PSI ಹಗರಣ: ಮತ್ತೋರ್ವ ಪಿಎಸ್ಸೈ ಬಂಧನ
ಬೆಂಗಳೂರು, ಮಾ.28: ಪಿಎಸ್ಸೈ ನೇಮಕಾತಿ ಹಗರಣ ಸಂಬಂಧ ಹಲವು ದಿನಗಳಿಂದ ತಲೆಮರೆಸಿ ಕೊಂಡಿದ್ದ ಮತ್ತೋರ್ವ ಪಿಎಸ್ಸೈಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್ ಬಂಧಿತ ಆರೋಪಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಪಿಎಸ್ಸೈ ಹರೀಶ್ ಎಂಬವರನ್ನು ಸಿಐಡಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನವೀನ್ ಪ್ರಸಾದ್ ಕೂಡ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ, ನವೀನ್ ಪ್ರಸಾದ್ ಗಾಗಿ ತನಿಖಾಧಿಕಾರಿಗಳು ನಿರಂತರ ಶೋಧ ನಡೆಸಿ ಬಂಧಿಸಿದ್ದಾರೆ.
ಇನ್ನೂ, ಆರೋಪಿ ಹರೀಶ್, ಪ್ರಕರಣದ 14ನೆ ಆರೋಪಿ ಆರ್.ಮಧು ಹಾಗೂ 16ನೆ ಆರೋಪಿ ದಿಲೀಪ್ ಕುಮಾರ್ (ಅಭ್ಯರ್ಥಿಗಳು) ಎಂಬವರಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಈ ಸಂಬಂಧ 33ನೆ ಆರೋಪಿಯಾದ ಮೀಸಲು ಪೊಲೀಸ್ ಇನ್‍ಸ್ಪೆಕ್ಟರ್ ಮಧು ಜತೆ ಒಳಸಂಚು ರೂಪಿಸಿದ್ದ ಹರೀಶ್, ಇಬ್ಬರು ಅಭ್ಯರ್ಥಿಗಳಿಂದಲೂ ತಲಾ 30 ಲಕ್ಷ ರೂ. ಗಳಂತೆ ಒಟ್ಟು 60 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ.