ಕೈಬರಹ ಎಂಬುದು ನಮ್ಮ ವ್ಯಕ್ತಿತ್ವದ ಭಾಗ: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ
ಮಂಗಳೂರು: ಕೈಬರಹ ಎಂಬುದು ನಮ್ಮ ವ್ಯಕ್ತಿತ್ವದ ಭಾಗ. ಶಕ್ತಿಯುತ ಕೈಬರಹ ಇತರರಲ್ಲಿ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡುವ ಪರಿಣಾಮಕಾರಿ ವಿಧಾನವೂ ಹೌದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ .ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳವಾರ, ಬ್ರಿಟಿಷ್ ವಿದ್ವಾಂಸರ ಸಂಘದ (ಎಬಿಎಸ್) ಮಂಗಳೂರು ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕ್ಯಾಲಿಗ್ರಫಿ ಕುರಿತ ಕಾರ್ಯಾಗಾರವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಳ್ಮೆ, ಸೂಕ್ಷ್ಮ ಅವಲೋಕನ, ಕಲ್ಪನಾ ಶಕ್ತಿ ಮತ್ತು ಉತ್ತಮ ಮಾರ್ಗದರ್ಶನದಿಂದ ಕೈಬರಹ ಸುಂದರವಾಗುವುದಲ್ಲದೆ, ಸ್ಪಷ್ಟವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ, ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಅತ್ಯುತ್ತಮ ಹವ್ಯಾಸ ಗಳು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಜೀವನದಲ್ಲಿ ಜೀವಂತಿಕೆ ತುಂಬುತ್ತವೆ ಎಂದರು.
ಎಬಿಎಸ್ ಮಂಗಳೂರು ವಿಭಾಗದ ಕಾರ್ಯದರ್ಶಿ ಡಾ. ಕೆ ಆರ್ ಚಂದ್ರಶೇಖರ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಹಾಗೂ ಎಬಿಎಸ್ ಕಾರ್ಯಕಾರಿ ಸಮಿತಿಯ ಸದಸ್ಯ ಡಾ. ಎಸ್ ಎನ್ ಶಿವಪ್ರಕಾಶ್, ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತೀಯರು ವಿಶ್ವದೆಲ್ಲೆಡೆ ತಮ್ಮ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿ ಎಬಿಎಸ್ನ ಮಾಜಿ ಅಧ್ಯಕ್ಷ ಪ್ರೊ. ಕೆ ಸಿ ಜನಾರ್ದನ್, ಖಜಾಂಜಿ ಪ್ರೊ. ಶ್ರೀಪಾದ್ ಕೆ ಎಸ್, ಲಯನ್ಸ್ ಕ್ಲಬ್ನ ಚಂದ್ರಕಾಂತ್, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿರಿದ್ದರು. ಆಂಗ್ಲ ವಿಭಾಗದ ರೇಖಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸಂದೀಪ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಕೆಟ್ಟ ಕೈಬರಹಕ್ಕೆ ವ್ಯಕ್ತಿ ಅಥವಾ ಶಿಕ್ಷಕರು ದೋಷಿಗಳಲ್ಲ, ಬದಲಾಗಿ ನಾವೆಲ್ಲಾ ಕೆಟ್ಟ ವ್ಯವಸ್ಥೆಗೆ ಬಲಿಪಶುಗಳಷ್ಟೇ. ಸುಂದರ ಕೈಬರಹ ಜನ್ಮಜಾತ ಅನುಗ್ರಹವಲ್ಲ. ಅವಲೋಕನ ಮತ್ತು ಕಲಿಯುವಿಕೆಯಿಂದ ಮಾತ್ರ ಇದನ್ನು ಸಿದ್ಧಿಸಿಕೊಳ್ಳಬಹುದು ಎಂದ ಸಂಪನ್ಮೂಲ ವ್ಯಕ್ತಿ ಎಬಿಎಸ್ನ ಮಾಜಿ ಅಧ್ಯಕ್ಷ ಪ್ರೊ. ಕೆ ಸಿ ಜನಾರ್ದನ್, ‘‘ಕೆಟ್ಟ ಕೈಬರಹ ಅಸಮರ್ಪಕ ಶಿಕ್ಷಣದ ದ್ಯೋತಕ’’, ಎಂಬ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿದರು.
ಸುಂದರ ಕೈಬರಹ ರೂಢಿಸಿಕೊಳ್ಳುವ ವಿವಿಧ ತಂತ್ರಗಳನ್ನು ಲಘು ಹಾಸ್ಯದೊಂದಿಗೆ ವಿವರಿಸಿದ ಅವರು, ಆಕರ್ಷಕ ಕೈಬರಹದಲ್ಲಿ ಅಕ್ಷರಗಳ ಅಳತೆ ಮತ್ತು ಅವುಗಳ ನಡುವಿನ ಅಂತರ ಸಮರ್ಪಕವಾಗಿರಬೇಕು ಎಂದರು. ‘‘ಕೈಬರಹ ಮರೆತರೆ ನಾವು ಅರಿವಿನ ಶಕ್ತಿ, ನೆನಪಿನ ಶಕ್ತಿ ಕಳೆದುಕೊಳ್ಳುತ್ತವೆ ಮತ್ತು ನಮ್ಮ ಶಬ್ಧ ಭಂಡಾರ ಬರಡಾಗುತ್ತದೆ. ಸುಂದರ ಕೈಬರಹ ನಮ್ಮ ಬಗ್ಗೆ ಇತರರಲ್ಲಿ ಅದ್ಭುತ ಅಭಿಪ್ರಾಯ ಮೂಡಿಸುವ ಸರಳ ಸಾಧನ’’ ಎಂದು ಅವರು ಅಭಿಪ್ರಾಯಪಟ್ಟರು.