2019ರ ಜಾಮಿಯಾ ಹಿಂಸಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯದ ಆದೇಶವನ್ನು ಭಾಗಶಃ ರದ್ದುಗೊಳಿಸಿದ ದಿಲ್ಲಿ ಹೈಕೋರ್ಟ್
ಶಾರ್ಜೀಲ್ ಇಮಾಮ್, ಇತರರು ಗಲಭೆ ಆರೋಪ ಎದುರಿಸುವ ಸಾಧ್ಯತೆ
ಹೊಸದಿಲ್ಲಿ, ಮಾ. 28: 2019ರ ಜಾಮಿಯಾ ನಗರ ಹಿಂಸಾಚಾರ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ಶರ್ಜೀಲ್ ಇಮಾಮ್, ಸಫೂರಾ ಝರ್ಗಾರ್, ಆಸಿಫ್ ಇಕ್ಬಾಲ್ ತನ್ಹಾ ಹಾಗೂ ಇತರ 8 ಮಂದಿಯನ್ನು ದೋಷ ಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಭಾಗಶಃ ಬದಿಗಿರಿಸಿದೆ.
ಘಟನೆಯ ನಿಜವಾದ ರೂವಾರಿಗಳನ್ನು ಬಂಧಿಸಲು ಸಾಧ್ಯವಾಗದ ಕಾರಣ ಸಾಮಾಜಿಕ ಹೋರಾಟಗಾರರನ್ನು ಬಲಿಪಶು ಮಾಡಲಾಗಿದೆ ಎಂದ ಕೆಳ ನ್ಯಾಯಾಲಯದ ಆದೇಶವನ್ನು ದಿಲ್ಲಿ ಪೊಲೀಸರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಗಲಭೆ ಹಾಗೂ ಕಾನೂನು ಬಾಹಿರ ಜಮಾವಣೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಇಮಾಮ್, ತನ್ಹಾ ಹಾಗೂ ಝರ್ಗಾರ್ ಸೇರಿದಂತೆ 11 ಮಂದಿ ಆರೋಪಿಗಳಲ್ಲಿ 9 ಮಂದಿಯ ವಿರುದ್ಧ ಮಂಗಳವಾರ ಉಚ್ಚ ನ್ಯಾಯಾಲಯ ಕೂಡ ಆರೋಪ ಪಟ್ಟಿ ರೂಪಿಸಿದೆ.
ಈ ಸಂದರ್ಭ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಏಕ ಸದಸ್ಯ ಪೀಠ, ಶಾಂತಿಯುತ ಸಭೆಯ ಹಕ್ಕು ಸಕಾರಣ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಹಿಂಸಾಚಾರ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳನ್ನು ಅದರ ಅಡಿಯಲ್ಲಿ ರಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.
‘‘ವೀಡಿಯೋದಲ್ಲಿ ಕಂಡಂತೆ ಮೇಲ್ನೋಟಕ್ಕೆ ಪ್ರತಿವಾದಿಗಳು ಗುಂಪಿನ ಮೊದಲ ಸಾಲಿನಲ್ಲಿದ್ದರು. ಅವರು ದಿಲ್ಲಿ ಪೋಲೀಸ್ ಮುರ್ದಾಬಾದ್ ಘೋಷಣೆ ಕೂಗುತ್ತಿದ್ದರು ಹಾಗೂ ತಡೆಬೇಲಿಗಳನ್ನು ಹಿಂಸಾತ್ಮಕವಾಗಿ ದೂಡುತ್ತಿದ್ದರು’’ ಎಂದು ಪೀಠ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 2019 ಡಿಸೆಂಬರ್ 15ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.