ʼನಿಟ್ಟೆ ಅಕೊಲೇಡ್ಸ್ʼ : ದಕ್ಷಿಣ ಭಾರತದ ಅಂತರ್ ಕಾಲೇಜು ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕೊಣಾಜೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಅಧೀನದ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಸಂಘಟಿಸಿದ 11ನೇ "ನಿಟ್ಟೆ ಅಕೊಲೇಡ್ಸ್" ದಕ್ಷಿಣ ಭಾರತದ ವೈದ್ಯಕೀಯ, ದಂತವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳ ಅಂತರ್ ಕಾಲೇಜು ಮಟ್ಟದ ಮೂರು ದಿನಗಳ ವಿವಿಧ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವು ದೇರಳಕಟ್ಟೆಯ ಕ್ಷೇಮ ಕ್ಯಾಂಪಸ್ಸಿನ ಬಿ.ಸಿ ಆಳ್ವ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಿತು.
ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ.ಪಿ.ಎಸ್ ಪ್ರಕಾಶ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನಿಟ್ಟೆ ಕ್ಯಾಂಪಸ್ಸಿಗೆ ವಿವಿಧ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಲು 25 ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದು, ಎಲ್ಲರೂ ಉತ್ತಮವಾಗಿ ಆಡುವುದರ ಜೊತೆಗೆ ತಮ್ಮ ಸಂಸ್ಥೆಗಳ ಹೆಸರನ್ನು ಬೆಳಗಿಸುವುದರೊಂದಿಗೆ ಮಂಗಳೂರಿನ ಸೊಬಗನ್ನು ಆನಂದಿಸಿರಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗಾಗಿ ಬಾಸ್ಕೆಟ್ ಬಾಲ್, ವಾಲಿಬಾಲ್, ಶಟಲ್, ಟೇಬಲ್ ಟೆನಿಸ್ , ಥ್ರೋಬಾಲ್ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಎಲ್ಲರೂ ಉತ್ತಮವಾಗಿ ಆಟವಾಡಿ ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಿಸಿರಿ ಎಂದು ಶುಭಹಾರೈಸಿದರು.
ಈ ಸಂದರ್ಭ ಕ್ಷೇಮ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜೆ.ಪಿ ಶೆಟ್ಟಿ, ಅಕಾಡೆಮಿಕ್ಸ್ ವೈಸ್ ಡೀನ್ ಡಾ.ಅಮೃತ್ ಮಿರಾಜ್‍ಕರ್, ನಿಟ್ಟೆ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ.ಧಾನೇಶ್ ಕುಮಾರ್, ಉಪಪ್ರಾಂಶುಪಾಲ ನಾರಾಯಣ ಚಾರ್ಯೂಲು ಉಪಸ್ಥಿತರಿದ್ದರು.
ನಿಟ್ಟೆ ವಿ.ವಿ ಕ್ರೀಡಾ ವಿಭಾಗದ ಉಪನಿರ್ದೇಶಕ ಡಾ.ಮುರಳೀಕೃಷ್ಣ ವಿ. ಸ್ವಾಗತಿಸಿದರು. ಪ್ರತಿಯುಷಾ ನಿರೂಪಿಸಿದರು. ಅದ್ವೈತ್ ವಂದಿಸಿದರು.