಆಗಬಹುದಾದ ಸಂಪಾದನೆಯ ಖೋತವನ್ನು ಭರ್ತಿಮಾಡಲು ಸರಕಾರ ಮತ್ತು ಕೇಂದ್ರೀಯ ಬ್ಯಾಂಕು ಸಹಾಯಧನವನ್ನು ನೀಡಲಿವೆ. ವಿಲೀನದಿಂದಾಗಿ ಠೇವಣಿದಾರರಿಗೆ ನಷ್ಟವಾಗುವುದಿಲ್ಲ.

ಸ್ವಿಸ್ ಬ್ಯಾಂಕುಗಳು ತಮ್ಮ ಗ್ರಾಹಕರ ಕುರಿತಾದ ಮಾಹಿತಿಗಳ ಗೌಪ್ಯರಕ್ಷಣೆಯ ಬಗ್ಗೆ ಹೆಸರುವಾಸಿ. ಪ್ರಗತಿಶೀಲ ಮತ್ತು ಹಿಂದುಳಿದ ದೇಶಗಳಲ್ಲಿನ ಶ್ರೀಮಂತರು ಕೆಲವೊಮ್ಮೆ ವಾಮಮಾರ್ಗದಿಂದ ಸಂಪಾದಿಸಿದ ಸಂಪತ್ತನ್ನು ಸ್ವಿಸ್ ಬ್ಯಾಂಕುಗಳಲ್ಲಿ ಭದ್ರವಾಗಿಡುತ್ತಾರೆಂಬುದು ಜಗಜ್ಜಾಹೀರಾದ ವಿಷಯ. ಕ್ರೆಸು ಕೂಡ ಅದೇ ವ್ಯವಹಾರವನ್ನು ಒಳಗೊಂಡ ಒಂದು ಬ್ಯಾಂಕು. ಆದರೆ ಆಂತರಿಕವಾಗಿ ನೀತಿ ನಿಯಮಗಳನ್ನು ಬದಿಗಿರಿಸಿ ವ್ಯವಹಾರ ನಡೆಸಿದರೆ ಎಷ್ಟೇ ದೊಡ್ಡ ಸಂಸ್ಥೆಯಾದರೂ ಮುಳುಗಬಹುದು ಎಂಬುದಕ್ಕೆ ಅದು ಮತ್ತೊಂದು ನಿದರ್ಶನ.

ಹೊಸ ಬಿಕ್ಕಟ್ಟಿನ ಪಾಠಗಳು:

ಬ್ಯಾಂಕುಗಳ ಪತನ ಹಿಂದೆಯೂ ಸಂಭವಿಸಿದೆ. 1762ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪಿಸಲಾಗಿದ್ದ ಬೇರಿಂಗ್ಸ್ ಬ್ಯಾಂಕು 1995ರಲ್ಲಿ ಮುಳುಗಿತು. 1844ರಲ್ಲಿ ಅಮೆರಿಕದಲ್ಲಿ ಆರಂಭವಾಗಿದ್ದ ಲೆಹ್ಮನ್ ಬ್ರದರ್ಸ್ ಬ್ಯಾಂಕು 2008ರಲ್ಲಿ ಮುಳುಗಿತು. (2007-08ರಲ್ಲಿ ಇನ್ನೂ ಅನೇಕ ಬ್ಯಾಂಕುಗಳು ಮುಚ್ಚಿದ್ದವು). ಆ ಘಟನೆಗಳು ವಿಶ್ವ ಅರ್ಥವ್ಯವಸ್ಥೆಗೆ ತೀವ್ರವಾದ ಆಘಾತವನ್ನು ಉಂಟುಮಾಡಿದ್ದವು. ಅವೆರಡರ ಪತನದ ಮೂಲ ಕಾರಣ ಲಾಭಸಂಪಾದನೆಯ ಉದ್ದೇಶಕ್ಕೆ ಪ್ರಶ್ನಾರ್ಹ ಮಾರ್ಗಗಳನ್ನು ಅನುಸರಿಸಿದ್ದು. ಭಾರತದಲ್ಲಿ 2001ರಲ್ಲಿ 1995ರಲ್ಲಷ್ಟೇ ಸ್ಥಾಪಿತವಾದ ಶೀಘ್ರವಾಗಿ ಉತ್ಕರ್ಷಹೊಂದುತ್ತಿದ್ದ ಸಿಕಂದರಾಬಾದ್ ಮೂಲದ ಗ್ಲೋಬಲ್ ಟ್ರಸ್ಟ್ ಬ್ಯಾಂಕು ವಿಪರೀತ ನಷ್ಟವನ್ನು ಉಂಡು ಸರಕಾರದ ಒತ್ತಡದಿಂದ ಅಂದಿನ ಓರಿಯೆಂಟಲ್ ಬ್ಯಾಂಕಿನೊಂದಿಗೆ ವಿಲೀನಗೊಂಡಿತ್ತು. ಮುಂಬೈ ಮೂಲದ ಪಂಜಾಬ್-ಮಹಾರಾಷ್ಟ್ರ ಸಹಕಾರಿ ಬ್ಯಾಂಕು (ಪಿಎಂಸಿ) 2019ರಲ್ಲಿ ಬಾಗಿಲು ಮುಚ್ಚುವ ಸ್ಥಿತಿಗೆ ಸಮೀಪಿಸಿತ್ತು. ತಮಿಳುನಾಡು ಮೂಲದ ಲಕ್ಷ್ಮೀವಿಲಾಸ ಬ್ಯಾಂಕು ಅಪಾರ ನಷ್ಟ ಅನುಭವಿಸಿ ಮುಳುಗಡೆ ಹಂತಕ್ಕೆ ಬಂದಾಗ 2020ರಲ್ಲಿ ಅದನ್ನು ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕಿನೊಂದಿಗೆ ವಿಲೀನಗೊಳಿಸಲಾಯಿತು. ತಮ್ಮ ಸಂಸ್ಥೆಯ ಒಳಿತಿಗಾಗಿ ತಾವೇ ರೂಪಿಸಿದ ನೀತಿಗಳ ಅವಗಣನೆ, ಕಾಲಕಾಲಕ್ಕೆ ಬರುತ್ತಿದ್ದ ಅಪಾಯದ ಸಂದೇಶಗಳ ಕುರಿತು ಅನ್ಯಮನಸ್ಕತೆ ಮತ್ತು ತನ್ನದೇ ಪರಿಶೀಲನೆಯ ಮೂಲಕ ಅವ್ಯವಹಾರಗಳು ಗಮನಕ್ಕೆ ಬಂದಾಗಲೂ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದ ರಿಸರ್ವ್ ಬ್ಯಾಂಕಿನ ವೈಫಲ್ಯಗಳು ಈ ಬ್ಯಾಂಕುಗಳ ದುರ್ದೆಶೆಗೆ ಕಾರಣವಾಗಿದ್ದವು. ಅಮೆರಿಕದ ಬ್ಯಾಂಕುಗಳೂ ಈ ಅಪವಾದದಿಂದ ಮುಕ್ತವಾಗುವುದಿಲ್ಲ. ತಜ್ಞರ ಪ್ರಕಾರ ಅಲ್ಲಿನ ಫೆಡರಲ್ ರಿಸರ್ವ್ ಬೋರ್ಡ್ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರವನ್ನು ಹೆಚ್ಚಿಸಿದಂತೆ ಈ ಬ್ಯಾಂಕುಗಳ ತಿಜೋರಿಯಲ್ಲಿದ್ದ ಬಾಂಡುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ. (ಹೆಚ್ಚು ಬಡ್ಡಿಯ ಹೊಸ ಬಾಂಡುಗಳು ಲಭ್ಯವಾಗುವಾಗ ಕಡಿಮೆ ಬಡ್ಡಿಯ ಹಳೆ ಬಾಂಡುಗಳ ಮೌಲ್ಯದಲ್ಲಿ ಕಡಿತವಾಗುತ್ತದೆ.) ಬ್ಯಾಂಕುಗಳು ಇದರಿಂದ ಆಗಬಹುದಾದ ಸಂಭಾವ್ಯ ನಷ್ಟಕ್ಕೆ ಸಂಪಾದನೆಯಿಂದ ಮುನ್ನೇರ್ಪಾಟು (ಪ್ರೊವಿಶನ್) ಮಾಡಿದಾಗ ನಿವ್ವಳ ಲಾಭದಲ್ಲಿ ಕಡಿತವಾಗಿ ಅವು ನಷ್ಟಕ್ಕೂ ಜಾರಬಹುದು. ತಮ್ಮ ಸಂಪತ್ತನ್ನು ವಿಭಿನ್ನ ಹೂಡಿಕೆಗಳಲ್ಲಿ ವಿನಿಯೋಗಿಸಿದ್ದಲ್ಲಿ ನಷ್ಟದ ಸಂಭಾವ್ಯತೆ ಕಡಿಮೆಯಾಗುತ್ತಿತ್ತು. ಅಮೆರಿಕದ ಬ್ಯಾಂಕುಗಳು ದೂರದೃಷ್ಟಿ ಮತ್ತು ವಿವೇಚನಾಹೀನವಾಗಿ ವ್ಯವಹರಿಸಿದವೆಂಬ ಆಪಾದನೆಯೂ ಈಗ ಕೇಳಿ ಬರುತ್ತಿದೆ.

 ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದ ಬ್ಯಾಂಕುಗಳು ತಮ್ಮ ಸಂಪತ್ತಿನ ಹೂಡಿಕೆಯನ್ನು ವಿವೇಚನೆಯಿಂದ ಮಾಡಬೇಕು; ಆಂತರಿಕ ಮೇಲ್ವಿಚಾರಣೆ ಮತ್ತು ಪರಿಶೀಲನಾ ಕ್ರಮಗಳನ್ನು ಮತ್ತಷ್ಟು ಸಕ್ರಿಯಗೊಳಿಸಬೇಕು. ರಿಸರ್ವ್ ಬ್ಯಾಂಕು ಕೂಡ ತನ್ನ ನಿಯಂತ್ರಣದ ವೈಖರಿಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)